‘ನಾನು ಕಸ ತಿನ್ನಬೇಕು. ನಿಮ್ಮ ಬಳಿ ಕಸ ಇಲ್ಲವೇ? ಕಸ ಕೊಡಿ’ ಎಂದು ಬೇಡಿಕೊಳ್ಳುವ ಡಸ್ಟ್‌ಬಿನ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಂಗ್‌ಕಾಂಗ್‌ನ ಡಿಸ್ನಿಲ್ಯಾಂಡ್‌ನಲ್ಲಿ ಕಸದ ಬಗ್ಗೆ ಮಾತನಾಡುವ ಮತ್ತು ಪ್ರತಿಕ್ರಿಯಿಸುವ ಡಸ್ಟ್‌ಬಿನ್‌ಅನ್ನು ಸಾರ್ವಜನಿಕ ಉದ್ಯಾನವನದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಜನರು ಕಸ ಎಸೆಯದಂತೆ, ಕಸವನ್ನು ಕಸದ ಬುಟ್ಟಿಗೆ ಹಾಕುವಂತೆ ಭಾರತವೂ ಸೇರಿದಂತೆ ಹಲವು ದೇಶಗಳ ಸರ್ಕಾರಗಳು ಮನವಿ ಮಾಡುತ್ತಿವೆ. ಜಾಗೃತಿ ಮೂಡಿಸುತ್ತಿವೆ. ಇದೀಗ, ಜನರು ಕಸವನ್ನು ಕಸದ ಬುಟ್ಟಿಗೇ ಹಾಕುವಂತೆ ಪ್ರೇರೇಪಿಸಲು ಹಾಂಗ್‌ಕಾಂಗ್ ಸರ್ಕಾರ ನೂತನ ಪ್ರಯೋಗ ನಡೆಸಿದೆ. ಸಾರ್ವಜನಿಕ ಸ್ಥಳದಲ್ಲಿ ಮಾತನಾಡುವ ಕಸದ ಬುಟ್ಟಿಯನ್ನು ಇರಿಸಿದೆ. ಇದು, ಜನರನ್ನು ಆಕರ್ಷಿಸುತ್ತದೆ. ಜನರು ಕಸವನ್ನು ಕಸದ ಬುಟ್ಟಿಗೇ ಹಾಕುವಂತೆ ಉತ್ತೇಜಿಸುತ್ತದೆ ಎಂದು ಹೇಳಲಾಗಿದೆ.
ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಕಸಕ್ಕಾಗಿ ಕಸದ ಬುಟ್ಟಿಯೊಂದು ಬೇಡಿಕೊಳ್ಳುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ಡಸ್ಟ್‌ಬಿನ್‌ಅನ್ನು ಅನಿಮೇಷನ್ ಮೂಲಕ ತಯಾರಿಸಲಾಗಿದೆ ಎಂದು ವರದಿಯಾಗಿದೆ.
ವಿಡಿಯೋದಲ್ಲಿ ಕಸದ ಬುಟ್ಟಿಯು ಸ್ವಯಂ ಚಾಲಿತವಾಗಿ ಸುತ್ತಲೂ ತಿರುತ್ತದೆ. ‘ನಾನು ಕಸವನ್ನು ತಿನ್ನಬೇಕು! ನಿಜವಾಗಿಯೂ ಯಾವುದೇ ಕಸ ಇಲ್ಲವೇ? ಆಹ್! ಕಸ ಮುಗಿದು ಹೋಗಿದೆ!’ ಎಂದು ಹಾಸ್ಯಮಯವಾಗಿ ಬೇಡಿಕೊಳ್ಳುತ್ತದೆ. ಯಾರಾದರು ಕಸವನ್ನು ಬುಟ್ಟಿಯೊಳಗೆ ಹಾಕಿದಾಗ ಅದು ಉತ್ಸಾಹದಿಂದ ಪ್ರತಿಕ್ರಿಯಿಸುತ್ತದೆ. “ಅಹ್, ಕಸ ಸಿಕ್ಕಿತು. ಯಂ ಯಂ ಯಂ!” ಎಂದು ಹೇಳುತ್ತದೆ.
“ಇದು ತುಂಬಾ ಉತ್ಸಾಹಭರಿತವಾಗಿದೆ! ನಾನು ಅದರೊಂದಿಗೆ ಇಡೀ ದಿನ ಮಾತನಾಡಬಹುದು” ಎಂದು ವಿಡಿಯೋ ಹಂಚಿಕೊಂಡಿರುವವರು ಹೇಳಿಕೊಂಡಿದ್ದಾರೆ.
ಈ ‘ಮಾತನಾಡುವ’ ಡಸ್ಟ್‌ಬಿನ್, ಶುಚಿತ್ವವನ್ನು ಉತ್ತೇಜಿಸಲು ಬಳಸಲಾದ ಸೃಜನಶೀಲತೆಯ ಸಂಕೇತವಾಗಿದೆ. ತ್ಯಾಜ್ಯ ವಿಲೇವಾರಿಯ ಸಮಸ್ಯೆಯನ್ನು ಪರಿಹರಿಸಲು ತಂತ್ರಜ್ಞಾನ ಮತ್ತು ಹಾಸ್ಯ ಸಂಯೋಜಿತ ಪ್ರಯೋಗಕ್ಕಾಗಿ ಡಿಸ್ನಿಲ್ಯಾಂಡ್‌ನ ಸ್ಥಳೀಯ ಆಡಳಿತವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.