ಬಡ ಕೂಲಿಕಾರ್ಮಿಕರಿಗೆ ಶಾಸನಬದ್ಧ ಸವಲತ್ತುಗಳನ್ನು ಕೊಡಬೇಕು ಮತ್ತು ಕೇಂದ್ರ ಸರಕಾರದ ನಿಯಮಾವಳಿಯಂತೆ ಡಿ ದರ್ಜೆ ನೌಕರರಿಗೆ ಕನಿಷ್ಠ ವೇತನವನ್ನು ನಿಗಧಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಅಂಬೇಡ್ಕರ್ ಸೇವಾ ಸಮಿತಿ ಪದಾಧಿಕಾರಿಗಳು ಶುಕ್ರವಾರ ಕಂಪನಿಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ರಸ್ತೆಯಲ್ಲಿರುವ ರಾಜಶ್ರೀ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಪ್ಯಾಕಿಂಗ್ ಪ್ಲಾಂಟ್ ಬಳಿ ಜಮಾಯಿಸಿದ ಸಮಿತಿ ಪದಾಧಿಕಾರಿಗಳು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಡಿ ದರ್ಜೆ ನೌಕರರನ್ನು ಕೆಲಸಕ್ಕೆ ನಿಯೋಜಿಸದೆ ಕಂಪನಿ ಗುತ್ತಿಗೆದಾರರು ದರ್ಪ ತೋರುತ್ತಿದ್ದಾರೆ. ಗುತ್ತಿಗೆದಾರರ ಸ್ವಯಂ ನಿರ್ಧಾರದಂತೆ ಕೆಲಸಕ್ಕೆ ಬೇರೆಯವರನ್ನು ನಿಯೋಜಿಸಲಾಗುತ್ತಿದೆ ಎಂದು ದೂರಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅರ್ಜುನ್ ಎನ್ ಕೆ, ಕಂಪನಿಯಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ಕೊಡಬೇಕು. ಕೂಲಿ ಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ರಜೆ ಕೊಡಬೇಕು. ಕಾರ್ಮಿಕರ ಹಿತದೃಷ್ಟಿಯಿಂದ ಊಟದ ಸಮಯ ಮತ್ತು ಟೀ ಬ್ರೇಕ್ ಕೊಡಬೇಕು ಎಂದು ಒತ್ತಾಯಿಸಿದರು.
ಬೇರೆ ರಾಜ್ಯಗಳಿಂದ ಬಂದ ಕಾರ್ಮಿಕರ ಕುಟುಂಬಸ್ಥರಿಗೆ ಏನಾದರೂ ಸಮಸ್ಯೆಗಳಾದಾಗ ಊರಿಗೆ ಹೋಗಿ ಮರಳಿದಾಗ ಕೂಡಲೆ ಕೆಲಸಕ್ಕೆ ನಿಯೋಜಿಸಬೇಕು. ಕರ್ತವ್ಯನಿರತ ಕಾರ್ಮಿಕರಿಗೆ ಕರ್ತವ್ಯದ ಸಮಯದಲ್ಲಿ ಜೀವ ಹಾನಿಯಾದಲ್ಲಿ, ಗಂಭೀರ ಗಾಯಗಳಾದಲ್ಲಿ ಅನಾರೋಗ್ಯಕ್ಕೊಳಗಾದಲ್ಲಿ ಅಂತಹ ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ಕಂಪನಿಯ ವತಿಯಿಂದ ಆಂಬುಲೆನ್ಸ್ ಸೇರಿದಂತೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸಬೇಕು ಎಂದು ಬೇಡಿಕೆಯಿಟ್ಟರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಪೋಕ್ಸೊ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನ್ಯಾಯಾಂಗದ ನಿರಾಸಕ್ತಿ; ಸದನದ ಚರ್ಚೆ ಸ್ವಾಗತಾರ್ಹ
ಸರ್ಕಾರಿ ರಜೆ ದಿನಗಳಲ್ಲಿ ಸದರಿ ಕಂಪನಿಯಲ್ಲಿ ಕೆಲಸ ಮಾಡಿದವರಿಗೆ ಎರಡು ದಿನದ ವೇತನವನ್ನು ಕೋಡಬೇಕು. ಕೆಲಸ ಮಾಡದೇ ಇದ್ದಲ್ಲಿ ಒಂದು ದಿನದ ವೇತನವನ್ನು ನೀಡಬೇಕು. ಕರ್ತವ್ಯನಿರತ ಕಾರ್ಮಿಕರಿಗೆ, ಪ್ರತಿ ವರ್ಷಕ್ಕೆ ಎರಡು ಜತೆ ಸಮವಸ್ತ್ರ ಕೊಡಬೇಕು, ಪ್ರತಿ ತಿಂಗಳಿಗೆ 1 ಕೆಜಿ. ಕೊಬ್ಬರಿ ಎಣ್ಣೆ ಹಾಗೂ 2 ಕೆ.ಜಿ ಬೆಲ್ಲವನ್ನು ಕಡ್ಡಾಯವಾಗಿ ಕೊಡಬೇಕು ಎಂದು ಮನವಿ ಮಾಡಿದರು.