ಗೌರವಧನವನ್ನೇ ನಂಬಿ ಜೀವನ ನಡೆಸುವ ಅತಿಥಿ ಉಪನ್ಯಾಸರಿಗೆ ಗೌರವಧನ ನೀಡುವಲ್ಲಿ ಎಸಗುತ್ತಿರುವ ತಾರತಮ್ಯ ಕೂಡಲೇ ನಿಲ್ಲಿಸಬೇಕು. ತಿಂಗಳಿಗೆ ಸರಿಯಾಗಿ ಗೌರವಧನ ನೀಡಲು ಮೀನಾಮೇಷ ಎಣಿಸುವ ಕಾಲೇಜು ಶಿಕ್ಷಣ ಇಲಾಖೆ, 15 ದಿನಗಳ ಗೌರವಧನ ಭಾಗ್ಯ ನೀಡಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಅರಿಕೆರೆ ಮುನಿರಾಜು ಟೀಕಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದಿಂದ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರ ಬಗ್ಗೆ ಮಾನವೀಯ ಅಂತಃಕರಣವುಳ್ಳ ಅಧಿಕಾರಿ ಮತ್ತು ಸಿಬ್ಬಂದಿಯ ಕೊರತೆಯಿದೆ ಎಂಬ ಅನುಮಾನವಿದೆ. ಏಕೆಂದರೆ ಪ್ರತಿವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ನಡೆಯುವಾಗಲೆಲ್ಲಾ ಅನಗತ್ಯವಾಗಿ ಹೊಸ ಹೊಸ ನಿಯಮಾವಳಿ ತಂದು ನೊಂದಿರುವ ನಮಗೆ ಅನಗತ್ಯ ಆಘಾತವನ್ನುಂಟು ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸಿ ಒಮ್ಮೆ ನೇಮಕಾತಿ ಹೊಂದಿದವರನ್ನು ನಿವೃತ್ತಿ ಆಗುವವರೆಗೆ ಮುಂದುವರೆಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ನೇಮಕಾತಿಗೆ ಮಾತ್ರ ಯುಜಿಸಿ ನಿಯಮಾವಳಿ ಅನ್ವಯಿಸುವ ಸರ್ಕಾರ ಮತ್ತು ಇಲಾಖೆ, ಗೌರವ ಧನ ನೀಡುವಲ್ಲಿ ಕೂಡ ಯುಜಿಸಿ ನಿಯಮಾವಳಿಯಂತೆ ನಡೆದುಕೊಳ್ಳಬೇಕಲ್ಲ?. ಯುಜಿಸಿ ಪ್ರಾಧ್ಯಾಪಕರಿಗೆ ತಿಂಗಳ ಮೊದಲಲ್ಲೇ ವೇತನ ಬಿಡುಗಡೆ ಮಾಡಲು ಮಾತ್ರ ಇಲಾಖೆ ಬಳಿ ಅನುದಾನ ಇರುತ್ತದೆ. ಆದರೆ ಆತಿಥಿ ಉಪನ್ಯಾಸಕರಿಗೆ ಗೌರವ ಧನ ನೀಡುವಾಗ ಇರುವುದಿಲ್ಲವೆ? ಈ ರೀತಿಯ ವೇತನ ತಾರತಮ್ಯ ಮಾಡುತ್ತಿರುವುದೇಕೆ..? ಎಂದು ಗುಡುಗಿದರು.
ಸಂಘದ ಗೌರವಾಧ್ಯಕ್ಷ ಸದಾಶಿವ ಮಾತನಾಡಿ, 2024ರ ಜನವರಿಯಲ್ಲಿ ನಡೆದ ಮುಷ್ಕರದ ಸಂದರ್ಭದಲ್ಲಿ ಸರ್ಕಾರ ವಾಗ್ದಾನ ನೀಡಿದಂತೆ ನಿವೃತ್ತಿ ಆಗುವ ಅತಿಥಿ ಉಪನ್ಯಾಸಕರಿಗೆ 5 ಲಕ್ಷ ಇಡುಗಂಟನ್ನು ಈವರೆಗೂ ಕೊಟ್ಟಿಲ್ಲ. ಈ ಕೂಡಲೇ ನಿವೃತ್ತರಾದವರ ಪಟ್ಟಿ ತಯಾರಿಸಿ ಇಡುಗಂಟನ್ನು ಕೂಡಲೇ ಬಿಡುಗಡೆ ಮಾಡಬೇಕು. ಅತಿಥಿ ಉಪನ್ಯಾಸಕರಿಗೆ ವಾರ್ಷಿಕ ಐದು ಲಕ್ಷ ಆರೋಗ್ಯ ವಿಮೆ ನೀಡುವುದಾಗಿ ಹೇಳಿತ್ತು. ಅದೂ ಕೂಡ ಒಂದು ವರ್ಷವಾದರೂ ಜಾರಿಯಾಗಿಲ್ಲ. ಮಹಿಳಾ ಅಥಿತಿ ಉಪನ್ಯಾಸರಿಗೆ ಹೆರಿಗೆ ಸಂದರ್ಭದಲ್ಲಿ ಮೂರು ತಿಂಗಳ ವೇತನ ಸಹಿತ ರಜೆ ನೀಡುವ ವಿಚಾರದಲ್ಲಿ ಕೂಡ ಇದುವರೆಗೂ ಸ್ಪಷ್ಟ ಅದೇಶ ಆಗಿಲ್ಲಾ. ಯುಜಿಸಿ ಉಪನ್ಯಾಸಕರಿಗೆ ಸಮಾನವಾಗಿ ಕೆಲಸ ಪಡೆಯುವ ಕಾಲೇಜು ಶಿಕ್ಷಣ ಇಲಾಖೆ, ಸಮಾಜ ಕೆಲಸಕ್ಕೆ ಸಮಾನ ವೇತನ ನೀಡುವುದನ್ನೇ ಮರೆತಿದೆ ಎಂದು ಕಿಡಿಕಾರಿದರು.
ಬದಲಿಗೆ ವೇತನ ಹೆಚ್ಚುವರಿ ಎಂಬ ತುಪ್ಪವನ್ನು ಮೂಗಿಗೆ ಸವರಿ ನಮ್ಮ ನಮ್ಮಲ್ಲೇ ಅರ್ಹರು, ಅನರ್ಹರು ಎಂಬ ಬೇಧಭಾವ ಮಾಡಿ ಅನಾರೋಗ್ಯಕರ ಸ್ಪರ್ಧೆಗೆ ಅವಕಾಶ ನೀಡಿ, ಪರಸ್ಪರ ಕಚ್ಚಾಡುವಂತೆ ಮಾಡಿದೆ. 20-25 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರಿಗೆ ಹೊಸದಾಗಿ ಯುಜಿಸಿ ನಿಯಮಾವಳಿ ಅನ್ವಯಿಸಲು ಹೊರಟಿರುವುದು ಸರ್ವಥಾ ಸರಿಯಲ್ಲಾ. ಈ ನಡೆಯನ್ನು ಕೂಡಲೇ ಕೈಬಿಟ್ಟು ಒಟ್ಟು ಅತಿಥಿ ಉಪನ್ಯಾಸಕರ ಹಿತಕಾಯಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಕನಿಷ್ಠ ಕೂಲಿಗಾಗಿ ಅಂಗನವಾಡಿ ನೌಕರರ ಅಹೋರಾತ್ರಿ ಧರಣಿ
ಹಿರಿಯ ಅತಿಥಿ ಉಪನ್ಯಾಸಕ ಮಂಜುನಾಥ್ ಮಾತನಾಡಿ, 24 ವರ್ಷಗಳಿಂದ ಅತಿಥಿ ಉಪನ್ಯಾಸಕನಾಗಿಯೇ ದುಡಿದಿರುವ ನಾನು ಇಲಾಖೆಯ ಅವೈಜ್ಞಾನಿಕ ತೀರ್ಮಾನ, ಅಮಾನವೀಯ ನಡೆ, ಮತ್ತು ಅಭದ್ರತೆಯೆಂಬ ಬಳುವಳಿಯ ಕಾರಣ 52 ವರ್ಷ ವಯಸ್ಸಾದರೂ ಮಧುವೆ ಆಗಿಲ್ಲ. ನನಗೆ ಬರುವ ಅಲ್ಪ ಗೌರವಧನದಲ್ಲಿ ನನ್ನನ್ನು ಸಾಕಿಕೊಳ್ಳುವುದೇ ಕಷ್ಟವಾಗಿರುವಾಗ, ಬಾಳಸಂಗಾತಿಗೆ ಹೊಸಬಾಳ ಹೇಗೆ ಕೊಡಲಿ ಹೇಳಿ?. ನಾನು ಅಂಗವಿಕಲ ಆಗಿದ್ದರೂ ಪ್ರತಿ ಬಾರಿ ನೇಮಕಾತಿಯಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್‌ನಲ್ಲಿದ್ದೇನೆ. ಆದರೂ ನನಗೆ ಪೂರ್ಣ ಕಾರ್ಯಭಾರವಿಲ್ಲದೆ ಕೇವಲ 7 ಗಂಟೆಗೆ ದುಡಿಯುತ್ತಿದ್ದೇನೆ. 10-12 ಸಾವಿರ ಪಡೆದು ಬದುಕುವುದಾದರೂ ಹೇಗೆ? ಎಂಬುದನ್ನು ಇಲಾಖೆ ಅರ್ಥ ಮಾಡಿಕೊಳ್ಳಬೇಕು. ಭಾಗ್ಯಗಳ ಸರದಾರ ಸಿದ್ದರಾಮಣ್ಣ ಅತಿಥಿ ಉಪನ್ಯಾಸಕರಿಗೆ ಸೇವೆ ಖಾಯಂ ಭಾಗ್ಯ ನೀಡಲಿ, ತಿಂಗಳ ಮೊದಲಲ್ಲೇ ಗೌರವಧನ ಬಿಡುಗಡೆ ಮಾಡಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಮಣ, ಜಿಲ್ಲಾ ಪದಾಧಿಕಾರಿಗಳಾದ ರಾಘವೇಂದ್ರ, ಸತ್ಯನಾರಾಯಣ, ವೆಂಕಟೇಶ್, ಗಂಗಾಧರಪ್ಪ ಇದ್ದರು.