ವಿವಾಹೇತರ ಸಂಬಂಧಕ್ಕೆ ಒಪ್ಪದ ಮಹಿಳೆಯನ್ನು ಆಕೆಯ ಸೋದರ ಮಾವನೇ ಹತ್ಯೆಗೈದು, ಆಕೆಯ ಶಿರಚ್ಛೇದ ಮಾಡಿ, ದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ ಕಸದ ಬುಟ್ಟಿಯಲ್ಲಿ ಎಸೆದಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.
ಪ್ರಕರಣದ ಸಂಬಂಧ ಮಹಿಳೆಯ ಸೋದರ ಮಾವ ಅತಿಯುರ್ ರೆಹಮಾನ್ ಲಸ್ಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚರಣೆ ವೇಳೆ, ತಾನೇ ಕೃತ್ಯ ಎಸಗಿರುವುದಾಗಿ ಲಸ್ಕರ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
30 ವರ್ಷದ ಮಹಿಳೆಗೆ ವಿವಾಹವಾಗಿತ್ತು. ಎರಡು ವರ್ಷಗಳ ಹಿಂದೆ ಆಕೆ ತನ್ನ ಪತಿಯಿಂದ ದೂರವಾಗಿದ್ದರು. ಪ್ರತ್ಯೇಕವಾಗಿ ವಾಸಿಸುತ್ತಿದ್ದ ಮಹಿಳೆ, ಮನೆ ಸಹಾಯಕಿಯಾಗಿ ಕೆಲಸ ಮಾಡುತ್ತಾ ಬದುಕು ಸಾಗಿಸುತ್ತಿದ್ದರು. ಆಕೆಯನ್ನು ವಿವಾಹೇತರ ಸಂಬಂಧಕ್ಕಾಗಿ ಲಸ್ಕರ್ ಒತ್ತಾಯಿಸುತ್ತಿದ್ದ. ಆತನ ವರ್ತನೆಯಿಂದ ಬೇಸತ್ತಿದ್ದ ಮಹಿಳೆ, ಆತನಿಂದ ದೂರ ಉಳಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
“ತನ್ನನ್ನು ಪದೇ-ಪದೇ ತಿರಸ್ಕರಿಸಿದ್ದಕ್ಕಾಗಿ ಕುಪಿತಗೊಂಡಿದ್ದ ಲಸ್ಕರ್ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ, ಶಿರಚ್ಛೇದ ಮಾಡಿದ್ದಾನೆ. ಮೃತದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ, ಬ್ಯಾಗ್‌ನಲ್ಲಿ ತುಂಬಿ ಕಸದ ತೊಟ್ಟಿಗೆ ಎಸೆದಿದ್ದಾನೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ಮಹಿಳೆಯ ತಲೆ ಪತ್ತೆಯಾಗಿದ್ದರಿಂದ ಕೊಲೆ ಪ್ರಕರಣ ಬೆಳಕಿಗೆ ಬಂದಿತು. ಬಳಿಕ, ಸ್ನಿಫರ್ ಡಾಗ್‌ಗಳನ್ನು ಬಳಸಿ, ಮೃಹದೇಹ ಇತರ ಭಾಗಗಳನ್ನು ಪತ್ತೆ ಮಾಡಲಾಗಿದೆ. ಪ್ರದೇಶದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ, ಆರೋಪಿಯನ್ನು ಪತ್ತೆ ಮಾಡಿದ್ದೇವೆ. ಬಂಧಿಸಿದ್ದೇವೆ” ಎಂದು ಪೊಲೀಸ್ ಉಪ ಕಮಿಷನರ್ ಬಿದಿಶಾ ಕಲಿತಾ ತಿಳಿಸಿದ್ದಾರೆ.