- ಮೇ 1ರಿಂದ ಗುಜರಾತ್‌ನಲ್ಲಿ ಆರಂಭಿಸಲಾಗಿರುವ ಜನಮಂಚ್ ಅಭಿಯಾನ
- ರಾಜ್ಯದ ಯಾವ ದಿಕ್ಕಿಗೆ ಹೋದರೂ ಬಿಜೆಪಿ ವಿರುದ್ಧ ಆಕ್ರೋಶ ಎಂದ ಕಾಂಗ್ರೆಸ್
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಪಡೆದು ನೀರಸ ಪ್ರದರ್ಶನ ತೋರಿತ್ತು. ಈಗ 2023ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪುಟಿದೇಳುವ ತವಕದಲ್ಲಿ ಪಕ್ಷ ಸಂಘಟನೆ ಹಾಗೂ ಬಿಜೆಪಿಯ ಆಡಳಿತ ವಿರೋಧಿ ನೀತಿಯನ್ನು ಜನಾಂದೋಲನಗೊಳಿಸುವ ಮೂಲಕ ತನ್ನ ಸಾಮರ್ಥ್ಯವನ್ನು ತೋರಲು ಸಿದ್ದವಾಗುತ್ತಿದೆ.
ಕಳೆದ ಎರಡು ದಶಕಗಳಿಂದ ಗುಜರಾತಿನಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯ ವಿರುದ್ಧ ಭ್ರಷ್ಟಾಚಾರ ಹಾಗೂ ದುರಾಡಳಿತದ ಬಗ್ಗೆ ರಾಜ್ಯದ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಈ ತಿಂಗಳ ಮೇ 1ರಿಂದ ‘ಜನ್ ಮಂಚ್’ (ಜನರ ವೇದಿಕೆ) ಎಂಬ ಅಭಿಯಾನದ ಮೂಲಕ ರಾಜ್ಯಾದ್ಯಂತ ಪ್ರವಾಸ ಆರಂಭಿಸಿದೆ.
ಜನ್ ಮಂಚ್ ಸಭೆಗಳಲ್ಲಿ ಮಾತನಾಡುತ್ತಿರುವ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೀಶ್ ಠಾಕೂರ್. “ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್‌ನಲ್ಲಿ ತಮ್ಮ ಮಾತುಗಳನ್ನು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಆದರೆ ಗುಜರಾತ್‌ನ ಕಾಂಗ್ರೆಸ್ ಬೀದಿಯಲ್ಲಿರುವ ಸಾಮಾನ್ಯ ಜನರು ಮತ್ತು ಮಹಿಳೆಯರ ಸಮಸ್ಯೆಗಳ ಮನದ ಮಾತನ್ನು ಕೇಳಲು ಬಯಸುತ್ತದೆ” ಎಂದು ತಿಳಿಸುತ್ತಿದ್ದಾರೆ.
ಕಾಂಗ್ರೆಸ್, 2009ರ ಲೋಕಸಭಾ ಚುನಾವಣೆ ಹೊರತುಪಡಿಸಿದರೆ ನಂತರದ ಚುನಾವಣೆಗಳಲ್ಲಿ ಯಾವುದೇ ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿದೆ. ಈ ಕಾರಣದಿಂದ ಪಕ್ಷದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಎಲ್ಲ ನಾಯಕರನ್ನು ಒಟ್ಟಿಗೆ ಕರೆದುಕೊಂಡು ಜನರ ಸಂಘಟನೆಯೊಂದಿಗೆ ಬಿಜೆಪಿಯನ್ನು ಮಣಿಸಲು ತಂತ್ರ ನಡೆಸುತ್ತಿದೆ. ಪ್ರಚಾರದ ಭಾಗವಾಗಿ, ಕಾಂಗ್ರೆಸ್ ನಾಯಕರು ಇಲ್ಲಿಯವರೆಗೂ ಎಂಟು ಜಿಲ್ಲೆಗಳ 16 ತಾಲೂಕುಗಳಿಗೆ ಭೇಟಿ ನೀಡಿ ಜನಸಾಮಾನ್ಯರಿಂದ 800 ವಿವಿಧ ರೀತಿಯ ದೂರುಗಳನ್ನು ಸಂಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಹುಲ್ ಗಾಂಧಿಗೆ ಪಾಸ್‌ಪೋರ್ಟ್ ಪಡೆಯಲು ಕೋರ್ಟ್ ಅನುಮತಿ
“ನಾವು ರಾಜ್ಯದ ಯಾವ ದಿಕ್ಕಿಗೆ ಹೋದರೂ, ಎರಡು ದಶಕಗಳಿಂದ ರಾಜ್ಯವನ್ನು ಆಳುತ್ತಿರುವ ಆಡಳಿತ ಪಕ್ಷ ನಮ್ಮ ಸಮಸ್ಯೆಗಳನ್ನು ಕೇಳಿಸಿಕೊಳ್ಳುತ್ತಿಲ್ಲ ಎಂದೇ ಜನಸಾಮಾನ್ಯರು ದೂರುತ್ತಿದ್ದಾರೆ. ಎಲ್ಲೆಲ್ಲೂ ಬಿಜೆಪಿ ವಿರುದ್ಧ ವಿಶೇಷವಾಗಿ ಭ್ರಷ್ಟಾಚಾರ ಮತ್ತು ದುರಾಡಳಿತದ ಬಗ್ಗೆ ಅಸಮಾಧಾನ ಮುಂದುವರಿಯುತ್ತಿದೆ. ಅಲ್ಲದೆ ಬಿಜೆಪಿ ನಾಯಕರು ಅಭಿವೃದ್ಧಿ ರಾಜಕಾರಣ ಮಾಡುವುದನ್ನು ಬಿಟ್ಟು ಹಿಂದುತ್ವ, ತೋಳ್ಬಲ ಮತ್ತು ಹಣಬಲ ಬಳಸಿ ಚುನಾವಣೆಗಳಲ್ಲಿ ಹಿಡಿತ ಸಾಧಿಸುತ್ತಿದ್ದಾರೆ. ಚುನಾವಣೆಗಳು ಈಗಷ್ಟೇ ಮುಗಿದಿರುವುದರಿಂದ ಜನರ ಮಧ್ಯೆ ಹೋಗಲು ಇದು ಸೂಕ್ತ ಸಮಯ ಎಂದು ಭಾವಿಸಿದ್ದೇವೆ” ಎನ್ನುತ್ತಾರೆ ರಾಜ್ಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಾಯಕರಾದ ಅಮಿತ್ ಚಾವ್ಡ.
ಕಾರ್ಯಕರ್ತರು, ಜನರ ಸಮಸ್ಯೆ ಆಲಿಸಲು ಗಮನ
“ನಮ್ಮ ಜನಮಂಚ್ ಅಭಿಯಾನದ ಮೂಲಕ, 2024ರ ಲೋಕಸಭಾ ಚುನಾವಣೆಯ ಮೊದಲು ನಾವು ರಾಜ್ಯದಾದ್ಯಂತ ಪ್ರವಾಸ ಮಾಡಿ ಬಿಜೆಪಿಯ ವಿರುದ್ಧ ಜನರನ್ನು ಸಂಘಟಿಸುವ ಪ್ರಯತ್ನ ಮುಂದುವರೆಸುತ್ತೇವೆ. ಅಲ್ಲದೆ ನಾವು ನಮ್ಮ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ನಮ್ಮ ಆಂದೋಲನದಲ್ಲಿ ನಾವು ಜನರ ಸಮಸ್ಯೆಗಳನ್ನು ಕೇಳಲು ಅವರ ಬಳಿಯೇ ಹೋಗುತ್ತಿದ್ದೇವೆ. ಆದರೆ ಸರ್ಕಾರದ ನಾಯಕರ ಬಳಿ ಜನರು ತಮ್ಮ ಸಮಸ್ಯೆಗಳನ್ನು ಹೊತ್ತುಕೊಂಡು ಹೋದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಜನರು ಈಗ ಎಲ್ಲವನ್ನು ಗಮನಿಸುತ್ತಿದ್ದಾರೆ” ಎಂದು ಅಮಿತ್ ಚಾವ್ಡ ತಿಳಿಸಿದ್ದಾರೆ.
“ಮೇ1ರಂದು ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಮತ್ತು ಪಾಲನ್‌ಪುರ್ ಪಟ್ಟಣಗಳಲ್ಲಿ ಪಕ್ಷದ ಹಿರಿಯ ನಾಯಕರು ಎರಡು ಸಭೆಗಳಲ್ಲಿ ಭಾಗವಹಿಸುವುದರೊಂದಿಗೆ ಅಭಿಯಾನ ಪ್ರಾರಂಭವಾಯಿತು. ಆರಂಭದಲ್ಲಿ ಗ್ರಾಮದ ಸರಪಂಚರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ ತಾತ್ಕಾಲಿಕವಾಗಿ ಪರಿಹರಿಸಲಾಯಿತು” ಎಂದು ಚಾವ್ಡ ಹೇಳಿದರು.
ಪ್ರತಿ ಜಿಲ್ಲೆಯಲ್ಲೂ ಸರ್ಕಾರದ ವಿರುದ್ಧ ಆಕ್ರೋಶ
“ಪ್ರತಿ ಗ್ರಾಮ ತಾಲೂಕು ಜಿಲ್ಲೆಗಳಲ್ಲಿ ಸರ್ಕಾರದ ವಿರುದ್ಧ ವಿವಿಧ ರೀತಿಯ ದೂರುಗಳು ಬರುತ್ತಿವೆ. ಭರೂಚ್ ಜಿಲ್ಲೆಯ ದಹೇಜ್‌ನ ವಾಗ್ರಾ ಬ್ಲಾಕ್‌ನಲ್ಲಿ, ಹಲವಾರು ನಿವಾಸಿಗಳು ಕೈಗಾರಿಕೀಕರಣದಿಂದ ಭೂಮಿಯನ್ನು ಕಳೆದುಕೊಂಡಿದ್ದಾರೆ. ಆದರೆ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಶೇ. 85ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಸರ್ಕಾರದ ನಿಯಮ ಪಾಲನೆಯಾಗುತ್ತಿಲ್ಲ. ಲಭ್ಯವಿರುವ ಯಾವುದೇ ಕೆಲಸವು ಒಪ್ಪಂದದ ಮೇಲೆ ಇರುತ್ತದೆ. ಇದರ ಜೊತೆಗೆ ನೂರಾರು ಸಮಸ್ಯೆಗಳಿವೆ ಎಂದು ಅಭಿಯಾನದಲ್ಲಿ ಪಾಲ್ಗೊಂಡ ಪಕ್ಷದ ನಾಯಕರು ತಿಳಿಸುತ್ತಿದ್ದಾರೆ” ಎಂದು ಚಾವ್ಡ ತಿಳಿಸಿದ್ದಾರೆ.
“ನಾವು ಸೂರತ್‌ಗೆ ಹೋದಾಗ ಪೊಲೀಸ್ ದುರವಸ್ಥೆಯ ಹತ್ತಾರು ಸಮಸ್ಯೆಗಳ ಬಗ್ಗೆ ಗೊತ್ತಾಯಿತು. ರಾಜ್ಯದ ಆರು ಸ್ಮಾರ್ಟ್ ಸಿಟಿಗಳಲ್ಲಿ ಒಂದಾದ ದಾಹೋದ್‌ಗೆ ಭೇಟಿ ನೀಡಿದಾಗ ಆರು ದಿನಕ್ಕೊಮ್ಮೆ ಕುಡಿಯುವ ನೀರು ಸಿಗುತ್ತಿರುವ ಬಗ್ಗೆ ಮಾಹಿತಿ ತಿಳಿಯಿತು. ದಹೋದ್‌ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ₹300 ಕೋಟಿ ವೆಚ್ಚ ಮಾಡಿದರೂ ಸರಿಯಾದ ಮೂಲ ಸೌಕರ್ಯ ದೊರಕಿಲ್ಲ” ಎಂದು ಅಮಿತ್ ಚಾವ್ಡ ಹೇಳಿದರು.
ಹಿಂದುತ್ವದ ಹೆಸರಿನಲ್ಲಿ ಗೆಲುವು
“ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ಸಾವುಗಳ ಬಗ್ಗೆಯೂ ಕಾಂಗ್ರೆಸ್ ಇದೇ ರೀತಿಯ ಸಾರ್ವಜನಿಕ ಅಭಿಯಾನ ನಡೆಸಿತ್ತು. ನಾವು ಕೋವಿಡ್‌ನಿಂದ ಸಾವನ್ನಪ್ಪಿದವರ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿದ್ದೇವೆ. ನೊಂದವರ ಕುಟುಂಬಗಳ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಅಲ್ಲದೆ ನಮ್ಮ ಆಂದೋಲನದಿಂದ ಹೆಚ್ಚಿನ ಜನರಿಗೆ ಸರ್ಕಾರದ ಪರಿಹಾರ ಪಡೆಯಲು ಸಹಾಯವಾಗಿದೆ. ಆದರೆ ನಂತರ ನಡೆದ ಚುನಾವಣೆಯಲ್ಲಿ ಹಿಂದುತ್ವ ಅಥವಾ ಜಾತಿ ರಾಜಕಾರಣ ಹಣಬಲದಿಂದ ಬಿಜೆಪಿ ಗೆಲುವು ಸಾಧಿಸಿತು. ಜನರಿಗೆ ಈಗ ಎಲ್ಲವೂ ಅರ್ಥವಾಗುತ್ತಿದೆ. ಸರ್ಕಾರಕ್ಕೆ ಪಾಠ ಕಲಿಸುವುದಾಗಿ ಎಲ್ಲೆಡೆ ಜನರು ಹೇಳುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಾವು ಅಭೂತಪೂರ್ವ ಗೆಲುವುಗಳಿಸುವುದು ನಿಶ್ಚಿತ” ಎಂದು ಅಮಿತ್ ಚಾವ್ಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.