ಪ್ಯಾಸೆಂಜರ್ ಆಟೊದವರು ಪ್ರಯಾಣಿಕರ ಜತೆಗೆ ಸರಕು(ಲಗೇಜ್)ಗಳನ್ನೂ ತುಂಬಿಕೊಂಡು ಬಾಡಿಗೆ ಹೊಡೆಯುತ್ತಿರುವುದರಿಂದ ಗೂಡ್ಸ್ ಆಟೊ ಚಾಲಕರಿಗೆ ನಷ್ಟ ಉಂಟಾಗುತ್ತಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ಗೂಡ್ಸ್ ಆಟೊ ಚಾಲಕರು ಹಾಸನ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
“ಹಾಸನ ತಾಲೂಕಿನ ಸುತ್ತಮುತ್ತಲಿನ ಚಾಲಕರು ಗೂಡ್ಸ್ ಆಟೊ ಓಡಿಸಿಕೊಂಡು ಜೀವನ ನಡೆಸುತ್ತಿದ್ದೇವೆ. ಹಾಸನ ನಗರದಲ್ಲಿ ಕೆಲವು ಪ್ಯಾಸೆಂಜರ್ ಆಟೊ ಓಡಿಸುತ್ತಿರುವ ಚಾಲಕರು, ಈ ಆಟೊಗಳಲ್ಲಿ ಅಕ್ರಮವಾಗಿ ಸರಕು ತುಂಬಿಕೊಂಡು ತಾಲೂಕು ಹಾಗೂ ಜಿಲ್ಲೆಯಿಂದ ಜಿಲ್ಲೆಗೆ ಬಾಡಿಗೆ ಮಾಡುತ್ತಿರುತ್ತಾರೆ. ಇದರಿಂದ ಗೂಡ್ಸ್ ಆಟೊ ಇಟ್ಟುಕೊಂಡಿರುವ ನಮಗೆ ತುಂಬಾ ನಷ್ಟ ಉಂಟಾಗಿದೆ” ಎಂದು ಗೂಡ್ಸ್ ವಾಹನ ಚಾಲಕ ವೇದಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
“ವಾಹನದ ಸಾಲದ ಕಂತುಗಳನ್ನು ಕಟ್ಟಲು, ಮನೆ ಬಾಡಿಗೆ ಕಟ್ಟಲು, ಇನ್ಷೂರೆನ್ಸ್ ಕಟ್ಟಲು ಹಾಗೂ ಜೀವನ ನಡೆಸಲು ತುಂಬಾ ಸಮಸ್ಯೆಯಾಗಿದೆ. ದಯಮಾಡಿ ಪ್ಯಾಸೆಂಜರ್ ಆಟೊದವರು ಈ ರೀತಿ ಅಕ್ರಮವಾಗಿ ಲಗೇಜ್ ತುಂಬಿಕೊಂಡು ಬಾಡಿಗೆ ಮಾಡುತ್ತಿರುವುದನ್ನು ತುರ್ತಾಗಿ ಮತ್ತು ಕಡ್ಡಾಯವಾಗಿ ನಿಲ್ಲಿಸಬೇಕು. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿದ್ದೀರಾ?ಹಾಸನ | ಪಿಡಿಒ ಹುದ್ದೆಗೆ ಪರೀಕ್ಷೆ; ಪರೀಕ್ಷಾರ್ಥಿಗಳ ಕೈ ತೋಳಿನ ಬಟ್ಟೆ ಕತ್ತರಿಸಿದ ಅಧಿಕಾರಿಗಳು
ಈ ವೇಳೆ ಗೂಡ್ಸ್ ಆಟೊ ಚಾಲಕ ಪಾಂಡುರಂಗ, ಫಯಾಜ್, ಶಿವಣ್ಣ, ಪ್ರವೀಣ್, ಪರಮೇಶ್, ಅಶ್ವಿನ್, ಹರೀಶ್, ಧನಂಜಯ ಸೇರಿದಂತೆ ಇತರರು ಇದ್ದರು.