ಕಲಬುರಗಿಯ ಖಾಸಗಿ ರಕ್ತನಿಧಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ದಲಿತ ಯುವಕನನ್ನು ಸಿಗರೇಟ್ ಪ್ಯಾಕೆಟ್ ಕದಿಯುತ್ತಿದ್ದನೆಂದು ಮಾಲೀಕ ಥಳಿಸಿ ಚಿತ್ರಹಿಂಸೆ ನೀಡಿ ಕೊಂದಿದ್ದಾನೆ. ಮಾಲೀಕ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಲೆಯಾದ ಯುವಕ ಕಲಬುರಗಿ ನಗರದ ಪ್ರಗತಿ ಕಾಲೋನಿ ನಿವಾಸಿ ಶಶಿಕಾಂತ್ ಮಲ್ಲಿಕಾರ್ಜುನ್ ನಾಟೀಕಾರ(25) ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಲಡ್ ಬ್ಯಾಂಕ್ ಮಾಲೀಕ ಚಂದ್ರಶೇಖರ್ ಎಂ ಪಾಟೀಲ್ ಮತ್ತು ಆತನ ನಾಲ್ವರು ಸ್ನೇಹಿತರಾದ ಆದಿತ್ಯ ಮರಾಠಾ, ಓಂಪ್ರಕಾಶ್ ಘೋರ್ವಾಡಿ, ರಾಹುಲ್ ಪಾಟೀಲ್ ಹಾಗೂ ಅಶ್ಫಾಕ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಚಂದ್ರಶೇಖರ ಪಾಟೀಲ ತಲೆಮರೆಸಿಕೊಂಡಿದ್ದು, ಉಳಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
“ಖಾಸಗಿ ರಕ್ತನಿಧಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಿಗರೇಟ್ ಪ್ಯಾಕೆಟ್ ಕದ್ದಿದ್ದನೆಂದು ಆರೋಪಿಸಿ ಆತನನ್ನು ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ. ಬ್ಲಡ್ ಬ್ಯಾಂಕ್ ಮಾಲೀಕ ಚಂದ್ರಶೇಖರ್ ಎಂ ಪಾಟೀಲ್ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದ್ದು, ಉಳಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಎಂ ಬಿ ನಗರ ಪೊಲೀಸ್ ಇನ್‌ಸ್ಪೆಕ್ಟರ್ ಈ ದಿನ.ಕಾಮ್‌ಗೆ ತಿಳಿಸಿದರು.
“ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದೀಗ ನಾವೆಲ್ಲರೂ ಅದೇ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದೇವೆ” ಎಂದು ಹೇಳಿದರು.
ಘಟನೆ ಹಿನ್ನೆಲೆ
ಆರೋಪಿಗಳು ಶಶಿಕಾಂತ್ ಎಂಬ ಯುವಕನನ್ನು ತಾಸುಗಳ ಕಾಲ ಕೋಣೆಯಲ್ಲಿ ಬಂಧಿಸಿ ಕ್ರೂರವಾಗಿ ಥಳಿಸಿದ್ದಾರೆಂದು ಮೂಲಗಳು ತಿಳಿಸಿವೆ. ಗುರುವಾರ ಸಂಜೆ ಪೋಷಕರು ಮನೆಗೆ ಕರೆದೊಯ್ಯುತ್ತಿದ್ದಾಗ ಶಶಿಕಾಂತ್ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಸುಳ್ಳು ಹೆಸರು ದಾಖಲಿಸಿ, ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರಾರಿಯಾದ ತಾಯಿ
“₹1.40 ಲಕ್ಷ ಮೌಲ್ಯದ ಸಿಗರೇಟ್ ಪ್ಯಾಕೆಟ್‌ಗಳನ್ನು ಶಶಿಕಾಂತ ಕದ್ದಿದ್ದು, ಅಷ್ಟು ಮೊತ್ತದ ಹಣವನ್ನು ದಂಡದ ರೂಪದಲ್ಲಿ ಕಟ್ಟುವಂತೆ ಚಂದ್ರಶೇಖರ ಪಾಟೀಲ್ ತಾಕೀತು ಮಾಡಿದ್ದ. ನನ್ನ ಮಗ ಹಣ ಪಾವತಿಸದಿದ್ದಾಗ, ಚಂದ್ರಶೇಖರ್ ಪಾಟೀಲ್ ಮತ್ತು ಅವನ ನಾಲ್ವರು ಸ್ನೇಹಿತರು ನನ್ನ ಮಗನನ್ನು ಕೋಣೆಯಲ್ಲಿ ಕೂಡಿಹಾಕಿ, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಥಳಿಸಿದ್ದಾರೆ. ಮಗನನ್ನು ಹುಡುಕಿಕೊಂಡು ಬ್ಲಡ್ ಬ್ಯಾಂಕ್‌ಗೆ ನಾವು ಹೋದಾಗ ಚಂದ್ರಶೇಖರ ಪಾಟೀಲ ತಮಗೆ ಈ ವಿಷಯ ತಿಳಿಸಿದ್ದಾನೆ” ಎಂದು ಮಲ್ಲಿಕಾರ್ಜುನ್ ದೂರಿನಲ್ಲಿ ತಿಳಿಸಿದ್ದಾರೆ.
ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯ ಎದುರು ಮೃತ ದೇಹದೊಂದಿಗೆ ಪ್ರತಿಭಟನೆ ನಡೆಸಿದ ದಲಿತ ಸಂಘಟನೆಗಳ ಮುಖಂಡರು, ಯುವಕನ ಸಾವಿಗೆ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.
ಆರೋಪಿಗಳ ವಿರುದ್ಧ ಕೊಲೆ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಜತೆಗೆ ಮೃತರ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆ ₹4.12 ಲಕ್ಷ ಪರಿಹಾರ ನೀಡಿದೆ.
