ಪೂಜಾ ಗಾಂಧಿ ಚುನಾವಣೆಯಲ್ಲಿ ಸೋತಾಗ ಸಮಾಧಾನ ಹೇಳಿದ್ದ ರಮ್ಯಾ
ಸಹನಟಿಯರ ಬೆಂಬಲಕ್ಕೆ ನಿಲ್ಲುವ ರಮ್ಯಾ ಅವರ ಗುಣ ಇಷ್ಟ ಎಂದ ಪೂಜಾ ಗಾಂಧಿ
ಹಲವು ವರ್ಷಗಳ ಕಾಲ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ಖ್ಯಾತ ನಟಿ ರಮ್ಯಾ ನಿರ್ಮಾಪಕಿಯಾಗಿ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಡಾಲಿ ಧನಂಜಯ ಮುಖ್ಯಭೂಮಿಕೆಯ ʼಉತ್ತರಖಾಂಡʼ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲೂ ನಟಿಸುತ್ತಿದ್ದಾರೆ. ಈ ಮೂಲಕ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ರಮ್ಯಾ, ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ʼವೀಕೆಂಡ್ ವಿಥ್ ರಮೇಶ್ʼ 5ನೇ ಆವೃತ್ತಿಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಸಾಧಕರ ಬದುಕಿನ ಕಥೆಯನ್ನು ಮೆಲುಕು ಹಾಕುವ ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ರಮ್ಯಾ ಅವರಿಗೆ ಕನ್ನಡದ ಮತ್ತೊಬ್ಬ ನಟಿ ಪೂಜಾ ಗಾಂಧಿ ಶುಭ ಹಾರೈಸಿದ್ದಾರೆ.
ರಮ್ಯಾ ಅತಿಥಿಯಾಗಿ ಭಾಗವಹಿಸಿರುವ ʼವೀಕೆಂಡ್ ವಿಥ್ ರಮೇಶ್ʼ ರಿಯಾಲಿಟಿ ಶೋನ 5ನೇ ಆವೃತ್ತಿಯ ಮೊದಲ ಸಂಚಿಕೆ ಶನಿವಾರ ರಾತ್ರಿ ʼಝೀ ಕನ್ನಡʼ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಪ್ರಚಾರದ ಭಾಗವಾಗಿ ವಾಹಿನಿ, ಕಾರ್ಯಕ್ರಮದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದೆ. ವಿಡಿಯೋಗಳನ್ನು ನೋಡಿ ಕಾತುರರಾಗಿರುವ ಪೂಜಾ ಗಾಂಧಿ, ರಮ್ಯಾ ಅವರಿಗಾಗಿ ವಿಶೇಷ ಪತ್ರವನ್ನು ಬರೆದು ಶುಭ ಹಾರೈಸಿದ್ದಾರೆ. ಪೂಜಾ ಗಾಂಧಿ ತಮ್ಮ ಕೈಯಾರೆ ಕನ್ನಡದಲ್ಲಿ ಈ ಪತ್ರ ಬರೆದಿರುವುದು ಗಮನಾರ್ಹ.
“ರಮ್ಯಾ ಅದ್ಭುತ ವ್ಯಕ್ತಿತ್ವವುಳ್ಳ ದಿಟ್ಟ ಮಹಿಳೆ. ಚಿತ್ರರಂಗದಲ್ಲಿನ ಸಹನಟಿಯರ ಪರವಾಗಿ ನಿಲ್ಲುವ ಅವರ ಗುಣ ನನಗೆ ಬಹಳ ಇಷ್ಟವಾಗುತ್ತದೆ. ಈಗಲೂ ಚೆನ್ನಾಗಿ ನೆನಪಿದೆ. ನಾನು ರಾಯಚೂರಿನ ಚುನಾವಣೆಯಲ್ಲಿ ಸೋತಾಗ ʼಒಳ್ಳೆಯ ಪ್ರಯತ್ನ ಮಾಡಿದ್ದೀರಿʼ ಎಂದು ಸಮಾಧಾನ ಹೇಳಿದ್ದರು. ನಿಮ್ಮ ಪ್ರೊಡಕ್ಷನ್ ಕಂಪನಿಗೆ ಶುಭವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ್ರಮಟ್ಟದ ಕನ್ನಡ ಸಿನಿಮಾಗಳು ಬರಲಿ” ಎಂದು ಮೋಹಕ ತಾರೆಗೆ ಶುಭ ಕೋರಿದ್ದಾರೆ.
ಸದ್ಯ ನಟನೆಯಿಂದ ಅಂತರ ಕಾಯ್ದುಕೊಂಡಿರುವ ಪೂಜಾ ಗಾಂಧಿ, ಕನ್ನಡ ಭಾಷೆಯ ಬರವಣಿಗೆಯನ್ನು ಕಲಿತು ಸಹ ನಟಿಗೆ ಕನ್ನಡದಲ್ಲೇ ಬರೆದಿರುವ ಪತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಪೂಜಾ ಗಾಂಧಿಯವರ ಪತ್ರಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ರಮ್ಯಾ ಧನ್ಯವಾದ ತಿಳಿಸಿದ್ದಾರೆ.