ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ದೇವೇಂದ್ರ ಅವರನ್ನು ಅಮಾನತುಗೊಳಿಸಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಕಳೆದ ಸರ್ಕಾರಿ ನೌಕರರ ಚುನಾವಣೆ ವೇಳೆ ವಿಧಾನಪರಿಷತ್ ಸದಸ್ಯ ಭೋಜೇಗೌಡ ಅವರು ನೂತನ ಅಧ್ಯಕ್ಷ ದೇವೇಂದ್ರ ಅವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಚುನಾವಣಾ ಆಮಿಷ ಒಡ್ಡಿದ್ದಾರೆಂದು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ಸಿಂಧು ಬಿ ರೂಪೇಶ್ ಅವರು ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ.
ಚುನಾವಣೆಯ ವೇಳೆ ಪತ್ರಿಕಾಗೋಷ್ಠಿ ನಡೆಸಿದ್ದ ಭೋಜೇಗೌಡರು, “ದೇವೇಂದ್ರ ಅವರು ಸರ್ಕಾರಿ ನೌಕರರಿಗೆ ಬೆದರಿಕೆ ಒಡ್ಡಿದ್ದರು. ಚುನಾವಣೆಯಲ್ಲಿ ಹಣ ಹಾಗೂ ಬೆಳ್ಳಿಯ ಬಟ್ಟಲುಗಳನ್ನು ನೀಡುವುದಾಗಿ ಮತದಾರರಿಗೆ ಆಮಿಷವೊಡ್ಡಿ, ಆ ವಸ್ತುಗಳನ್ನು ನೀಡಿದ್ದಾರೆ” ಎಂದು ಆರೋಪಿಸಿ ದೂರು ನೀಡಿದ್ದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕಾಣೆಯಾಗಿದ್ದ ಇಬ್ಬರು ಮಕ್ಕಳು; ರಿಂಗ್ ಬಾವಿಯಲ್ಲಿ ಶವವಾಗಿ ಪತ್ತೆ
ಈ ದೂರಿನನ್ವಯ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 98ರ ಅನ್ವಯ, ಶಿಕ್ಷಣ ಇಲಾಖೆ ಅಧಿಕಾರಿ ಸಿಂಧು ಬಿ ರೂಪೇಶ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಸದ್ಯ ದೇವೇಂದ್ರ ಅವರನ್ನು ಅಮಾನತುಗೊಳಿಸಿ ಉಡುಪಿ ಜಿಲ್ಲೆಯ ಬೈಂದೂರು ಕಾಲೇಜಿಗೆ ಸ್ಥಳಾಂತರ ಮಾಡಿದ್ದು, “ಅನುಮತಿಯಿಲ್ಲದೆ ಉಡುಪಿ ಜಿಲ್ಲಾ ಕೇಂದ್ರವನ್ನು ಬಿಡುವಂತಿಲ್ಲ” ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
