ಕೇಂದ್ರದ ಜೊತೆಗೆ ರಾಜ್ಯ ಸರ್ಕಾರ ಈಗ ಎಷ್ಟೇ ಪತ್ರ ವ್ಯವಹಾರ ನಡೆಸಿದರೂ ಪ್ರಸಕ್ತ ಸಾಲಿಗೆ ಒಮ್ಮೆ ನಿಗದಿಯಾದ ಬೆಂಬಲ ಬೆಲೆ ಮತ್ತೆ ಹೆಚ್ಚಳವಾಗಲ್ಲ ಎನ್ನುತ್ತಿದ್ದಾರೆ ತಜ್ಞರು. ಜೊತೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸ್ಪಂದನೆ ರಾಜ್ಯದ ವಿಚಾರದಲ್ಲಿ ಹೇಗಿರಲಿದೆ ಎಂಬುದು ಸರ್ಕಾರಕ್ಕೂ ಗೊತ್ತು! ಆದರೂ ಕೇಂದ್ರದೊಂದಿಗೆ ಕಾಗದಗಳ ಹೋರಾಟ ಮಾಡುವುದರಲ್ಲೇ ಕಾಲಹರಣ ಸಲ್ಲದು. ರಾಜ್ಯದ ರೈತರಿಗೆ ನಮ್ಮಿಂದ ಇಷ್ಟು ಪರಿಹಾರ ಸಾಧ್ಯ ಎಂಬುದನ್ನು ಸಿದ್ದರಾಮಯ್ಯ ಸರ್ಕಾರ ಖಚಿತಪಡಿಸಲಿ.
ಮುಂಗಾರು ಋತುವಿನಲ್ಲಿ ಅತಿಯಾಗಿ ಸುರಿದ ಮಳೆಯ ಪರಿಣಾಮ ಮತ್ತು ವಿಪರೀತ ಮಂಜಿನ ಕಾರಣ ಹಾಗೂ ಕಳಪೆ ಬೀಜದಿಂದಾಗಿ ತೊಗರಿಯ ಫಲಗಳು ಉದುರಿ ಹೋಗಿದ್ದು, ತೊಗರಿಗೆ ಬೆಂಬಲ ಬೆಲೆ ಹಾಗೂ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಕೊಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲ ಅಧಿವೇಶನದಲ್ಲಿ ತೊಗರಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಸೋಮವಾರ ಮಾತ್ರ ಪ್ರಶ್ನೋತ್ತರ ಅವಧಿಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷಗಳಿಂದ ಬೆರಳೆಣಿಕೆಯಷ್ಟು ಸದಸ್ಯರು ಸಣ್ಣದಾಗಿ ಧ್ವನಿ ಎತ್ತಿದ್ದಾರೆ. ಆದರೆ, ಪಕ್ಷಭೇದವಿಲ್ಲದ ಸಾಮೂಹಿಕ ಧ್ವನಿಯ ಕೊರತೆ ಸದನದಲ್ಲಿ ಎದ್ದು ಕಾಣುತ್ತಿದೆ. ತೊಗರಿ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಇಷ್ಟು ಸಾಲದು. ಆಡಳಿತ ಮತ್ತು ಪ್ರತಿಪಕ್ಷಗಳು ರಚನಾತ್ಮಕವಾಗಿ ಚರ್ಚಿಸಬೇಕಿದೆ.
ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೆಳೆ ಹಾನಿಯ ಬಗ್ಗೆ ಈ ದಿನ.ಕಾಮ್ ಬುಧವಾರ (ಡಿ.11) ವಿಸ್ತೃತ ವರದಿಯೊಂದನ್ನು ಪ್ರಕಟಿಸಿತು. ತೊಗರಿ ಕಣಜ ಕಲಬುರಗಿ ಜಿಲ್ಲೆಯೊಂದರಲ್ಲೇ ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಗೆ ಗೊಡ್ಡು ಬಿದ್ದಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ. ತೊಗರಿ ಉಳುಮೆಗೆ ಎಕರೆಯೊಂದಕ್ಕೆ ರೈತರಿಗೆ ಸುಮಾರು 10-15 ಸಾವಿರ ರೂ.ಖರ್ಚಾಗುತ್ತದೆ. ಉತ್ತಮ ಇಳುವರಿ ಬಂದರೆ ಪ್ರತಿ ಎಕರೆಗೆ 3-4 ಕ್ವಿಂಟಾಲ್ ತೊಗರಿ ಬೆಳೆಯಬಹುದು. ಆದರೆ, ಹವಾಮಾನ ವೈಪರೀತ್ಯದಿಂದ ತೊಗರಿಕಾಯಿ ಜೊಳ್ಳುಬಿದ್ದು ಬೆಳೆಯಲ್ಲ ಒಣಗಿ ನಿಂತಿದೆ. ಎಕರೆಗೆ ಎರಡು ಕ್ವಿಂಟಾಲ್ ತೊಗರಿ ಬಂದರೆ ಅದೇ ದೊಡ್ಡದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸುದ್ದಿ ಓದಿದ್ದೀರಾ? ಸದನದಲ್ಲಿ ಆಗಬೇಕಾದ್ದೇನು | ಕಲ್ಯಾಣ ಕರ್ನಾಟಕ – ಗೊಡ್ಡಾಯಿತು ತೊಗರಿ, ಭಾರೀ ಸಂಕಟದಲ್ಲಿ ರೈತ
ಕೇಂದ್ರ ಸರ್ಕಾರ ಕಳೆದ ಜೂನ್‌ನಲ್ಲೇ ಪ್ರಸಕ್ತ ಸಾಲಿನ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ್ದು, ಪ್ರತಿ ಕ್ವಿಂಟಾಲ್ ತೊಗರಿಗೆ 7,550 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಮಾರುಕಟ್ಟೆಯಲ್ಲಿ ಉತ್ತಮ ತೊಗರಿಗೆ 10 ಸಾವಿರ ರೂ.ವರೆಗೂ ದರವಿದೆ. ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ತೊಗರಿ ಕೊಯ್ಲು ಆರಂಭವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಾರದ ಹಿನ್ನೆಲೆಯಲ್ಲಿ ಕೈಗೆ ಸಿಗುವ ಕನಿಷ್ಠ ಫಸಲಿಗೆ ಈಗಿರುವ ಬೆಂಬಲ ಬೆಲೆ ಉಳುಮೆಗಾದ ಖರ್ಚನ್ನೂ ಸರಿದೂಗಿಸುವುದಿಲ್ಲ ಎಂಬ ನೋವು ರೈತರದ್ದು. ಕನಿಷ್ಠ 12 ಸಾವಿರ ರೂ. ಆದರೂ ಬೆಂಬಲ ಬೆಲೆ ಸರ್ಕಾರ ಕೊಡಬೇಕು ಎಂಬುದು ಅನ್ನದಾತರ ಆಗ್ರಹ.

ಕಲಬುರಗಿ ಜಿಲ್ಲೆಯಲ್ಲಿ 30 ಲಕ್ಷ ರೈತರು ಬೆಳೆಯುತ್ತಿರುವ ತೊಗರಿ ಜಿ1-ಟ್ಯಾಗ್ ಕ್ಲಾಸ್-31 ಪ್ರಮಾಣ ಪತ್ರ 2017ರಿಂದ 2019ರಲ್ಲಿ ದೊರೆತಿದ್ದರೂ ಅದರ ಗುಣಧರ್ಮಕ್ಕೆ ಅನುಗುಣವಾಗಿ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸದಿರುವುದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ ಎಂದು ವಿಧಾನ ಪರಿಷತ್‌ನಲ್ಲಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಗಮನ ಸೆಳೆದಿದ್ದಾರೆ. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಪತ್ರ ಬರೆದು, ತೊಗರಿ ಬೆಳೆ ಹಾನಿಗೆ ಕಳಪೆ ಬೀಜ ವಿತರಿಸಿದ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ.
“ಸರ್ಕಾರ ಸಬ್ಸಿಡಿ ದರದಲ್ಲಿ ವಿತರಿಸಿರುವ ಜಿಆರ್‌ಜಿ 152, 811 ತೊಗರಿ ಬೀಜಗಳು ಕಳಪೆಯಾಗಿದ್ದು, ಇದರಲ್ಲಿ ಕಾಯಿಗಳೆ ಹುಟ್ಟುತ್ತಿಲ್ಲ. ರೈತರಿಗೆ ತೊಗರಿ ಬೀಜ ವಿತರಣೆ ಮಾಡುವ ಮುನ್ನ ಅದರ ಗುಣಮಟ್ಟ ಹಾಗೂ ಕಂಪನಿಯ ಪೂರ್ವಾಪರ ಪರಿಶೀಲಿಸಿ ನೀಡಬೇಕಾಗಿದ್ದ ಕೃಷಿ ಇಲಾಖೆಯ ಅಧಿಕಾರಿಗಳು ಕೆಲ ಕಂಪನಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಳಪೆ ಬೀಜ ವಿತರಿಸಿದ್ದಾರೆ. ಇದರಿಂದ ವಿಜಯಪುರ ಭಾಗದ ರೈತರು ಕಂಗಾಲಾಗಿದ್ದಾರೆ” ಎಂದು ಯತ್ನಾಳ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಬೆಳೆ ಪರಿಹಾರ’ ಪರಿಕಲ್ಪನೆಯೇ ಸರ್ಕಾರದಲ್ಲಿ ಇಲ್ಲ, ರಾಜ್ಯಕ್ಕೆ ಬೇಕಿದೆ ಹೊಸ ಕಾಯ್ದೆ – ಕಾನೂನು
“ವಿಜಯಪುರ ಜಿಲ್ಲೆಯೊಂದರಲ್ಲೇ ಸುಮಾರು 469 ಎಕರೆ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ. ಪ್ರತಿ ಗೊನೆಯಲ್ಲಿ 40ರಿಂದ 50 ಕಾಯಿ ಇರಬೇಕಾದದ್ದು ಕೇವಲ 2-3 ಕಾಯಿಗಳು ಮಾತ್ರ ಬಿಟ್ಟಿವೆ. ಇದರಿಂದ ಇಳುವರಿ ಗಣನೀಯವಾಗಿ ಕುಸಿದಿದೆ. ಕೃಷಿ ಇಲಾಖೆಯ ಬೇಜವಾಬ್ದಾರಿತನ ಹಾಗೂ ಭ್ರಷ್ಟಾಚಾರದಿಂದ ರೈತ ಕಣ್ಣೀರಿಡುವ ಪರಿಸ್ಥಿತಿ ಉದ್ಭವಿಸಿದೆ. ರೈತರಿಗೆ ಆಗಿರುವ ನಷ್ಟ ಸರಿದೂಗಿಸಲು ತೊಗರಿ ಬೆಳೆಗೆ ಹೆಚ್ಚಿನ ಬೆಂಬಲ ನಿಗದಿ ಮಾಡಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಯತ್ನಾಳ ಪತ್ರದಲ್ಲಿ ಕೋರಿದ್ದಾರೆ.
“ತೊಗರಿಗೆ ಹೆಚ್ಚಿನ ಬೆಂಬಲ ಬೆಲೆ ನಿಗದಿಪಡಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಪತ್ರ ಬರೆಯಲಾಗುವುದು ಮತ್ತು ಕಲಬುರಗಿ ಜಿಲ್ಲೆಯ ತೊಗರಿಗೆ ಹೆಚ್ಚಿನ ರೀತಿಯಲ್ಲಿ ಬೆಂಬಲ ಬೆಲೆ ಘೋಷಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು” ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸದನದಲ್ಲಿ ಭರವಸೆ ನೀಡಿದ್ದಾರೆ. ಆದರೆ, ವಾಸ್ತವದಲ್ಲಿ ಸಚಿವರ ಭರವಸೆ ಈಡೇರುತ್ತಾ ಎನ್ನುವುದೇ ಪ್ರಶ್ನೆಯಾಗಿದೆ. ಏಕೆಂದರೆ ಕೇಂದ್ರದ ಜೊತೆಗೆ ಈಗ ಎಷ್ಟೇ ಪತ್ರ ವ್ಯವಹಾರ ನಡೆಸಿದರೂ ಪ್ರಸಕ್ತ ಸಾಲಿಗೆ ಒಮ್ಮೆ ನಿಗದಿಯಾದ ಬೆಂಬಲ ಬೆಲೆ ಮತ್ತೆ ಹೆಚ್ಚಳವಾಗಲ್ಲ ಎನ್ನುತ್ತಾರೆ ತಜ್ಞರು.

ಬೆಂಬಲ ಬೆಲೆ ಹೆಚ್ಚಳ ವಿಚಾರವಾಗಿ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ ಎನ್ ಪ್ರಕಾಶ್ ಕಮ್ಮರಡಿ ಅವರನ್ನು ಈ ದಿನ. ಕಾಮ್ ಸಂಪರ್ಕಿಸಿದಾಗ, “ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಕೇಂದ್ರ ಸರ್ಕಾರ ಘೋಷಿಸುತ್ತದೆ. ಕೇಂದ್ರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ (Commission on Agriculture Costs and Prices-CACP) ರಾಜ್ಯ ಸರ್ಕಾರಗಳಿಂದ ಬೆಳೆಗಳ ಉತ್ಪಾದನಾ ವೆಚ್ಚದ ಮಾಹಿತಿ ಪಡೆದು, ತಜ್ಞರು, ಅಧಿಕಾರಿಗಳು ಮತ್ತು ರೈತರೊಂದಿಗೆ ಚರ್ಚಿಸಿ, ಉತ್ಪಾದನಾ ವೆಚ್ಚ ವಿವರಗಳನ್ನು ಒಳಗೊಂಡ ಬೆಲೆ ನೀತಿ ವರದಿಯನ್ನು ತಯಾರಿಸುತ್ತದೆ. ಆ ಪ್ರಕಾರ ಈಗ ಕೇಂದ್ರದಿಂದ ಬೆಂಬಲ ಬೆಲೆಯೂ ಘೋಷಣೆ ಆಗಿದೆ. ಮತ್ತೆ ತೊಗರಿಗೆ ಪ್ರತ್ಯೇಕವಾಗಿ ಬೆಂಬಲ ಬೆಲೆ ಹೆಚ್ಚಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳಾದಿಯಾಗಿ ಕಂದಾಯ, ಕೃಷಿ, ತೋಟಗಾರಿಕೆ ಸಚಿವರು ಎಷ್ಟೇ ಪತ್ರ ಬರೆದರೂ ಬೆಂಬಲ ಬೆಲೆ ಹೆಚ್ಚಳವಾಗಲ್ಲ. ಇದು ಕೃಷಿ ಇಲಾಖೆಯ ಗುಮಾಸ್ತನಿಗೂ ತಿಳಿದ ಸಂಗತಿ. ಮುಂಗಾರು ಮತ್ತು ಹಿಂಗಾರು ಆರಂಭವಾಗುವ ಮೊದಲೇ ಬೆಳೆಗಳ ಉತ್ಪಾದನೆ ವೆಚ್ಚವನ್ನು ಆಯಾ ರಾಜ್ಯಗಳು ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಆ ಮಾಹಿತಿ ಆಧರಿಸಿ ಬೆಂಬಲ ಬೆಲೆ ನಿಗದಿಯಾಗುತ್ತದೆ. ಆ ಸಮಯದಲ್ಲೇ ಸರ್ಕಾರ ಯೋಚಿಸಿ ಉತ್ಪಾದನಾ ವೆಚ್ಚವನ್ನು ಕಳುಹಿಸಬೇಕಿತ್ತು” ಎಂದರು.
ಪ್ರೋತ್ಸಾಹಧನ ಘೋಷಣೆಯೇ ದಾರಿ
“ತೊಗರಿ ಬೆಳೆಗಾರರನ್ನು ಕಾಪಾಡಲು ರಾಜ್ಯ ಸರ್ಕಾರದ ಮುಂದೆ ಎರಡು ದಾರಿ ಇದೆ. ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ತೊಗರಿ ಖರೀದಿಸಲು ಆರಂಭಿಸಬೇಕು. ಜೊತೆಗೆ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಗೆ ಹೆಚ್ಚುವರಿಯಾಗಿ ಕ್ವಿಂಟಾಲ್‌ಗೆ ಇಂತಿಷ್ಟು ಅಂಥ ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡಬೇಕು. ಈ ಹಿಂದೆ ಬೇರೆ ಬೇರೆ ಬೆಳೆಗೆ ಪ್ರೋತ್ಸಾಹಧನ ನೀಡಲಾಗಿದೆ” ಎಂದು ತಿಳಿಸಿದರು.
“ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ರಾಜ್ಯ ಸರ್ಕಾರ ಮತ್ತು ರೈತರ ನಡುವೆ ಸಂಚಾಲಕರಾಗಿ ಕಾರ್ಯನಿರ್ವಹಿಸುವ ಕರ್ನಾಟಕ ಕೃಷಿ ಬೆಲೆ ಆಯೋಗಕ್ಕೆ (ಕೆಎಪಿಸಿ) ಕಳೆದ ಎರಡೂವರೆ ವರ್ಷಗಳಿಂದ ಅಧ್ಯಕ್ಷರೇ ಇಲ್ಲ. ಅಧ್ಯಕ್ಷರ ನೇಮಕಕ್ಕೆ ಸರ್ಕಾರ ಕೂಡ ಮುಂದಾಗದಿರುವುದು ರೈತರಿಗೆ ಗುಮಾನಿ ಹುಟ್ಟಿಸಿದೆ. ಕಾರಣ ರಾಜ್ಯ ಕೃಷಿ ಬೆಲೆ ಆಯೋಗ ನಾಲ್ಕು ಕೃಷಿ ವಿಶ್ವವಿದ್ಯಾನಿಲಯಗಳು ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯಗಳೊಂದಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕೆಲಸ ನಿರ್ವಹಿಸುತ್ತದೆ. ವಿಶ್ವವಿದ್ಯಾನಿಲಯಗಳು ರೈತರ ಆಯ್ದ ಜಮೀನಿನಲ್ಲಿ ಸಾಗುವಳಿ ವೆಚ್ಚದ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ಕನಿಷ್ಠ ಬೆಂಬಲ ಬೆಲೆಗಾಗಿ ಶಿಫಾರಸು ಮಾಡುತ್ತವೆ. ಆಯೋಗವು ತನ್ನ ಶಿಫಾರಸುಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತದೆ ಮತ್ತು ಅದು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗುತ್ತದೆ. ಎಂ ಎಸ್ ಸ್ವಾಮಿನಾಥನ್ ಫಾರ್ಮುಲಾವನ್ನು ಆಧರಿಸಿ ಕನಿಷ್ಠ ಬೆಂಬಲ ಬೆಲೆ ನಿರ್ಧರಿಸಲಾಗುತ್ತದೆ. ಇದರಿಂದ ರೈತರು ಕೃಷಿ ಬೆಲೆ ಆಯೋಗ ವರದಿ ಆಧರಿಸಿ ಪ್ರಶ್ನೆ ಕೇಳಬಹುದು ಎಂಬುದು ಸರ್ಕಾರಕ್ಕೆ ಗೊತ್ತಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ರಾಜ್ಯ ಕೃಷಿ ಬೆಲೆ ಆಯೋಗಕ್ಕೆ ಅಧ್ಯಕ್ಷರ ನೇಮಕ ಮಾಡಿಕೊಳ್ಳಲು ಹಿಂಜರಿದಿರಬಹುದು” ಎಂದು ವಿಶ್ಲೇಷಿಸಿದರು.

ದೇಶಕ್ಕೆ ಮಾದರಿಯಾಗುವ ಅವಕಾಶ ರಾಜ್ಯಕ್ಕೆ ಇದೆ
“ದೇಶಕ್ಕೆ ಮಾದರಿಯಾಗುವ ಅವಕಾಶ ಕರ್ನಾಟಕ ಸರ್ಕಾರಕ್ಕೆ ಈಗಲೂ ಇದೆ. ನಾನು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದಾಗ 2018ರಲ್ಲಿ ಸರ್ಕಾರಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಬಗ್ಗೆ ವೈಜ್ಞಾನಿಕ ವರದಿ ನೀಡಿದ್ದೇನೆ. ನಮ್ಮ ವರದಿ ಅನುಸಾರ ಬೆಂಬಲ ಬೆಲೆ ಘೋಷಣೆಯಾದರೆ ಮಾರುಕಟ್ಟೆಯಲ್ಲಿ ಕೂಡ ಸಹಜವಾಗಿಯೇ ದರ ಹೆಚ್ಚಾಗುತ್ತದೆ. ರಾಜ್ಯ ಕೃಷಿ ಬೆಲೆ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ, ಆಯೋಗಕ್ಕೆ ಸ್ವಾಯತ್ತತೆ ಮತ್ತು ಶಾಸನಾತ್ಮಕ ಅಧಿಕಾರ ಕೊಟ್ಟಲ್ಲಿ ಇನ್ನೂ ಉತ್ತಮವಾಗಿ ಕೆಲಸ ಮಾಡಬಹುದು” ಎಂದು ಹೇಳಿದರು.
“ಜಾತಿ ರಾಜಕಾರಣಕ್ಕಿಂತ ರೈತ ಕೇಂದ್ರಿತವಾಗಿ ರಾಜಕಾರಣ ಮಾಡಿದರೆ ರಾಜಕೀಯವಾಗಿ ಹೊಸ ದಿಕ್ಕು ಉದಯಿಸಬಹುದು. ರಾಜ್ಯದಲ್ಲಿ ಶೇ.70 ರಷ್ಟು ಮತದಾರರು ರೈತರ ಜಾತಿವಾರು ನೋಡಿದರೆ ಶೇ.30 ರಷ್ಟು ಲಿಂಗಾಯತರು, ಶೇ.22 ರಷ್ಟು ಒಕ್ಕಲಿಗರು, ಶೇ.30 ರಷ್ಟು ಅಹಿಂದ ಹಾಗೂ ಶೇ.8 ರಷ್ಟು ಬ್ರಾಹ್ಮಣ ಸಮುದಾಯ ಒಕ್ಕಲುತದಲ್ಲಿ ತೊಡಗಿದೆ. ಸರ್ಕಾರಕ್ಕೆ 10 ಸಾವಿರ ಕೋಟಿ ರೂ. ದೊಡ್ಡದಲ್ಲ. ಪ್ರತಿ ಬಜೆಟ್‌ನಲ್ಲಿ ರೈತರಿಗಾಗಿ 10 ಸಾವಿರ ಕೋಟಿ ರೂ.ಗಳನ್ನು ಆವರ್ತನಿಧಿ ಎಂದು ಸ್ಥಾಪಿಸಿ ರೈತರನ್ನು ಒಲಿಸಿಕೊಂಡರೆ ಪಂಚಮಸಾಲಿಯಂತಹ ಮೀಸಲಾತಿ ಹೋರಾಟಗಳ ಕಿಚ್ಚು ಕಡಿಮೆಯಾಗಬಹುದು” ಎಂದು ತಿಳಿಸಿದರು.
ಬೆಳೆ ಪರಿಹಾರ- ಕೇಂದ್ರದ ವಿರುದ್ಧ ಸಂಘರ್ಷ
ಫೆಂಗಲ್ ಚಂಡಮಾರುತ ಪರಿಣಾಮ ರಾಜ್ಯದಲ್ಲಿ 1,51,084 ಹೆಕ್ಟೇರ್ ಬೆಳೆ ನಷ್ಟವಾಗಿದೆ ಎನ್ನುವ ಅಂದಾಜಿದೆ. ಬೆಳೆಗಳ ಹಾನಿಯಿಂದ ತೀವ್ರ ಸಂಕಟ ಅನುಭವಿಸುತ್ತಿರುವ ರೈತ ಸಮುದಾಯಕ್ಕೆ ಬೆಳೆ ಹಾನಿ ತುಂಬಿಕೊಡುವ ಜವಾಬ್ದಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ್ದು. ಆದರೆ ಕೇಂದ್ರದಿಂದ ಬರ ಪರಿಹಾರವೇ ಸೂಕ್ತವಾಗಿ ದೊರೆಯದ ಹೊತ್ತಲ್ಲಿ ಮತ್ತೆ ಕೇಂದ್ರದೊಂದಿಗೆ ಸಂಘರ್ಷ ಮಾಡಿಯಾದರೂ ಬೆಳೆ ಪರಿಹಾರ ಪಡೆಯಬೇಕು ಎಂಬ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಂತಿದೆ. 1.51 ಲಕ್ಷ ಹೆಕ್ಟೇರ್ ಬೆಳೆ ಹಾನಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) ಪರಿಹಾರ ನೀಡುವಂತೆ ವಿಧಾನಮಂಡಲ ಅಧಿವೇಶನದಲ್ಲಿ ಗೊತ್ತುವಳಿ ಅಂಗೀಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ ಸಾಲಿನಲ್ಲಿ ರಾಜ್ಯದ ಬರ ಪರಿಹಾರ ಕೋರಿಕೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿತು. ರಾಜ್ಯ ಸರ್ಕಾರ ಕೇಳಿದ್ದು 18,172 ಕೋಟಿ ರೂಪಾಯಿ. ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು 3,454 ಕೋಟಿ ರೂ. ಕೇಂದ್ರದ ಅನ್ಯಾಯ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಪರಸ್ಪರ ಕುಳಿತು ಪರಿಹಾರ ಕಂಡುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಕಿವಿಮಾತು ಹೇಳಿದ ಮೇಲೆ ಎಲ್ಲವೂ ತಟಸ್ಥವಾಗಿದೆ. ಫೆಂಗಲ್ ಚಂಡಮಾರುತದಿಂದ ಆಗಿರುವ ಆಹಾರಧಾನ್ಯಗಳ ನಷ್ಟವೇ ಸುಮಾರು 3,250 ಕೋಟಿಗೂ ಹೆಚ್ಚಿದೆ ಎನ್ನಲಾಗಿದ್ದು, ಕೇಂದ್ರ ಸರ್ಕಾರ ಇದಕ್ಕೆ ಯಾವ ರೀತಿ ಸ್ಪಂದಿಸುತ್ತದೆ ಎಂಬುದು ರಾಜ್ಯದ ಮುಂದಿರುವ ಪ್ರಶ್ನೆ.

ಈಗಾಗಲೇ ನಬಾರ್ಡ್ ಕೂಡ ಪುನರ್ಧನ ಸಾಲದ ಮಿತಿಯನ್ನು ಶೇ.58ರಷ್ಟು ಕಡಿಮೆ ಮಾಡಿದೆ. ಈ ವಿಚಾರವಾಗಿಯೂ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಇದರಿಂದ ಯಾವ ಫಲಪ್ರದವೂ ಆಗಿಲ್ಲ. ಹೀಗಾಗಿ ಸಹಕಾರ ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿ ಮತ್ತು ರಿಯಾಯತಿ ಬಡ್ಡಿ ದರದಲ್ಲಿ ಸಾಲ ದೊರಕುವ ಪ್ರಮಾಣ ಮತ್ತಷ್ಟು ಕುಸಿಯಲಿದೆ. ಸಹಜವಾಗಿ ರೈತ ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯೇ ಹೆಚ್ಚು. ಕೇಂದ್ರ ಮತ್ತು ರಾಜ್ಯದ ಕಾದಾಟದಲ್ಲಿ ಹೈರಾಣಾಗುವುದು ಮಾತ್ರ ಅನ್ನದಾತ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸ್ಪಂದನೆ ರಾಜ್ಯದ ವಿಚಾರದಲ್ಲಿ ಹೇಗಿರಲಿದೆ ಎಂಬುದು ರಾಜ್ಯ ಸರ್ಕಾರಕ್ಕೂ ತಿಳಿದ ಸಂಗತಿ. ಆದರೂ ಕಾಟಾಚಾರಕ್ಕೆ ಕೇಂದ್ರದೊಂದಿಗೆ ಕಾಗದಗಳ ಹೋರಾಟ ಮಾಡುವುದರಲ್ಲೇ ಕಾಲಹರಣ ಮಾಡುವುದು ಸರ್ಕಾರದ ನಡೆಯಾಗಬಾರದು. ರಾಜ್ಯದ ಪಾಲನ್ನು ಕೇಂದ್ರದಿಂದ ಪಡೆಯುವಲ್ಲಿ ಹೋರಾಟ ಮುಂದುವರಿಯಲಿ. ಜೊತೆಗೆ ರಾಜ್ಯದ ರೈತರಿಗೆ ನಮ್ಮಿಂದ ಇಷ್ಟು ಪರಿಹಾರ ಸಾಧ್ಯ ಎಂಬುದನ್ನು ಸಿದ್ದರಾಮಯ್ಯ ಸರ್ಕಾರ ಖಚಿತಪಡಿಸಲಿ. ಎಲ್ಲವನ್ನು ಮುಗುಮ್ಮಾಗಿಯೇ ಇಟ್ಟು, ಕೇಂದ್ರದ ಮೇಲೆ ಎತ್ತಿ ಹಾಕಿ ಕುಳಿತರೆ ರಾಜ್ಯ ಸರ್ಕಾರದ ಪಾತ್ರವೇನು ಎಂಬುದಕ್ಕೆ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ ಕನಿಷ್ಠ ರೈತ ಮತದಾರರಿಗೆ ಉತ್ತರ ಬೇಡವೇ?

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.