1991ರ ಕಾಯ್ದೆ ವಿಚಾರಣೆ ವೇಳೆ ‘ಹಿಂದುತ್ವ ನ್ಯಾಯಶಾಸ್ತ್ರ’ ತಿರಸ್ಕರಿಸುವರೇ ಸಿಜೆಐ ಖನ್ನಾ?

Date:

Advertisements

ಅಲಹಾಬಾದ್ ಹೈಕೋರ್ಟ್‌ನ ಇಬ್ಬರು ಹಾಲಿ ನ್ಯಾಯಾಧೀಶರು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವರಲ್ಲಿ ಒಬ್ಬರು ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್. ಅವರು ವಿಎಚ್‌ಪಿ ವೇದಿಕೆಯಲ್ಲಿ ನಿಂತು ‘ಏಕರೂಪ ನಾಗರಿಕ ಸಂಹಿತೆ’ ಜಾರಿಯ ಬಗ್ಗೆ ಮಾತನಾಡಿದರು. ಬಹುಸಂಖ್ಯಾತರ ಇಚ್ಛೆಯಂತೆ ದೇಶ ಮತ್ತು ಕಾನೂನು ನಡೆಯುತ್ತದೆ ಎಂದು ಹೇಳಿದರು. ‘ಹಿಂದುತ್ವ ನ್ಯಾಯಶಾಸ್ತ್ರ’ವನ್ನು ಪ್ರತಿಪಾದಿಸಿದರು. ಅವರು ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡಿರುವುದು ಮತ್ತು ಅವರು ಈ ರೀತಿ ಮಾತನಾಡಿರುವುದು ಕೇವಲ ಕಾಕತಾಳೀಯವಲ್ಲ. ಇದು ನ್ಯಾಯಾಧೀಶರಲ್ಲಿರುವ ಕೋಮುವಾದಿ ಮನೋವ್ಯಾಧಿಯನ್ನು ತೋರಿಸುತ್ತದೆ. ಮಾತ್ರವಲ್ಲ, ಅಲಹಾಬಾದ್ ಹೈಕೋರ್ಟ್‌ನ ಪಡಸಾಲೆಯು ವಿಎಚ್‌ಪಿ ವಶದಲ್ಲಿದೆ ಎಂಬುದನ್ನು ಬಹಿರಂಗ ಪಡಿಸುತ್ತದೆ.

ನ್ಯಾಯಮೂರ್ತಿ ದಿನೇಶ್ ಪಾಠಕ್ ಅವರು ವಿಎಚ್‌ಪಿ ಕಾರ್ಯಕ್ರಮವನ್ನು ಉದ್ಘಾಟಿಸಿದರೆ, ಅವರ ಸಹೋದ್ಯೋಗಿ, ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಹಿಂದುತ್ವವನ್ನು ಆವಾಹಿಸಿಕೊಂಡಂತೆ ಮಾತನಾಡಿದ್ದಾರೆ.

ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ‘ನಾವು’ (ಹಿಂದೂಗಳು) ಮತ್ತು ‘ನೀವು’ (ಮುಸ್ಲಿಮರು) ಕುರಿತು ಮಾತನಾಡಿದರು. ಅವರು ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಗೆ ‘ಕಠ್ಮುಲ್ಲಾ’ ಎಂಬ ಅವಹೇಳನಕಾರಿ ಪದವನ್ನೂ ಬಳಸಿ ತಮ್ಮ ಮನದಲ್ಲಿದ್ದ ಕೋಮುದ್ವೇಷವನ್ನು ವ್ಯಕ್ತಪಡಿಸಿದರು. ಇಂತಹ ಹೇಳಿಕೆಗಳನ್ನು ಬೇರೆ ಯಾವುದೇ ನಾಗರಿಕ ಅಥವಾ ರಾಜಕಾರಣಿ ಮಾಡಿದ್ದರೆ, ಅವರು ದ್ವೇಷಪೂರಿತ ಭಾಷಣ ಮಾಡಿದ ಆರೋಪಿ/ಅಪರಾಧಿ ಆಗುತ್ತಿದ್ದರು. ಆದರೆ, ನ್ಯಾಯಮೂರ್ತಿಗಳೇ ಇಂತಹ ಭಾಷಣ ಮಾಡಿದರೆ, ಏನಾಗಬಹುದು? ಏನೆಂದು ಪರಿಗಣಿಸಬೇಕು?

Advertisements

ಕೆಲವು ಸಾಂವಿಧಾನಿಕ ವಾದಿಗಳು, ತಜ್ಞರು ನ್ಯಾಯಮೂರ್ತಿ ಯಾದವ್ ಅವರ ಇಂತಹ ನ್ಯಾಯಸಮ್ಮತವಲ್ಲದ ಹೇಳಿಕೆಗಳ ವಿರುದ್ಧ ಸುಪ್ರೀಂ ಕೋರ್ಟ್ ‘ಸುವೋ ಮೋಟು’ ಪ್ರಕರಣ ದಾಖಲಿಸಿಕೊಳ್ಳಬಹುದು ಎಂದು ಆಶಿಸಿದ್ದರು. ಆದರೆ, ಈವರೆಗೆ ಅಂತಹ ಯಾವುದೇ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್‌ ದಾಖಲಿಸಿಕೊಂಡಿಲ್ಲ. ಇದು ಹಲವರ ಆತಂಕಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು ಡಿ.12ರಂದು ವಿಚಾರಣೆಗೆ ನಿಗದಿ ಪಡಿಸಿರುವ ‘1991ರ ಪೂಜಾ ಸ್ಥಳಗಳ ಕಾಯ್ದೆ’ ವಿರುದ್ಧದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಯಾದವ್ ಪ್ರತಿಪಾದಿಸಿರುವ ಹಿಂದುತ್ವ ನ್ಯಾಯಶಾಸ್ತ್ರ ತಿರುಳನ್ನೂ ಅನ್ವಯಿಸಬಹುದೇ ಎಂಬ ಸಂಶಯವನ್ನೂ ಹುಟ್ಟುಹಾಕಿದೆ. ಅದಕ್ಕೆ ಪೂರಕವಾಗಿ, ಪ್ರಕರಣವನ್ನು ವಿಚಾರಣೆ ಪಟ್ಟಿ ಮಾಡುವಲ್ಲಿ ನ್ಯಾಯಾಲಯವು ತುರ್ತು ಆದ್ಯತೆ ನೀಡಿದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ.

33 ವರ್ಷಗಳ ಹಿಂದೆ, ಬಾಬ್ರಿ ಮಸೀದಿ ವಿವಾದ ಉಂಟಾದಾಗ, ಅಂತಹ ವಿವಾದಗಳು ಮತ್ತೆ ಮುನ್ನೆಲೆಗೆ ಬರಬಾರದು ಎಂಬ ಕಾರಣಕ್ಕಾಗಿಯೇ, ‘ಪೂಜಾ ಸ್ಥಳಗಳ ಕಾಯ್ದೆ-1991’ ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಅದರಂತೆ, ಬಾಬ್ರಿ ಮಸೀದಿಯನ್ನು ಹೊರತುಪಡಿಸಿ, 1947ರ ಸ್ವಾತಂತ್ರ್ಯ ಸಂದರ್ಭದಲ್ಲಿ ಯಾವ ಸ್ಥಳದಲ್ಲಿ ಯಾವ ಧಾರ್ಮಿಕ ಕಟ್ಟಡಗಳಿದ್ದವೋ, ಆ ಸ್ಥಳ/ಭೂಮಿ ಅದೇ ಧಾರ್ಮಿಕ ಕಟ್ಟಡಕ್ಕೆ ಸೇರಿರುತ್ತದೆ. 1947ಕ್ಕೂ ಹಿಂದಿದ್ದ ಯಾವುದೇ ಪೂಜಾ ಸ್ಥಳಗಳ ವಿಚಾರದಲ್ಲಿ ವಿವಾದಗಳನ್ನು ಹುಟ್ಟುಹಾಕಲು ಅವಕಾಶವಿಲ್ಲ ಎಂದು ಹೇಳಿತ್ತು. ಆ ಕಾಯ್ದೆ ಸಂಸತ್ತು ಮತ್ತು ಸಾಮಾಜಿಕವಾಗಿ ಸಮ್ಮತಿ ಪಡೆದ ಪ್ರಬಂಧವೆಂದೂ ಬಣ್ಣಿಸಲಾಗಿದೆ.

ಧಾರ್ಮಿಕ ಪೂಜಾ ಸ್ಥಳಗಳ ವಿಚಾರದಲ್ಲಿ ಅಂದಿನ ಕೇಂದ್ರ ಸರ್ಕಾರ ಎಳೆದಿದ್ದ ಕೆಂಪು ಗೆರೆಯನ್ನು ಅಳಿಸಿಹಾಕಲು ಎಲ್ಲ ರೀತಿಯ ತಂತ್ರಗಳನ್ನು ಬಿಜೆಪಿ-ಆರ್‌ಎಸ್‌ಎಸ್ ಎಣೆಯುತ್ತಿವೆ. ಈವರೆಗೆ ಆ ಕಾಯ್ದೆಯನ್ನೇ ಮೂಲೆ ಗುಂಪು ಮಾಡಲಾಗಿತ್ತು. ಕಾಯ್ದೆ ಇದ್ದರೂ, ಹಲವಾರು ಸ್ಥಳೀಯ ನ್ಯಾಯಾಲಯಗಳು ಮಸೀದಿಗಳ ಸಮೀಕ್ಷೆಗೆ ಅವಕಾಶ ನೀಡುತ್ತಿವೆ. ಇದೀಗ, 1991ರ ಕಾಯ್ದೆಯನ್ನೇ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಅದರ ವಿಚಾರಣೆಗೂ ಸುಪ್ರೀಂ ಕೋರ್ಟ್‌ ತ್ವರಿತ ಉತ್ಸಾಹ ತೋರಿದೆ. ಸದ್ಯ, ವಾವಾದರಲ್ಲಿರುವ ಯಾವುದೇ ಧಾರ್ಮಿಕ ಕಟ್ಟಡಗಳ ಸಮೀಕ್ಷೆಗೆ ಅವಕಾಶ ನೀಡದಂತೆ ತನ್ನ ಮಧ್ಯಂತರ ಆದೇಶದಲ್ಲಿ ವಿಚಾರಣಾ ನ್ಯಾಯಾಲಯಗಳಿಗೆ ಸೂಚಿಸಿದೆ.

ಸಂವಿಧಾನದಲ್ಲಿ ಸೂಚಿಸಿದಂತೆ ಸಾಮಾಜಿಕ ಘರ್ಷಣೆಗಳು ಮತ್ತು ಧಾರ್ಮಿಕ ಕಲಹಗಳನ್ನು ಕಡಿಮೆ ಮಾಡುವುದು ಮತ್ತು ರಾಷ್ಟ್ರದಲ್ಲಿ ‘ಭ್ರಾತೃತ್ವ’ ಭಾವನೆಯನ್ನು ಪ್ರೇರೇಪಿಸುವುದು ರಾಜಕೀಯ ಪಕ್ಷಗಳು ಮತ್ತು ನಾಯಕರ ಪ್ರಾಥಮಿಕ ಜವಾಬ್ದಾರಿಯಾಗಿದೆ. ಸಂವಿಧಾನಬದ್ಧ ಸಾಮಾಜಿಕ ಮೌಲ್ಯಗಳು ಮತ್ತು ತತ್ವಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಸುಪ್ರೀಂ ಕೋರ್ಟ್‌ನ ಹೊಣೆಯಾಗಿದೆ.

ಅದಂತೆಯೇ, ಭಾರತದ ಸರ್ವೋಚ್ಚ ನ್ಯಾಯಾಲಯವು ಧಾರ್ಮಿಕ ಮತಾಂಧತೆಗೆ ಅವಕಾಶ ನೀಡದಂತೆ ಕಾರ್ಯನಿರ್ವಹಿಸುತ್ತಲೇ ಬಂದಿದೆ. ಆದರೆ, ಬಹುಜನರ ಭಾವನೆಯ ಆಧಾರದ ಮೇಲೆ ಪ್ರಕಟವಾದ ‘ಅಯೋಧ್ಯೆ ಬಾಬ್ರಿ ಮಸೀದಿ’ ತೀರ್ಪಿನ ಬಳಿಕ, ಸಮಾಜದೊಳಗೆ ಹಿಂದುತ್ವವಾದಿಗಳ ಅಟ್ಟಹಾಸ ಹೆಚ್ಚಾಗಿದೆ.

ಈಗ, ತನ್ನ ನಿರ್ಣಾಯಕ ಹೊಣೆಗಾರಿಕೆಯನ್ನು ತ್ಯಜಿಸಿ, ‘ದೇಶದ ಬಹುಮತದ ಇಚ್ಛೆಯಂತೆ ನಡೆ’ಯುವಂತೆ ಸುಪ್ರೀಂ ಕೋರ್ಟ್‌ಅನ್ನು ಒತ್ತಾಯಿಸಲಾಗುತ್ತಿದೆ. ಧಾರ್ಮಿಕ ಪೂಜಾ ಸ್ಥಳದ ಮಾಲೀಕತ್ವವನ್ನು ಬೀದಿಗಳಲ್ಲಿ ರದ್ದಾಂತ, ದಾಂಧಲೆ ಎಬ್ಬಿಸುವ ಗುಂಪುಗಳಿಗೆ ನೀಡಬೇಕೆಂಬ ವಾದವನ್ನು ಮುನ್ನೆಲೆಗೆ ತರುತ್ತಿದೆ. ದುರದೃಷ್ಟವಶಾತ್, ವಾರಣಾಸಿಯ ಗ್ಯಾನವಾಪಿ ಮಸೀದಿ ಅವರಣದಲ್ಲಿ ಸಮೀಕ್ಷೆ ನಡೆಸಲು ನ್ಯಾಯಾಲಯವು ಅನುಮತಿ ನೀಡಿದ್ದು, ಇಂತಹ ಬಹುಸಂಖ್ಯಾತರ ಇಚ್ಛೆ ಎಂಬ ಒತ್ತಾಯದ ಭಾಗವಾಗಿಯೇ ಎಂಬುದರಲ್ಲಿ ಅನುಮಾನವಿಲ್ಲ.

ಗ್ಯಾನವಾಪಿ ಮಸೀದಿ ಆವರಣದ ಸಮೀಕ್ಷೆಗೆ ಅವಕಾಶ ನೀಡಿದ್ದು, ಹಿಂದುತ್ವವಾದಿಗಳ ಪುಂಡಾಟಿಕೆಗೆ ಮತ್ತಷ್ಟು ಪುಷ್ಟಿ ಕೊಟ್ಟಂತಾಗಿದೆ. ಹೀಗಾಗಿಯೇ, ಕಾಶಿ, ಮಥುರಾ, ಸಂಭಲ್, ಲಲೌನ ಹಾಗೂ ಶ್ರೀರಂಗಪಟ್ಟಣ ಸೇರಿದಂತೆ ಹಲವಾರು ಮಸೀದಿಗಳನ್ನು ವಿವಾದ ಸರಕಾಗಿಸುವ ಪ್ರಯತ್ನಗಳು ಹೆಚ್ಚಿಕೊಂಡಿವೆ.

ಈ ವರದಿ ಓದಿದ್ದೀರಾ?: ಮುಡಾ ಹಗರಣ | ಕರ್ನಾಟಕ ಹೈಕೋರ್ಟ್ ದೋಷಪೂರಿತ ತೀರ್ಪು ನೀಡಿತೆ?

ಗಮನಾರ್ಹವಾಗಿ, ಇಂದಿನ ರಾಜಕೀಯ ಸಮತೋಲನವು 1991ರಲ್ಲಿ ಪೂಜಾ ಸ್ಥಳಗಳ ಕಾಯಿದೆಯನ್ನು ಅಂಗೀಕರಿಸಿದಾಗ ಇದ್ದದ್ದಕ್ಕಿಂತ ಬಹಳ ಭಿನ್ನವಾಗಿದೆ. ಸಾಂವಿಧಾನಿಕ ಮೌಲ್ಯಗಳು ಮತ್ತು ತತ್ವಗಳ ಮೇಲೆ 1991ರ ಕಾನೂನನ್ನು ಜಾರಿಗೊಳಿಸಿದ್ದ ರಾಜಕೀಯ ವ್ಯವಸ್ಥೆಯಲ್ಲಿ ಅದೇ ಮೌಲ್ಯಗಳು ಮತ್ತು ತತ್ವಗಳನ್ನು ವಿರೋಧಿಸುವವರು ಮೇಲುಗೈ ಸಾಧಿಸಿದ್ದಾರೆ. ನಿರಂತರವಾಗಿ ಬದಲಾಗುತ್ತಿರುವ ಈ ರಾಜಕೀಯ ಬದಲಾವಣೆಗಳು ವಿನಾಶಕಾರಿ ಬೇಡಿಕೆಗಳನ್ನು ಪ್ರಚೋದಿಸುತ್ತಿವೆ. ಆ ಬೇಡಿಕೆಗಳೂ ತಮ್ಮವೂ ಎಂಬಂತೆಯೇ ವರ್ತಿಸುತ್ತಿವೆ.

ಜಾತ್ಯತೀತ ರಾಷ್ಟ್ರೀಯತೆಯೇ ಪ್ರಧಾನವಾಗಿರುವ ಭಾರತದಲ್ಲಿ ರಾಜಕಾರಣಿಗಳ ಜಗಳದಲ್ಲಿ ನ್ಯಾಯಾಂಗವನ್ನು ಇಕ್ಕಟ್ಟಿಗೆ ಸಿಲುಕಿಸಬಾರದು. ಆದರೆ, ನ್ಯಾಯಾಲಯವನ್ನು ಸಿಲುಕಿಸಲಾಗುತ್ತಿದೆ. ಈಗ, 1991ರ ಕಾನೂನನ್ನು ತಿರಸ್ಕರಿಸುವ ಅಥವಾ ರದ್ದುಗೊಳಿಸುವ ತನ್ನ ಬೇಡಿಕೆಯಲ್ಲಿನ ನ್ಯಾಯ ಮತ್ತು ನಿಖರತೆಯ ಬಗ್ಗೆ ‘ಹಿಂದುತ್ವವಾದಿಗಳು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರೆ, ಪೀಠವು ಏನು ಮಾಡಬಹುದು? ಡಿ.12ರಂದು ಪ್ರಕಟವಾದ ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶವು ಇಂತಹ ಕಾಯ್ದೆಯನ್ನು ರದ್ದುಪಡಿಸುವ ಪ್ರಹಸಕ್ಕೆ ನ್ಯಾಯಾಲಯ ಮುಂದಾಗುವುದಿಲ್ಲ ಎಂಬ ಭರವಸೆಯನ್ನು ಹುಟ್ಟುಹಾಕಿದೆ. ಆದಾಗ್ಯೂ, ಅದಕ್ಕೆ ವ್ಯತಿರಿಕ್ತವಾಗಿಯೂ ತೀರ್ಪು ಬರಬಹುದು! ಬಹುಮತವನ್ನು ಬಳಸಿ, 1991ರ ಕಾಯ್ಡೆಯನ್ನು ಸದನದಲ್ಲಿ ಹಿಂಪಡೆಯುವಂತೆ ಅಥವಾ ರದ್ದುಪಡಿಸುವಂತೆ ಸೂಚಿಸುವ ಸುಲಭದ ಮಾರ್ಗವನ್ನು ಅನುಸರಿಸಬಹುದು.

ಕೆಲವು ರಾಜಕೀಯ ಕಾರ್ಯಕರ್ತರು ಮಧ್ಯಕಾಲೀನ ಸ್ಮಾರಕಗಳ ಮೇಲಿನ ಈ ಧಾರ್ಮಿಕ ಭಿನ್ನಾಭಿಪ್ರಾಯವನ್ನು ಚುನಾವಣಾ ಲಾಭದಾಯಕವೆಂದು ಪರಿಗಣಿಸುತ್ತಾರೆ. ಆದರೆ, ಈಗ ಇದು ಚುನಾವಣಾ ರಾಜಕೀಯವನ್ನು ದಾಟಿ ನ್ಯಾಯಾಂಗವನ್ನು ಆವರಿಸಿಕೊಳ್ಳುತ್ತಿದೆ. ಬಹುಸಂಖ್ಯಾತರ ನಿಲುವಿನ ಮೇಲೆ ತೀರ್ಪು ನೀಡುವಂತೆ ಒತ್ತಾಯಿಸಲಾಗುತ್ತಿದೆ.

ಇನ್ನು, ಸಿಜೆಐ ಖನ್ನಾ ನೇತೃತ್ವದ ವಿಶೇಷ ಪೀಠವು 1991ರ ಕಾಯ್ದೆಯ ಬಗ್ಗೆ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ನೀಡಿರುವ ಬಹುಸಂಖ್ಯಾತರ ಇಚ್ಛೆಯಂತೆ ಕಾನೂನುಗಳನ್ನು ನಡೆಯುತ್ತಿವೆ ಎಂಬ ಹೇಳಿಕೆಯನ್ನು ತಿರಸ್ಕರಿಸಬೇಕು. ಖನ್ನಾ ಮತ್ತು ಅವರ ಸಹೋದ್ಯೋಗಿ ನ್ಯಾಯಾಧೀಶರು ಸಂವಿಧಾನಬದ್ದವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಯಾದವ್ ಅವರ ಹೇಳಿಕೆಯನ್ನು ಪ್ರತಿಭಟಿಸುತ್ತಾರೆ ಎಂಬ ನಿರೀಕ್ಷೆ ಭಾರತೀಯ ಸಮಾಜದಲ್ಲಿದೆ. ಅದಕ್ಕಾಗಿ, ಎದುರು ನೋಡುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X