ಖಾಸಗಿ ಕಂಪನಿಯೊಂದು ಕಳಪೆ ಬಿತ್ತನೆಬೀಜ ಪೂರೈಕೆ ಮಾಡಿದ್ದು, ಈ ಬಿತ್ತನೆಬೀಜವನ್ನು ಬಿತ್ತಿದ ಬಳಿಕ ಬೆಳೆದು ಹೂವು ಕಾಯಿ ಬಿಡದೆ, ಬರೀ ಗಿಡ ಬೆಳೆದು ನಿಂತಿರುವುದನ್ನು ಕಂಡು ರೈತರು ಆತಂಕಕ್ಕೆ ಈಡಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಉತ್ತಮ ಬಿತ್ತನೆ ಬೀಜಗಳನ್ನು ರೈತರು ಅಂಗಡಿಯಿಂದ ಖರೀದಿಸಿ ತಂದು ಉಳುಮೆ ಮಾಡಿದ ನಂತರ ಸಾಮಾನ್ಯವಾಗಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿರುತ್ತಾರೆ. ಆದರೆ ರೈತರೊಬ್ಬರು ಬಿತ್ತನೆ ಮಾಡಿದ ಫಸಲಿನ ಸೂಚನೆಯಿಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ.

“ಖಾಸಗಿ ಕಂಪನಿಯೊಂದರ ತೊಗರಿ ಬಿತ್ತನೆಬೀಜವನ್ನು ದಾವಣಗೆರೆಯ ಅಂಗಡಿಯೊಂದರಿಂದ ಖರೀದಿಸಿ ತಂದು ತಮ್ಮ 12 ಎಕರೆ ಜಮೀನಿಗೆ ಬಿತ್ತನೆ ಮಾಡಲಾಗಿತ್ತು. ಆದರೆ ಬರೀ ಗಿಡ ಮಾತ್ರ ಬೆಳೆದು ನಿಂತಿದ್ದು, ಗಿಡದಲ್ಲಿ ಯಾವುದೇ ಹೂವು ಕಾಯಿ ಬಿಟ್ಟಿಲ್ಲ” ಎಂದು ಚಳ್ಳಕೆರೆ ತಾಲೂಕಿನ ಗಜ್ಜುಗಾನಹಳ್ಳಿ ಗ್ರಾಮದ ರೈತ ಡಿ ಟಿ ತಿಪ್ಪೇಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಯುವರೈತ ಜಿ ಬಿ ತಿಪ್ಪೇಸ್ವಾಮಿ ಮಾತನಾಡಿ “ನಮ್ಮ ಗಜ್ಜುಗಾನಹಳ್ಳಿ ಗ್ರಾಮದ ಹಲವು ರೈತರು ದಾವಣಗೆರೆ ಮೇ ಆಗ್ರೋ ಸೀಡ್ಸ್ ಕಾರ್ಪೊರೇಷನ್ ಅವರಿಂದ ಖಾಸಗಿ ಕಂಪೆನಿ ಸೀಡ್ಸ್ ತೊಗರಿ ಬಿತ್ತನೆಬೀಜವನ್ನು ತಂದು ಬಿತ್ತನೆ ಮಾಡಿದ್ದಾರೆ. ತೊಗರಿ ಗಿಡ ಹೂವು, ಕಾಯಿ ಬಿಟ್ಟಿಲ್ಲ. ಕಂಪನಿಯವರನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಶೀತದ ವಾತಾವರಣಕ್ಕೆ ಹಾಗಾಗಿದೆಯೆಂದು ಹೇಳುತ್ತಾರೆ” ಎಂದು ಅಳಲು ತೋಡಿಕೊಂಡರು.
ಈ ಸುದ್ದಿ ಓದಿದ್ದೀರಾ? ಮಣ್ಣುಗಣಿಗಾರಿಕೆಯಿಂದ ರಿಪಬ್ಲಿಕ್ ಬಳ್ಳಾರಿಯಂತಾಗುತ್ತಿಯೇ ಹರಿಹರ?; ಮಂಜುನಾಥ ಕುಂದುವಾಡ ಅನುಮಾನ
“ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಜಮೀನಿಗೆ ಭೇಟಿ ನೀಡಿ ಬೆಳೆಯನ್ನು ವೀಕ್ಷಣೆ ಮಾಡಬೇಕು. ಅಂಗಡಿ ಮಾಲೀಕನ ಲೈಸೆನ್ಸ್ ರದ್ದುಮಾಡಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ರೈತರಿಗೆ ಪರಿಹಾರ ನೀಡಬೇಕು. ಕೃಷಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ನ್ಯಾಯ ದೊರಕಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಗತಿಪರ ರೈತ ವಿಜಯಕುಮಾರ್, ಡಿ ಎಸ್ ಮನೋಹರ್, ರೈತ ತಿಪ್ಪೇಸ್ವಾಮಿ ಸೇರಿದಂತೆ ಇತರ ರೈತರು ಇದ್ದರು.