ದೇಶವನ್ನೇ ಬೆಚ್ಚಿಬೀಳಿಸಿದ ಭೀಕರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ನಡೆದು ನಿನ್ನೆ (ಡಿಸೆಂಬರ್ 16) 12 ವರ್ಷಗಳಾಗಿದೆ. ಈ ಪ್ರಕರಣ ನಡೆದು 12 ವರ್ಷಗಳು ಕಳೆದರೂ ದೇಶದಲ್ಲಿ ಇಂದಿಗೂ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ.
2012ರ ಡಿಸೆಂಬರ್ 16ರಂದು 23 ವರ್ಷದ ಯುವತಿಯ ಮೇಲೆ (ನಿರ್ಭಯಾ) ದಕ್ಷಿಣ ದೆಹಲಿಯಲ್ಲಿ ಚಲಿಸುವ ಬಸ್‌ನೊಳಗೆ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಯುವತಿ ಡಿಸೆಂಬರ್ 29ರಂದು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ನಿಧನರಾದರು.
ಇದನ್ನು ಓದಿದ್ದೀರಾ? ಗನ್ ತೋರಿಸಿ ಸಾಮೂಹಿಕ ಅತ್ಯಾಚಾರ; ಯುಪಿ ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್
ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆಗೈದ ಅಪರಾಧಿಗಳಾದ ಮುಖೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ (31) ಎಂಬ ನಾಲ್ವರು ಆರೋಪಿಗಳನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಇನ್ನು ರಾಮ್ ಸಿಂಗ್ ಎಂಬ ಆರೋಪಿ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೋರ್ವ ಆರೋಪಿ ಬಾಲಪರಾಧಿಯಾಗಿದ್ದು ಮೂರು ವರ್ಷ ಜೈಲು ಶಿಕ್ಷೆಯ ಬಳಿಕ 2015ರಲ್ಲಿ ಬಿಡುಗಡೆಗೊಂಡಿದ್ದಾನೆ.
ಘಟನೆ ನಡೆದು ಹನ್ನೆರಡು ವರ್ಷಗಳ ನಂತರ ಸೋಮವಾರ ನಿರ್ಭಯಾಳ ತಾಯಿ ಆಶಾದೇವಿ ಅವರು ‘ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ರಾಷ್ಟ್ರೀಯ ಸಮಾವೇಶ’ದಲ್ಲಿ ಭಾಗಿಯಾಗಿ ಭಾವನಾತ್ಮಕ ಭಾಷಣ ಮಾಡಿದರು.
ಇದನ್ನು ಓದಿದ್ದೀರಾ? ಸ್ವಾತಿಜಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಿ: ಕೇಜ್ರಿವಾಲ್‌ಗೆ ನಿರ್ಭಯಾ ತಾಯಿಯ ಮನವಿ
“12 ವರ್ಷಗಳ ನಂತರವೂ ಪರಿಸ್ಥಿತಿ ಬದಲಾಗಿಲ್ಲ ಎಂದು ನಾನು ಬಹಳ ನೋವಿನಿಂದ ಹೇಳುತ್ತೇನೆ. ದೇಶದ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ. ನನ್ನ ಮಗಳ ನ್ಯಾಯಕ್ಕಾಗಿ ನಾನು ಹೋರಾಡುವಾಗ ನನ್ನ ಮಗಳು ಇನ್ನೆಂದಿಗೂ ಹಿಂದಿರುಗುವುದಿಲ್ಲ ಎಂದು ನನಗೆ ತಿಳಿದಿತ್ತು. ಆದರೆ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಇಂತಹ ಘಟನೆ ಮತ್ತೆ ಮರುಕಳಿಸಬಾರದು ಎಂಬುದೊಂದೆ ನನ್ನ ಮನಸ್ಸಲ್ಲಿತ್ತು. ಅದಕ್ಕಾಗಿ ಹಲವು ಕಾರ್ಯಕ್ರಮದಲ್ಲಿ ಭಾಗಿಯಾದೆ. ಆದರೆ ಎಲ್ಲವೂ ನಿಷ್ಪ್ರಯೋಜಕ” ಎಂದಿದ್ದಾರೆ.
“ಇಂದಿಗೂ ಹಲವು ಅತ್ಯಾಚಾರ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರದು. ಅಪರಾಧಿಗಳು ಯಾರೆಂದು ಗುರುತಿಸುವುದೇ ಒಂದು ವರ್ಷ ತೆಗೆದುಕೊಳ್ಳುತ್ತದೆ” ಎಂದು ಹೇಳಿದರು. ಈ ಸಂದರ್ಭದಲ್ಲೇ ಕೋಲ್ಕತ್ತಾದಲ್ಲಿ ನಡೆದ ಆರ್‌ಜಿ ಕರ್ ಘಟನೆಯನ್ನು ಉಲ್ಲೇಖಿಸಿದ ಆಶಾದೇವಿ ಅವರು, ನಿಜವಾಗಿ ಏನಾಯಿತು ಎಂಬುದು ಇನ್ನೂ ಯಾರಿಗೂ ತಿಳಿದಿಲ್ಲ ಎಂದರು.
