ಮಂಡ್ಯದಲ್ಲಿ ಡಿ.20ರಿಂದ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಸಂವಿಧಾನದ 18ನೇ ವಿಧಿ ಉಲ್ಲಂಘನೆಯಾಗಿದ್ದು ಆಯೋಜಕರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳಲು ಮಂಡ್ಯದ ನಾಗರಿಕರಾದ ರಾಜೇಂದ್ರ ಪ್ರಸಾದ್, ಕೃಷ್ಣೇಗೌಡ ತಳಗವಾದಿ, ನಾಗೇಗೌಡ ಕೀಲಾರ ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.
ಮಂಡ್ಯ ನಗರದಲ್ಲಿ 2024 ರ ಡಿಸೆಂಬರ್ 20, 22, 23 ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಇದನ್ನು ಕನ್ನಡ ಸಾಹಿತ್ಯ ಪರಿಷತ್ತು (ಸರ್ಕಾರಿ ಅನುದಾನಿತ ಸ್ವಾಯತ್ತ ಸಂಸ್ಥೆ) ಮತ್ತು ಜಿಲ್ಲಾಡಳಿತ, ಕರ್ನಾಟಕ ಸರ್ಕಾರವೇ ನಡೆಸುತ್ತಿದೆ. ಸಮ್ಮೇಳನದ ಸ್ವಾಗತ ಸಮಿತಿಯು ಬಿಡುಗಡೆಗೊಳಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ರಾಜಕುಟುಂಬದ ಸದಸ್ಯರಾದ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಅವರ ಹೆಸರನ್ನು ಉಲ್ಲೇಖಿಸುವಾಗ ”ಶ್ರೀಮನ್ ಮಹಾರಾಣಿ’ ಎಂಬುವ ಶೀರ್ಷಿಕೆಯನ್ನು ಸೇರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉತ್ತರ ಕರ್ನಾಟಕ ಜನತೆಯ ಆಶೋತ್ತರಗಳು ಈ ಬಾರಿಯಾದರೂ ಈಡೇರಲಿ
ಈ ರೀತಿ ಉಲ್ಲೇಖಿಸಿರುವುದು ಕರ್ನಾಟಕ ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಸಂವಿಧಾನದ 18ನೇ ವಿಧಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಈ ತರಹದ ಉಲ್ಲಂಘನೆಯು ಮಾಧ್ಯಮಗಳಲ್ಲಿಯೂ ಸಹ ಹೆಚ್ಚಾಗಿ ನಡೆಯುತ್ತಿದೆ. ಭಾರತದ ಉಪಖಂಡದಲ್ಲಿ ಎಲ್ಲರನ್ನು ಸರಿಸಮಾನರಾಗಿ ಕಾಣುವ ಪ್ರಜಾಸತ್ತಾತ್ಮಕ ಗಣರಾಜ್ಯವು ಜಾರಿಯಲ್ಲಿರುವಾಗ ಅರಸೊತ್ತಿಗೆಯ ಶೀರ್ಷಿಕೆಗಳನ್ನು ಬಳಸುವಂತಿಲ್ಲ ಮತ್ತು ಬಳಸಕೂಡದೆಂದು ಸಂವಿಧಾನ ಸ್ವಷ್ಟವಾಗಿ ಹೇಳಿದೆ.
ರಾಜ್ಯಾಂಗದ ಸುಪರ್ದಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲೇ ಇಂತಹ ಸಾಂವಿಧಾನಿಕ ಉಲ್ಲಂಘನೆಯಾದಲ್ಲಿ ಮಾಧ್ಯಮಗಳು, ನಾಗರಿಕ ಸಮಾಜದಲ್ಲಿ ಮತ್ತಷ್ಟು ಉಲ್ಲಂಘನೆಯಾಗುತ್ತದೆ. ಆದ ಕಾರಣ ಈ ಕುರಿತಾಗಿ ತಾವು ಸುಮೊಟೊ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.

