ವಿವಾದಿತ ಒಂದು ದೇಶ- ಒಂದು ಚುನಾವಣೆ ಮಸೂದೆಯನ್ನು ಲೋಕಸಭೆಯಲ್ಲಿ ಇಂದು ಮಂಡಿಸಲು ಕೇಂದ್ರ ಸರ್ಕಾರವು ಸಜ್ಜಾಗಿದೆ. ಇದಕ್ಕೂ ಮುನ್ನ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಒಂದು ದೇಶ- ಒಂದು ಚುನಾವಣೆ ಮಸೂದೆ ವಿರುದ್ಧವಾಗಿ ಲೋಕಸಭೆಯಲ್ಲಿ ನಿಲುವಳಿ ಸೂಚನೆ ನೀಡಿದ್ದಾರೆ.
“ಈ ಮಸೂದೆಯು ರಾಜ್ಯ ಸ್ವಾಯತ್ತತೆಯನ್ನು ಕಳೆದುಕೊಳ್ಳುವ ಅಪಾಯವನ್ನುಂಟು ಮಾಡುತ್ತದೆ. ಸ್ಥಳೀಯ ಆಡಳಿತದ ಪ್ರಜಾಪ್ರಭುತ್ವವನ್ನು ಕುಗ್ಗಿಸುತ್ತದೆ. ಅಧಿಕಾರವನ್ನು ಕೇಂದ್ರಕ್ಕೆ ಸೀಮಿತಗೊಳಿಸುತ್ತದೆ” ಎಂದು ಕಾಂಗ್ರೆಸ್ ಸಂಸದ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ | ಒಂದು ದೇಶ- ಒಂದು ಚುನಾವಣೆ ಮಸೂದೆ ಮಂಡನೆ ಮುಂದೂಡಿಕೆ
“ಭಾರತದ ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ಬಹುತ್ವ ಮತ್ತು ವೈವಿಧ್ಯತೆ ಎಂಬುದನ್ನು ಈ ಮಸೂದೆಯು ದುರ್ಬಲಗೊಳಿಸುತ್ತದೆ. ರಾಜ್ಯಗಳ ವಿಶಿಷ್ಟ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂದರ್ಭಗಳನ್ನೂ ಈ ಕ್ರಮ ನಿರ್ಲಕ್ಷಿಸುತ್ತದೆ” ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಸೇರಿದಂತೆ ಹಲವು ವಿಪಕ್ಷ ನಾಯಕರುಗಳು ಒಂದು ದೇಶ- ಒಂದು ಚುನಾವಣೆ ಮಸೂದೆಯನ್ನು ಖಂಡಿಸಿದ್ದಾರೆ. ಇದು ದೇಶವನ್ನು ಸರ್ವಾಧಿಕಾರದತ್ತ ಒಯ್ಯುತ್ತದೆ ಎಂದು ವಿಪಕ್ಷಗಳು ಹೇಳಿದೆ.
ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆಯನ್ನು – ಸಂವಿಧಾನ (129 ನೇ ತಿದ್ದುಪಡಿ) ಮಸೂದೆ (ಒಂದು ದೇಶ- ಒಂದು ಚುನಾವಣೆ) ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲು ನಿಗದಿಪಡಿಸಲಾಗಿತ್ತು. ಆದರೆ ಮುಂದೂಡಲಾಗಿದ್ದು ಇಂದು ಮಂಡಿಸುವ ಸಾಧ್ಯತೆಯಿದೆ.
