ತುಮಕೂರು ನಗರದ ಅಗಲಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಹೆಚ್.ಎಮ್.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಶನಿವಾರ (ಡಿಸೆಂಬರ್ 14ರಂದು) ಬೆಳಿಗ್ಗೆ 10-30ಕ್ಕೆ ಸಾಹೇ (ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್) ವಿಶ್ವವಿದ್ಯಾಲಯದ 13 ನೇ ಘಟಿಕೋತ್ಸವ ಆಯೋಜಿಸಲಾಗಿದೆ ಎಂದು ಸಾಹೇ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ತಿಳಿಸಿದರು.
ತುಮಕೂರು ನಗರದ ಅಗಲಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 13ನೇ ಸಾಹೇ ಘಟಿಕೋತ್ಸವದಲ್ಲಿ ಮಾಜಿ ಕೇಂದ್ರ ಸಚಿವರು ಹಾಗೂ ನಿಕಟಪೂರ್ವ ರಾಜ್ಯಪಾಲರು ಆದ ಕರ್ನಾಟಕದ ಮಾರ್ಗರೆಟ್ ಆಳ್ವ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ. ನವದೆಹಲಿಯ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ನ ಅಧ್ಯಕ್ಷರಾದ ಪ್ರೊ. ಟಿ.ಜಿ.ಸಿತಾರಾಮ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಗೃಹ ಸಚಿವರಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ ಅವರು ಪದವಿ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಗೌಪ್ಯತೆಯನ್ನು ಭೋದಿಸಿ, ಪ್ರಮಾಣ ಪತ್ರಗಳನ್ನು ವಿತರಿಸಲಿದ್ದಾರೆ ಎಂದು ಅವರು ಗೌರವ ಡಾಕ್ಟರೇಟ್ ಪಡೆದವರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳ ಬಗ್ಗೆ ವಿವರಿಸಿದರು.
ಕುಲಸಚಿವರಾದ ಡಾ.ಎಂ.ಝೆಡ್ ಕುರಿಯನ್ ಮಾತನಾಡಿ, ಸಾಹೇ ವಿವಿಯ ಘಟಿಕೋತ್ಸವದಲ್ಲಿ ರ‍್ಯಾಂಕ್ ಪಡೆದವರ ವಿವರಗಳನ್ನು ನೀಡುತ್ತಾ, ಸಾಹೇ ಬೆಳೆದು ಬಂದ ಹಾದಿ ಹಾಗೂ ನ್ಯಾಕ್ ಎ+ ಪಡೆದಿರುವ ಕುರಿತು ಮಾಹಿತಿಯನ್ನು ನೀಡಿದರು. ಮುಂದಿನ ದಿನಗಳಲ್ಲಿ ಸಾಹೇ ವಿವಿಯು ಅಂತಾರಾಷ್ಟ್ರೀಯ ರ‍್ಯಾಂಕ್ ಪಟ್ಟಿಯಲ್ಲಿ ಬರುವ ಎಲ್ಲಾ ರೀತಿಯ ಪ್ರಯತ್ನಗಳು ನಡೆಸುತ್ತಿದೆ ಎಂದರು.
ಇತ್ತೀಚೆಗೆ ಅಮೆರಿಕಾದ ಅವಲಾನ್ ವೈದ್ಯಕೀಯ ವಿವಿಯೊಂದಿಗೆ ಸಾಹೇ ವಿವಿ ಒಪ್ಪಂದ ನಡೆಸಿತ್ತು. ಅದರ ಒಪ್ಪಂದದ ಪ್ರಕಾರ ಮುಂದಿನ ಜನವರಿ ಮಾಹೆಯಲ್ಲಿ ವೈದ್ಯಕೀಯ ಆನ್‌ಲೈನ್ ತರಗತಿಗಳನ್ನು ನಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ. ಅವಲಾನ್ ವಿವಿಯ ವಿದ್ಯಾರ್ಥಿಗಳು ಎರಡು ವರ್ಷಗಳ ಕಾಲ ಸಾಹೇ ವಿವಿಯಲ್ಲಿ ಆನ್‌ಲೈನ್ ಮೂಲಕ ಬೋಧನಾ ಮತ್ತು ಪ್ರಾಯೋಗಿಕ ತರಗತಿಗಳು ಪಡೆದುಕೊಳ್ಳುತ್ತಾರೆ ಎಂದು ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ ತಿಳಿಸಿದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ ಮಾತನಾಡಿ, ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಲು ಶೇ.80ರಷ್ಟು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾಗಿರುತ್ತಾರೆ. ಅತೀ ಹೆಚ್ಚು ರ‍್ಯಾಂಕ್ ಪಡೆದವರಲ್ಲಿ ಅವರೇ ಮೇಲುಗೈ. ಕಳೆದ ಎರಡು ವರ್ಷದ ಹಿಂದೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿಯೂ ಶೇ.20ರಷ್ಟು ಮಾತ್ರ ಕ್ಯಾಂಪಸ್ ಪ್ಲೇಸ್‌ಮೆಂಟ್ ಇತ್ತು. ಈ ಬಾರಿ ಕ್ಯಾಂಪಸ್ ಉದ್ಯೋಗ ಅವಕಾಶ ಶೇ.60ರಷ್ಟು ಹೆಚ್ಚಾಗುವ ನಿರೀಕ್ಷೆ ಎಂದು ಅವರು ಮಾಹಿತಿ ನೀಡಿದರು.
10 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ
ರ‍್ಯಾಂಕ್ ವಿವರಗಳು:
ಇಂಜಿನಿಯರಿಂಗ್,ವೈದ್ಯಕೀಯ, ದಂತ ವೈದ್ಯಕೀಯ, ಪಿಎಚ್.ಡಿ ಸೇರಿದಂತೆ ಒಟ್ಟು 876 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಮಾಡಲಾಗುವುದು. .
ಚಿನ್ನದ ಪದಕ ಪಡೆದ ವಿಭಾಗಗಳ ವಿವರ : ಇಂಜಿನಿಯರಿಂಗ್- 06, ವೈದ್ಯಕೀಯ-1, ದಂತ ವೈದ್ಯಕೀಯ-2, ಎಂಸಿಎ-01
ಒಟ್ಟು ಪದವಿಗಳು: ಡಾಕ್ಟರೇಟ್ ಪದವಿ-24, ಇಂಜಿನಿಯರಿAಗ್-601, ವೈದ್ಯಕೀಯ-147, ದಂತ ವೈದ್ಯಕೀಯ-49 ಸೇರಿದಂತೆ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ವಿತರಿಸಲಾಗುತ್ತದೆ.
ಅತ್ಯುತ್ತಮ ಶ್ರೇಣಿಯ ವಿದ್ಯಾರ್ಥಿಗಳು : ಇಂಜಿನಿಯರಿಂಗ್-01, ವೈದ್ಯಕೀಯ-01, ದಂತ ವೈದ್ಯಕೀಯ-01
ಸುದ್ದಿಗೋಷ್ಠಿಯಲ್ಲಿ ಸಾಹೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕರಾದ ಡಾ.ಗುರುಶಂಕರ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಾಣಿಕೊಪ್ಪ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ್ ಜಿ ಎನ್, ಉಪ ಕುಲಸಚಿವರು ಆದ ಡಾ.ಸುದೀಪ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.