ಸ್ಮಶಾನ ಜಾಗಕ್ಕೆ ದಾಖಲೆ ಇದ್ದರೂ ಕೇಸ್ ಹಾಕಲಾಗುತ್ತಿದೆ ಎಂದು ಚಿಕ್ಕಮಗಳೂರು ಅಂಬೇಡ್ಕರ್ ಹೋರಾಟ ಸಮಿತಿ ಆರೋಪ ಹೊರಿಸಿದೆ.
ಚಿಕ್ಕಮಗಳೂರು ತಾಲೂಕು ಆಲ್ದೂರು ಹೋಬಳಿ ಆಲ್ಲೂರು ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಒಕ್ಕಲಿಗ ಸಮುದಾಯದವರು ಅಡ್ಡಿಪಡಿಸಿ, ದಲಿತರ ಬಗ್ಗೆ ಹಗುರವಾಗಿ ಮಾತಾಡಿರುವುದನ್ನು ವಿರೋಧಿಸಿ ಚಿಕ್ಕಮಗಳೂರು ನಗರದಲ್ಲಿ ಅಂಬೇಡ್ಕರ್ ಹೋರಾಟ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.
ಸಮಿತಿಯ ಮುಖಂಡ ನವರಾಜ್ ಮಾತನಾಡಿ, ಸರ್ವೇ ನಂಬರ್ 108ರಲ್ಲಿ ಸರಕಾರಿ ಸ್ಮಶಾನ ಜಾಗ ಇದೆ. ಇದರ ಆಧಾರದಲ್ಲಿ ನಾವು ಅಲ್ಲಿ ಶವ ಸಂಸ್ಕಾರಕ್ಕೆ ಮುಂದಾಗಿದ್ದೆವು, ಹೀಗಿದ್ದಾಗ ನಮ್ಮದು ಅತಿಕ್ರಮ ಪ್ರವೇಶ ಹೇಗಾಗುತ್ತದೆ. ನಮ್ಮ ಮೇಲೆ ಪೊಲೀಸರು ಹೇಗೆ ಟ್ರಸ್ ಪಾಸ್ ಕೇಸ್ ದಾಖಲು ಮಾಡಿದ್ದಾರೆ ಎಂದು ತಿಳಿಸಿದರು.
ದಲಿತರು ಒಕ್ಕಲಿಗರ ಹಾಗೂ ಒಕ್ಕಲಿಗರ ಸಂಘದ ವಿರೋಧಿಗಳಲ್ಲ, ಇದನ್ನ ಅರಿತು ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ ಅವರು ದಲಿತರ ಬಗ್ಗೆ ಹಗುರವಾದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಅಂಬೇಡ್ಕರ್ ಹೋರಾಟ ವೇದಿಕೆಯ ಮುಖಂಡ ಯಲಗುಡಿಗೆ ಹೊನ್ನಪ್ಪ ತಿಳಿಸಿದರು.
ಆಲ್ಲೂರಿನಲ್ಲಿ ಇತ್ತೀಚೆಗೆ ಮೃತಪಟ್ಟ ಮಹಿಳೆಯ ಶವ ಸಂಸ್ಕಾರ ಮಾಡಲು ಹೋದಾಗ ಒಕ್ಕಲಿಗ ಸಮುದಾಯದ ಜನ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದರು. ಸ್ಮಶಾನ ಜಾಗದ ದಾಖಲಾತಿ ಆಧಾರದಲ್ಲಿ ನಾವು 108 ಸರ್ವೇ ನಂಬರ್ ಜಾಗದಲ್ಲಿಯೇ ಶವ ಸಂಸ್ಕಾರ ಮಾಡಬೇಕು ಎಂದು ತೀರ್ಮಾನಿಸಿ ಸ್ಥಳಕ್ಕೆ ಹೋದಾಗ ಈ ವೇಳೆ ಅಧಿಕಾರಿಗಳು ಮತ್ತು ಒಕ್ಕಲಿಗರ ಸಂಘದವರು ಗಲಭೆ ಸೃಷ್ಟಿ ಮಾಡಿದ್ದು, ಸರಿಯಲ್ಲ , ಸ್ಮಶಾನದ ದಾಖಲಾತಿ ಇದ್ದರೂ ಶವ ಸಂಸ್ಕಾರಕ್ಕೆ ತಡೆ ಮಾಡಿದರು ಎಂದು ಅಂಬೇಡ್ಕರ್ ಹೋರಾಟ ಸಮಿತಿ ಮುಖಂಡರಾದ ಯಲಗುಡಿಗೆ ಹೊನ್ನಪ್ಪ ತಿಳಿಸಿದರು.
ನೂರಾರು ಎಕರೆ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿದಾಗ, “ದಲಿತರು ತಡೆದಿದ್ದರೆ” ಅದೂ ತಪ್ಪಾಗುತ್ತಿತ್ತು, ಸರ್ವೆ ನಂಬರ್ 108ರ ಸ್ಮಶಾನವನ್ನು ಸಾರ್ವಜನಿಕ ಸ್ಮಶಾನ ಮಾಡಿ ಎಂದು ಒಕ್ಕಲಿಗರ ಸಂಘದಿಂದ ಚಿಕ್ಕಮಗಳೂರಿನ ಜಿಲ್ಲಾಕಾರಿಗೆ ಮನವಿ ನೀಡಿದ್ದಾರೆ. ಹಾಗಿದ್ದರೆ ಜಿಲ್ಲೆಯಲ್ಲಿ ಇರುವ ಎಲ್ಲ ಸ್ಮಶಾನಗಳನ್ನು ಸಾರ್ವಜನಿಕ ಸ್ಮಶಾನ ಎಂದು ಘೋಷಿಸಲಿ, ದಲಿತರ ಬಗ್ಗೆ ಟಿ.ರಾಜಶೇಖರ ಅವರು ಇನ್ನು ಮುಂದೆ ಹಗುರವಾಗಿ ಇಲ್ಲಸಲ್ಲದ ಹೇಳಿಕೆ ನೀಡಬಾರದು ಎಂದು ಹೊನ್ನಪ್ಪ ತಿಳಿಸಿದರು.
ಇದನ್ನೂ ಓದಿದ್ದೀರಾ?ಈ ದಿನ ಇಂಪ್ಯಾಕ್ಟ್ | ಮೇಲನಹಳ್ಳಿ ಕಾಲೋನಿ ಸಮಸ್ಯೆಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆ; ನಿವೇಶನ ಹಂಚಿಕೆ ಭರವಸೆ
ಈ ವೇಳೆ ಭೀಮ್ ಆರ್ಮಿ ಮುಖಂಡ ಗಿರೀಶ್, ಚಂದ್ರುಪುರ, ಸಮಿತಿಯ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
