ಗುಕೇಶ್‌ರ ಈ ಸಾಧನೆಯ ಹಿಂದೆ ತಮಿಳುನಾಡಿನ ಪರಂಪರಾಗತ ಪ್ರೋತ್ಸಾಹವಿದೆ. ಅಲ್ಲಿನ ಮಕ್ಕಳ ಮನಸ್ಸಿನಲ್ಲಿ ಚೆಸ್ ಆಟದ ಬಗೆಗಿನ ಮೋಹ ರಕ್ತ-ಮಾಂಸದಂತೆ ಬೆರೆತುಹೋಗಿದೆ. ಅದಕ್ಕೆ ಕಳಶವಿಟ್ಟಂತೆ ವಿಶ್ವನಾಥನ್ ಆನಂದ್ ಎಂಬ ಮಾದರಿ ವ್ಯಕ್ತಿತ್ವವಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಗುಕೇಶ್‌ರ ಪೋಷಕರ ತ್ಯಾಗವಿದೆ. ಆ ತ್ಯಾಗಕ್ಕೆ ಈಗ, ಚೆಸ್ ಲೋಕದಲ್ಲಿ ಭಾರತೀಯನೇ ಸಾಮ್ರಾಟ ಎಂಬ ಪ್ರತಿಫಲ ಸಿಕ್ಕಿದೆ.
ಹದಿನೆಂಟು ವರ್ಷದ ಯುವಕ, ಚೆಸ್ ಆಟಗಾರ ದೊಮ್ಮರಾಜು ಗುಕೇಶ್ ವಿಶ್ವ ಚೆಸ್ ರಂಗದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಚೀನಾದ ಮೂವತ್ತೆರಡನೇ ವಯಸ್ಸಿನ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು 14 ಪಂದ್ಯಗಳ ನಿರ್ಣಾಯಕ ಫೈನಲ್‌ನಲ್ಲಿ ಸೋಲಿಸಿ, ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಗೆಲ್ಲುವ ಮೂಲಕ 11 ಕೋಟಿ, 4 ಲಕ್ಷ ರೂ.ಗಳನ್ನು ಬಹುಮಾನದ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಶ್ವ ಚಾಂಪಿಯನ್ ಪಟ್ಟಕ್ಕೇರಿರುವ ಗುಕೇಶ್, ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರಿಗಿಂತಲೂ ಮೊದಲು ಈ ಸಾಧನೆಯನ್ನು ವಿಶ್ವನಾಥನ್ ಆನಂದ್ ಮಾಡಿದ್ದರು. ವಿಶೇಷವೆಂದರೆ, ಆನಂದ್ ಮತ್ತು ಗುಕೇಶ್, ಇಬ್ಬರೂ ಚೆನ್ನೈ ಮೂಲದವರು. ಗುರು-ಶಿಷ್ಯರು.
ಮಹತ್ವದ ಪಂದ್ಯದಲ್ಲಿ ಗುಕೇಶ್ ಜಯ ಸಾಧಿಸುತ್ತಿದ್ದಂತೆ, ಮೊದಲಿಗೆ ಎದುರಾಳಿ ಡಿಂಗ್ ಲಿರೆನ್‌ರಿಂದ ಅಭಿನಂದನೆ ಸ್ವೀಕರಿಸಿದರು. ಕೂತ ಕುರ್ಚಿಯಿಂದ ಮೇಲೆದ್ದು, ಎರಡೂ ಕೈಗಳನ್ನು ಹಕ್ಕಿ ರೆಕ್ಕೆ ಬಿಚ್ಚುವಂತೆ ಬಿಚ್ಚಿ ಮೇಲೆತ್ತಿ ಸಂಭ್ರಮಿಸಿದರು. ಕಣ್ಣೀರು ಒರೆಸಿಕೊಳ್ಳುತ್ತ ಭಾವುಕರಾದರು. ಮೌನವಾಗಿಯೇ ಕತ್ತು ಬಗ್ಗಿಸಿ ಕೈ ಮುಗಿದರು.
ಹೌದು, ಅದೊಂದು ಅಪೂರ್ವ ಕ್ಷಣ. ‘ನಾನು ಗೆಲುವನ್ನು ನಿರೀಕ್ಷಿಸಿರಲಿಲ್ಲ. ಆದರೆ ಕೊನೆಯಲ್ಲಿ ಅಚಾನಕ್ ಆಗಿ ಆ ಅವಕಾಶ ದೊರೆತು ಜಯ ಸಾಧ್ಯವಾಗಿದ್ದರಿಂದ ಒಂದು ಕ್ಷಣ ಭಾವೋದ್ವೇಗಕ್ಕೆ ಒಳಗಾಗಿದ್ದು ನಿಜ. ವಿಶ್ವ ಚಾಂಪಿಯನ್ ಆಗುವ ಕನಸನ್ನು ಹತ್ತು ವರ್ಷಗಳಿಂದ ಕಾಣುತ್ತಿದ್ದೆ. ಅದು ಸಾಕಾರಗೊಂಡಿದ್ದರಿಂದ ಸಂತಸವಾಗಿದೆ’ ಎಂದು ಗೆಲುವಿನ ನಂತರ ಪ್ರತಿಕ್ರಿಯಿಸಿದ ಗುಕೇಶ್, ತನ್ನ ಕನಸನ್ನು ನನಸು ಮಾಡಿದ ತಂದೆ ರಜನಿಕಾಂತ್‌ರನ್ನು ಅಪ್ಪಿಕೊಂಡರು.
ಸಿಂಗಾರಪುರದಲ್ಲಿ ಹದಿನೈದು ದಿನಗಳ ಕಾಲ ನಡೆದ ಟೂರ್ನಿಯಲ್ಲಿ ಗುಕೇಶ್, ಹಲವು ಬಾರಿ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದರು. ಆದರೆ ಅಷ್ಟೇ ಅದ್ಭುತವಾಗಿ ಕಂ ಬ್ಯಾಕ್ ಮಾಡಿ ಇತಿಹಾಸ ನಿರ್ಮಿಸಿದರು. ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಗೆದ್ದ ಗುಕೇಶ್ ವಿಶ್ವ ಪ್ರಶಸ್ತಿಗೆ ಅರ್ಹತೆ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡರು. ಆಟದ ನಂತರ ಗುಕೇಶ್, ”ಡಿಂಗ್ ಎಂತಹ ಮಹಾನ್ ಆಟಗಾರರು, ಹಲವಾರು ವರ್ಷಗಳಿಂದ ಜಗತ್ತಿನ ಸರ್ವಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂಬ ಸಂಗತಿಯನ್ನು ನಾವೆಲ್ಲ ಬಲ್ಲೆವು. ಈಗಲೂ ನನ್ನ ಪಾಲಿಗೆ ಅವರೇ ಅಸಲಿ ಚಾಂಪಿಯನ್. ಈ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಶಾರೀರಿಕವಾಗಿ ಪೂರ್ಣಪ್ರಮಾಣದಲ್ಲಿ ‘ಫಿಟ್’ ಆಗಿರಲಿಲ್ಲ. ಆದರೆ ಪ್ರತಿಯೊಂದು ಪಂದ್ಯದಲ್ಲೂ ಅವರು ಚಾಂಪಿಯನ್ ಥರಾನೇ ಆಡಿದರು. ಆದರೂ ಸೋತ ಡಿಂಗ್ ಮತ್ತು ಅವರ ತಂಡದ ಕುರಿತು ನನಗೆ ವಿಷಾದವಿದೆ” ಎಂದಿರುವುದು ಅವರ ವಿನಯವಂತಿಕೆಯನ್ನೂ, ಕ್ರೀಡಾಸ್ಫೂರ್ತಿಯನ್ನೂ ಹೊರಹಾಕುತ್ತಿತ್ತು.
ರಷ್ಯಾದ ಸ್ಟಾರ್ ಆಟಗಾರ ಗ್ಯಾರಿ ಕಾಸ್ಪರೋವ್ ಅವರು 1985ರಲ್ಲಿ, ತಮ್ಮ 22ನೇ ವಯಸ್ಸಿನಲ್ಲಿ ಈ ಪ್ರಶಸ್ತಿ ಪಡೆದ ಖ್ಯಾತಿಯನ್ನು ಪಡೆದಿದ್ದರು. ಆ ಮೂಲಕ ಸಾಧಕರ ಪಟ್ಟಿ ಸೇರಿದ್ದರು. 39 ವರ್ಷಗಳ ಹಿಂದಿನ ಆ ದಾಖಲೆಯನ್ನು ಗುಕೇಶ್ ಅಳಿಸಿ ಹಾಕಿದ್ದಾರೆ. ಭಾರತದ ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಬಳಿಕ ಈ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ಕೊನೆಯ ಬಾರಿಗೆ 2013ರಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಆಂಧ್ರಪ್ರದೇಶ ಮೂಲದ, ಚೆನ್ನೈನಲ್ಲಿ ವಾಸವಿರುವ, ತಮಿಳು ಮನೆಮಾತಿನ, ಮಧ್ಯಮವರ್ಗ ಕುಟುಂಬದಿಂದ ಬಂದ ಗುಕೇಶ್‌ಗೆ ಬಾಲ್ಯದಲ್ಲಿಯೇ ಚೆಸ್ ಆಟದ ಬಗ್ಗೆ ಅತೀವ ಆಸಕ್ತಿ, ಉತ್ಕಟ ಮೋಹವಿತ್ತು. ಚೆನ್ನೈ ಮೂಲದ ವಿಶ್ವನಾಥನ್ ಆನಂದ್ ವಿಶ್ವಮಟ್ಟಕ್ಕೇರಿದ್ದು, ಗುಕೇಶ್ ಪೋಷಕರಿಗೆ ಗೊತ್ತಿತ್ತು. ತಮ್ಮ ಮಗನೂ, ಇವತ್ತಲ್ಲ ನಾಳೆ ಆ ಎತ್ತರಕ್ಕೆ ಏರಬಹುದೆಂಬ ವಿಶ್ವಾಸವಿತ್ತು. ಹಾಗಾಗಿ, ಗುಕೇಶ್‌ನ ಪೋಷಕರು ಆಗಲೇ ಒಂದು ನಿರ್ಧಾರಕ್ಕೆ ಬಂದರು. ಆತ ನಾಲ್ಕನೇ ತರಗತಿಯಲ್ಲಿದ್ದಾಗಲೇ, ಪೂರ್ಣಾವಧಿ ಶಾಲಾ ಕಲಿಕೆಗೆ ಕೊನೆ ಹಾಡಿದರು. ವಿಷ್ಣು ಪ್ರಸನ್ನ ಮತ್ತು ಭಾಸ್ಕರ್ ಎಂಬ ಇಬ್ಬರು ಚೆಸ್ ಮಾಸ್ಟರ್‍ಗಳ ಕಡೆಯಿಂದ ತರಬೇತಿ ಕೊಡಿಸತೊಡಗಿದರು.
ಇದನ್ನು ಓದಿದ್ದೀರಾ?: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ | ಭಾರತ – ಪಾಕ್ ಫೈನಲ್ ಪ್ರವೇಶಿಸಬಹುದೆ, ಹೇಗಿದೆ ಲೆಕ್ಕಾಚಾರ?
ಅಷ್ಟೇ ಅಲ್ಲ, ಮಗನ ಆಸೆ ಆಕಾಂಕ್ಷೆಗಳಿಗೆ ನೀರೆರೆಯಬೇಕೆಂಬ ನಿರ್ಧಾರಕ್ಕೆ ಬಂದು, ತಮ್ಮ ಮಿತಿಗಳನ್ನು ಮೀರಿ ಪ್ರೋತ್ಸಾಹಿಸಿದರು. ಆತ ಟೂರ್ನಮೆಂಟ್‌ಗಳಿಗೆ ದೂರದ ಊರುಗಳಿಗೆ ಹೋಗಬೇಕಾದಾಗ, ಜೊತೆಯಲ್ಲಿರಬೇಕೆಂಬ ಕಾರಣಕ್ಕೆ ತಂದೆ, ವೈದ್ಯ ವೃತ್ತಿಗೆ ವಿದಾಯ ಹೇಳಿದರು. ಮನೆಯ ಆರ್ಥಿಕ ಪರಿಸ್ಥಿತಿ ಏರುಪೇರಾಯಿತು. ಧೃತಿಗೆಡದೆ, ಆ ಜವಾಬ್ದಾರಿಯನ್ನು ಮೈಕ್ರೊ ಬಯಾಲಜಿಸ್ಟ್ ಆಗಿರುವ ತಾಯಿ ಪದ್ಮಾ ನಿಭಾಯಿಸಿದರು. ಕೆಲವು ಸಲ, ವಿಶ್ವದ ವಿವಿಧ ಕಡೆಗಳಿಗೆ ಟೂರ್ನಮೆಂಟ್‌ಗಳಿಗೆ ಪ್ರಯಾಣ ಬೆಳೆಸುವಾಗ, ಹಣದ ಕೊರತೆ ಎದುರಾಗುತ್ತಿತ್ತು. ಆಗ ಅವರಿಗೆ ಪ್ರಾಯೋಜಕರು ಇರಲಿಲ್ಲ. ಬಹುಮಾನದ ಹಣ ಮತ್ತು ಕ್ರೌಡ್ ಫಂಡಿಂಗ್ ಮೂಲಕ ಅವರು ಪ್ರಯಾಣದ ವೆಚ್ಚ ಭರಿಸಿದ್ದೂ ಇದೆ.
‘ಗುಕೇಶ್ ಯಶಸ್ಸಿನಲ್ಲಿ ಪೋಷಕರ ತ್ಯಾಗ ಬಹಳ ದೊಡ್ಡದು. ತಂದೆ ವೃತ್ತಿಗೆ ವಿರಾಮ ನೀಡಿದ್ದರು. ತಾಯಿಯ ದುಡಿಮೆಯಲ್ಲಿ ಮನೆ ನಡೆಯುತಿತ್ತು. ಗುಕೇಶ್ ವಿವಿಧ ಟೂರ್ನಿಗಳಿಗೆ ಹೋಗುತ್ತಿದ್ದ ಕಾರಣ ಒಬ್ಬರನ್ನೊಬ್ಬರು ನೋಡುತ್ತಿದ್ದುದೇ ಕಡಿಮೆ’ ಎಂದು ಅವರ ಬಾಲ್ಯದ ಕೋಚ್ ವಿಷ್ಣು ಪ್ರಸನ್ನ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಪೋಷಕರ ಈ ಮಟ್ಟದ ಪ್ರೋತ್ಸಾಹದ ಜೊತೆಗೆ ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್, ಗುಕೇಶ್ ಅವರಿಗೆ ವಿಶೇಷ ತರಬೇತಿ ನೀಡಿದರು. ಅದರಲ್ಲೂ ಕೋವಿಡ್ ಕಾಲದಲ್ಲಿ, ತಮ್ಮ ಜೊತೆಯಲ್ಲಿಯೇ ಇಟ್ಟುಕೊಂಡು ಧೈರ್ಯ ತುಂಬಿದರು.
2015ರಲ್ಲಿ ನಡೆದ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನ 9 ವರ್ಷದೊಳಗಿನವರ ವಿಭಾಗದಲ್ಲಿ ಮತ್ತು 2018ರಲ್ಲಿ ನಡೆದ 12 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದ ಗುಕೇಶ್ ಇದುವರೆಗೆ ಏಷ್ಯನ್ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಐದು ಚಿನ್ನದ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರ್ಯಾಂಡ್‌ಮಾಸ್ಟರ್ ಬಿರುದು ಪಡೆದಾಗ ಗುಕೇಶ್ ವಯಸ್ಸು ಕೇವಲ 12 ವರ್ಷ. 2,700 ರೇಟಿಂಗ್ ಕ್ಲಬ್‌ಗೆ ಸೇರ್ಪಡೆಗೊಂಡ ಮೂರನೇ ಅತಿ ಕಿರಿಯ ಆಟಗಾರ ಗುಕೇಶ್, 2,750ರ ರೇಟಿಂಗ್ ಮೈಲಿಗಲ್ಲು ದಾಟಿದ ವಿಶ್ವದ ಅತಿ ಕಿರಿಯ ಆಟಗಾರ ಎಂಬ ಶ್ರೇಯಸ್ಸಿಗೂ ಪಾತ್ರರಾದವರು.

ಅದಕ್ಕೆ ತಕ್ಕಂತೆ ’18ನೇ ವಯಸ್ಸಿಗೆ ವಿಶ್ವ ಚಾಂಪಿಯನ್ ಆಗುವುದು ಎಂದರೆ ಸಣ್ಣ ಮಾತಲ್ಲ. ಇದೊಂದು ಅಭೂತಪೂರ್ವವಾದುದು. ಗೆಲುವನ್ನು ಆತ ಸಂಭ್ರಮಿಸಿದ ರೀತಿ ವಿಶೇಷವಾಗಿತ್ತು. ಅದು ಅದ್ಬುತ ದೃಶ್ಯವಾಗಿತ್ತು’ ಎಂದು ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಹೇಳಿರುವುದು, ಚೆನ್ನೈ ನಗರವನ್ನು ಚೆಸ್ನ ಜಾಗತಿಕ ರಾಜಧಾನಿ ಎಂದು ಮತ್ತೆ ಸಾಬೀತುಪಡಿಸಿದಂತಾಗಿದೆ.
ಗುಕೇಶ್‌ರ ಈ ಸಾಧನೆಯ ಹಿಂದೆ ತಮಿಳುನಾಡಿನ ಪರಂಪರಾಗತ ಪ್ರೋತ್ಸಾಹವಿದೆ. ಅಲ್ಲಿನ ಮಕ್ಕಳ ಮನಸ್ಸಿನಲ್ಲಿ ಚೆಸ್ ಆಟದ ಬಗೆಗಿನ ಮೋಹ ರಕ್ತ-ಮಾಂಸದಂತೆ ಬೆರೆತುಹೋಗಿದೆ. ಅದಕ್ಕೆ ಕಳಶವಿಟ್ಟಂತೆ ವಿಶ್ವನಾಥನ್ ಆನಂದ್ ಎಂಬ ಮಾದರಿ ವ್ಯಕ್ತಿತ್ವವಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಗುಕೇಶ್‌ರ ಪೋಷಕರ ತ್ಯಾಗವಿದೆ. ಆ ತ್ಯಾಗಕ್ಕೆ ಈಗ, ಚೆಸ್ ಲೋಕದಲ್ಲಿ ಭಾರತೀಯನೇ ಸಾಮ್ರಾಟ ಎಂಬ ಪ್ರತಿಫಲ ಸಿಕ್ಕಿದೆ.

ಲೇಖಕ, ಪತ್ರಕರ್ತ