ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲು ಹೋಗಿದ್ದ ಆತನ ತಂದೆಯನ್ನೂ ಪೊಲೀಸರು ಬಂಧಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಮಧುಸೂದನ್ ಎಂಬಾತನನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ಆತನನ್ನು ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಆತನಿಗೆ ಬಟ್ಟೆ ಕೊಡಲು ಆತನ ತಂದೆ ಶಿವಣ್ಣ ಪೊಲೀಸ್ ಠಾಣೆಗೆ ತೆರಳಿದ್ದು, ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಶಿವಣ್ಣ ತಂದಿದ್ದ ಬ್ಯಾಗ್‌ನಲ್ಲಿ ಗಾಂಜಾ ಪತ್ತೆಯಾಗಿದೆ. ಹೀಗಾಗಿ, ಅವರನ್ನೂ ಬಂಧಿಸಿದ್ದೇವೆಂದು ಪೊಲೀಸರು ತಿಳಿಸಿದ್ದಾರೆ.
ಜೈಲಿನಲ್ಲಿದ್ದ ಮಧುಸೂದನ್ ತನ್ನ ಸ್ನೇಹಿತನಿಂದ ಬಟ್ಟೆ ಬ್ಯಾಗ್ ಪಡೆದುಕೊಂಡು, ಅದನ್ನು ಜೈಲಿಗೆ ತಂದುಕೊಡುವಂತೆ ತನ್ನ ತಂದೆ ಶಿವಣ್ಣಗೆ ಕರೆಮಾಡಿದ್ದ. ಆತನ ಮಾತಿನಂತೆ ಶಿವಣ್ಣ ಅಪರಿಚಿತ ವ್ಯಕ್ತಿಯಿಂದ ಬಟ್ಟೆ ಬ್ಯಾಗ್ ಪಡೆದು, ಮಂಡ್ಯ ಜೈಲಿಗೆ ಬಂದಿದ್ದಾರೆ. ಈ ವೇಳೆ, ಜೈಲು ಸಿಬ್ಬಂದಿಗಳು ಬ್ಯಾಗ್‌ಅನ್ನು ಪರಿಶೀಲಿಸಿದ್ದು, ಬ್ಯಾಗ್‌ನಲ್ಲಿ 20 ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಬ್ಯಾಗ್‌ನಲ್ಲಿ ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಶಿವಣ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗೆ ಒಳಪಡಿಸಿದ್ದಾರೆ. ಮಗನ ಸೂಚನೆಯಂತೆ ಅಪರಿಚಿತನಿಂದ ಬ್ಯಾಗ್ ಪಡೆದು, ಜೈಲಿಗೆ ತಂದಿದ್ದೇನೆಂದು ಶಿವಣ್ಣ ಹೇಳಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.