ಸದನದಲ್ಲಿ ಆಗಬೇಕಾದ್ದೇನು | ಕಲ್ಯಾಣ ಕರ್ನಾಟಕ – ಗೊಡ್ಡಾಯಿತು ತೊಗರಿ, ಭಾರೀ ಸಂಕಟದಲ್ಲಿ ರೈತ

Date:

Advertisements
ಕಲಬುರಗಿ ಜಿಲ್ಲೆಯ ತೊಗರಿಗೆ ರಾಜ್ಯ ಮತ್ತು ದೇಶದಲ್ಲಿ ವಿಶೇಷ ಬೇಡಿಕೆ ಇದೆ. ಸುಣ್ಣದ ಕಲ್ಲುಗಳಿರುವ ಜಮೀನಿನಲ್ಲಿ ಈ ಬೆಳೆ ಬೆಳೆಯುವುದರಿಂದ ಅದರಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿದೆ. ರುಚಿಯಲ್ಲೂ ಹೆಚ್ಚುಗಾರಿಕೆ ಇರುವ ಕಲಬುರಗಿ ಸೀಮೆಯ ತೊಗರಿ ಪ್ರಸಕ್ತ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ರೈತರನ್ನು ಕೈಹಿಡಿದಿಲ್ಲ. ಕಲಬುರಗಿ ಜಿಲ್ಲೆಯಲ್ಲೇ 2 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ತೊಗರಿ ಗೊಡ್ಡಾಗಿದೆ ಎನ್ನುತ್ತಿದ್ದಾರೆ ರೈತರು.

ರಾಜ್ಯದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆಗಳ ಪೈಕಿ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಗೆ ಅಗ್ರಸ್ಥಾನವಿದೆ. ಈ ಕಾರಣಕ್ಕಾಗಿಯೇ ‘ತೊಗರಿಯ ಕಣಜ’ ಎಂಬ ಖ್ಯಾತಿಯೂ ಕಲಬುರಗಿಗಿದೆ. ಆದರೆ, ಪ್ರಸಕ್ತ ಸಾಲಿನ ತೊಗರಿ ಬೆಳೆ ಕಲ್ಯಾಣ ಕರ್ನಾಟಕ ಭಾಗದ ರೈತರನ್ನು ಕೈಹಿಡಿದಿಲ್ಲ.

ಮುಂಗಾರು ಮಳೆ ಹೆಚ್ಚಾಗಿ ಸುರಿದ ಪರಿಣಾಮ ಮತ್ತು ನವೆಂಬರ್‌ನಲ್ಲಿ ಬೀಸಿದ ಗಾಳಿ ಹಾಗೂ ಹವಾಮಾನ ವೈಪರೀತ್ಯದಿಂದ ಕಲಬುರಗಿ ಜಿಲ್ಲೆಯೊಂದರಲ್ಲೇ ಸುಮಾರು 2 ಲಕ್ಷಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಗೊಡ್ಡಾಗಿ ಒಣಗಿ ಹೋಗಿದೆ ಎಂದು ರೈತರು ಹೇಳುತ್ತಿದ್ದಾರೆ. ಇದರಿಂದ ತೊಗರಿ ನಾಡು ಈ ಬಾರಿ ಬರಿದಾಗುವ ಆತಂಕ ಅನ್ನದಾತರನ್ನು ಕಾಡುತ್ತಿದೆ.

ಕಲಬುರಗಿ ಜಿಲ್ಲೆಯ ತೊಗರಿಗೆ ರಾಜ್ಯ ಮತ್ತು ದೇಶದಲ್ಲಿ ವಿಶೇಷ ಬೇಡಿಕೆ ಇದೆ. ಆ ಪ್ರದೇಶದ ಸುಣ್ಣದ ಕಲ್ಲುಗಳಿರುವ ಜಮೀನಿನಲ್ಲಿ ಈ ಬೆಳೆ ಬೆಳೆಯುವುದರಿಂದ ಅದರಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿದೆ. ಹೀಗಾಗಿ ಹೇರಳವಾದ ಪ್ರೊಟೀನ್ ಅಂಶದಿಂದ ಕೂಡಿರುವ ಕಲಬುರಗಿ ಸೀಮೆಯ ತೊಗರಿಗೆ ರುಚಿಯಲ್ಲೂ ಹೆಚ್ಚುಗಾರಿಕೆ ಇದೆ.

Advertisements

ಈ ಸುದ್ದಿ ಓದಿದ್ದೀರಾ? ಸದನದಲ್ಲಿ ಆಗಬೇಕಾದ್ದೇನು | ಉತ್ತರ ಕರ್ನಾಟಕದ ನೀರು-ನೀರಾವರಿ ತಾಪತ್ರಯ ನೀಗುವುದು ಯಾವಾಗ?

ಅಳಿದುಳಿದು ಕೈಗೆ ಸಿಗುವ ಕನಿಷ್ಠ ತೊಗರಿಗಾದರೂ ಸರ್ಕಾರ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಬೇಕೆಂಬುದು ರೈತರ ಆಗ್ರಹ. ಕಲ್ಯಾಣ ಕರ್ನಾಟಕ ಭಾಗದ ರೈತ ಹೋರಾಟಗಾರರು ಮತ್ತು ತೊಗರಿ ಬೆಳೆಗಾರರ ನಿಯೋಗ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಸಿದ್ಧವಾಗಿದೆ.

ತೊಗರಿ ಬೆಳೆ ಆರು ತಿಂಗಳ ಬೆಳೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗುತ್ತದೆ. ಜೂನ್-ಜುಲೈನಲ್ಲಿ ಬಿತ್ತಿದ ಬೆಳೆ ಡಿಸೆಂಬರ್‌-ಜನವರಿಯಲ್ಲಿ ಕೊಯ್ಲಿಗೆ ಬರುತ್ತದೆ. ಕಲಬುರಗಿ ಭಾಗದಲ್ಲಿ ತೊಗರಿ ಹಂಗಾಮ ಆರಂಭವಾಗಿದೆ. ರೈತರು ತೊಗರಿ ಕಟಾವು ಆರಂಭಿಸಿದ್ದಾರೆ. ಬಿಹಾರ್‌ದಿಂದ ತೊಗರಿ ಕಟಾವು ವಾಹನಗಳು ಕಲಬುರಗಿ ಜಿಲ್ಲೆಗೆ ಬಂದಿವೆ.

ತೊಗರಿ ಬೆಳೆ

ಕಲಬುರಗಿ, ಬೀದರ್, ವಿಜಯಪುರ ಭಾಗದ ಮಣ್ಣಿನಲ್ಲಿರುವ ಸುಣ್ಣದ ಕಲ್ಲಿನ ಅಂಶವು ತೊಗರಿಗೆ ಅಗತ್ಯವಾದ ಖನಿಜಾಂಶಗಳನ್ನು ಪೂರೈಸುವುದರಿಂದ ಉಳಿದ ಭಾಗಗಳಲ್ಲಿ ಬೆಳೆದ ತೊಗರಿಗೆ ಹೋಲಿಸಿದರೆ ಕಲಬುರಗಿ ಸೀಮೆಯ ತೊಗರಿ ಬೇಳೆಯು ಗಾತ್ರದಲ್ಲಿ ದಪ್ಪವಾಗಿರುತ್ತದೆ. ಇದನ್ನೇ ಮಾರುಕಟ್ಟೆಯಲ್ಲಿ ಪಟಗಾ ತೊಗರಿ (ಉತ್ಕೃಷ್ಟ ಗುಣಮಟ್ಟ) ಎಂದು ಮಾರಾಟ ಮಾಡಲಾಗುತ್ತದೆ.

ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕಲಬುರಗಿ, ವಿಜಯಪುರ, ಬೀದರ್‌, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ತೊಗರಿಯನ್ನು ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದ ತೊಗರಿ ಉತ್ಪಾದನೆ ಭಾರತದ ಉತ್ಪಾದನೆಯ ಸರಿಸುಮಾರು ಹತ್ತನೇ ಒಂದು ಭಾಗದಷ್ಟಿದೆ. ಕರ್ನಾಟಕ ಹೊರತುಪಡಿಸಿ ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚು ತೊಗರಿ ಬೆಳೆಯುತ್ತಾರೆ.

ಈ ಸುದ್ದಿ ಓದಿದ್ದೀರಾ? ಅಧಿವೇಶನದಲ್ಲಿ ಆಗಬೇಕಾದ್ದೇನು | ಮರಾಠಿ ಮುಂದೆ ಮುಂದೆ, ಕನ್ನಡ ತೀರಾ ಹಿಂದೆ; ಗಡಿನಾಡಲ್ಲಿ ಕನ್ನಡ ಅವಸ್ಥೆ ಶೋಚನೀಯ

ಕಲಬುರಗಿ ಜಿಲ್ಲೆಯಲ್ಲಿ ಸಾಗುವಳಿಯಾಗುತ್ತಿರುವ ಒಟ್ಟು 8 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಪ್ರತಿ ವರ್ಷ ಸರಾಸರಿ 6 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬೆಳೆ ಬೆಳೆಯಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುಕೆ, ಆಸ್ಟ್ರೇಲಿಯಾ ಯುಎಸ್‌ಎ ಸೇರಿದಂತೆ ಹಲವು ದೇಶಗಳಲ್ಲಿ ಕಲಬುರಗಿ ಜಿಲ್ಲೆಯ ಜಿಐ ಲೇಬಲ್ ಇರುವ ತೊಗರಿ ಬೇಳೆ ದುಪ್ಪಟ್ಟು ಬೆಲೆಗೆ ಮಾರಾಟವಾದ ಉದಾಹರಣೆಗಳಿವೆ.

2023ರಲ್ಲಿ ತೊಗರಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ ₹12,700ಕ್ಕೆ ಮಾರಾಟವಾಗುವ ಮೂಲಕ ಸಾರ್ವಕಾಲಿಕ ಗರಿಷ್ಠ ಬೆಲೆ ಕಂಡಿದೆ. ಇದರ ನೇರ ಪರಿಣಾಮ ಗ್ರಾಹಕರಿಗೂ ತಟ್ಟಿ, ಪ್ರತಿ ಕೆ.ಜಿ. ತೊಗರಿ ಬೇಳೆಗೆ ₹160-200 ಕೊಟ್ಟು ಖರೀದಿಸಬೇಕಾಗಿ ಬಂದಿದ್ದು ದೊಡ್ಡ ಸುದ್ದಿಯಾಗಿತ್ತು. ಕಳೆದ ವರ್ಷದ ಬೆಲೆಯೇ ಈ ಬಾರಿಯೂ ತೊಗರಿಗೆ ಸಿಗಲಿ ಎಂದು ರೈತರು ಅಪೇಕ್ಷೆ ಪಡುತ್ತಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ
ಕರ್ನಾಟಕ ಪ್ರಾಂತ ರೈತ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ

ಕರ್ನಾಟಕ ಪ್ರಾಂತ ರೈತ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಈ ದಿನ.ಕಾಮ್‌ ಜೊತೆ ಮಾತನಾಡಿ, “ತೊಗರಿ ಬೆಳೆಗಾರರು ಬೀದಿಗೆ ಬರುವ ಸನ್ನಿವೇಶ ನಿರ್ಮಾಣವಾಗಿದೆ. ಅತಿಯಾದ ಮಳೆಯಿಂದ ಬೇರುಗಳು ಕೊಳೆತು ತೊಗರಿ ಬೆಳೆ ಒಣಗಿದೆ. ಈ ಬಾರಿ ತೊಗರಿ ನಾಡು ಬರಿದಾಗುವ ಆತಂಕ ನಮ್ಮನ್ನು ಕಾಡುತ್ತಿದೆ. ಬಹುತೇಕ ರೈತಾಪಿ ಕುಟುಂಬಗಳು ತೊಗರಿ ಬೆಳೆಯನ್ನೇ ನಂಬಿಕೊಂಡು ಕುಳಿತಿವೆ. ಮಕ್ಕಳ ಶಿಕ್ಷಣ, ಮದುವೆ, ಸಾಲ ಎಲ್ಲವನ್ನು ತೊಗರಿಯಿಂದ ಬಂದ ಲಾಭದಲ್ಲೇ ನೀಗಿಸಿಕೊಳ್ಳಬೇಕು. ತೊಗರಿಗೆ ಮಾಡಿದ ಖರ್ಚು ಕೂಡ ನಮ್ಮ ಕೈ ಸೇರದಿದ್ದರೆ ನಾವು ಎಲ್ಲಿಗೆ ಹೋಗಬೇಕು? ಸಾಲ ಮರುಪಾವತಿ ಕೂಡ ರೈತರಿಗೆ ಕಷ್ಟವಾಗಲಿದೆ. ಸರ್ಕಾರ ಕಲಬುರಗಿ ಭಾಗದ ರೈತರ ಮೇಲೆ ಕರುಣೆ ತೋರಿ, ತೊಗರಿ ಬೆಳೆ ಹಾನಿಯಾದ ಪ್ರದೇಶದಲ್ಲಿ ಎಕರೆಗೆ 25 ಸಾವಿರ ರೂ. ಪರಿಹಾರವನ್ನು ಕಲ್ಪಿಸಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಅಧಿವೇಶನದಲ್ಲಿ ಆಗಬೇಕಾದ್ದೇನು | ಕಷ್ಟ-ನಷ್ಟದಲ್ಲಿ ಮುಳುಗೇಳುವ ಒಕ್ಕಲುತನ ಕುರಿತು ಚರ್ಚೆಯಾಗಲಿ

“ಬೆಳೆ ವಿಮೆ ಕಂಪನಿಗಳಿಗೆ ಖಡಕ್‌ ಸೂಚನೆಗಳನ್ನು ಕೊಟ್ಟು ಬೇಗ ಪರಿಹಾರ ವಿತರಣೆಯಾಗುವಂತೆ ನೋಡಿಕೊಳ್ಳಬೇಕು. ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಬೆಂಬಲ ಬೆಲೆ ನಿಗದಿಪಡಿಸುವ ಕೇಂದ್ರ ಸರ್ಕಾರವು ಈ ಬೇಡಿಕೆಯನ್ನು ಈಡೇರಿಸುವ ಗೋಜಿಗೆ ಹೋಗಿಲ್ಲ. ಕೇಂದ್ರ ಕೂಡ ಬೇಗ ಕಣ್ಣು ತೆರೆಯಬೇಕು. ತೊಗರಿ ಬೆಳೆಗಾರರ ಸಂಕಷ್ಟಗಳಿಗೆ ಖುದ್ದು ಮುಖ್ಯಮಂತ್ರಿಗಳು ಸ್ಪಂದಿಸಬೇಕು. ಮುಖ್ಯಮಂತ್ರಿಗಳು ಆವರ್ತನಿಧಿಯನ್ನು ಸ್ಥಾಪಿಸಿ ಕ್ವಿಂಟಾಲ್‌ ತೊಗರಿಗೆ 500 ರೂ. ಬೆಂಬಲವಾಗಿ ಕೊಡಬೇಕು. ಕೇಂದ್ರ ಸರ್ಕಾರಕ್ಕೂ ಪತ್ರ ಬರೆದು 12 ಸಾವಿರ ಕನಿಷ್ಠ ಬೆಂಬಲ ಬೆಲೆ ಕೊಡುವಂತೆ ಆಗ್ರಹಿಸಬೇಕು” ಎಂದು ಹೇಳಿದರು.

ಲಬುರಗಿಯ ಕಿಸಾನ್ ಸಭಾ ಮುಖಂಡ ಭೀಮಾಶಂಕರ
ಕಲಬುರಗಿಯ ಕಿಸಾನ್‌ ಸಭಾ ಮುಖಂಡ ಭೀಮಾಶಂಕರ

ಕಲಬುರಗಿಯ ಕಿಸಾನ್‌ ಸಭಾ ಮುಖಂಡ ಭೀಮಾಶಂಕರ ಮಾತನಾಡಿ, “ತೊಗರಿ ಬೆಳೆಗೆ ನೆಟೆರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಮ್ಮ ಭಾಗದಲ್ಲಿ ತೊಗರಿ ಬೆಳೆ ಗೊಡ್ಡಾಗಿದೆ. ಪರ್ಯಾಯ ಬೆಳೆ ಬೆಳೆಯಬೇಕು ಎಂದರೆ ತೊಗರಿಗಿಂತ ಅವುಗಳ ಖರ್ಚು ಹೆಚ್ಚಿದೆ. ತೊಗರಿ ಬೆಳೆಹಾನಿಗೆ ಈವರೆಗೂ ಸರ್ಕಾರ ಪ್ರತಿ ಎಕರೆಗೆ 2ರಿಂದ 3 ಸಾವಿರ ರೂ. ಆರ್ಥಿಕ ಸಹಾಯ ನೀಡಿ ಕೈತೊಳೆದುಕೊಳ್ಳುತ್ತ ಬಂದಿವೆ. ಆದರೆ, ನಮಗೆ ವೈಜ್ಞಾನಿಕ ಬೆಳೆ ಪರಿಹಾರ ಬೇಕು” ಎಂದರು.

“ಹವಾಮಾನ ವೈಪರೀತ್ಯ ಉಂಟಾದಾಗ ತೊಗರಿಗೆ ಯಾವ ರೀತಿ ಔಷಧ ಸಿಂಪಡಿಸಿ ಬೆಳೆ ರಕ್ಷಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ಮಾಹಿತಿಯೇ ನೀಡುವುದಿಲ್ಲ. ದೀಪಾವಳಿ ಸುತ್ತ ಮುತ್ತ ಬೀಸಿದ ಗಾಳಿಗೆ ತೊಗರಿ ಹೂಗಳು ಉದುರಿ ಹೋಗಿವೆ. ಹೆಚ್ಚು ಮಳೆಯಿಂದ ತೊಗರಿ ಕೊಳೆತು ನಿಂತಿದೆ. ಅಕ್ಟೋಬರ್‌ತನಕ ಚೆನ್ನಾಗಿದ್ದ ತೊಗರಿ ಈಗ ಕಮರಿಹೋಗಿದೆ. ಕೆಲವು ರೈತರಿಗೆ ತೊಗರಿ ಹೊಟ್ಟು ಮತ್ತು ಕಟಿಗೆ ಕೂಡ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಮೇಲೆ ಕೈಗೆ ಸಿಗುವ ತೊಗರಿಯನ್ನು ನಂಬರ್‌ -1, ನಂಬರ್‌ -2, ನಂಬರ್‌ -3 ಅಂತ ದರ್ಜೆಗಳನ್ನು ಮಾಡಿ ನ್ಯಾಯಯುತ ಬೆಲೆ ಸಿಗದಂತೆ ಮಾಡುತ್ತಾರೆ” ಎಂದು ದೂರಿದರು.

ಈ ಸುದ್ದಿ ಓದಿದ್ದೀರಾ? ಚಳಿಗಾಲ ಅಧಿವೇಶನ | ‘ಸುವರ್ಣಸೌಧ’ ತಗೊಂಡು ಏನು ಮಾಡೋಣ, ‘ಬ್ರ್ಯಾಂಡ್‌ ಬೆಳಗಾವಿ’ ಯಾವಾಗ?

ತೊಗರಿ ಬೋರ್ಡ್‌ನಿಂದ ನಯಾ ಪೈಸೆ ಉಪಯೋಗವಿಲ್ಲ. ಸ್ಥಾಪನೆಯಾಗಿ 10 ವರ್ಷ ಆಯ್ತು. ಆಯಾ ಪಕ್ಷದ ಕಾರ್ಯಕರ್ತರಿಗೆ, ರಾಜಕೀಯ ನಾಯಕರ ಹಿಂದೆ ಓಡಾಡುವ ಬೆಂಬಲಿಗರಿಗೆ ಮಾತ್ರ ಅಲ್ಲಿ ಅನುಕೂಲ ಜಾಸ್ತಿ. ಬಡ ರೈತರಿಗೆ 10 ರೂಪಾಯಿ ಅನುಕೂಲವಾಗುವ ಕೆಲಸವಾಗಲ್ಲ. ನಮ್ಮ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಡಾಂಭಿಕ ಮಾತುಗಾರಿಕೆ ರೈತರನ್ನು ಸಂಕಷ್ಟದ ಸುಳಿಯಲ್ಲೇ ಸಿಲುಕಿಸಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಕಲಬುರಗಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್
ಕಲಬುರಗಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್‌

ಕಲಬುರಗಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್‌ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ, “ನಮ್ಮ ಜಿಲ್ಲೆಯಲ್ಲಿ 6 ಲಕ್ಷದ 27 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಮುಂಗಾರು ಮಳೆ ಹೆಚ್ಚಾದ ಪ್ರಮಾಣ ಆಳಂದ, ಅಫಜಲಪುರ ತಾಲೂಕಿನಲ್ಲಿ ತೊಗರಿ ಬೆಳೆಗೆ ಹಾನಿಯಾಗಿದೆ. ಇಡೀ ಜಿಲ್ಲೆಯಲ್ಲಿ ಎಷ್ಟು ಹಾನಿಯಾಗಿದೆ ಎಂಬುದನ್ನು ತಿಳಿಯಲು ಸರ್ವೇ ನಡೆಯುತ್ತಿದೆ. ತೊಗರಿಗೆ 10 ಸಾವಿರ ಬೆಲೆ ಮಾರುಕಟ್ಟೆಯಲ್ಲಿದೆ. ಕೇಂದ್ರ ನಿಗದಿ ಪಡಿಸಿದ ಬೆಂಬಲ ಬೆಲೆ 7,550 ರೂ. ಇದೆ. ಇದರ ಕೆಳಗೆ ದರ ಇಳಿದರೆ ನಾವು ಖರೀದಿಗೆ ಮುಂದಾಗಬೇಕು” ಎಂದು ಹೇಳಿದರು.

ಜಿಲ್ಲೆಯಲ್ಲಿ 5,500 ಕೋಟಿ ರೂ. ವಹಿವಾಟು

ತೊಗರಿ ವಹಿವಾಟು ಬಗ್ಗೆ ಮಾಹಿತಿ ನೀಡಿದ ಸಮದ ಪಟೇಲ್‌, “ಕಲಬುರಗಿ ಭಾಗದಲ್ಲಿ ಪ್ರತಿ ಹೆಕ್ಟೇರ್‌ ಭೂಮಿಯಲ್ಲಿ (ಎರಡೂವರೆ ಎಕರೆ) ಸರಾಸರಿ 9 ಕ್ವಿಂಟಾಲ್‌ ತೊಗರಿ ಬರುತ್ತದೆ. ಜಿಲ್ಲೆಯಲ್ಲಿ ಬಿತ್ತನೆಯಾದ ಪ್ರಮಾಣ ನೋಡಿ ಹೇಳುವುದಾದರೆ 55 ಲಕ್ಷ ಕ್ವಿಂಟಾಲ್‌ ತೊಗರಿ ನಿರೀಕ್ಷೆಯಲ್ಲಿದ್ದೇವೆ. ಇದರಿಂದ ಸುಮಾರು 5,500 ಕೋಟಿ ರೂ. ಆದಾಯ ಕಲಬುರಗಿ ಜಲ್ಲೆಯ ರೈತರದ್ದಾಗಲಿದೆ. ಎಪಿಎಂಸಿಯಲ್ಲಿ ರೈತರು ಮಾರಾಟ ಮಾಡಿದರೆ ಸರ್ಕಾರಕ್ಕೆ ಶೇ.1 ರಷ್ಟು ಆದಾಯ ಸಂಗ್ರಹವಾಗಲಿದೆ. ಇದನ್ನು ಹೊರತುಪಡಿಸಿ ಸಾರಿಗೆ, ತೈಲ, ರಿಟೇಲ್ ವ್ಯಾಪಾರದಿಂದಲೂ ಸರ್ಕಾರಕ್ಕೆ ತೆರಿಗೆ ಸಂಗ್ರಹವಾಗಲಿದೆ” ಎಂದು ವಿವರಿಸಿದರು.

ಕೇವಲ ಕಲಬುರಗಿ ಜಿಲ್ಲೆಯೊಂದರಲ್ಲೇ ಸರಿಸುಮಾರು ಐದೂವರೆ ಸಾವಿರ ಕೋಟಿ ರೂ. ತೊಗರಿ ವಹಿವಾಟು ನಡೆಯುತ್ತದೆ ಎಂದರೆ ಸರ್ಕಾರ ತೊಗರಿ ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರ್ಲಕ್ಷ್ಯ ವಹಿಸುವುದನ್ನು ಒಪ್ಪಲಾಗದು. 12 ಜಿಲ್ಲೆಗಳಲ್ಲಿ ತೊಗರಿಯನ್ನು ರೈತರು ಹೆಚ್ಚಾಗಿ ಬೆಳೆಯುವುದರಿಂದ ಸರ್ಕಾರ ರೈತರನ್ನು ಪ್ರೋತ್ಸಾಹಿಸಬೇಕು. ಅವರ ಸಂಕಟಗಳಿಗೆ ಧ್ವನಿಯಾಗಬೇಕು. ಇಲ್ಲದಿದ್ದರೆ ಕಾಲಕ್ರಮೇಣ ರೈತರು ಬೇರೆ ಬೇರೆ ವಾಣಿಜ್ಯ ಬೇಳೆಗಳಿಗೆ ವಾಲಿದರೆ, ತೊಗರಿ ನಾಡಿನ ಖ್ಯಾತಿ ಅಳಿಸಲಿದೆ.

ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರಕ್ಕೆ ಸೀಮಿತವಾದ ತೊಗರಿ ಸಮಸ್ಯೆ

“ಕಲಬುರಗಿ ಜಿಲ್ಲೆಯಲ್ಲಿ 30 ಲಕ್ಷ ರೈತರು ಬೆಳೆಯುತ್ತಿರುವ ತೊಗರಿ ಜಿ1-ಟ್ಯಾಗ್ ಕ್ಲಾಸ್-31 ಪ್ರಮಾಣ ಪತ್ರ 2017ರಿಂದ 2019ರಲ್ಲಿ ದೊರೆತಿದ್ದರೂ ಅದರ ಗುಣಧರ್ಮಕ್ಕೆ ಅನುಗುಣವಾಗಿ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸದಿರುವುದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ” ಎಂದು ವಿಧಾನ ಪರಿಷತ್‌ನಲ್ಲಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಗಮನ ಸೆಳೆದಿದ್ದಾರೆ.

ಕೃಷಿ ಸಚಿವ ಎನ್‌ ಚಲುವರಾಯಸ್ವಾಮಿ ಇದಕ್ಕೆ ಪ್ರತಿಕ್ರಿಯಿಸಿದ್ದು, “ತೊಗರಿಗೆ ಹೆಚ್ಚಿನ ಬೆಂಬಲ ಬೆಲೆ ನಿಗದಿಪಡಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಪತ್ರ ಬರೆಯಲಾಗುವುದು ಮತ್ತು ಕಲಬುರಗಿ ಜಿಲ್ಲೆಯ ತೊಗರಿಗೆ ಹೆಚ್ಚಿನ ರೀತಿಯಲ್ಲಿ ಬೆಂಬಲ ಬೆಲೆ ಘೋಷಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ‘ಬೆಳೆ ಪರಿಹಾರ’ ಪರಿಕಲ್ಪನೆಯೇ ಸರ್ಕಾರದಲ್ಲಿ ಇಲ್ಲ, ರಾಜ್ಯಕ್ಕೆ ಬೇಕಿದೆ ಹೊಸ ಕಾಯ್ದೆ – ಕಾನೂನು

ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರವು ಘೋಷಣೆ ಮಾಡುತ್ತದೆ. ಕೇಂದ್ರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ ಪ್ರತಿ ವರ್ಷ 3 ಹಿಂಗಾರು ಹಂಗಾಮಿನ ಬೆಳೆಗಳಿಗೆ ವಿವಿಧ ರಾಜ್ಯಗಳಲ್ಲಿ ಉತ್ಪಾದನಾ ವೆಚ್ಚ ವಿವರಗಳನ್ನು ಕೃಷಿ ವಿಶ್ವ ವಿದ್ಯಾನಿಲಯಗಳ ಸಹಯೋಗದಲ್ಲಿ ಲೆಕ್ಕಾಚಾರ ಮಾಡುತ್ತದೆ. ಜೊತೆಗೆ ಎಲ್ಲ ರಾಜ್ಯ ಸರ್ಕಾರಗಳಿಂದ ಬೆಳೆಗಳ ಉತ್ಪಾದನಾ ವೆಚ್ಚದ ಮಾಹಿತಿ ಪಡೆದು, ತಜ್ಞರು, ಅಧಿಕಾರಿಗಳು ಮತ್ತು ರೈತರೊಂದಿಗೆ ಚರ್ಚಿಸಿ, ಉತ್ಪಾದನಾ ವೆಚ್ಚ ವಿವರಗಳನ್ನು ಒಳಗೊಂಡ ಬೆಲೆ ನೀತಿ ವರದಿಯನ್ನು ತಯಾರಿಸಲಾಗುತ್ತದೆ.

ತೊಗರಿ 5

ವರದಿಯ ಶಿಫಾರಸ್ಸುಗಳಿಗೆ ಸಂಬಂಧಿಸಿದಂತೆ ರಾಜ್ಯಗಳ ಅಭಿಪ್ರಾಯ ಪಡೆದು, ನಂತರ ಉತ್ಪಾದನಾ ವೆಚ್ಚದ ಮೇಲೆ ಶೇ.50 ರಷ್ಟು ಸೇರಿಸಿ ಬೆಂಬಲ ಬೆಲೆಯನ್ನು ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಕೇಂದ್ರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ (Commission for Agriculture Crops and Prices- CACP) ಶಿಫಾರಸ್ಸಿನನ್ವಯ ಕೇಂದ್ರ ಸರ್ಕಾರವು ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ತೊಗರಿಗೆ ಹೆಚ್ಚಿನ ಬೆಂಬಲ ಬೆಲೆ ನಿಗದಿಪಡಿಸಲು ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಶಿಫಾರಸ್ಸು ಮಾಡಲಾಗುತ್ತಿದೆ. ರಾಜ್ಯದ ಶಿಫಾರಸ್ಸಿನ ಅನ್ವಯ ಕೇಂದ್ರ ಬೆಂಬಲ ಬೆಲೆ ನಿಗದಿಪಡಿಸುತ್ತದೆ.

“ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಗೆ ಜಿ.ಐ. ಟ್ಯಾಗ್ (ಕ್ಲಾಸ್-31) ಪ್ರಮಾಣ ಪತ್ರ ದೊರೆತಿದ್ದು, ಇದಕ್ಕೆ ಶೇ. 20 ರಿಂದ 25 ರಷ್ಟು ಹೆಚ್ಚಿನ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗವನ್ನು ಕೋರಲಾಗಿದೆ” ಎಂದು ಕೃಷಿ ಸಚಿವ ಎನ್‌ ಚಲುವರಾಯಸ್ವಾಮಿ ಪರಿಷತ್‌ ಕಲಾಪದಲ್ಲಿ ಉತ್ತರಿಸಿದ್ದಾರೆ.

ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಪ್ರತಿವರ್ಷ ತೊಗರಿ ಬೆಳೆಗೆ ಹೆಚ್ಚಿನ ಬೆಂಬಲ ಬೆಲೆಗೆ ಶಿಫಾರಸ್ಸು ಮಾಡಲಾಗುತ್ತಿದೆ. ಅದರ ಅನ್ವಯದಂತೆ ವಿವಿಧ ಮಾನದಂಡಗಳನ್ನು ಅನುಸರಿಸಿ ಬೆಂಬಲ ಬೆಲೆ ನಿಗದಿಯಾಗಲಿದೆ. ಸಚಿವ ಚಲುವರಾಯಸ್ವಾಮಿ ಅವರು ಮತ್ತಷ್ಟು ಇಚ್ಛಾಶಕ್ತಿ ಪ್ರದರ್ಶಿಸಿ, ತೊಗರಿ ಬೆಳೆಗೆ ಪ್ರಸಕ್ತ ಸಾಲಿಗೆ ರಾಜ್ಯ ಸರ್ಕಾರವೇ ಶಿಫಾರಸು ಮಾಡಿರುವ 11,210 ರೂ.ವನ್ನು ಕೇಂದ್ರಕ್ಕೆ ಮನವರಿಕೆ ಮಾಡಿ ರೈತರ ಕೈಗೆ ಬೆಂಬಲ ಬೆಲೆ ಸಿಗುವಂತೆ ನೋಡಿಕೊಂಡರೆ ತೊಗರಿ ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಬಹುದು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

Download Eedina App Android / iOS

X