ಕಾಂತರಾಜ ವರದಿ ಜಾರಿಗೊಳಿಸುವುದು ಸೇರಿದಂತೆ ಹಿಂದುಳಿದ ಜಾತಿಗಳ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಡಿಸೆಂಬರ್ 18ರಂದು ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ ಶಾಂತಪ್ಪ ತಿಳಿಸಿದರು.
ರಾಯಚೂರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “ಹಿಂದುಳಿದ ಜಾತಿಗಳಿಗೆ ಸಮುದಾಯಭವನ ವಿದ್ಯಾರ್ಥಿನಿಲಯ ಕಟ್ಟಿಕೊಳ್ಳಲು ಅನುದಾನ ಬಿಡುಗಡೆ ಮಾಡಿ ಹಿಂದುಳಿದ ಜಾತಿಗಳಿಗೆ ಸೇರಿದ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಕಾಂತರಾಜ ಆಯೋಗದ ವರದಿಯನ್ನು ಸ್ವೀಕರಿಸಿ ಆರು ತಿಂಗಳಾದರೂ, ವರದಿ ಬಹಿರಂಗಗೊಳಿಸಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕಾಂತರಾಜ ವರದಿ ಸ್ವೀಕರಿಸಿ, ಶಿಫಾರಸುಗಳನ್ನು ಜಾರಿಗೊಳಿಸುವುದಾಗಿ ಹೇಳಿದ್ದಿರಿ. ಅಹಿಂದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದರಿಂದ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿ ಸರ್ಕಾರ ರಚಿಸಲಾಯಿತು ಹಾಗೂ ಮತ್ತೆ ಉಪಚುನಾವಣೆಯಲ್ಲಿಯೂ ಅಭೂತಪೂರ್ವ ಗೆಲವು ಸಾಧಿಸಲಾಗಿದೆ. ಹಲವಾರು ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಅಹಿಂದ ಮತಗಳೇ ಮುಖ್ಯಕಾರಣವೆಂದು ಚುನಾವಣೆ ತಜ್ಞರು ವಿಶ್ಲೇಸಿದ್ದಾರೆ. ಸರ್ಕಾರ ರಚಿಸಿ ಸುಮಾರು 2 ವರ್ಷಗಳು ಕಳೆದಿವೆ. ಕೊಟ್ಟ ಭರವಸೆಯಂತೆ ಕಾಂತರಾಜ ವರದಿ ಶಿಫಾರಸುಗಳು ಜಾರಿಗೆ ಬಂದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆ ಸಂದರ್ಭಗಳಲ್ಲಿ ಕೊಟ್ಟ ಭರವಸೆಗಳಿಗೆ ಚ್ಯುತಿ ಬರುತ್ತಿದೆ. ಹಿಂದಿನ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರ್ಕಾರಗಳಲ್ಲಿ ಹಿಂದುಳಿದ ಜಾತಿಗಳಿಗೆ ಸಮುದಾಯಭವನ, ವಿದ್ಯಾರ್ಥಿನಿಲಯ ಕಟ್ಟಿಕೊಳ್ಳಲು ಅನುದಾನ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದು ಸುಮಾರು 2 ವರ್ಷಗಳು ಕಳೆದರೂ ಹಿಂದುಳಿದ ಜಾತಿಗಳ ಸಂಘ ಸಂಸ್ಥೆಗಳಿಗೆ ಅನುದಾನ ಮಂಜೂರು ಮಾಡಿಲ್ಲ. ಹಿಂದುಳಿದ ಜಾತಿಗಳಿಗೆ ಸೇರಿದ ಅಭಿವೃದ್ಧಿ ನಿಗಮಗಳಿಗೂ ನಿರೀಕ್ಷೆಯಂತೆ ಅನುದಾನ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರ್ಕಾರದಿಂದ ಹಿಂದುಳಿದ ಜಾತಿಗಳಿಗೆ ಸಾಮಾಜಿಕ ನ್ಯಾಯ ಸಿಗುವುದಿಲ್ಲವೆಂದು ಅಹಿಂದ ಜನ ಕಾಂಗ್ರೆಸ್ ಪ್ರಕ್ಷವನ್ನು ಬೆಂಬಲಿಸಿದ್ದಾರೆ. ಆದರೂ ಕಾಂಗ್ರೆಸ್ ತಾರತಮ್ಯ ಧೋರಣೆ ತೋರುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬೀದಿನಾಯಿಗಳ ದಾಳಿಗೆ ಯುವತಿ ಬಲಿ; ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವಂತೆ ಪ್ರತಿಭಟನೆ
“ಕಾಂಗ್ರೆಸ್ ಕೊಟ್ಟ ಮಾತಿನಂತೆ ಕಾಂತರಾಜ ವರದಿ ಬಹಿರಂಗಗೊಳಿಸಿ, ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು. ಹಿಂದುಳಿದ ಜಾತಿಗಳಿಗೆ, ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ಗೆ ಹಿಂದುಳಿದ ಜಾತಿಗಳ ಬೆಂಬಲ ತಪ್ಪುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಕೆ ಹನುಮಂತಪ್ಪ ಯಾದವ್, ವಿಜಯ ಭಾಸ್ಕರ್ ಇಟಗಿ, ಜಿ ಸುರೇಶ್, ಜಂಬಣ್ಣ ಯಾಕ್ಲಾಸಪುರ, ಉದಯ, ಈರಪ್ಪಗೌಡ, ಅಂಜಿನೇಯ ಯಾದವ್, ಸುರೇಖಾ ಇದ್ದರು.
