ಅಂಗನವಾಡಿ ಕಾರ್ಯಕರ್ತರನ್ನು ಹಾಗೂ ಸಹಾಯಕಿಯರನ್ನು ಕಾಯಂಗೊಳಿಸಬೇಕು. ಅಂಗನವಾಡಿ ಕಟ್ಟಡಗಳ ಬಾಕಿಯಿರುವ ಬಾಡಿಗೆ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಅಹೋರಾತ್ರಿ ಧರಣಿ ಆರಂಭಿಸಿದರು.
ರಾಜ್ಯ ಸಿಐಟಿಯು ಘಟಕದಿಂದ ಬೆಳಗಾವಿ ಸುವರ್ಣಸೌಧದ ಬಳಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಎರಡು ದಿನಗಳ ಹೋರಾಟಕ್ಕೆ ಬೆಂಬಲಿಸಿ ನೂರಾರು ಕಾರ್ಯಕರ್ತರು ಅಹೋರಾತ್ರಿ ಧರಣಿ ಮುಂದುವರಿದಿದೆ.
ಸಿಐಟಿಯು ಅಧ್ಯಕ್ಷೆ ಗೌರಮ್ಮ ಪಾಟೀಲ್ ಮಾತನಾಡಿ,ʼ ಗುಜರಾತ್ ಹೈಕೊರ್ಟ್ ತೀರ್ಪಿನಂತೆ ಕಾರ್ಯಕರ್ತೆ, ಸಹಾಯಕಿಯರನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ಖಾಯಂಗೊಳಿಸಬೇಕು. 2018ರಿಂದ ಕೇಂದ್ರ ಸರಕಾರ ಯಾವುದೇ ಗೌರವಧನ ಹೆಚ್ಚಳ ಮಾಡದೇ ಇರುವುದರಿಂದ ಕೂಡಲೇ ₹26 ಸಾವಿರ ಗೌರವಧನ ಹೆಚ್ಚಿಸಬೇಕು. 2023ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಘೋಷಿಸಿದಂತೆ ₹15 ಸಾವಿರ ಗೌರವಧನ ಹೆಚ್ಚಿಸಬೇಕುʼ ಎಂದು ಆಗ್ರಹಿಸಿದರು.
ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ 50 ವರ್ಷಗಳು ಸಮೀಪಿಸುತ್ತಿದೆ. ಅಂಗನವಾಡಿಗಳಲ್ಲಿ ಪೂರಕ ಪೌಷ್ಠಿಕ ಆಹಾರದ ಬದಲು ಸಂಪೂರ್ಣ ಆಹಾರ ನೀಡಬೇಕು. ಗ್ರಾಜ್ಯುಟಿ ಅನುದಾನದ ಬಿಡುಗಡೆ, ಅನುದಾನ ಹೆಚ್ಚಿಸಬೇಕು. ನಿವೃತ್ತಿಯಾದವರಿಗೆ ಇಡಿಗಂಟು ₹10 ಸಾವಿರ ಮಾಸಿಕ ಪಿಂಚಣಿ, ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಎಲ್‌ಕೆಜಿ ಯುಕೆಜಿ ಪ್ರಾರಂಭಿಸಬೇಕು. ಸಾಮೂಹಿಕ ಆರೋಗ್ಯ ವಿಮೆಯನ್ನು ಕೂಡಲೇ ಜಾರಿಗೊಳಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಖಾಲಿ ಹುದ್ದೆಗಳಿಗೆ 3 ತಿಂಗಳೊಳಗೆ ನೇಮಕಾತಿ ಮಾಡುವುದು ಸೇರಿದಂತೆ 20 ಬೇಡಿಕೆ ಈಡೇರಿಕೆಗೆ ಪ್ರತಿಭಟನಾ ನಿರತ ಕಾರ್ಯಕರ್ತರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ, ಬೀದರ್, ವಿಜಯಪುರ ಜಿಲ್ಲೆಗಳಲ್ಲಿ ಶೀತ ಅಲೆ ಮುಂದುವರಿಕೆ ಸಾಧ್ಯತೆ
ಪ್ರತಿಭಟನೆಯಲ್ಲಿ ಸಿಐಟಿಯು ಪ್ರಮುಖರಾದ ಶಾಂತಾ ಘಂಟೆ, ಗೌರಮ್ಮ ಪಾಟೀಲ್, ರಾಜಮತಿ, ಮಹದೇವಮ್ಮ, ಕೆ.ನೀಲಾ, ಶರಣಬಸಪ್ಪ ಮಮಶೆಟ್ಟಿ, ಶ್ರೀಮಂತ ಬಿರಾದಾರ, ಎಂ.ಬಿ.ಸಜ್ಜನ್, ಕಾಶಿನಾಥ ಬಂಡಿ, ಭೀಮಶೇಟ್ಟಿ ಯಂಪಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನ ನೂರಾರು ಅಂಗನವಾಡಿ ಕಾರ್ಯಕರ್ತರು ಪಾಲ್ಗೊಂಡಿದ್ದರು.