ಅದಾನಿ ಸಂಪತ್ತು-ಉದ್ಯೋಗ ಸೃಷ್ಟಿಕರ್ತನೇ? ಸದ್ಗುರು ಯಾರನ್ನು ಬಚಾವು ಮಾಡುತ್ತಿದ್ದಾರೆ?

Date:

Advertisements
ಸದ್ಗುರು ವಾಸುದೇವ್, ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಗೌತಮ್ ಅದಾನಿಯವರನ್ನು ವಿರೋಧ ಪಕ್ಷಗಳ ನಾಯಕರ ದಾಳಿಯಿಂದ ಬಚಾವು ಮಾಡಲು ಮುಂದಾಗಿದ್ದಾರೆ. ಅದಾನಿಯ ಬಗ್ಗೆ ಮಾತನಾಡಬೇಡಿ ಎಂದು ಹೇಳುವ ಮೂಲಕ ಪ್ರಧಾನಿ ಮೋದಿಯವರನ್ನು ಮುಜುಗರದಿಂದ ಪಾರು ಮಾಡಲು ಹವಣಿಸುತ್ತಿದ್ದಾರೆ.

”ಭಾರತದ ಸಂಪತ್ತು ಸೃಷ್ಟಿಕರ್ತರು ಮತ್ತು ಉದ್ಯೋಗ ಒದಗಿಸುವ ಉದ್ಯಮಿಗಳು ರಾಜಕೀಯ ಫುಟ್‌ಬಾಲ್‌ನ ವಿಷಯವಾಗಬಾರದು. ವ್ಯತ್ಯಾಸಗಳಿದ್ದರೆ, ಅವುಗಳನ್ನು ಕಾನೂನಿನ ಚೌಕಟ್ಟಿನೊಳಗೆ ಪರಿಹರಿಸಬೇಕು, ರಾಜಕೀಯ ಅಡ್ಡಿಪಡಿಸುವ ಮೂಲಕ ಅಲ್ಲ” ಎಂದು ಇಶಾ ಫೌಂಡೇಶನ್ ಸಂಸ್ಥಾಪಕ ಮತ್ತು ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ತಮ್ಮ ಟ್ವೀಟರ್ ಖಾತೆಯಲ್ಲಿ ಕರೆ ಕೊಟ್ಟಿದ್ದಾರೆ.

ಆಧ್ಯಾತ್ಮಿಕ ಗುರುಗಳು ದೇಶದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡು, ಸಂಸತ್ ಅಧಿವೇಶನ ಸರಿದಾರಿಯಲ್ಲಿ ಸಾಗಬೇಕೆಂದು ಕಾಳಜಿ ಮತ್ತು ಕಳಕಳಿ ವ್ಯಕ್ತಪಡಿಸಿರುವುದು ಮೆಚ್ಚತಕ್ಕ ವಿಷಯ. ಏಕೆಂದರೆ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿ ಎರಡು ವಾರಗಳೇ ಕಳೆದುಹೋದವು. ಈ ಕ್ಷಣಕ್ಕೂ ಅಧಿವೇಶನದಲ್ಲಿ ರಚನಾತ್ಮಕ ಮತ್ತು ಗುಣಾತ್ಮಕ ಚರ್ಚೆಗಳಿಗೆ ಅವಕಾಶವೇ ಸಿಗುತ್ತಿಲ್ಲ. ಬರೀ ಗದ್ದಲ, ಗಲಾಟೆ, ವಾಕ್ಔಟ್‌ಗಳೇ ಎಲ್ಲ.

ಹಾಗಾಗಿ ದೇಶದ ಜನತೆಗೆ, ಆಧ್ಯಾತ್ಮಿಕ ನಾಯಕ ಸದ್ಗುರು ಹೇಳಿರುವುದು ಸರಿಯಾಗಿಯೇ ಇದೆಯಲ್ಲ, ಸರಿಯಾದ ಸಮಯದಲ್ಲಿಯೇ ಹೇಳಿದ್ದಾರಲ್ಲ ಎನಿಸುವುದು ಸಹಜ. ಆದರೆ ಸದ್ಗುರು ಯಾರ ಬಗ್ಗೆ ಹೇಳಿದ್ದಾರೆ, ಆ ಸಂಪತ್ತು ಸೃಷ್ಟಿಸುವ ಉದ್ಯಮಿಗಳು ಯಾರು, ದೇಶಕ್ಕೆ ಅವರ ಕೊಡುಗೆ ಏನು, ಆ ಮೂಲಕ ಯಾರನ್ನು ಬಚಾವು ಮಾಡಲು ಹಾಗೆ ಮಾತನಾಡುತ್ತಿದ್ದಾರೆ ಎನ್ನುವುದರ ಕುರಿತು ತಿಳಿದುಕೊಳ್ಳಬೇಕಿದೆ, ಅದು ಬಹಳ ಮುಖ್ಯವಾದ ವಿಚಾರವಾಗಿದೆ.

Advertisements

ಸದ್ಗುರು ವಾಸುದೇವ್, ತಮ್ಮ ವಿದ್ವತ್ತು, ಹಿರಿತನ ಮತ್ತು ಆಧ್ಯಾತ್ಮಿಕ ಅನುಭವವನ್ನೆಲ್ಲ ಅಡ ಇಟ್ಟು, ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಗೌತಮ್ ಅದಾನಿಯವರನ್ನು ವಿರೋಧ ಪಕ್ಷಗಳ ನಾಯಕರ ದಾಳಿಯಿಂದ ಬಚಾವು ಮಾಡಲು ಮುಂದಾಗಿದ್ದಾರೆ. ಅದಾನಿಯ ಬಗ್ಗೆ ಮಾತನಾಡಬೇಡಿ ಎಂದು ಹೇಳುವ ಮೂಲಕ ಪ್ರಧಾನಿ ಮೋದಿಯವರನ್ನು ಮುಜುಗರದಿಂದ ಪಾರು ಮಾಡಲು ಹವಣಿಸುತ್ತಿದ್ದಾರೆ.

ಇದು ಹಂಡ್ರೆಂಡ್ ಪರ್ಸೆಂಟ್ ಆಧ್ಯಾತ್ಮಿಕ ಪ್ರಪೊಗ್ಯಾಂಡ. ಆಳುವ ಸರ್ಕಾರದ ಪರ ಅನೈತಿಕ ಬ್ಯಾಟಿಂಗ್.

ಕಳೆದ ಹತ್ತು ವರ್ಷಗಳಲ್ಲಿ ದೇಶದ ಧಾರ್ಮಿಕ ನಾಯಕರು ಸಂಘಪರಿವಾರ ಮತ್ತು ಬಿಜೆಪಿ ಪರ ವಕಾಲತ್ತು ವಹಿಸುತ್ತಿರುವುದನ್ನು ನೋಡಿಕೊಂಡೇ ಬಂದಿದ್ದೇವೆ. ಅದರಿಂದಾದ ಅಧ್ವಾನವನ್ನೂ ನೋಡುತ್ತಿದ್ದೇವೆ. ಹಾಗೆಯೇ ಸುದ್ದಿ ಸಂಸ್ಥೆಗಳು ಆಳುವ ಸರ್ಕಾರದ ಹಳವಂಡಗಳನ್ನು ಜನರಿಗೆ ತಲುಪಿಸದೆ ಬಹಳ ದೊಡ್ಡ ದ್ರೋಹವೆಸಗುತ್ತಿರುವುದನ್ನೂ ಕಂಡಿದ್ದೇವೆ.

ಇದನ್ನು ಓದಿದ್ದೀರಾ?: ಅಮೆರಿಕ ಲಂಚ-ವಂಚನೆ ಪ್ರಕರಣದಲ್ಲಿ ‘ಮೋದಾನಿ’ ಆರೋಪಿಯಲ್ಲವೇ?

ಹೀಗಿದ್ದರೂ, ಆಧ್ಯಾತ್ಮಿಕ ಸದ್ಗುರು, ”ಭಾರತವು ಜಗತ್ತಿಗೆ ಪ್ರಜಾಪ್ರಭುತ್ವದ ದಾರಿದೀಪವಾಗಲು ಹಾತೊರೆಯುತ್ತಿರುವ ಸಂದರ್ಭದಲ್ಲಿ, ದೇಶವು ಪ್ರಗತಿಯ ಹಾದಿಯಲ್ಲಿರುವಾಗ, ಅದಕ್ಕಾಗಿ ಕೈ ಜೋಡಿಸುವವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಬಾರದು” ಎಂದು ಫರ್ಮಾನು ಹೊರಡಿಸಿದ್ದಾರೆ.

ಅಂದರೆ, ಶ್ರೀಮಂತ ಉದ್ಯಮಿಗಳನ್ನು ದೇಶದ ಸಂಪತ್ತು ಸೃಷ್ಟಿಸುವವರೆಂದೂ, ಅವರ ಪರವಿರುವ ಕೇಂದ್ರ ಸರ್ಕಾರವನ್ನು ಅನಗತ್ಯವಾಗಿ ಟೀಕಿಸಿ ದೇಶದ ಮಾನ ಮರ್ಯಾದೆ ಕಳೆಯಬಾರದೆಂದೂ, ‘ರಾಷ್ಟ್ರಪ್ರೇಮ’ದ ಮಾತುಗಳನ್ನಾಡುತ್ತಿದ್ದಾರೆ.

ಅಷ್ಟಕ್ಕೂ ಉದ್ಯಮಿ ಗೌತಮ್ ಅದಾನಿ ದೇಶದ ಸಂಪತ್ತು ಸೃಷ್ಟಿಸಿದ್ದಾರೆಯೇ? ಎಷ್ಟು ಜನಕ್ಕೆ ಉದ್ಯೋಗ ಒದಗಿಸಿದ್ದಾರೆ?

2014ರಲ್ಲಿ ಪ್ರಕಟಗೊಂಡಿದ್ದ ಹುರುನ್‌ ವರದಿ ಅನ್ವಯ ಗೌತಮ್‌ ಅದಾನಿ ಸಂಪತ್ತು 44 ಸಾವಿರ ಕೋಟಿ ರೂ. ಇತ್ತು. ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದರು. 2024ರಲ್ಲಿ, ಅದಾನಿ ಅವರ ಒಟ್ಟು ಸಂಪತ್ತಿನ ಮೌಲ್ಯ 11.6 ಲಕ್ಷ ಕೋಟಿ ದಾಟಿದೆ. ಕೇವಲ ಹತ್ತು ವರ್ಷಗಳಲ್ಲಿ ಅಳತೆಗೂ ಮೀರಿದ ಆಸ್ತಿ ಮೌಲ್ಯ ಹೆಚ್ಚಾಗಿದೆ. ಒಂದೇ ವರ್ಷದಲ್ಲಿ ಶೇ. 95ರಷ್ಟು ಏರಿಕೆಯಾಗಿದೆ.

ಹಾಗೆಯೇ ದೇಶದಲ್ಲಿ ಅದಾನಿ ಸಂಸ್ಥೆಗಳ ಪಾಲುದಾರಿಕೆ ಇಲ್ಲದ ಉದ್ಯಮಗಳೇ ಇಲ್ಲ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ. ವ್ಯವಹಾರ-ವಹಿವಾಟು ಏರುಗತಿಯಲ್ಲಿದೆ. ಆದರೆ ದೇಶದ ಜನತೆಗೆ ಉದ್ಯೋಗ ನೀಡಿದ ಅಗ್ರ 25 ಉದ್ಯಮ ಸಂಸ್ಥೆಗಳಲ್ಲಿ ಅದಾನಿ ಸಂಸ್ಥೆಯೇ ಇಲ್ಲ. ಟಾಟಾ ಕಂಪನಿ 9 ಲಕ್ಷ, ಇನ್ಫೋಸಿಸ್ 3 ಲಕ್ಷ, ರಿಲಯನ್ಸ್ 2 ಲಕ್ಷ 61 ಸಾವಿರ, ವಿಪ್ರೋ 2 ಲಕ್ಷ 26 ಸಾವಿರ ಉದ್ಯೋಗಗಳನ್ನು ನೀಡಿದ್ದರೆ, ಅದಾನಿ ಸಂಸ್ಥೆಗಳು ಉದ್ಯೋಗ ನೀಡಿದ್ದು ಕೇವಲ 23 ಸಾವಿರ ಮಾತ್ರ.

ವಸ್ತುಸ್ಥಿತಿ ಹೀಗಿದ್ದರೂ ಸದ್ಗುರುಗಳಂತಹ ಖಾವಿದಾರಿಗಳು ಯಾವ ನೈತಿಕತೆಯಿಂದ ಇಂತಹ ಉದ್ಯಮಿಗಳನ್ನು ಸಮರ್ಥಿಸಿಕೊಳ್ಳುತ್ತಾರೆ?

ಅಷ್ಟಕ್ಕೂ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ಪ್ರಶ್ನಿಸಿದ್ದು, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸಹಚರರು ಭಾರತ ಸರ್ಕಾರದ ಅಧಿಕಾರಿಗಳಿಗೆ ಕೊಟ್ಟ 2,100 ಕೋಟಿ ಲಂಚದ ಬಗ್ಗೆ. ಜೊತೆಗೆ, ಅಮೆರಿಕದ ಹೂಡಿಕೆದಾರರು ಮತ್ತು ಬ್ಯಾಂಕುಗಳಿಗೆ ಸುಳ್ಳು ಹೇಳಿರುವುದು ದೇಶದ ಮಾನ ಮರ್ಯಾದೆ ಹೋಗುವಂತಹ ಗಂಭೀರ ಆರೋಪ. ಹಾಗಾಗಿ, ಈ ವಿಚಾರದಲ್ಲಿ ಸಾರ್ವಜನಿಕರಿಗೆ ಆಸಕ್ತಿ ಇದೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯೂ ಅಡಗಿದೆ. ಇದರ ಬಗ್ಗೆ ಸವಿಸ್ತಾರವಾಗಿ ಅಧಿವೇಶನದಲ್ಲಿ ಚರ್ಚೆ ಮಾಡಲು ಅವಕಾಶ ಮಾಡಿಕೊಡಿ ಎಂದು ಇಂಡಿಯಾ ಒಕ್ಕೂಟ ಕೇಳುತ್ತಿದೆ. ಆದರೆ ಕೇಂದ್ರ ಸರ್ಕಾರ ವಿಪಕ್ಷಗಳ ಮನವಿಗೆ ಸ್ಪಂದಿಸುತ್ತಿಲ್ಲ.

ಬದಲಿಗೆ, ಆಳುವ ಪಕ್ಷ ವಿಷಯಾಂತರ ಮಾಡಲು- ಸೊರೊಸ್, ರಾಹುಲ್ ದೇಶದ್ರೋಹಿ, ಕುರ್ಚಿ ಮೇಲೆ ಹಣ-ಗಳೆಂಬ ಹತ್ತು ಹಲವು ದಾರಿಗಳನ್ನು ಹುಡುಕಿಕೊಂಡಿದೆ. ಗೋದಿ ಮೀಡಿಯಾಗಳನ್ನು ಬಳಸಿಕೊಂಡಿದೆ. ಸದನವನ್ನು ಮುಂದೂಡಿ ಕಾಲಾಹರಣ ಮಾಡುತ್ತಿದೆ.

ಸಂಸತ್ತು ಎನ್ನುವುದು ದೇಶದ ಆತ್ಮ. ಅಲ್ಲಿ ಖರ್ಚಾಗುವ ಪ್ರತಿ ಪೈಸೆಯೂ ದೇಶವಾಸಿಗಳ ಬೆವರಿನ ಹಣ. ಅಲ್ಲಿ ದೇಶಕ್ಕೆ ಸಂಬಂಧಿಸಿದ ಸಂಗತಿಗಳು ಸುಗಮವಾಗಿ, ಸಮರ್ಥವಾಗಿ ಚರ್ಚೆಯಾಗಬೇಕಾದ ಅಗತ್ಯವಿದೆ. ಪರಿಹಾರ ಕಂಡುಕೊಳ್ಳಬೇಕಾದ ತುರ್ತಿದೆ. ಅದನ್ನು ಆಳುವ ಸರ್ಕಾರ ಆಗುಮಾಡಬೇಕಾದ್ದು ಸಂವಿಧಾನಬದ್ಧ ಕರ್ತವ್ಯ. ಆದರೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ನಿಲುವು ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ.

ಸುದ್ಗುರು1 1

ಆ ಸರ್ವಾಧಿಕಾರಿ ಧೋರಣೆಯನ್ನು ರಾಷ್ಟ್ರಪ್ರೇಮವೆಂತಲೂ, ಲೂಟಿಕೋರರ ಬಗ್ಗೆ ಪ್ರಶ್ನಿಸುವವರನ್ನು ರಾಷ್ಟ್ರದ್ರೋಹಿಗಳೆಂತಲೂ ಪರಿಗಣಿಸುವ, ಬುದ್ಧಿ ಹೇಳುವ ಆಧ್ಯಾತ್ಮಿಕ ನಾಯಕ ಸದ್ಗುರು, ದೇಶದ ನಿಜವಾದ ದೇಶದ್ರೋಹಿ.

ಈಗಾಗಲೇ ಈ ಕಾರ್ಪೊರೇಟ್ ಗುರುವಿನ ಮೇಲೆ, ಅಕ್ರಮ ಅರಣ್ಯಭೂಮಿ ಒತ್ತುವರಿ, ತೆರಿಗೆ ವಂಚನೆ, ಬಲವಂತವಾಗಿ ಹೆಣ್ಣುಮಕ್ಕಳನ್ನು ಕೂಡಿಟ್ಟಿರುವುದು, ಮರಗಳನ್ನು ಕಡಿದು ಪರಿಸರ ನಾಶ ಮಾಡಿದ್ದು, ನದಿಪಾತ್ರದಲ್ಲಿ ಮರ ಬೆಳೆಸುತ್ತೇನೆಂದು ಸಾರ್ವಜನಿಕರಿಂದ ಹಣ ಎತ್ತಿದ್ದು, ಅಧ್ಯಾತ್ಮದ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚಿದ್ದು… ಹತ್ತಾರು ಆರೋಪಗಳಿವೆ. ಈ ಕೊಳಕನ್ನು ಮುಚ್ಚಿಕೊಳ್ಳಲು ಸದ್ಗುರುವಿಗೆ ಮೋದಿ ಬೇಕಾಗಿದೆ. ಮೋದಿಗೆ ಅದಾನಿ ಬೇಕಾಗಿದೆ.

ಒಟ್ಟಿನಲ್ಲಿ ಕಳ್ಳನ ಪರ ಸುಳ್ಳ, ಸುಳ್ಳನ ಪರ ಮಳ್ಳ- ಇದು ಇಂಡಿಯಾ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X