ಶಿಕ್ಷಕರ ಕೂಗಾಟ, ಚೀರಾಟ ಮನಬಂದಂತೆ ಕುಣಿದಿರುವ ದೃಶ್ಯ ಕಂಡು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ನಡೆದಿದೆ.
ಹರಪನಹಳ್ಳಿ ಪಟ್ಟಣದ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ನಡೆದ ಪ್ರಾಥಮಿಕ ಶಿಕ್ಷಕರ ಪತ್ತಿನ ಸಹಕಾರ ಸಂಘದ ಚುನಾವಣೆ ಫಲಿತಾಂಶದ ಹೆಸರಲ್ಲಿ ಶಿಕ್ಷಕರು ಗುಂಪುಗೂಡಿದ್ದು, ಯಾವುದೇ ಪರವಾನಗಿಯನ್ನು ಪಡೆಯದೆ ಡೋಲು ತಮಟೆಗಳನ್ನು ಬಳಸಿ ಪಟಾಕಿ ಸಿಡಿಸಿ ಅರಾಜಕತೆ ಮೆರವಣಿಗೆ ಮಾಡಿದ್ದಾರೆ. ಶಿಷ್ಟಾಚಾರವನ್ನು ಮರೆತು ಕೂಗುತ್ತ, ಚೀರುತ್ತ ಮನಬಂದಂತೆ ಕುಣಿದು ಕುಪ್ಪಳಿಸಿರುವ ವರ್ತನೆಗೆ ಸಾರ್ವಜನಿಕರು, ಪಟ್ಟಣದ ನಾಗರಿಕರು ಶಿಕ್ಷಕರನ್ನು ನೋಡಿ ತಲೆಬಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಲ್ಲದೇ ಆಕ್ರೋಶ ವ್ಯಕ್ತವಾಗಿರುವುದು ಕಂಡುಬಂದಿತು.
ಈ ಘಟನೆಯು ಶನಿವಾರ ರಾತ್ರಿ 9:30ರ ಸುಮಾರಿಗೆ ಚುನಾಯಿತ ಶಿಕ್ಷಕರು ಮತ್ತು ಬೆಂಬಲಿತ ಶಿಕ್ಷಕರು ಭಾರೀ ಮೆರವಣಿಗೆಯನ್ನು ಮಾಡಿದ್ದರು. ಸಮಾಜದಲ್ಲಿ ಮಕ್ಕಳಿಗೆ ಉತ್ತಮ ಪಾಠ ಬೋಧನೆ ಮಾಡಿ ಉತ್ತಮ ಸಮಾಜ ಕಟ್ಟಿ, ಸಮಾಜವನ್ನು ಉತ್ತಮದ ಕಡೆಗೆ ನಡೆಸಬೇಕಾದಂಥ ಶಿಕ್ಷಕರೇ ಹೀಗೆ ನೈತಿಕ ಶಿಷ್ಟಾಚಾರವನ್ನು ಉಲ್ಲಂಘಿಸಿ ಮನಬಂದಂತೆ ಕುಣಿಯುತ್ತ ಕೂಗುತ್ತ ಪಟ್ಟಣದ ಪ್ರಮುಖ ಬೀದಿಗಳ ಉದ್ದಕ್ಕೂ ಮೆರವಣಿಗೆ ಮಾಡಿದ್ದು ತೀರಾ ಮುಜುಗರದ ಸಂಗತಿಯಾಗಿದೆ. ಶಿಕ್ಷಕರ ವರ್ತನೆ ಇವತ್ತಿನ ರಾಜಕೀಯ ನಾಯಕರ ವರ್ತನೆಗೂ ಕೆಟ್ಟದಾಗಿದೆ ಎಂದು ಸಾರ್ವಜನಿಕರು ಛೀಮಾರಿ ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ವಿಪ್ ಉಲ್ಲಂಘನೆ; ಮಟಮಪ್ಪ, ವೀಣಾ ರಾಮು ಜೆಡಿಎಸ್‌ನಿಂದ ಉಚ್ಚಾಟನೆ
ಪೊಲೀಸ್ ಇಲಾಖೆಯ ಯಾವುದೇ ಪೂರ್ವ ಅನುಮತಿಯಿಲ್ಲದೆ ಈ ರೀತಿ ಮೆರವಣಿಗೆ ಮಾಡಿರುವುದು ಕಾನೂನನ್ನು ಉಲ್ಲಂಘಿಸಿದಂತೆ ಹಾಗೂ ಇವರ ಮರೆವಣಿಗೆಯಿಂದ ವಾಹನ ಸವಾರರಿಗೂ ಸಾಕಷ್ಟು ಕಿರಿಕಿರಿ ಉಂಟಾಗಿ ಅರ್ಧಗಂಟೆಗೂ ಹೆಚ್ಚುಕಾಲ ವಾಹನಗಳು ರಸ್ತೆಯಲ್ಲೇ ನಿಂತಿದ್ದರೂ ಕೂಡಾ ಪೊಲೀಸರು ಮಾತ್ರ ಇತ್ತಕಡೆ ತಿರುಗಿಯೂ ನೋಡಿಲ್ಲ. ಆದುದರಿಂದ ಸಂಬಂಧಪಟ್ಟ ವಿಜಯನಗರ ಜಿಲ್ಲಾಧಿಕಾರಿ, ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಿಕ್ಷಣ ಇಲಾಖೆಯ ಆಯುಕ್ತರು, ಇತ್ತ ಕಡೆ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮೌಖಿಕವಾಗಿ ಆಗ್ರಹಿಸಿದ್ದಾರೆ.