ಅಮೆರಿಕದ ಆಣತಿಯಂತೆ ಆಡುತ್ತಿರುವ ದ. ಕೊರಿಯಾಕ್ಕೆ ಕಾದಿದೆಯಾ ಗಂಡಾಂತರ?

Date:

Advertisements
ಎಲ್ಲ ದೇಶಗಳನ್ನು ನಿಯಂತ್ರಿಸುತ್ತೇನೆ ಎಂದು ಹೇಳುವ ಅಮೆರಿಕ, ದಕ್ಷಿಣ ಕೊರಿಯಾಗೆ ಯಾವುದೇ ನೆರವು ನೀಡುತ್ತಿಲ್ಲ. ಬೇರೆ ದೇಶಗಳನ್ನು ತನ್ನ ಲಾಭಕ್ಕೆ ಮಾತ್ರ ಬಳಸಿಕೊಳ್ಳುವುದು ಅಮೆರಿಕದ ತಂತ್ರವಾಗಿದೆ. ಈ ಬಳಕೆ ಮುಂದೊಂದು ದಿನ ದಕ್ಷಿಣ ಕೊರಿಯಾಗೆ ಭಾರಿ ಗಂಡಾಂತರ ತಂದೊಡ್ಡಲಿರುವುದು ಸುಳ್ಳಲ್ಲ.

ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್‌ ಸುಕ್‌ ಇಯೋಲ್‌ ಕೆಲವು ದಿನಗಳ ಹಿಂದಷ್ಟೆ ದೇಶದಲ್ಲಿ ಏಕಾಏಕಿ ಸೇನಾಡಳಿತ ಘೋಷಿಸಿಬಿಟ್ಟರು. ಸಾರ್ವಜನಿಕ ಮಟ್ಟದಲ್ಲಿ ವ್ಯಾಪಕ ವಿರೋಧ ಮಾತ್ರವಲ್ಲದೆ ಸರ್ಕಾರದಲ್ಲೂ ಭಾರಿ ಆಕ್ರೋಶ ವ್ಯಕ್ತವಾದಾಗ ಪ್ರತಿಭಟನೆಗಳಿಗೆ ಮಣಿದು ಮಿಲಿಟರಿ ಆಡಳಿತವನ್ನು ವಾಪಸ್‌ ಹಿಂಪಡೆದರು. ಉತ್ತರ ಕೊರಿಯಾದ ಕಮ್ಯುನಿಸ್ಟ್ ಶಕ್ತಿಗಳ ಬೆದರಿಕೆಯಿಂದ ದೇಶವನ್ನು ರಕ್ಷಿಸಲು ಈ ಕ್ರಮ ಕೈಗೊಂಡಿದ್ದಾಗಿ ಹೇಳಿದಾಗ ಯಾರೊಬ್ಬರು ನಂಬಲಿಕ್ಕೆ ತಯಾರಿರಲಿಲ್ಲ. ಅಧ್ಯಕ್ಷರನ್ನು ಪದಚ್ಯುತಿಗೊಳಿಸಬೇಕೆಂದು ದೇಶಾದ್ಯಂತ ಜನರು ಬೀದಿಗಿಳಿದು ಪ್ರತಿಭಟಿಸಿದರು. ಆಕ್ರೋಶ ಮುಗಿಲುಮುಟ್ಟಿದಾಗ ತುರ್ತು ಸೇನಾ ಆಡಳಿತವನ್ನು ವಾಪಸ್‌ ಪಡೆದರು.

ದಕ್ಷಿಣ ಕೊರಿಯಾ ಪ್ರಜಾಪ್ರಭುತ್ವ ರಾಷ್ಟ್ರವಾದರೂ ರಕ್ಷಣಾ ವ್ಯವಸ್ಥೆ, ತಂತ್ರಜ್ಞಾನ ಸೇರಿದಂತೆ ಹಲವು ಇಲಾಖೆಗಳು ಅಮೆರಿಕದ ಆಣತಿಯಂತೆ ನಡೆಯುತ್ತಿದೆ. ರಾಷ್ಟ್ರದಲ್ಲಿ ಪ್ರತಿಭಟನೆ ನಡೆಸಿದ ನಾಗರಿಕರು ತುರ್ತು ಪರಿಸ್ಥಿತಿ ಮಾತ್ರವಲ್ಲದೆ ಸರ್ಕಾರದ ಮಿತಿಮೀರಿದ ಭ್ರಷ್ಟಾಚಾರದ ವಿರುದ್ಧವೂ ತಮ್ಮ ಕಿಚ್ಚನ್ನು ಹೊರಹಾಕಿದ್ದರು. ಅಧ್ಯಕ್ಷ ಯೂನ್‌ ಸುಕ್‌ ಇಯೋಲ್‌ ರಾಷ್ಟ್ರೀಯ ಅಸೆಂಬ್ಲಿ ನಿರ್ಣಯವನ್ನು ಅಂಗೀಕರಿಸಿದ ನಂತರ ಮಿಲಿಟರಿ ಆಡಳಿತಕ್ಕೆ ಇತಿಶ್ರೀ ಹೇಳಲಾಯಿತು.

ಇನ್ನೂ ಮುಖ್ಯವಾದ ಸಂಗತಿ ಎಂದರೆ ಸೇನಾಡಳಿತವನ್ನು ಕೂಡ ಕಳಪೆಯಾಗಿ ಜಾರಿಗೊಳಿಸಲಾಗಿತ್ತು. ತುರ್ತು ಪರಿಸ್ಥಿತಿ ಘೋಷಿಸುವುದರ ಬಗ್ಗೆ ಸೇನೆಗೆ ಮೊದಲೇ ಮಾಹಿತಿ ನೀಡಿರಲಿಲ್ಲ. ಪೊಲೀಸರು ಸಮರ್ಪಕವಾಗಿ ತಯಾರಿ ನಡೆಸಿರಲಿಲ್ಲ. ಈ ಕಾರಣದಿಂದ ದೇಶದಲ್ಲಿ ಅರಾಜಕತೆ ಉಂಟಾಯಿತು. ಎಲ್ಲೆಂದರಲ್ಲಿ ಗಲಭೆಗಳು ಶುರುವಾದವು. ರಾಷ್ಟ್ರಾದ್ಯಂತ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿತು.

Advertisements

ಯೂನ್‌ ಸುಕ್‌ ಇಯೋ ಅವರು ಹಿಂದಿನ ಅನೇಕ ಅಧ್ಯಕ್ಷರಿಗಿಂತಲೂ ಅನೇಕ ಜನವಿರೋಧಿ ಆಡಳಿತವನ್ನು ದೇಶದಲ್ಲಿ ಜಾರಿಗೊಳಿಸಿದ್ದು, ಪ್ರಜಾಪ್ರಭುತ್ವ ನೀತಿಗಳಿಗಿಂತ ಬಂಡವಾಳಶಾಹಿಗಳಿಗೆ ಹೆಚ್ಚು ಮಣೆ ಹಾಕಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಮೇಲ್ನೋಟಕ್ಕೆ ದೇಶೀಯ ಸಂಸ್ಕೃತಿ, ಆಚರಣೆಗಳಿದ್ದರೂ ಆರ್ಥಿಕ ವ್ಯವಸ್ಥೆಯಲ್ಲಿ ಅಮೆರಿಕ ಪ್ರಭಾವ ದಟ್ಟವಾಗಿ ಕಾಣುತ್ತಿದೆ. ಸ್ವಪಕ್ಷೀಯರೂ ಸೇರಿದಂತೆ ವಿಪಕ್ಷ ಸಂಸದರು ಯೂನ್‌ ಸುಕ್‌ ವಿರುದ್ಧ ರಾಷ್ಟ್ರೀಯ ಸಂಸತ್‌ನಲ್ಲಿ ದೋಷಾರೋಪಣೆಗೆ ನಿರ್ಣಯ ಕೈಗೊಂಡಿದ್ದರು.

ಸಂಸತ್ತಿನಲ್ಲಿ ಒಟ್ಟು 195 ಸದಸ್ಯರು ಮತ ಚಲಾಯಿಸಿದ್ದರು. ಆದರೆ ಮತ ಚಲಾಯಿಸಿದ ಸದಸ್ಯರ ಸಂಖ್ಯೆಯು ಒಟ್ಟು ಸದಸ್ಯರ ಮೂರನೇ ಎರಡರಷ್ಟು ಬಹುಮತವನ್ನು ತಲುಪಲಿಲ್ಲ. ಆದ್ದರಿಂದ ಈ ವಿಷಯದ ಮೇಲಿನ ಮತವು ಮಾನ್ಯವಾಗಿಲ್ಲ ಎಂದು ರಾಷ್ಟ್ರೀಯ ಸಂಸತ್ತಿನ ಸ್ಪೀಕರ್ ತೀರ್ಪು ನೀಡಿದ್ದರು. 300 ಸದಸ್ಯ ಬಲದ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಅಂದರೆ 200 ಮತಗಳ ಅಗತ್ಯವಿತ್ತು. ಸದನದಲ್ಲಿ ವಿಪಕ್ಷಗಳು 192 ಸದಸ್ಯರನ್ನು ಹೊಂದಿದ್ದು, ಆಡಳಿತಾರೂಢ ಮೈತ್ರಿಕೂಟದ ಮೂವರು ನಿರ್ಣಯದ ಪರ ಮತ ಹಾಕಿದ್ದರು. ಅಧ್ಯಕ್ಷ ಯೂನ್ ಅವರ ಪೀಪಲ್ ಪವರ್ ಪಾರ್ಟಿ(ಪಿಪಿಪಿ)ಯ ಸದಸ್ಯರು ಮತದಾನವನ್ನು ಬಹಿಷ್ಕರಿಸಿದ್ದರು. ಸದ್ಯ ತಾತ್ಕಾಲಿಕವಾಗಿ ಅಧ್ಯಕ್ಷರ ವಿರುದ್ಧ ದೋಷಾರೋಪಣೆ ಅಂಗೀಕಾರವಾಗಿಲ್ಲ. ಅಧ್ಯಕ್ಷರ ವಿರುದ್ಧ ಮತ್ತೊಂದು ದೋಷಾರೋಪಣೆ ನಿರ್ಣಯ ಮಂಡಿಸಲು ವಿಪಕ್ಷಗಳಿಗೆ ಡಿಸೆಂಬರ್ 11ರ ನಂತರವಷ್ಟೆ ಅವಕಾಶವಿದೆ.

ಈ ಸುದ್ದಿ ಓದಿದ್ದೀರಾ? ಸಿರಿಯಾ ಸರ್ಕಾರ ಪತನ: ಅಮೆರಿಕ – ಇಸ್ರೇಲ್‌ ದಾಹಕ್ಕೆ ಮತ್ತೊಂದು ರಾಷ್ಟ್ರ ಬಲಿಯಾಯಿತೆ?

ದೇಶದಲ್ಲಿ ಭ್ರಷ್ಟಾಚಾರ ಜನವಿರೋಧಿ ಕ್ರಮಗಳ ಜೊತೆಗೆ ಅಮೆರಿಕದ ಹಿತಾಸಕ್ತಿಯನ್ನು ಪೋಷಿಸುವ ನೀತಿಗಳೆ ಜಾರಿಯಲ್ಲಿವೆ. ಇಲ್ಲಿನ ಬಹುತೇಕ ಉದ್ಯಮಗಳು ಪರೋಕ್ಷವಾಗಿ ಅಮೆರಿಕಕ್ಕೆ ಲಾಭ ಮಾಡಿಕೊಡುವಂತ ಯೋಜನೆಗಳೆ ಹೆಚ್ಚಾಗಿವೆ. ಸ್ಯಾಮ್‌ಸಂಗ್‌ ಸೇರಿದಂತೆ ವಿಶ್ವದ ಪ್ರತಿಷ್ಠಿತ ಎಲೆಕ್ಟ್ರಾನಿಕ್‌ ಉತ್ಪನ್ನಗಳು ಸಹ ಪರೋಕ್ಷವಾಗಿ ಅಮೆರಿಕದ ಕಪಿಮುಷ್ಟಿಯಲ್ಲಿಯೇ ಇದೆ. ಪ್ರಜಾಪ್ರಭುತ್ವ ಸರ್ಕಾರವಿದ್ದರೂ ಬಲಪಂಥೀಯ ಧೋರಣೆಗಳೆ ಹೆಚ್ಚಾಗಿವೆ. ನಾಗರಿಕರ ಅಭಿವೃದ್ಧಿ,ಕಾರ್ಮಿಕ ಸಮುದಾಯಕ್ಕೆ ಹೆಚ್ಚು ಬಲ ನೀಡುವುದಕ್ಕೆ ಇಲ್ಲಿ ಅವಕಾಶವೇ ಇಲ್ಲ. ಬಂಡವಾಳಶಾಹಿಗಳು, ಶ್ರೀಮಂತರನ್ನು ಸಲಹುವ ಅಮೆರಿಕದ ನೀತಿಗಳನ್ನು ದಕ್ಷಿಣ ಕೊರಿಯಾದಲ್ಲಿ ಹೆಚ್ಚಾಗಿ ಕಾರ್ಯಗತಗೊಳಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೂಡ ಸ್ವದೇಶಿ ಹಿತಾಸಕ್ತಿಗೆ ಹೆಚ್ಚು ಮಾನ್ಯತೆಯಿಲ್ಲ. ರಕ್ಷಣಾ ನೀತಿಯಲ್ಲೂ ಅಮೆರಿಕ ಸೇನಾ ನೀತಿ ಕೈ ಮೇಲಾಗುತ್ತದೆ. ಇದನ್ನು ವಿಪಕ್ಷಗಳು ಹಾಗೂ ಜನಸಾಮಾನ್ಯರು ಪ್ರಶ್ನಿಸಲು ಹೊರಟರೆ ಉತ್ತರ ಕೊರಿಯಾ, ಚೀನಾದಂಥ ರಾಷ್ಟ್ರಗಳು ನಮ್ಮನ್ನು ಮುಗಿಸುತ್ತವೆ ಎಂಬ ಸಾರ್ವಕಾಲಿಕ ನೆಪಗಳನ್ನು ಹೇಳಲಾಗುತ್ತದೆ.

ಜನಸಂಖ್ಯಾ ಬಿಕ್ಕಟ್ಟಿನ ಸಮಸ್ಯೆ

ಅದಕ್ಷ, ಭ್ರಷ್ಟಾಚಾರ ಹಾಗೂ ಅಮೆರಿಕ ಪ್ರೀತಿಯ ಜೊತೆ ದಕ್ಷಿಣ ಕೊರಿಯಾ ತೀವ್ರ ಜನಸಂಖ್ಯೆಯ ಬಿಕ್ಕಟ್ಟನ್ನು ಕೂಡ ಎದುರಿಸುತ್ತಿದೆ. ಕೊರಿಯಾದ ಜನನ ಪ್ರಮಾಣವು ತೀರ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಸದ್ಯ ದಕ್ಷಿಣ ಕೊರಿಯಾ 5.2 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಈ ಶತಮಾನದ ಅಂತ್ಯದ ವೇಳೆಗೆ ಜನಸಂಖ್ಯೆಯು 1.5 ಕೋಟಿಗೆ ಕುಗ್ಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕುಟುಂಬ ಯೋಜನೆ ನೀತಿಯನ್ನು ಜಾರಿಗೊಳಿಸಿದ ಬಳಿಕ ದಕ್ಷಿಣ ಕೊರಿಯಾದ ಫಲವತ್ತತೆಯ ಕುಸಿತವು ಪ್ರಾರಂಭವಾಗಿದೆ. 1960ರ ದಶಕದಲ್ಲಿ, ಆರ್ಥಿಕ ಅಭಿವೃದ್ಧಿಯನ್ನು ಮೀರಿ ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ಕಾಳಜಿ ವಹಿಸಿದ ಕೊರಿಯಾ ಸರ್ಕಾರ ಜನನ ಪ್ರಮಾಣವನ್ನು ತಗ್ಗಿಸಲು ಕೆಲವು ಕ್ರಮಗಳನ್ನು ಕೈಗೊಂಡಿತು. ಈ ಯೋಜನೆಗಳು ಮುಂದುವರಿಯುತ್ತಾ ಬಂದಿದೆ. ಮೂರನೇ ಒಂದು ಭಾಗದಷ್ಟು ಕೊರಿಯನ್ ಮಹಿಳೆಯರು ಮದುವೆಯಾಗಲು ಬಯಸುತ್ತಿಲ್ಲ ಎಂಬುದು ಆಘಾತಕಾರಿಯಾದ ಮಾಹಿತಿ 2024ರ ಸರ್ಕಾರದ ಸಮೀಕ್ಷೆಯಲ್ಲಿ ಬಯಲಾಗಿದೆ.

korea1

ನಗರ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು ವೈವಾಹಿಕ ಜೀವನಕ್ಕಿಂತ ವೃತ್ತಿಜೀವನದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. 2023ರ ಸರ್ಕಾರಿ ಸಮೀಕ್ಷೆಯು ಹೆಚ್ಚಿನ ಮಹಿಳೆಯರು ತಮ್ಮ ವೃತ್ತಿಜೀವನದ ಬೆಳವಣಿಗೆಗೆ ಪ್ರಾಥಮಿಕ ತಡೆಗೋಡೆಯಾಗಿ ವೈವಾಹಿಕ ಜೀವನ ನಿಲ್ಲಲಿದೆ ಎಂದು ಭಾವಿಸಿದ್ದಾರೆ ಎಂದು ಹಲವು ವರದಿಗಳು ತಿಳಿಸಿವೆ. ಮದುವೆಗೆ ಹಿಂದೇಟು ಹಾಕಲು ಶೇ. 93 ರಷ್ಟು ಮನೆಕೆಲಸ ಮತ್ತು ಮಕ್ಕಳ ಆರೈಕೆಯ ಹೊರೆ ಕಾರಣವೆಂದು ಹೇಳಲಾಗುತ್ತಿದೆ.

ದಕ್ಷಿಣ ಕೊರಿಯಾದ ಬಹುತೇಕ ಪುರುಷರು ವಿಯೆಟ್ನಾಂನಂತಹ ವಿದೇಶಗಳ ಮಹಿಳೆಯರನ್ನು ವಿವಾಹವಾಗುತ್ತಿದ್ದಾರೆ. ಅಲ್ಲದೆ, ಜನನ ಪ್ರಮಾಣವನ್ನು ಹೆಚ್ಚಿಸಲು ಕೊರಿಯನ್ ಸರ್ಕಾರ ಹಲವು ನೀತಿಗಳನ್ನು ಜಾರಿಗೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮೂರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವ ಗಂಡಸರಿಗೆ ತೆರಿಗೆ ವಿನಾಯಿತಿ, ಶಿಶುಪಾಲನಾ ಸಬ್ಸಿಡಿ ಮತ್ತು ಮಿಲಿಟರಿ ಸೇವಾ ವಿನಾಯಿತಿ ಹಾಗೂ ಹಣಕಾಸಿನ ನೆರವು ಸಹ ನೀಡಲಾಗುತ್ತಿದೆ. ಇದ್ಯಾವುದೇ ಯೋಜನೆಗಳು ಜನಸಂಖ್ಯೆ ಹೆಚ್ಚಾಗಲು ಸಾಧ್ಯವಾಗಿಲ್ಲ. ಇದೂ ಕೂಡ ದೇಶದ ಹಿನ್ನಡೆಗೆ ಮಾರಕವಾಗಿ ಪರಿಣಮಿಸಿದೆ.

ಎಲ್ಲ ದೇಶಗಳನ್ನು ನಿಯಂತ್ರಿಸುತ್ತೇನೆ ಎಂದು ಹೇಳುವ ಅಮೆರಿಕ ಮಾತ್ರ ಈ ವಿಷಯದಲ್ಲಿ ದಕ್ಷಿಣ ಕೊರಿಯಾಗೆ ಯಾವುದೇ ನೆರವು ನೀಡುತ್ತಿಲ್ಲ. ಬೇರೆ ದೇಶಗಳನ್ನು ತನ್ನ ಲಾಭಕ್ಕೆ ಮಾತ್ರ ಬಳಸಿಕೊಳ್ಳುವುದು ಅಮೆರಿಕದ ತಂತ್ರವಾಗಿದೆ. ಇವೆಲ್ಲ ಸಂಕಷ್ಟಗಳು ಮುಂದೊಂದು ದಿನ ದಕ್ಷಿಣ ಕೊರಿಯಾಗೆ ಭಾರಿ ಗಂಡಾಂತರ ತಂದೊಡ್ಡಲಿರುವುದು ಸುಳ್ಳಲ್ಲ. ಇದಕ್ಕೆ ಕಾಲವೇ ಉತ್ತರ ಹೇಳಲಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X