ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಗುಬ್ಬಿ ನಾಗರೀಕರಿಗೆ ಅತ್ಯವಶ್ಯ ರೈಲ್ವೆ ಮೇಲ್ಸೇತುವೆ ನಿರ್ಮಾಣದ ವಾಗ್ದಾನ ನೀಡಿದ್ದರು. ನುಡಿದಂತೆ ನಡೆದ ರೈಲ್ವೆ ಕೇಂದ್ರ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ನಾಗರೀಕರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದು ತಾಪಂ ಮಾಜಿ ಅಧ್ಯಕ್ಷ ಜಿ.ಎನ್.ಬೆಟ್ಟಸ್ವಾಮಿ ತಿಳಿಸಿದರು
ಗುಬ್ಬಿ ಪಟ್ಟಣದ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ರೈಲ್ವೆ ಅಂಡರ್ ಪಾಸ್ ರಸ್ತೆಯ ಅವಾಂತರ ತಿಳಿಸಿದ ಬಳಿಕ ರೈಲ್ವೆ ಫ್ಲೈ ಓವರ್ ಬ್ರಿಡ್ಜ್ ನಿರ್ಮಾಣದ ಮಾತು ಕೊಟ್ಟಿದ್ದರು. ಜಿಲ್ಲೆಯಲ್ಲಿ ಈಗಾಗಲೇ ಸಾವಿರಾರು ಕೋಟಿ ಕೆಲಸಗಳಿಗೆ ಸಂಸದರಾಗಿ ಚಾಲನೆ ನೀಡುತ್ತಿದ್ದಾರೆ. ಹೆದ್ದಾರಿ ವರ್ತುಲ ರಸ್ತೆ, ಚತುಷ್ಪಥ ರಸ್ತೆ ಜೊತೆಗೆ ತಾಲ್ಲೂಕಿನ ಮೈಸೂರು ರಸ್ತೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಪ್ರಧಾನಿ ಅವರ ಮಾರ್ಗದರ್ಶನದಲ್ಲಿ ನೂರು ದಿನದಲ್ಲಿ ಅಭಿವೃದ್ದಿಯ ಕೆಲಸದ ಕಡತಗಳು ಸಿದ್ಧವಾಗಿವೆ. ಮುಂದಿನ ಬಜೆಟ್ ವೇಳೆಗೆ ಇಡೀ ಜಿಲ್ಲೆಯಲ್ಲಿ ಅಭಿವೃದ್ದಿಯ ಕ್ರಾಂತಿ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಗುಬ್ಬಿ ಪಟ್ಟಣಕ್ಕೆ ಅವಶ್ಯ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೃತಜ್ಞತೆ ನಾಗರೀಕರ ಪರವಾಗಿ ಸಲ್ಲಿಸುತ್ತೇನೆ ಎಂದರು.
ಪಪಂ ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ ತಾಲ್ಲೂಕಿನ 150 ಹಳ್ಳಿಗಳಿಗೆ ಸಂಪರ್ಕಿಸುವ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ 134.50 ಕೋಟಿ ರೂ ಮಂಜೂರು ಮಾಡಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಕೇವಲ ಆರು ತಿಂಗಳಲ್ಲಿ ಅಭಿವೃದ್ದಿ ಕೆಲಸದ ಮೂಲಕ ತನ್ನ ಕಾರ್ಯ ವೈಖರಿ ತೋರಿಸಿದ ಸೋಮಣ್ಣ ಅವರಿಗೆ ಗುಬ್ಬಿ ತಾಲ್ಲೂಕಿನ ಜನತೆ ಚಿರಋಣಿಯಾಗಿರುತ್ತದೆ. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ರೈಲ್ವೆ ಇಲಾಖೆ ಕೆಲಸಗಳು ಗಮನಾರ್ಹ ರೂಪದಲ್ಲಿ ಕಾಣಿಸಿಕೊಂಡಿದೆ. ಮುಂದಿನ ರೈಲ್ವೆ ಬಜೆಟ್ ಇಡೀ ರಾಜ್ಯಕ್ಕೆ ಸಂತಸ ತರುವ ರೀತಿ ಮಂಡಿಸಲಿದ್ದಾರೆ ಎಂದು ಪ್ರಶಂಸಿದರು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಗುಬ್ಬಿ ಪಟ್ಟಣಕ್ಕೆ ಅವಿನಾಭಾವ ಸಂಬಂಧ ಹೊಂದಿರುವ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಈ ಹಿಂದೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಕರಿಸಿದ್ದರು. ಕೊಟ್ಟ ಮಾತಿನಂತೆ ಅತ್ಯವಶ್ಯ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅಧಿಕಾರಿಗಳ ತಂಡವನ್ನು ಮೂರು ತಿಂಗಳಲ್ಲಿ ಐದು ಬಾರಿ ಭೇಟಿ ನೀಡಿಸಿ ಸೇತುವೆಗೆ ಹಣ ಮಂಜೂರು ಮಾಡಿದ್ದಾರೆ. ಇವರಲ್ಲಿ ನಮ್ಮ ಕೃತಜ್ಞತೆ ಸಲ್ಲಿಸಬೇಕಿದೆ. ಇವರ ಕಾರ್ಯ ವೈಖರಿ ಕಂಡು ದೆಹಲಿಯಲ್ಲಿ ವೀರಭದ್ರ ಪ್ರಶಸ್ತಿ ಕೂಡ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುಬ್ಬಿ ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಬಿ.ಕೃಷ್ಣಪ್ಪ ಇದ್ದರು.