ಮದುವೆಯಾಗುವುದಾಗಿ ನಂಬಿಸಿ ಮಹಿಳೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿರುವ ಆರೋಪದಡಿ ಇಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಳ್ಳಾರಿ ಕೌಲ್ ಬಜಾರ್ ಠಾಣೆಯ ಮುಖ್ಯ ಪೇದೆ ಸೈಯದ್ ಇಮ್ರಾನ್ ಹಾಗೂ ನಗರ ಸಂಚಾರಿ ಠಾಣೆಯ ಪೇದೆ ಆಜಾದ್ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದು, ಆಜಾದ್‌ನನ್ನು ಬಂಧಿಸಲಾಗಿದೆ. ಮುಖ್ಯ ಪೇದೆ ಸೈಯದ್ ಇಮ್ರಾನ್ ತಲೆಮರೆಸಿಕೊಂಡಿದ್ದಾನೆ ಎಂದು ಎಸ್ಪಿ ಡಾ.ಶೋಭಾ ರಾಣಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ : 2 ವರ್ಷಗಳ ಹಿಂದೆ 35 ವರ್ಷದ ಮಹಿಳೆ ತನ್ನ ಗಂಡನ ವಿರುದ್ಧ ದೂರು ನೀಡಲು ಕೌಲ್ ಬಜಾರ್ ಪೊಲೀಸ್ ಠಾಣೆಗೆ ಬಂದಿದ್ದರು. ಠಾಣೆಯ ಮುಖ್ಯಪೇದೆ ಸೈಯದ್ ಇಮ್ರಾನ್ ಮಹಿಳೆಗೆ ಸಹಾಯ ಮಾಡುವುದಾಗಿ ಮಹಿಳೆಯ ಮೊಬೈಲ್ ನಂಬರ್ ಪಡೆದುಕೊಂಡು ಪರಿಚಯ ಬೆಳೆಸಿದ್ದ. ಮಹಿಳೆಯು ತನ್ನ ಗಂಡನೊಂದಿಗೆ ಗಲಾಟೆ ಮಾಡಿಕೊಂಡಿದ್ದ ಹಿನ್ನೆಲೆ ಮಹಿಳೆಗೆ ಬೇರೆಡೆ ಮನೆ ಮಾಡಿಕೊಳ್ಳಲು 15 ಸಾವಿರ ಹಣ ನೀಡುವ ಮೂಲಕ ಮಹಿಳೆಯ ಸ್ನೇಹ ಬೆಳೆಸಿದ್ದ. ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ.
ಇದಲ್ಲದೆ ಬಳ್ಳಾರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಸೈಯದ್ ಇಮ್ರಾನ್ ಅಕ್ಕನ ಮಗ ಆಜಾದ್ ಎಂಬಾತನೂ 2 ತಿಂಗಳೊಳಗೆ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ, ಸೈಯದ್ ಇಮ್ರಾನ್‌ಗೆ ತಿಳಿಯದಂತೆ ನನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.
