ಬೀದರ್ ತಾಲೂಕಿನ ಜನವಾಡಾ ಠಾಣೆ ವ್ಯಾಪ್ತಿಯಲ್ಲಿ ಬರುವ ವಿಳಾಸಪುರ ಗ್ರಾಮದಲ್ಲಿ ಕಿಡಿಗೇಡಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಲಾಗಿರುವ ಘಟನೆ ನಡೆದಿದೆ.
ಡಿ.12ರಂದು ತಡರಾತ್ರಿ ಕಿಡಿಗೇಡಿಗಳು ಬಾಬಾ ಸಾಹೇಬ್‌ರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನಿಸಿದ್ದಾರೆ. ಬೆಳಿಗ್ಗೆ ಗಮನಿಸಿದ ದಲಿತ ಸಮುದಾಯದವರು ಕೃತ್ಯವನ್ನು ತೀವ್ರವಾಗಿ ಖಂಡಿಸಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ಅವರನ್ನು ಅವಮಾನಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ವಿಷಯ ತಿಳಿದು ಗ್ರಾಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಘಟನೆ ಕುರಿತು ಮಾಹಿತಿ ಪಡೆದರು.

ಈ ಕುರಿತು ಗ್ರಾಮದ ಪರಿಶಿಷ್ಟ ಸಮುದಾಯದವರು ನೀಡಿದ ದೂರಿನ ಮೇರೆಗೆ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಜೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದ ಪ್ರಭಾರ ಜಿಲ್ಲಾಧಿಕಾರಿ ಡಾ.ಗಿರೀಶ್ ದೋಲೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ದಲಿತ ಸಮುದಾಯದ ಮುಖಂಡರು ಗ್ರಾಮಸ್ಥರೊಂದಿಗೆ ಶಾಂತಿ ಸಭೆ ನಡೆಸಿದ್ದಾರೆ ಎಂದು ಗ್ರಾಮಸ್ಥರು ಈದಿನ.ಕಾಮ್ ಗೆ ಮಾಹಿತಿ ನೀಡಿದ್ದಾರೆ.
ಕಿಡಿಗೇಡಿಗಳ ಬಂಧನಕ್ಕೆ ದಲಿತ ಸಂಘಟನೆಗಳ ಆಗ್ರಹ :
ಬೀದರ್ ತಾಲೂಕಿನ ವಿಳಾಸಪುರ ಗ್ರಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಅವಮಾನಿಸಿರುವ ಘಟನೆಯನ್ನ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಶುಕ್ರವಾರ ಬೀದರ್ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ʼಜಿಲ್ಲೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೃತ್ಯ ಖಂಡನೀಯವಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಿ ದೇಶ ವಿರೋಧಿ ಕಾಯ್ದೆಯಡಿ ಗಡಿಪಾರು ಮಾಡಬೇಕು. ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚರಿಕೆಯಿಂದ ಜಿಲ್ಲೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗಳ ಬಳಿ ಸಿಸಿ ಕ್ಯಾಮೆರಾ ಅಳವಡಿಸಬೇಕುʼ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮಾಹಾರಾಷ್ಟ್ರದ ಪರಭಣಿ ಜಿಲ್ಲೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಹಾಗೂ ಸಂವಿಧಾನಕ್ಕೆ ಅವಮಾನಿಸಿದ ಘಟನೆಗೆ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿ ತೀವ್ರವಾಗಿ ಖಂಡಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆ.
ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ವಿರೂಪಗೊಳಿಸುವ ಕೃತ್ಯ ಪದೇ ಪದೇ ನಡೆಯುತ್ತಿರುವುದು ಖಂಡನೀಯವಾಗಿದೆ. ಅಂಬೇಡ್ಕರ್ ಅವರನ್ನು ಅಪಮಾನಿಸಿದರೆ ಕೋಟ್ಯಾಂತರ ಅನುಯಾಯಿಗಳಿಗೆ ನೋವಾಗಿದೆ. ಇಂತಹ ಹೀನ ಕೃತ್ಯ ನಾವು ಸಹಿಸುವುದಿಲ್ಲ. ಈ ಘಟನೆಯಲ್ಲಿ ಭಾಗವಹಿಸಿದ ಕಿಡಿಗೇಡಿಗಳ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಯುವತಿ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಅತ್ಯಾಚಾರ; ಮದುವೆಯಾಗುತ್ತೇನೆಂದು ವಂಚನೆ
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಅನೀಲ್ ಕುಮಾರ್ ಬೆಲ್ದಾರ್, ರಮೇಶ ಡಾಕುಳಗಿ, ಬಾಬು ಪಾಸ್ವಾನ್, ಅಬ್ದುಲ್ ಮನ್ನಾನ್ ಸೇಠ್, ಬಸವರಾಜ ಮಾಳಗೆ, ಶ್ರೀಪತರಾವ್ ದೀನೆ, ಶಿವಕುಮಾರ್ ನೀಲಿಕಟ್ಟಿ, ಸಂದೀಪ ಕಾಂಟೆ, ಪ್ರದೀಪ ನಾಟೇಕರ್, ಸಾಯಿ ಸಿಂಧೆ, ಗೌತಮ್ ಪ್ರಸಾದ್, ಮಾರುತಿ ಕಂಟಿ, ಬಾಬು ಮಿಠಾರೆ, ಸುನೀಲ ಸಂಗಮ, ಅವಿನಾಶ ದೀನೆ, ಶಾಲಿವಾನ್ ಬಡಗೇರ್, ಅಂಬಾದಾಸ ಗಾಯಕವಾಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.