2025ರಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಎಲ್ಲ ಪ್ರಾಂಚೈಸಿಗಳು ತಮ್ಮ ತಂಡಗಳಿಗೆ ಆಟಗಾರರನ್ನು ಖರೀದಿಸಿದ್ದು, ತಂಡ ರಚಿಸಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಕೂಡ 22 ಆಟಗಾರರ ತಂಡವನ್ನು ಕಟ್ಟಿದೆ. ಈ ಬೆನ್ನಲ್ಲೇ, ಕನ್ನಡಿಗನೇ ಆದ ಕೆ.ಎಲ್ ರಾಹುಲ್ ಅವರನ್ನು ಆರ್‌ಸಿಬಿ ಕೈಬಿಟ್ಟಿದ್ದೇಕೆ ಎಂಬುದರ ಹಿಂದಿನ ಸತ್ಯವೂ ಬಹಿರಂಗವಾಗಿದೆ.
ನವೆಂಬರ್‌ನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯ ವೇಳೆ ಕೆ.ಎಲ್ ರಾಹುಲ್‌ರನ್ನು ತಂಡಕ್ಕೆ ತೆಗೆದುಕೊಳ್ಳಲು ಆರ್‌ಸಿಬಿ ಪ್ರಾಂಚೈಸಿ ಹೆಚ್ಚಿನ ಒಲವು ತೋರಿರಲಿಲ್ಲ. ಹೀಗಾಗಿ, ಆರ್‌ಸಿಬಿ ವಿರುದ್ಧ ಭಾರೀ ಆಕ್ರೋಶ, ಟೀಕೆ, ಟ್ರೋಲ್‌ಗಳು ವ್ಯಕ್ತವಾಗಿದ್ದವು. ಇದೀಗ, ಆರ್‌ಸಿಬಿಯ ಆದ್ಯತೆ ಪಟ್ಟಿ (ಪ್ರಯಾರಿಟಿ ಲಿಸ್ಟ್) ಬಹಿರಂಗವಾಗಿದೆ. ರಾಹುಲ್‌ರನ್ನು ಆರ್‌ಸಿಬಿ ಆದ್ಯತೆಯಾಗಿ ಇಟ್ಟುಕೊಂಡಿರಲಿಲ್ಲ ಎಂಬುದು ಸ್ಪಷ್ಟವಾಗಿದೆ.
ಹರಾಜು ಪ್ರಕ್ರಿಯೆಯನ್ನು ಆಟಗಾರರನ್ನು ಖರೀದಿಸಲು, ಮೂರು ಪಟ್ಟಿಯನ್ನು ಮಾಡಿಕೊಂಡಿತ್ತು. ಅದರಲ್ಲಿ, ರಾಹುಲ್ ‘ಎ’ ಪಟ್ಟಿಯಲ್ಲಿ ಇರಲಿಲ್ಲ. ಅವರನ್ನು ಆರ್‌ಸಿಬಿ ‘ಸಿ’ ಪಟ್ಟಿಯಲ್ಲಿ ಇಟ್ಟುಕೊಂಡಿತ್ತು. ಹೀಗಾಗಿಯೇ, ಕೆ ಎಲ್ ರಾಹುಲ್ ಅವರನ್ನು 7 ಕೋಟಿ ರೂ.ಗಿಂತ ಹೆಚ್ಚು ಹಣ ಕೊಟ್ಟು ಖರೀದಿಸಲು ಆರ್‌ಸಿಬಿಗೆ ಆಸಕ್ತಿ ತೋರಿಲ್ಲ ಎಂದು ಹೇಳಲಾಗಿದೆ.
ಹರಾಜಿನಲ್ಲಿ ಕೆ.ಎಲ್ ರಾಹುಲ್ ಮೇಲೆ 7 ಕೋಟಿ ರೂ.ವರೆಗೆ ಬಿಡ್ ಮಾಡಿದ ಆರ್‌ಬಿಸಿ, ಆ ನಂತರ ಹಿಂದೆ ಸರಿದಿತ್ತು. ಅದಕ್ಕೆ, ರಾಹುಲ್ ಅವರು ಆರ್‌ಸಿಬಿ ಫ್ರಾಂಚೈಸಿಯ ಆದ್ಯತೆಯಾಗಿರಲಿಲ್ಲ ಎಂಬುದೇ ಕಾರಣವೆಂದು ಸ್ಪಷ್ಟವಾಗಿದೆ. ಹೀಗಾಗಿ, ತವರ ತಂಡದಲ್ಲಿ ಆಡಬೇಕು ಎಂಬ ರಾಹುಲ್ ಅವರ ಬಹುಕಾಲದ ಕನಸು, ಕನಸಾಗಿಯೇ ಉಳಿದಿದೆ. ರಾಹುಲ್ ಅವರ ಅಭಿಮಾನಿಗಳು, ಕೈಬಿಟ್ಟಿರುವುದಕ್ಕೆ ಆರ್‌ಸಿಬಿ ಫ್ರಾಂಚೈಸಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಆರ್‌ಸಿಬಿ ಕೈಬಿಟ್ಟಿರುವುದರಿಂದ ಕೆ ಎಲ್ ರಾಹುಲ್ ಅವರನ್ನು ದಿಲ್ಲಿ ಕ್ಯಾಪಿಟಲ್ಸ್ ತಂಡವು 14 ಕೋಟಿ ನೀಡಿ, ಖರೀದಿಸಿದೆ. ಕನ್ನಡಿಗ ರಾಹುಲ್, ಕಳೆದ ಸಾಲಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದರು.
ಇದನ್ನು ಓದಿದ್ದೀರಾ? ಮೊಬೈಲ್ ಲೋನ್ ‘ಆ್ಯಪ್’ ಸಾಲದ ಸುಳಿ: ಪತ್ನಿಯ ‘ಅಶ್ಲೀಲ’ ಫೋಟೋ ವೈರಲ್; ಪತಿ ಆತ್ಮಹತ್ಯೆ
ಸದ್ಯ, ಆರ್‌ಸಿಬಿ ಕಟ್ಟಿರುವ 22 ಆಟಗಾರರ ತಂಡದಲ್ಲಿ ಮೂವರು ರಿಟೈನ್ ಆಗಿದ್ದರೆ, 19 ಆಟಗಾರರನ್ನು ಮೆಗಾ ಹರಾಜಿನಲ್ಲಿ ಖರೀದಿಸಲಾಗಿದೆ. ಅವರಲ್ಲಿ, ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅವರನ್ನು ಬರೋಬ್ಬರಿ 11 ಕೋಟಿ ರೂ. ನೀಡಿ ಆರ್‌ಸಿಬಿ ಖರೀದಿಸಿದೆ. ಶರ್ಮಾ ಅವರು ಆರ್‌ಸಿಬಿಯ ಮೊದಲ ಟಾರ್ಗೆಟ್ ಪಟ್ಟಿಯಲ್ಲಿದ್ದರು ಎಂಬುದು ಗೊತ್ತಾಗಿದೆ.
ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಝಲ್ವುಡ್, ರಸಿಖ್ ಸಲಾಂ, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜೇಕೊಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್ಗಿಡಿ ಇದ್ದಾರೆ. ವಿರಾಟ್ ಕೊಹ್ಲಿ ಮತ್ತೆ ಟೀಮ್ ಕ್ಯಾಪ್ಟನ್ ಆಗಲಿದ್ದಾರೆ ಎಂಬ ಮಾತುಗಳೂ ಇವೆ.