ದೇಶದ ಸುಮಾರು ಶೇಕಡ 60ಕ್ಕಿಂತ ಅಧಿಕ ಜಿಲ್ಲೆಗಳು ಪ್ರವಾಹ ಪೀಡಿತ ಮತ್ತು ಬರಗಾಲದ ಅಪಾಯದಲ್ಲಿದೆ. ಈ ಎರಡೂ ನೈಸರ್ಗಿಕ ಅಪಾಯಗಳು, ತುರ್ತು ಕ್ರಮಗಳ ಅಗತ್ಯವಿರುವ ಜಿಲ್ಲೆಗಳ ಬಗ್ಗೆ ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಹೊಸ ಮೌಲ್ಯಮಾಪನ ವರದಿಯಲ್ಲಿ ಈ ಮಾಹಿತಿ ಉಲ್ಲೇಖಿಸಲಾಗಿದೆ.
ಈ ವರದಿಯನ್ನು ಶುಕ್ರವಾರ ಗುವಾಹಟಿಯಲ್ಲಿ ಬಿಡುಗಡೆ ಮಾಡಲಾಗಿದೆ. 20 ರಾಜ್ಯಗಳ ವಿಜ್ಞಾನಿಗಳು ಮತ್ತು ಅಧಿಕಾರಿಗಳ ಸಹಭಾಗಿತ್ವದಲ್ಲಿ ಈ ಡೇಟಾ ತಯಾರಿಸಲಾಗಿದೆ. ಹೆಚ್ಚುವರಿಯಾಗಿ, 1970 ಮತ್ತು 2019ರ ನಡುವಿನ 50 ವರ್ಷಗಳ ಹವಾಮಾನ ಮತ್ತು ಕೃಷಿ ಡೇಟಾವನ್ನು ಮೌಲ್ಯಮಾಪನಕ್ಕಾಗಿ ಬಳಸಲಾಗಿದೆ.
ಇದನ್ನು ಓದಿದ್ದೀರಾ? ಪ್ರವಾಹ, ಬರಗಾಲಕ್ಕೆ ಕಾರಣ ತಿಳಿಯಲು ಸಂಶೋಧನೆಗಳ ಅಗತ್ಯವಿದೆ: ಸಿಎಂ ಸಿದ್ದರಾಮಯ್ಯ
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಅಭಿವೃದ್ಧಿ ಮತ್ತು ಸಹಕಾರ ಸ್ವಿಸ್ ಏಜೆನ್ಸಿ ಬೆಂಬಲದಲ್ಲಿ ಐಐಟಿ ಗುವಾಹಟಿ, ಐಐಟಿ ಮಂಡಿ ಮತ್ತು ಬೆಂಗಳೂರಿನ ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿ ಅಧ್ಯಯನ ಕೇಂದ್ರದ ಸಂಶೋಧಕರು ಈ ವರದಿಯನ್ನು ಸಿದ್ಧಪಡಿಸಿದ್ದಾರೆ.
ವರದಿ ಪ್ರಕಾರ ದೇಶದಲ್ಲಿ ಸುಮಾರು 91 ಜಿಲ್ಲೆಗಳು ‘ಅತೀ ಅಧಿಕ’ ಬರಗಾಲದ ಅಪಾಯದಲ್ಲಿದೆ. 188 ಜಿಲ್ಲೆಗಳು ‘ಅಧಿಕ’ ಬರಗಾಲದ ಅಪಾಯದಲ್ಲಿದೆ. ಬರಗಾಲದ ಅಪಾಯದಲ್ಲಿರುವ ಜಿಲ್ಲೆಗಳ ಪೈಕಿ ಶೇಕಡ 85ರಷ್ಟು ಜಿಲ್ಲೆಗಳು ಬಿಹಾರ, ಅಸ್ಸಾಂ, ಜಾರ್ಖಂಡ್, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ಛತ್ತೀಸ್‌ಗಢ, ಕೇರಳ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಹರಿಯಾಣದಲ್ಲಿವೆ.
ಇನ್ನು ಇದೇ ವರದಿ ಪ್ರಕಾರ ಭಾರತದಲ್ಲಿರುವ ಸುಮಾರು 51ರಷ್ಟು ಜಿಲ್ಲೆಗಳು ‘ಅತೀ ಹೆಚ್ಚು’ ಪ್ರವಾಹ ಅಪಾಯದಲ್ಲಿದೆ. 118 ಜಿಲ್ಲೆಗಳು ‘ಹೆಚ್ಚು’ ಅಪಾಯದಲ್ಲಿದೆ. ಈ ಪೈಕಿ ಅಧಿಕ ಪ್ರವಾಹ ಪೀಡಿತ ಜಿಲ್ಲೆಗಳು ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಒಡಿಶಾ ಮತ್ತು ಜಮ್ಮು ಕಾಶ್ಮೀರದಲ್ಲಿದೆ.
ಇದನ್ನು ಓದಿದ್ದೀರಾ? ಬರಗಾಲವನ್ನೂ ಸರಿಸಿ ಸುರಿದ ಮುಂಗಾರು ಪೂರ್ವ ಮಳೆ, ಯಾರ ಅನುಕೂಲಕ್ಕಾಗಿ?
ಅಸ್ಸಾಂನ ಐದು ಮತ್ತು ಪಶ್ಚಿಮ ಬಂಗಾಳದ ಮೂರು ಜಿಲ್ಲೆಗಳು ಸೇರಿದಂತೆ ಪಾಟ್ನಾ (ಬಿಹಾರ), ಅಲಪ್ಪುಳ (ಕೇರಳ), ಮತ್ತು ಕೇಂದ್ರಪಾರ (ಒಡಿಶಾ) ಸೇರಿ ಒಟ್ಟು 11 ಜಿಲ್ಲೆಗಳು ಪ್ರವಾಹ ಮತ್ತು ಅನಾವೃಷ್ಟಿ ಎರಡೂ ಕಾಡು ‘ಅತೀ ಅಧಿಕ’ ಅಪಾಯದಲ್ಲಿದೆ. ಇಲ್ಲಿ ತುರ್ತಾಗಿ ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದು ವರದಿ ಸಲಹೆ ನೀಡಿದೆ.
ಉತ್ತರ, ಮಧ್ಯ ಕರ್ನಾಟಕದಲ್ಲಿ ಬರ ಅಪಾಯ
ಇನ್ನು ಉತ್ತರ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳು ಹೆಚ್ಚಿನ ಬರಗಾಲದ ಅಪಾಯವನ್ನು ಎದುರಿಸುತ್ತಿದ್ದು, ಕಳೆದ 20 ವರ್ಷಗಳಿಂದ ತೇವಾಂಶ ಪ್ರಮಾಣ ಕಡಿಮೆಯಾಗುತ್ತಲೇ ಸಾಗುತ್ತಿದೆ. ಒಟ್ಟು 698 ಜಿಲ್ಲೆಗಳಿಗೆ ಮೌಲ್ಯಮಾಪನ ಮಾಡಲಾಗಿದ್ದು, ಅದರಲ್ಲಿ 459 ಅಪಾಯದಲ್ಲಿದೆ ಎಂದು ಕಂಡುಬಂದಿದೆ.
