ಸಾಗರ ಕ್ಷೇತ್ರ | ಎರಡು ಬಾರಿ ಬಿಜೆಪಿಯಿಂದ ಗೆದ್ದಿದ್ದ ಗೋಪಾಲಕೃಷ್ಣ ಬೇಳೂರು ಈಗ ಕಾಂಗ್ರೆಸ್‌ ಅಭ್ಯರ್ಥಿ

Date:

Advertisements
  • ಕಾಗೋಡು ಪುತ್ರಿ ಡಾ. ರಾಜನಂದಿನಿಗೆ ಕೈ ತಪ್ಪಿದ ಟಿಕೆಟ್
  • ಸಾಗರ ಕ್ಷೇತ್ರಕ್ಕೆ ಬಿಜೆಪಿಯಿಂದ ಪ್ರಕಟವಾಗದ ಟಿಕೆಟ್

2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದ್ದು, ಈ ಪೈಕಿ ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿದೆ.

ಸೊರಬ ವಿಧಾನಸಭಾ ಕ್ಷೇತ್ರದಿಂದ ನಿರೀಕ್ಷೆಯಂತೆ ಮಧು ಬಂಗಾರಪ್ಪ ಕಣಕ್ಕೆ ಇಳಿಯುತ್ತಿದ್ದಾರೆ. ಭದ್ರಾವತಿ ಕ್ಷೇತ್ರದಿಂದ ಬಿ ಕೆ ಸಂಗಮೇಶ್ವರ್ ಅಭ್ಯರ್ಥಿಯಾಗಿದ್ದಾರೆ. ಆದರೆ, ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣಗೆ ಟಿಕೆಟ್ ಮಿಸ್ ಆಗುತ್ತಾ? ಕಾಗೋಡು ಪುತ್ರಿಗೆ ಟಿಕೆಟ್ ಸಿಗುತ್ತಾ? ಅಥವಾ ಮೂಲ ಕಾಂಗ್ರೆಸ್ಸಿಗರು ಬಂಡಾಯ ಏಳುತ್ತಾರಾ ಎಂಬ ಗೊಂದಲಗಳಿದ್ದವು. ಈಗ ಆ ಗೊಂದಲಗಳಿಗೆ ತೆರೆ ಎಳೆದ ಪಕ್ಷ, ಸಾಗರ ಕ್ಷೇತ್ರಕ್ಕೆ ಗೋಪಾಲಕೃಷ್ಣ ಬೇಳೂರು ಅವರಿಗೆ ಟಿಕೆಟ್‌ ನೀಡಿದೆ. ಆ ಮೂಲಕ ಈ ಬಾರಿ ಕಾಂಗ್ರೆಸ್‌ ಇಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಿದೆ.

ಬಿಜೆಪಿಯಿಂದ 2004 ಮತ್ತು 2008ರಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಗೋಪಾಲಕೃಷ್ಣ ಬೇಳೂರು ಬಿ ಎಸ್‌ ಯಡಿಯೂರಪ್ಪ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಆದರೆ, ಕಳೆದ ಚುನಾವಣೆಯಲ್ಲಿ ಸಾಗರದಿಂದ ಹರತಾಳು ಹಾಲಪ್ಪ ಟಿಕೆಟ್‌ ಪಡೆದು, ಕಾಗೋಡು ವಿರುದ್ಧ ಗೆದ್ದು ಬಂದರು. ಟಿಕೆಟ್‌ ತಪ್ಪಿದ್ದರಿಂದ ಮುನಿಸಿಕೊಂಡು ಗೋಪಾಲಕೃಷ್ಣ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು.

Advertisements

ಕಾಂಗ್ರೆಸ್ಸಿನ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಕೂಡ ಸಾಗರ ಕ್ಷೇತ್ರಕ್ಕೆ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಎಸ್‌ ಬಂಗಾರಪ್ಪ ಅವರ ಅಪ್ಪಟ ಶಿಷ್ಯ ಎಂದೇ ಗುರುತಿಸಿಕೊಂಡಿರುವ ಗೋಪಾಲಕೃಷ್ಣ ಬೇಳೂರು ಅವರಿಗೆ ಕಾಂಗ್ರೆಸ್‌ ಅಳೆದು ತೂಗಿ ಅಂತಿಮ ಮುದ್ರೆ ಒತ್ತಿದೆ.

ಬಿಜೆಪಿಯಲ್ಲಿ ಭಿನ್ನಮತ

ಬಿಜೆಪಿಯಲ್ಲಿ ಭಿನ್ನಮತ ತಾರಕಕ್ಕೇರಿದೆ. ಅದರಲ್ಲೂ ಹಾಲಿ ಶಾಸಕ ಹರತಾಳು ಹಾಲಪ್ಪ ವಿರುದ್ಧವೇ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಮುಖಂಡರು ತಿರುಗಿ ಬಿದ್ದಿದ್ದಾರೆ. ಹೀಗಾಗಿ ಸಾಗರದಲ್ಲಿ ಈ ಬಾರಿಯೂ ತಾವೇ ಸ್ಪರ್ಧಿಸಬೇಕು ಎಂಬ ಉಮೇದಿನಲ್ಲಿದ್ದ ಹಾಲಪ್ಪ ಅವರಿಗೆ ಹೊಸ ಬೆಳವಣಿಗೆ ತಲೆನೋವಾಗಿ ಪರಿಣಮಿಸಿದೆ.

ಒಂದು ವೇಳೆ ಹಾಲಪ್ಪ ಅವರಿಗೆ ಟಿಕೆಟ್‌ ತಪ್ಪಿದ್ದೇ ಆದಲ್ಲಿ ಬಿಜೆಪಿಯಿಂದ ಸಾಗರದ ಅಭ್ಯರ್ಥಿಯಾಗಿ 1991 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಕೆ ಜಿ ಶಿವಪ್ಪ ಅವರ ಪುತ್ರ ಕೆ ಎಸ್‌ ಪ್ರಶಾಂತ್‌ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಪ್ರಶಾಂತ್‌ ಬಿಜೆಪಿಯ ಯೂತ್‌ ಐಕಾನ್‌ ಆಗಿ ಗುರುತಿಸಿಕೊಂಡಿದ್ದಾರೆ. ಪಕ್ಷದಲ್ಲಿ ಸಕ್ರಿಯರಾಗಿರುವ ಜೊತೆಗೆ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡು ಅವರು ನೀಡುವ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ.

ಈಡಿಗ ಸಮುದಾಯ ಪ್ರಾಬಲ್ಯ ಹೊಂದಿರುವ ಸಾಗರ ಕ್ಷೇತ್ರದಲ್ಲಿ ಈಡಿಗರ ಮತ ಸೆಳೆಯಲು ಪ್ರಶಾಂತ್‌ ಸೂಕ್ತ ವ್ಯಕ್ತಿ. ಈಡಿಗರ ಜೊತೆಗೆ ಬ್ರಾಹ್ಮಣ ಹಾಗೂ ಲಿಂಗಾಯತ ಮತಗಳನ್ನೂ ಪ್ರಶಾಂತ್‌ ಸೆಳೆಯುವ ಹಿನ್ನೆಲೆಯಲ್ಲಿ ಪ್ರಶಾಂತ್‌ಗೆ ಟಿಕೆಟ್‌ ನೀಡಿದಲ್ಲಿ ಬಿಜೆಪಿ ಸುಲಭವಾಗಿ ಗೆಲ್ಲಲಿದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

ಕ್ಷೇತ್ರದ ಹಿನ್ನೆಲೆ

1957ರಿಂದಲೂ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಸಾಗರ ಕ್ಷೇತ್ರದಿಂದ 1972ರಲ್ಲಿ ಮೊದಲ ಬಾರಿ ಕಾಗೋಡು ತಿಮ್ಮಪ್ಪ ಅವರು ಸಂಯುಕ್ತ ಸೋಷಿಯಲಿಸ್ಟ್​ ಪಾರ್ಟಿಯಿಂದ ಕಣಕ್ಕಿಳಿದು ಗೆಲುವು ಕಂಡಿದ್ದರು. ಇದಾದ ಬಳಿಕ 1978 ಹಾಗೂ 1983ರಲ್ಲಿ ಕಾಂಗ್ರೆಸ್​ ಪಕ್ಷದ ಎಲ್​ ಟಿ ತಿಮ್ಮಪ್ಪ ಹೆಗಡೆ ಅವರು ಜಯ ಗಳಿಸಿದ್ದರು. ತದನಂತರ 1985ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್​ ಹಿಡಿತದಿಂದ ತಪ್ಪಿಸಿಕೊಂಡಿದ್ದ ಸಾಗರ ಕ್ಷೇತ್ರದಲ್ಲಿ ಜನತಾ ಪಾರ್ಟಿಯ ಬಿ. ಧರ್ಮಪ್ಪ ಗೆಲುವಿನ ನಗೆ ಬೀರಿದ್ದರು. ಆದರೆ, ಇದಾದ ಬೆನ್ನಲ್ಲೇ ಬದಲಾದ ರಾಜಕೀಯ ಬೆಳವಣಿಗೆಯಿಂದ ಕಾಗೋಡು ತಿಮ್ಮಪ್ಪ ಅವರು ಕಾಂಗ್ರೆಸ್​ಗೆ ಸೇರ್ಪಡೆಗೊಂಡರು. ಅಲ್ಲದೇ 1989, 94 ಹಾಗೂ 99ರ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಕಣಕ್ಕಿಳಿದು, ಈ ಮೂರೂ ಅವಧಿಯಲ್ಲೂ ತಮ್ಮ ಎದುರಾಳಿಗೆ ಸೋಲುಣಿಸಿ ಗೆದ್ದು ಬೀಗಿದರು.

ಆದರೆ, 2004 ಚುನಾವಣೆಯಲ್ಲೂ ಗೆಲ್ಲುವ ವಿಶ್ವಾಸದಲ್ಲಿ ಮತ್ತೆ ಕಾಂಗ್ರೆಸ್​ ಪಕ್ಷದಿಂದ ಕಣಕ್ಕಿಳಿದ ಕಾಗೋಡು ತಿಮ್ಮಪ್ಪರವರಿಗೆ ಭಾರೀ ನಿರಾಸೆಯಾಯ್ತು. ಈ ಕ್ಷೇತ್ರದಿಂದ ಅವರ ಪ್ರತಿಸ್ಪರ್ಧಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಗೋಪಾಲಕೃಷ್ಣ ಬೇಳೂರು ಗೆದ್ದು ಬೀಗಿದ್ದರು. 2008ರ ಚುನಾವಣೆಯಲ್ಲಿ ಬಿಎಸ್​ವೈ ಕೃಪಾಕಟಾಕ್ಷದಿಂದ ಮತ್ತೆ ಕಣಕ್ಕಿಳಿದ ಗೋಪಾಲಕೃಷ್ಣ ಬೇಳೂರು, ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಕಾಗೋಡು ವಿರುದ್ಧ ಗೆಲುವು ಸಾಧಿಸಿದರು.

2013ರ ಚುನಾವಣೆ ವೇಳೆಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬಿಜೆಪಿಯಿಂದ ದೂರವಾಗಿ ತಮ್ಮದೇ ಆದ ಕೆಜೆಪಿ ಪಕ್ಷ ಕಟ್ಟಿದ್ದರು. ಹೀಗಾಗಿ ಆ ಚುನಾವಣೆಯಲ್ಲಿ ಕೆಜೆಪಿಯಿಂದ ಬಿ ಆರ್ ಜಯಂತ್, ಜೆಡಿಎಸ್ ಹುರಿಯಾಳಾಗಿದ್ದ ಗೋಪಾಲಕೃಷ್ಣ ಬೇಳೂರು ಮತ್ತು ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪರ ಮಧ್ಯೆ ತ್ರಿಕೋನ ಕದನ ಏರ್ಪಟ್ಟಿತ್ತು. ಆದರೆ ಈ ಚುಣಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಸಮೀಪ ಪ್ರತಿಸ್ಪರ್ಧಿ ಕೆಜೆಪಿಯ ಜಯಂತ್‌ರನ್ನು 41,248 ಮತಗಳ ಅಂತರದಿಂದ ಸೋಲಿಸಿದರು.

ಆಗ ಪ್ರತಿಪಕ್ಷದ ಸ್ಥಾನದಲ್ಲಿದ್ದ ಗೋಪಾಲಕೃಷ್ಣ ಬೇಳೂರು ಈಗ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಟಿಕೆಟ್ ಇನ್ನೂ ಪ್ರಕಟವಾಗಿಲ್ಲ. ಹಾಲಪ್ಪ ಬಂದರೆ ಮಾತ್ರ ಸಮಬಲದ ಹೋರಾಟ ಇರಲಿದೆ ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X