ಮುಂಗಡ ಬೇಡಿಕೆ ಆಧಾರದ ಮೇಲೆ ಇತ್ತೀಚಿಗೆ ಬಿಡುಗಡೆಯಾದ ತಳಿವರ್ಧಕ ಬೀಜಗಳಿಗೆ ಆದ್ಯತೆ ನೀಡಿ ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಬೀಜೋತ್ಪಾದನೆ ಕೃಷಿಯಲ್ಲಿ ಪರಿಣಿತಿ ಸಾಧಿಸಿದಲ್ಲಿ ಹೆಚ್ಚುವರಿ ಅದಾಯ ಖಚಿತ ಎಂದು ಸಹಾಯಕ ಕೃಷಿ ನಿರ್ದೇಶಕ ಸುರೇಶ ಭಾವಿಕಟ್ಟಿ ಹೇಳಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹಾರ್ವರ್ಡ್ ಪಿ.ಯು ಸೈನ್ಸ್ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಬೀಜ ನಿಗಮದ ಪ್ರಾಂತೀಯ ಕಚೇರಿ ಧಾರವಾಡ ಹಾಗೂ ಮುದ್ದೇಬಿಹಾಳದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ರಾಷ್ಟ್ರೀಯ ಜಾನುವಾರ ಮಿಷನ್ ಯೋಜನೆಯಡಿ ಶುಕ್ರವಾರ ಆಯೋಜಿಸಿದ್ದ ಬೀಜೋತ್ಪಾದನೆ ಕೃಷಿ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗುಣಮಟ್ಟದ ಬೀಜ ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಇದರಿಂದ ಬೆಳೆ ಇಳುವರಿಯನ್ನು ಪ್ರತಿಶತ 15-20ರಷ್ಟು ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಅರವಿಂದ ಕೊಪ್ಪ ಮಾತನಾಡಿ, ಸಸ್ಯ ಸಂರಕ್ಷಣಾ ಕಾರ್ಯಗಳಿಗೆ ಸಮಗ್ರ ಕೀಟ ನಿರ್ವಹಣಾ ಕ್ರಮಗಳ ಜೊತೆ ಸರಿಯಾದ ಮೊಳಕೆ ಪ್ರಮಾಣ, ಮಿಶ್ರ ತಳಿ ರಹಿತ ಹಾಗೂ ಪ್ರಕೃತಿ ವಿಕೋಪಗಳ ವೈಜ್ಞಾನಿಕ ನಿರ್ವಹಣೆ ಬಗ್ಗೆ ಎಚ್ಚರಿಕೆ ವಹಿಸಿದಲ್ಲಿ ಗುಣಮಟ್ಟದ ಬೀಜಗಳ ಉತ್ಪಾದನೆ ಮೂಲಕ ಸುಸ್ಥಿರ ಕೃಷಿಗೆ ವಿಶೇಷ ಕೊಡುಗೆ ನೀಡಬಹುದು ಎಂದರು.
ಬಾಪೂಜಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಎಂ ನೆರಬೆಂಚಿ ಮಾತನಾಡಿ, ಕೃಷಿಗೆ ಅಗತ್ಯವಿರುವ ಎಲ್ಲ ರೀತಿಯ ಸಾಧಕ ಕ್ರಮಗಳನ್ನು ರೈತರಿಗೆ ಪರಿಚಯಿಸುವ ಮೂಲಕ ಸಾಮಾಜಿಕ ಭದ್ರತೆ ಮೂಡಿಸುವಲ್ಲಿ ದಾಸೋಹಿ ರೈತ ಉತ್ಪಾದಕ ಕಂಪನಿ ನಡೆಸುತ್ತಿರುವ ಸಾಂಘಿಕ ಅಂದೋಲನ ಮಾದರಿಯಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಬೀಜ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ರವಿ ದುಂಡಗಿನಹಳ್ಳಿ ಮಾತನಾಡಿದರು. ವರ್ಚುವಲ್ ತಾಂತ್ರಿಕ ಗೋಷ್ಠಿಗಳು ನಡೆದವು.
ಇದನ್ನೂ ಓದಿದ್ದೀರಾ? ಈ ದಿನ ಸಂಪಾದಕೀಯ | ಪೋಕ್ಸೊ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನ್ಯಾಯಾಂಗದ ನಿರಾಸಕ್ತಿ; ಸದನದ ಚರ್ಚೆ ಸ್ವಾಗತಾರ್ಹ
ನಿವೃತ್ತ ಉಪ ತಹಶೀಲ್ದಾರ್ ಆರ್. ಬಿ.ಸಜ್ಜನ, ದಾಸೋಹಿ ಕಂಪನಿ ನಿರ್ದೇಶಕರಾದ ಕಲ್ಲಣ್ಣ ಪ್ಯಾಟಿ, ಸೋಮಲಿಂಗಪ್ಪ ಗಸ್ತಿಗಾರ, ಭೀಮಣ್ಣ ಮಳಗೌಡರ, ಸೋಮನಗೌಡ ಬಿರಾದಾರ, ಬಸವರಾಜ ಕುಂಟೋಜಿ, ಶರಣಯ್ಯ ಹಿರೇಮಠ, ಬಿ.ಎಂ. ಪಾಟೀಲ, ಉದಯ ರಾಯಚೂರ, ವಕೀಲೆ ರಶ್ಮಿ ಕೊಪ್ಪ, ಶಿಕ್ಷಕ ಬೆಳ್ಳಿಕಟ್ಟಿ ಎಫ್.ಪಿ.ಓ ವಿಸ್ತೀರ್ಣಾಧಿಕಾರಿ ಮಂಜುನಾಥ ದೊಡ್ಡಮನಿ ಇದ್ದರು.