ಎರಡು ತುಂಡು ಬಾಡು ಕೊಟ್ಟರೆ ಸಮ್ಮೇಳನದ ತೂಕ ಕಡಿಮೆಯಾಗುವುದಿಲ್ಲ. ಮಂಡ್ಯದ ಸಾಹಿತ್ಯ ಹಬ್ಬದಲ್ಲಿ ನಮ್ಮ ಮಂಡ್ಯದ ಆಹಾರವನ್ನು ಉಣಬಡಿಸಲು ಸಾಧ್ಯವಾಗುತ್ತಿಲ್ಲವೆಂದರೆ, ನಾವು ಯಾವ ಕಾಲದಲ್ಲಿ ಬದುಕುತ್ತಿದ್ದೇವೆ ಹೇಳಿ ಎಂದು ನಿವೃತ್ತ ಪ್ರಾಂಶುಪಾಲ ಎಂ.ವಿ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಮಳವಳ್ಳಿ ತಾಲೂಕು ದಂಡಾಧಿಕಾರಿಗಳನ್ನು ಗುರುವಾರ ಭೇಟಿ ಮಾಡಿದ ವಿವಿಧ ಸಂಘಟನೆಗಳ ಮುಖಂಡರ ನಿಯೋಗವು, ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ 87ನೇ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಾಗೂ ಬಾಡಿಲ್ಲದ ಊಟ ಎರಡೂ ಇರಲಿ ಎಂದು ಒತ್ತಾಯಿಸಿತು.

ಬಾಡೂಟ ನಮ್ಮ ಆಹಾರ ಪದ್ಧತಿ, ಕೆಟ್ಟ ಚಟವಲ್ಲ. ಬಾಡೂಟವನ್ನು ಮದ್ಯ ಹಾಗೂ ತಂಬಾಕಿನೊಡನೆ ಸಮೀಕರಿಸಿ ನಿಷೇಧ ಮಾಡುವುದು ಎಷ್ಟು ಸರಿ. ನಮ್ಮ ಆಹಾರ ಪದ್ಧತಿಯನ್ನು ಬೇಡ ಅನ್ನುವುದಾದರೆ ಯಾರಿಗೋಸ್ಕರ ಈ ಸಾಹಿತ್ಯ ಸಮ್ಮೇಳನ ಮಾಡುತ್ತಿದ್ದೇವೆ. ಶತಮಾನಗಳ ಕಾಲದಿಂದ ಮಾನಸಿಕ ಗುಲಾಮಗಿರಿಯಲ್ಲಿ ಬದುಕಿದ್ದೇವೆ. ನಮ್ಮದೇ ಸಂಸ್ಕೃತಿಯನ್ನು ನಾವು ಆಚರಿಸುವುದು ಬೇಡವೇ?. ಇನ್ನಾದರೂ ನಾವು ಬದಲಾಗಲೇಬೇಕು ಎಂದು ಕರೆ ನೀಡಿದರು.
ಇದನ್ನು ಓದಿದ್ದೀರಾ? ರಾಮನಗರ | ಅಂಗನವಾಡಿ ಕೇಂದ್ರಗಳಿಗೆ 45 ದಿನಗಳೊಳಗೆ ನಿವೇಶನ ಗುರುತಿಸಲು ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ
ದ್ರಾವಿಡ ಕನ್ನಡಿಗರ ಚಳವಳಿಯ ಮನುಗೌಡ ಮಾತನಾಡಿ, ಸಂವಿಧಾನದ 51A(H) ವಿಧಿಯ ಆಧಾರದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಬಾಡೂಟದ ಬಗ್ಗೆ ಇರುವ ತಾರತಮ್ಯವನ್ನು ಈ ಸಾಹಿತ್ಯ ಸಮ್ಮೇಳದಲ್ಲಿ ತೊಡೆದು ಹಾಕಬೇಕು. ಅದಕ್ಕಾಗಿ ಹೊರ ಜಿಲ್ಲೆ ಮತ್ತು ಹೊರನಾಡುಗಳಿಂದ ಬರುವ ಸಾಹಿತ್ಯಾಸಕ್ತರಿಗೆ ಬಾಡೂಟವನ್ನು ಏರ್ಪಾಟು ಮಾಡಬೇಕು ಎಂದು ಬೇಡಿಕೆಯಿಟ್ಟರು.
ಹಕ್ಕೊತ್ತಾಯ ಸ್ವೀಕರಿಸಿ ಮಾತನಾಡಿದ ಮಳವಳ್ಳಿ ತಹಶಿಲ್ದಾರ್ ಲೋಕೇಶ್, “ಇಂದು ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದ ಸಭೆಯಲ್ಲಿ ನಿಮ್ಮ ಬೇಡಿಕೆಯನ್ನು ಪ್ರಸ್ತಾಪಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಇದನ್ನು ನೋಡಿದ್ದೀರಾ? ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ
ಈ ಸಂದರ್ಭದಲ್ಲಿ ಸಿಐಟಿಯುನ ರಾಮಕೃಷ್ಣ, ದಲಿತ ಸಂಘಟನೆಯ ಮುಖಂಡರಾದ ಎಂ.ಎನ್. ಜಯರಾಜು, ದಸಂಸ ತಾಲೂಕು ಸಂಚಾಲಕ ಯತೀಶ್, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ತಾಪೇಗೌಡ, ಅತ್ಯಾಚಾರ ವಿರೋಧಿ ಆಂದೋಲನದ ಕಿರಣ, ದಸಂಸದ ಸದಸ್ಯ ಅರುಣ್, ದ್ರಾವಿಡ ಕನ್ನಡ ಚಳುವಳಿಯ ಮಲ್ಲಿಕ್ ಇನ್ನಿತರರು ಹಾಜರಿದ್ದರು.