“ಸಾಹಿತ್ಯ ಉತ್ಸವಗಳು ಇನ್ನೂ ಹೆಚ್ಚಾಗಿ ನಡೆಯಬೇಕು. ಮಾಡಬೇಕಾದ ಕೆಲಸಗಳು ಹೊರಬೇಕಾದ ಹೊಣೆಗಾರಿಕೆಗಳು ಹೆಚ್ಚಾಗಿವೆ. ಆದರೆ, ಫೆಸ್ಟಿವಲ್‌ನ ಸ್ವರೂಪ್ ಇನ್ನೂ ಸ್ವಲ್ಪ ಬದಲಾವಣೆ ಮಾಡಿದರೇ, ಅದು ಸೂಕ್ತ. ಈ ಕಾರ್ಯಕ್ರಮದಲ್ಲಿ ಜನಸಾಮಾನ್ಯರು ಒಳಗೊಂಡರೇ ಮಾತ್ರ ಅದಕ್ಕೆ ಮಣ್ಣಿನ ವಾಸನೆ ಬರುತ್ತದೆ” ಎಂದು ವಿಮರ್ಶಕಿ ಆಶಾದೇವಿ ಹೇಳಿದ್ದಾರೆ.
ಬೆಂಗಳೂರಿನ ಲಲಿತ ಅಶೋಕ ಹೋಟೇಲ್‌ನಲ್ಲಿ ‘ಬೆಂಗಳೂರು ಸಾಹಿತ್ಯ ಉತ್ಸವ’ ನಡೆಯುತ್ತಿದ್ದು, ಹಲವು ಜನರು ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಉತ್ಸವದಲ್ಲಿ ಪಾಲ್ಗೊಂಡು ಈದಿನ.ಕಾಮ್ ಜತೆಗೆ ಅವರು ಮಾತನಾಡಿದರು. ಉತ್ಸವಗಳಲ್ಲಿ ಜನಸಾಮಾನ್ಯರು ಹೆಚ್ಚಾಗಿ ಭಾಗವಹಿಸಬೇಕು. ಆಗ ಮಾತ್ರವೇ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ಸಾಹಿತ್ಯ ಉತ್ಸವವು 5 ವೇದಿಕೆಗಳಲ್ಲಿ ನಡೆಯುತ್ತಿದೆ. ಡಿಸೆಂಬರ್ 14 ಮತ್ತು 15 ರಂದು ವಿಚಾರ ಸಂಕಿರಣ ಮತ್ತು ಸಂವಾದಗಳು ನಡೆಯಲಿದೆ. ಸಾಹಿತ್ಯ ಉತ್ಸವ ಆರಂಭವಾದ ದಿನವೇ ಹಲವು ಜನರು ತಮ್ಮ ನೆಚ್ಚಿನ ಕವಿ ಮತ್ತು ಭಾಷಣಕಾರರನ್ನು ಕಾಣಲು ಬಂದಿದ್ದಾರೆ. ಎರಡು ದಿನ ನಡೆಯುವ ಈ ಉತ್ಸವ ಬೆಳಿಗ್ಗೆ 9ರಿಂದ ಸಂಜೆ 7.30ರವರೆಗೆ ನಡೆಯಲಿದೆ. ಸಾಹಿತ್ಯದ ಜತೆಗೆ ಸಂಗೀತ, ಸಿನಿಮಾ, ಕ್ರೀಡೆ ಸೇರಿ ನಾನಾ ಕ್ಷೇತ್ರಗಳ ಪ್ರಮುಖರು ದೇಶ–ವಿದೇಶಗಳಿಂದ ಬಂದಿದ್ದಾರೆ.
ಸಾಹಿತ್ಯ ಉತ್ಸವದಲ್ಲಿ 350ಕ್ಕೂ ಹೆಚ್ಚು ಲೇಖಕರು ಹಾಗೂ ಭಾಷಣಕಾರರು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. 5 ವೇದಿಕೆಗಳಲ್ಲಿ ನಡೆಯುತ್ತಿರುವ ಸಂವಾದದಲ್ಲಿ ಕವಿಗಳು ಮತ್ತು ಭಾಷಣಕಾರರು ಪ್ರಸ್ತುತ ವಿದ್ಯಮಾನಗಳು, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ, ಸಂಗೀತ, ಸಿನಿಮಾ, ಆಹಾರ, ಆರ್ಥಿಕತೆ, ನವೋದ್ಯಮ ಸೇರಿ ವೈವಿಧ್ಯಮಯ ವಿಷಯಗಳ ಕುರಿತು ಚರ್ಚಿಸಲಾಗುತ್ತಿದೆ. ಅಲ್ಲದೇ, ಸಂವಾದದ ಜತೆಗೆ ಈ ಕಾರ್ಯಕ್ರಮದಲ್ಲಿ ವಿವಿಧ ಭಾಷೆಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇದೆ.
ಕಾರ್ಯಕ್ರಮದಲ್ಲಿ ‘ನೊಬೆಲ್ ಪ್ರಶಸ್ತಿ’ ಪುರಸ್ಕೃತರಾದ ಅಭಿಜಿತ್ ಬ್ಯಾನರ್ಜಿ, ವೆಂಕಿ ರಾಮಕೃಷ್ಣನ್, ‘ಬುಕರ್ ಪ್ರಶಸ್ತಿ’ ಪುರಸ್ಕೃತರಾದ ಕಿರಣ್ ದೇಸಾಯಿ, ಲೇಖಕ ಉಪಮನ್ಯು ಚಟರ್ಜಿ, ಹಂಪನಾ, ಎಸ್.ಆರ್ ಹಿರೇಮಠ, ಗಾಯಕಿ ಹಾಗೂ ನಟಿ ಇಳಾ ಅರುಣ್, ಸಂಗೀತಗಾರ ಎಲ್ ಸುಬ್ರಮಣ್ಯಂ, ಪತ್ರಕರ್ತ ಅನುಪ್ರೀತಾ ದಾಸ್, ಬಚ್ಚಿ ಕರ್ಕಾರಿಯಾ, ರಾಜ್‌ದೀಪ್ ಸರ್ದೇಸಾಯಿ, ಲೇಖಕರಾದ ಚೇತನ್ ಭಗತ್, ವಿಕಾಸ್ ಸ್ವರೂಪ್, ರಾಮ್ ಮಾಧವ್, ರಾಮಚಂದ್ರ ಗುಹಾ, ಸುಧಾ ಮೂರ್ತಿ, ಅರುಣಾ ರಾಯ್ ಸೇರಿ ಹಲವರು ಉತ್ಸವದಲ್ಲಿ ಭಾಗವಹಿಸಿದ್ದಾರೆ. ಉತ್ಸವವು ಭಾನುವಾರವೂ ನಡೆಯಲಿದ್ದು, ಇನ್ನೂ ಹಲವರು ಭಾಗಿಯಾಗಲಿದ್ದಾರೆ.
ಸಾಹಿತ್ಯ ಉತ್ಸವ ಸಾಹಿತ್ಯಿಕ ಲೋಕದ ವೈವಿಧ್ಯವನ್ನು ಅನಾವರಣ ಮಾಡಲಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಪ್ರಮುಖರು, ಓದುಗರು, ಪ್ರಕಾಶಕರು, ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರನ್ನು ಒಂದೆಡೆ ಸೇರಿಸಲು ಈ ಉತ್ಸವ ಸಹಕಾರಿಯಾಗಲಿದೆ ಎಂದು ಆಯೋಜಕರು ಹೇಳಿದ್ದಾರೆ.
ನಾಳೆಯೂ ಕೂಡ ಮುಂದುವರೆಯುವ ಈ ಸಾಹಿತ್ಯ ಹಬ್ಬದಲ್ಲಿ Lit Lawns, Waterfront, The Valley, Red Couch, New Book Alert ಎಂಬ 5 ವೇದಿಕೆಗಳಲ್ಲಿ ಬಿಂಬ ಬಿಂಬನ, ನನ್ನ ಪಾಡಿಗೆ ನಾನು, ಕನ್ನಡ ಪತ್ರಿಕೋದ್ಯಮ, ನುಡಿ, ನಾಡು, ನೆನಪು, ತುಳುನಾಡು, ಇಂದಿನ ರಾಜಕೀಯ, ಕಥೆ ಹೇಳುವುದು, ನ್ಯಾಯ ಕೇಳುವುದು, Kuvempu’s ಶ್ರೀ ರಾಮಾಯಣ ದರ್ಶನಂ ಸಾಹಿತ್ಯದ ವಿಚಾರಗಳ ಮೇಲೆ ಸಂವಾದ ಚರ್ಚಾ ಕಾರ್ಯಕ್ರಮ ನಡೆಯಲಿದೆ.
ಈ ಸುದ್ದಿ ಓದಿದ್ದೀರಾ? ದೆಹಲಿ ಚಲೋ | ಪ್ರತಿಭಟನಾನಿರತ ರೈತರ ಮೇಲೆ ಜಲಫಿರಂಗಿ, ಅಶ್ರುವಾಯ ಪ್ರಯೋಗ
ಉತ್ಸವದಲ್ಲಿ ಈದಿನ.ಕಾಮ್ ಜತೆ ಮಾತನಾಡಿದ ಸಾಹಿತಿ ಹಂಪನಾ, “ಬೆಂಗಳೂರು ಸಾಹಿತ್ಯ ಉತ್ಸವ ಈ ಹಿಂದೆ ಕೊಠಡಿಯಲ್ಲೋ, ಸಭಾಂಗಣದಲ್ಲೋ ನಡಿಯುತ್ತಿತ್ತು. ಆದರೆ, ಈಗ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ವೊಂದರ ಆವರಣದಲ್ಲಿ ನಡಿಯುತ್ತಿದೆ. ಲೌಕಿಕದ ದೃಷ್ಟಿಯಿಂದ ಕನ್ನಡಕ್ಕೆ ಒಂದು ರೀತಿಯಲ್ಲಿ ಇದು ಪ್ರತಿಷ್ಠೆ ಬಂದ ಹಾಗೇ, ಸಾಹಿತ್ಯಕ್ಕೆ ಒಂದು ದೊಡ್ಡ ಮಾನ್ಯತೆ ದೊರಕಿದ ಹಾಗೇ ಎಂದು ತಿಳಿದುಕೊಳ್ಳಬಹುದು. ಸಾಹಿತ್ಯದ ಉತ್ಸವ ಅರಮನೆಯಲ್ಲಿ ನಡೆದರೇ, ಶ್ರೇಷ್ಠ ಬಯಲಿನಲ್ಲಿ ನಡೆದರೇ, ಕನಿಷ್ಟ ಎಂಬುದಿಲ್ಲ. ಈ ಬಾರಿಯ ನಡೆಯುತ್ತಿರುವ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಾಹಿತ್ಯ ಓದುಗರಿಗೆ ಇದೊಂದು ಹಬ್ಬ” ಎಂದು ಹೇಳಿದರು.
ವಿದ್ಯಾರ್ಥಿನಿ ಶ್ರವಂತಿ ಈದಿನ.ಕಾಮ್ ಜತೆಗೆ ಮಾತನಾಡಿ, “ ಸಾಹಿತ್ಯ ಉತ್ಸವದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದೇನೆ. ಇದು ಹೊಸ ಅನುಭವವಾಗಿದೆ. ಕನ್ನಡ ಸಂವಾದ ಮತ್ತು ಚರ್ಚೆಗಳು ಕಡಿಮೆ ನಿರಾಸೆಯಾಯಿತು. ಇದು ಸ್ವಲ್ಪ ಮಟ್ಟಿಗೆ ಬೇಜಾರನ್ನ ತರಿಸಿತ್ತು” ಎಂದು ತಿಳಿಸಿದರು.