ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ ಮುಗಿಸಿದ ಐವರು ಮಹಿಳೆಯರನ್ನು ಸ್ನಾತಕೋತ್ತರ ವ್ಯಾಸಂಗಕ್ಕಾಗಿ ಯು.ಕೆಗೆ ತೆರಳಲು ಚಿವೆಂನಿಂಗ್ ಕಾರ್ಯಕ್ರಮದಲ್ಲಿ ಸರ್ಕಾರವು ಉಚಿತವಾಗಿ ಸೌಲಭ್ಯ ಒದಗಿಸಿದೆ.
ಬೆಳಗಾವಿಯ ಸೌವರ್ಣಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸೌಲಭ್ಯ ಒದಗಿಸಲು ಬ್ರಿಟಿಷ್ ಕೌನ್ಸಿಲ್ ಜೊತೆಗೆ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಮ್ ಸಿ ಸುಧಾಕರ್, “ಕಠಿಣ ಅಭ್ಯಾಸದ ಮೂಲಕ ವಿದ್ಯಾರ್ಥಿನಿಯರು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಅವಕಾಶ ಪಡೆದಿದ್ದಾರೆ. 2025-2026ರಲ್ಲಿ ಮೊದಲ ತಂಡ ಯು.ಕೆಗೆ ತೆರಳಲಿದ್ದು, ಅಲ್ಲಿನ ಯಾವುದೇ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಸ್ನಾತಕೋತ್ತರ ಅಧ್ಯಯನ ನಡೆಸಬಹುದಾಗಿದೆ. ಇದಕ್ಕಾಗಿ 40 ಲಕ್ಷ ಖರ್ಚಾಗಲಿದ್ದು ಸರ್ಕಾರ ಹಾಗು ಬ್ರಿಟಿಷ್ ಕೌನ್ಸಿಲ್ ತಲಾ 20 ಲಕ್ಷ ರೂ. ಒದಗಿಸಲಿದೆ” ಎಂದು ತಿಳಿಸಿದ್ದಾರೆ.
“ಸದ್ಯ ಮೂರು ವರ್ಷಗಳಿಗೆ ಈ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ. ಈ ವರ್ಷ ಐದಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರನ್ನು ಕಳುಹಿಸುವ ಬಗ್ಗೆಯೂ ಮಾತುಕತೆ ನಡೆದಿದೆ. ಈ ಅವಕಾಶದಿಂದ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಹೆಚ್ಚು ಅಧ್ಯಯನ ಮಾಡುವ ಅವಕಾಶ ಸಿಗಲಿದೆ” ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಬ್ರಿಟಿಷ್ ಕೌನ್ಸಿಲ್‌ನ ಭಾರತೀಯ ಹೈಕಮಿಷನರ್ (ಕೆರಳ, ಕರ್ನಾಟಕ ವಿಭಾಗ) ಚಂದ್ರು ಅಯ್ಯರ್, ಕರ್ನಾಟಕ ವಿಭಾಗದ ಡೆಪ್ಯುಟಿ ಹೆಡ್ ಆಫ್ ಕಮಿಷನರ್ ಜೇಮ್ಸ ಗಾಡ್ಬರ್, ಹೆಡ್ ಆಫ್ ಚಿವನಿಂಗ್ ಸ್ಕಾಲರ್ ಷಿಪ್ ಸುಪ್ರಿಯಾ ಚಾವ್ಲ ಹಾಗೂ ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಅತೀಕ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಕರ್, ಕಾಲೇಜು ಹಾಗು ತಾಂತ್ರಿಕ ಇಲಾಖೆ ಆಯುಕ್ತೆ ಮಂಜುಶ್ರೀ ಹಾಜರಿದ್ದರು.