ವಿಧಾನಮಂಡಲ ಚಳಿಗಾಲ ಅಧಿವೇಶನದ ಕಲಾಪಗಳಲ್ಲಿ ವಿಪಕ್ಷದವರ ಹುಳುಕಿನ ನಡುವೆ ಅವರ ಆರೋಪಗಳಿಗೆ ಮೊನಚು ಇರಲಿಲ್ಲ. ಆಡಳಿತಾತ್ಮಕವಾಗಿ ಮತ್ತು ರಾಜಕೀಯವಾಗಿ ಏಟು ಎದಿರೇಟು ನೀಡಿ ಸರ್ಕಾರ ಸುಮ್ಮನಾಯಿತು. ಉತ್ತರ ಕರ್ನಾಟಕದ ಜನರ ಬೆಟ್ಟದಷ್ಟು ನಿರೀಕ್ಷೆಗಳು ಹಾಗೇ ಉಳಿದವು. ಎಂಟು ದಿನದ ಅಧಿವೇಶನಕ್ಕೆ ಸುಮಾರು 25 ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ. ಇದು ಸಾಮಾನ್ಯ ಮೊತ್ತವಲ್ಲ. 'ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ' ಎಂಬ ಮಾತಿಗೆ ಅಧಿವೇಶನ ಹೊರತಾಗಿಲ್ಲ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನಮಂಡಲ ಚಳಿಗಾಲ ಅಧಿವೇಶನ ಇಂದು (ಗುರುವಾರ, ಡಿ.19) ಮುಕ್ತಾಯವಾಗಲಿದೆ. ಈ ವರ್ಷದ ಕೊನೆಯ ಅಧಿವೇಶನ ಕೂಡ ಇದಾಗಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳಲ್ಲಿ ಗಮನಾರ್ಹ ಚರ್ಚೆಗಳು ನಡೆಯದಿರುವ ನೋವು ಮತ್ತೆ ಉತ್ತರ ಕರ್ನಾಟಕ ಭಾಗದ ಜನರನ್ನು ಬಾಧಿಸುತ್ತಿದೆ.
ಮುಖ್ಯವಾಗಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ರೂಪಿಸಲು ಡಿಸೆಂಬರ್ 9ರಿಂದ 20ರವರೆಗೆ 11ನೇ ಚಳಿಗಾಲ ಅಧಿವೇಶನ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಮಂಡ್ಯದಲ್ಲಿ ಡಿ. 20ರಿಂದ ಮೂರು ದಿನಗಳ ಕಾಲ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಅಧಿವೇಶನವನ್ನು ಒಂದು ದಿನ ಕಡಿತಗೊಳಿಸಲಾಯಿತು. ಜೊತೆಗೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ನಿಧನ ಹಿನ್ನೆಲೆಯಲ್ಲಿ ಮತ್ತೊಂದು ದಿನ ಸದನ ಮೊಟಕುಗೊಂಡಿತು.
ಹತ್ತು ದಿನಗಳ ಪೈಕಿ ಚಳಿಗಾಲ ಅಧಿವೇಶನ ನಡೆದಿದ್ದು ಕೇವಲ ಎಂಟು ದಿನ. ಈ ಎಂಟು ದಿನದಲ್ಲಿ ಸಚಿವರು, ಶಾಸಕರು, ಅಧಿಕಾರಿಗಳ ವಸತಿ, ಊಟ, ಸುವರ್ಣಸೌಧದ ಎದುರು ನಡೆದ ಪ್ರತಿಭಟನೆಗಳಿಗೆ ಜಾಗದ ಬಾಡಿಗೆ ಸೇರಿ ಒಟ್ಟಾರೆ ಖರ್ಚಾಗಿದ್ದು 25 ಕೋಟಿ ರೂ. ಎನ್ನುವ ಅಂದಾಜಿದೆ. ಇಷ್ಟೆಲ್ಲ ಖರ್ಚು ಮಾಡಿದರೂ ಸುವರ್ಣಸೌಧ ನಿರ್ಮಾಣದ ಹಿಂದಿನ ಉದ್ದೇಶವನ್ನೇ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷಗಳು ಮರೆತು ಬಿಟ್ಟವು. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಪರಿಹಾರ ಹುಡುಕುವ ಗಟ್ಟಿ ಪ್ರಯತ್ನ ಅಧಿವೇಶನದಲ್ಲಿ ಕಾಣಲಿಲ್ಲ. ಉತ್ತರ ಕರ್ನಾಟಕ ಭಾಗದ ಶಾಸಕರೇ ಹೆಚ್ಚು ಗೈರಾಗಿದ್ದು, ಅವರನ್ನು ಆಯ್ಕೆ ಮಾಡಿದ ತಪ್ಪಿಗೆ ಮತದಾರರು ಮರುಕಪಡುವಂತಾಗಿದೆ.
2012 ಅಕ್ಟೋಬರ್ 11ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಉದ್ಘಾಟನೆಯಾದ ಸುವರ್ಣಸೌಧ ವರ್ಷಕ್ಕೊಮ್ಮೆ ಕೇವಲ ಹತ್ತು ದಿನಗಳ ಕಾಲ ನಡೆಯುವ ಚಳಿಗಾಲದ ಅಧಿವೇಶನಕ್ಕಷ್ಟೇ ಬಳಕೆಯಾಗುತ್ತಿದೆ. ಐದುನೂರು ಕೋಟಿ ರೂ. ಖರ್ಚು ಮಾಡಿ ಕಟ್ಟಿರುವ ಸುವರ್ಣಸೌಧವನ್ನು ನಿರ್ವಹಿಸಲು ಪ್ರತಿ ವರ್ಷ 5 ಕೋಟಿ ರೂ. ಹಣ ಪ್ರತ್ಯೇಕವಾಗಿ ವ್ಯಯಿಸಲಾಗುತ್ತಿದೆ. ಜೊತೆಗೆ ಹತ್ತು ದಿನದ ಅಧಿವೇಶನಕ್ಕೆ ಪ್ರತಿ ದಿನ ಸುಮಾರು ಎರಡುವರೆ ಕೋಟಿ ರೂ. ಹಣ ವೆಚ್ಚವಾಗುತ್ತಿರುವುದನ್ನು ಕಂಡಾಗ ಅಕ್ಷರಶಃ ಸುವರ್ಣಸೌಧ ಬಿಳಿಯಾನೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಎಂಟು ದಿನಗಳ ಅಧಿವೇಶನದಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಪ್ರಭುತ್ವದ ಅಸಡ್ಡೆ, ಪ್ರತಿಪಕ್ಷಗಳ ಬಣ ರಾಜಕೀಯದ ಕೆಸರೆರಚಾಟಕ್ಕೆ ಉತ್ತರ ಕರ್ನಾಟಕ ಭಾಗದ ಜನ ಭ್ರಮನಿರಸನಗೊಂಡಿದ್ದಾರೆ. ರೈತರ ಸಂಕಟಗಳು, ಒಕ್ಕಲುತನ ಎದುರಿಸುತ್ತಿರುವ ಸಮಸ್ಯೆಗಳು, ನೀರು ಮತ್ತು ನೀರಾವರಿ ಸಮಸ್ಯೆಗಳು, ಬಗೆಹರಿಯದ ಕಬ್ಬು ಬೆಳೆಗಾರರ ಸಮಸ್ಯೆ, ಪ್ರವಾಹ ಸಂತ್ರಸ್ತರ ಸಂಕಟ, ನಿರುದ್ಯೋಗ ಸಮಸ್ಯೆ, ಕ್ಷೇತ್ರಗಳ ಸಮಗ್ರ ಅಭಿವೃದ್ಧಿ, ಬೆಳಗಾವಿ ಗಡಿ ಭಾಗದ ಶೈಕ್ಷಣಿಕ ಸಮಸ್ಯೆಗಳು, ಮುಂಗಾರು ಮಳೆಯಿಂದ ಕಲ್ಯಾಣ ಕರ್ನಾಟಕಕ್ಕೆ ಉಂಟಾದ ತೊಗರಿ ಬೆಳೆಗಾರರ ಸಮಸ್ಯೆಗೆ ಪರಿಹಾರ ಮರೀಚಿಕೆಯಾಗಿದೆ.
ಈ ಸುದ್ದೊ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವಾಲಯ ಪ್ರವೇಶಕ್ಕೆ ಅಂಗಲಾಚುವ ದಲಿತರಿಗೆ ಬಾಬಾಸಾಹೇಬರು ಹೇಳಿದ್ದ ಪಾಠಗಳೇನು?
ಸುವರ್ಣಸೌಧ ನಿರ್ಮಾಣವಾಗಿ 14 ವರ್ಷ ಕಳೆದರೂ ಕನಿಷ್ಠಪಕ್ಷ ದಕ್ಷಿಣ ಕರ್ನಾಟಕದ ಅಭಿವೃದ್ಧಿಯ ಸಮವಾದರೂ ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದಬೇಕು ಎಂಬ ಆಶಯ ಈಡೇರುತ್ತಲೇ ಇಲ್ಲ. ಉತ್ತರ ಕರ್ನಾಟಕದ ಜನರ ಆಶೋತ್ತರಗಳು ಕಾಟಾಚಾರಕ್ಕೆ ಸರ್ಕಾರಿ ಪತ್ರಗಳಲ್ಲಿ ದಾಖಲಾಗಿವೆ. ಮತ್ತೆ ಆ ಫೈಲ್‌ಗಳೆಲ್ಲ ದೂಳು ಹಿಡಿಯುತ್ತಿವೆ. ಪ್ರತಿಯೊಂದು ಕೆಲಸಕ್ಕೂ ಮತ್ತೆ ಉತ್ತರ ಕರ್ನಾಟಕದ ಜನತೆ ಬೆಂಗಳೂರಿಗೆ ಅಲೆಯುವುದು ತಪ್ಪಲ್ಲ.
ಗದಗ, ಧಾರವಾಡ ಹಾಗೂ ಬೆಳಗಾವಿಗೆ ಕುಡಿಯುವ ನೀರು ಒದಗಿಸುವ ಮಹದಾಯಿ ಯೋಜನೆ ಅನುಷ್ಠಾನಕ್ಕೆ ರಾಜ್ಯದ ಮುಂದಿನ ಹೆಜ್ಜೆ ಏನು ಎಂಬುದರ ಬಗ್ಗೆ ಸರ್ಕಾರವಾಗಲಿ ಮತ್ತು ಪ್ರತಿಪಕ್ಷಗಳಾಗಲಿ ಒಗ್ಗಟ್ಟಾಗಿ ಕುಳಿತು ರಚನಾತ್ಮಕವಾಗಿ ಚರ್ಚಿಸಲಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಶಾಸಕರು ತಮ್ಮದೇ ಮೈತ್ರಿಕೂಟದ ಎನ್‌ಡಿಎ ಸರ್ಕಾರವನ್ನು ಹೇಗೆ ಮನವೊಲಿಸುತ್ತೇವೆ ಎಂಬ ಆಶ್ವಾಸನೆಯನ್ನು ಸದನದ ಮೂಲಕ ಜನರಿಗೆ ನೀಡಲಿಲ್ಲ. ಆರೋಪ ಮತ್ತು ಪ್ರತ್ಯಾರೋಪಕ್ಕೆ ಮಹದಾಯಿ ಬಲಿಯಾಯಿತು.

ಲಕ್ಷಗಟ್ಟಲೆ ಹೆಕ್ಟೇರ್ ಭೂಮಿಗೆ ನೀರುಣಿಸುವ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನ ಮತ್ತು ರಾಷ್ಟೀಯ ಯೋಜನೆ ಎಂದು ಘೋಷಿಸುವ ಕಾರ್ಯ ಹಾಗೂ ಇದರ ಉಪವಿಭಾಗೀಯ ಕಚೇರಿಗಳು ಸುವರ್ಣಸೌಧಕ್ಕೆ ಯಾವಾಗ ಸ್ಥಳಾಂತರವಾಗುತ್ತವೆ ಎಂಬುದರ ಬಗ್ಗೆ ಗ್ಯಾರಂಟಿ ಸಿಗಲಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಅನುಷ್ಠಾನ ಸಂಬಂಧ ಭೂಸ್ವಾಧೀನ, ಪುನರ್ವಸತಿ, ಪುನರ್ ನಿರ್ಮಾಣ ವಿಷಯಗಳ ಕುರಿತಂತೆ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಹೋರಾಟಗಾರರು, ರೈತ ಮುಖಂಡರ ಸಮ್ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು.
“ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಮಟ್ಟವನ್ನು 519.60 ಮೀ. ನಿಂದ 524.26 ಮೀ. ರವರೆಗೆ ಎತ್ತರಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ಹಂತ ಹಂತವಾಗಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು” ಎಂದು ಸಿದ್ದರಾಮಯ್ಯ ಭರವಸೆ ನೀಡಿದರು. ಆದರೆ, ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸಿಎಂ ಆದಾಗಲೂ ಹೀಗೆಯೇ ಹೇಳಿದ್ದರು. ಯೋಜನೆ ಆಗಲೂ ಪೂರ್ಣಗೊಳ್ಳಲಿಲ್ಲ.
ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲೇ ಯುಕೆಪಿ-3ರ ಅನುಷ್ಠಾನಕ್ಕೆ ಮುಳುಗಡೆ ಹೊಂದಲಿರುವ ಜಮೀನು, ಪುನರ್ವಸತಿ ಹಾಗೂ ಕಾಲುವೆ ನಿರ್ಮಾಣಕ್ಕಾಗಿ ಅಂದಾಜು ವೆಚ್ಚ 50 ಸಾವಿರ ಕೋಟಿ ರೂ. ಇತ್ತು. ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹಾಗೂ ಬಿಜೆಪಿ ಸರ್ಕಾರದ ಐದು ವರ್ಷ ಆಡಳಿತ ನಡೆಸಿದ ಮೇಲೆ ಮತ್ತೆ ಸಿದ್ದರಾಮಯ್ಯ ಸರ್ಕಾರ ಈಗ ರಾಜ್ಯದಲ್ಲಿದೆ. ಈ ಹೊತ್ತಿನಲ್ಲಿ ಯುಕೆಪಿ-3ನೇ ಹಂತ ಅನುಷ್ಠಾನದ ಅಂದಾಜು ವೆಚ್ಚ 1 ಲಕ್ಷ ಕೋಟಿ ರೂ. ಆಗಲಿದೆ ಎನ್ನಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣವೇ ಇಲ್ಲ ಎಂದು ಸ್ವಪಕ್ಷದ ಶಾಸಕರೇ ಮಾತನಾಡಿಕೊಳ್ಳುತ್ತಿರುವಾಗ ಇಷ್ಟು ದೊಡ್ಡ ಮೊತ್ತವನ್ನು ತಮ್ಮ ಅವಧಿಯಲ್ಲೇ ಸಿದ್ದರಾಮಯ್ಯ ಸರ್ಕಾರ ಹೇಗೆ ಪೂರೈಸುತ್ತದೆ ಎಂಬುದಕ್ಕೆ ಸ್ಪಷ್ಟತೆಯಿಲ್ಲ.
ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಅಧಿವೇಶನದಲ್ಲಿ ಪ್ರತಿಪಕ್ಷಗಳ ಶಾಸಕರಾದರೂ ಸರ್ಕಾರದ ಕಿವಿ ಹಿಂಡುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಯಿತು. ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರೆನಿಸಿಕೊಂಡವರು ಸಮರ್ಥವಾಗಿ ಸಮಸ್ಯೆಗಳನ್ನು ಬಿಚ್ಚಿಟ್ಟು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಕಾಣಲೇ ಇಲ್ಲ. ಜೆಡಿಎಸ್‌ನಲ್ಲಿ ಸಮರ್ಥವಾಗಿ ಮಾತನಾಡುವ ನಾಯಕರೇ ಸದನದಲ್ಲಿಇಲ್ಲ ಎಂಬುದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಗೆ ಫೋನ್ ಮಾಡಿ ಆ ಪಕ್ಷದ ಸದಸ್ಯರು ಮಾತನಾಡಿದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಅಷ್ಟರಮಟ್ಟಿಗೆ ಜೆಡಿಎಸ್ ಸ್ಥಿತಿ ಬಂದು ತಲುಪಿದೆ.
ಬಿಜೆಪಿಯೊಳಗಿನ ಬಣ ರಾಜಕೀಯ ಸದನದ ಮೇಲೂ ಪರಿಣಾಮ ಬೀರಿತು. ಪರಸ್ಪರ ಬಿಜೆಪಿ ನಾಯಕರು ಸಹಕಾರ ತೋರುವ ಗುಣ ಪ್ರದರ್ಶಿಸಲಿಲ್ಲ. ಆರ್ ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತಿಗೆ ಬೆಂಬಲ ಕೊಡಲು ಬಹುತೇಕ ಬಿಜೆಪಿ ಶಾಸಕರು ಮುಂದೆ ಬರಲಿಲ್ಲ. ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಉತ್ತಮ ಸಂಸದೀಯ ಪಟುಗಳು ಯಾರು ಎಂಬುದನ್ನು ಭೂತಕನ್ನಡಿ ಹಾಕಿ ನೋಡುವಷ್ಟರ ಮಟ್ಟಿಗಿನ ಕೊರತೆ ಬಹುಪಾಲು ಶಾಸಕರಲ್ಲಿದೆ.

ಸದನದಲ್ಲಿ ಭಾಗಿಯಾದ ನಾಯಕರು ತಾವೂ ಭಾಷಣ ಮಾಡಿದ್ದೇವೆ ಎನ್ನುವುದನ್ನು ತೋರಿಸಿಕೊಳ್ಳಲು ಅಗತ್ಯವಿರದ ಸಂಗತಿಗಳನ್ನು ಮುಂದುಮಾಡಿ ದೊಡ್ಡದಾಗಿ ಭಾಷಣ ಮಾಡುತ್ತ ಕಡತ ಶೂರರು ಅನ್ನಿಸಿಕೊಂಡಿದ್ದು ಬಿಟ್ಟರೆ ಪ್ರಶ್ನೆಗಳಿಗೆ ಸೂಕ್ತ ಪರಿಹಾರವೇ ಸಿಗಲಿಲ್ಲ. ಆಡಳಿತ ಪಕ್ಷದ ಸಚಿವರು ಕೂಡ ಗಮನಿಸುತ್ತೇವೆ.. ಪರಿಹರಿಸುತ್ತೇವೆ.. ಪರಿಶೀಲಿಸುತ್ತೇವೆ… ಕಾರ್ಯಕ್ರಮ ರೂಪಿಸುತ್ತೇವೆ.. ಸರ್ಕಾರದ ಜೊತೆ ಚರ್ಚಿಸುತ್ತೇವೆ… ಎಂಬ ಹಳಸಲು ಉತ್ತರಗಳನ್ನು ನೀಡಿ ಕೈತೊಳೆದುಕೊಂಡರು.
ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟದ ಕಿಚ್ಚು ವಿಧಾನಮಂಡಲ ಚಳಿಗಾಲ ಅಧಿವೇಶನದ ಕಲಾಪಗಳನ್ನು ಸುಟ್ಟು ಹಾಕಿತು. ಪಂಚಮಸಾಲಿ ಹೋರಾಟದಿಂದ ಸುವರ್ಣಸೌಧ ಮುಂಭಾಗ ಅಕ್ಷರಶಃ ರಣರಂಗವಾಗಿತ್ತು. ಘಟನೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ 17 ಜನರಿಗೆ ಗಾಯವಾಯಿತು. ಏಳು ಸರ್ಕಾರಿ ಬಸ್, ಮೂರು ಪೊಲೀಸ್ ವಾಹನ ಜಖಂಗೊಂಡವು. ಸದನದ ಒಳಗೂ ಮತ್ತು ಹೊರಗೂ ಪಂಚಮಸಾಲಿ ಮೀಸಲಾತಿ ಹೋರಾಟದ್ದೇ ಹೆಚ್ಚು ಚರ್ಚೆಯಾಯಿತು. ಲಾಠಿ ಚಾರ್ಜ್ ಬಗ್ಗೆ ಸ್ವಾರ್ಥ ರಾಜಕಾರಣಕ್ಕಾಗಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ತುಸು ಧ್ವನಿ ಏರಿಸಿ ಮಾತನಾಡಿದರು. ಇದರಿಂದ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಲ್ಲಿ ಬಿಜೆಪಿ ಸರ್ಕಾರ ಮಾಡಿದ ಮೋಸ ಚರ್ಚೆಯಾಗದೇ ಮರೆಯಾಯಿತು.
ಸೋಮವಾರ ಒಂದು ದಿನ ಮಧ್ಯ ರಾತ್ರಿವರೆಗೂ ಅಧಿವೇಶನ ನಡೆಯಿತು. ಅಲ್ಲಿ ಸರ್ಕಾರದ ಪರವಾಗಿ ಸಚಿವರಾದ ಕಷ್ಣ ಬೈರೇಗೌಡ ಮತ್ತು ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು. ಎಂಟು ಜನ ಶಾಸಕರಿದ್ದರು. ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳಲ್ಲಿ ಇದೇ ಇಬ್ಬರು ಸಚಿವರು ಆಸಕ್ತಿಯಿಂದ ಭಾಗಿಯಾಗಿ ಸರ್ಕಾರದ ಗೌರವ ಉಳಿಸಿದರು. ಸಿಎಂ ಸಿದ್ದರಾಮಯ್ಯ ಸಮರ್ಥವಾಗಿ ಮಾತನಾಡಿದರು. ಪರಿಷತ್‌ನಲ್ಲಿ ಬಿ ಕೆ ಹರಿಪ್ರಸಾದ್ ಗಮನ ಸೆಳೆದರು. ಒಂದು ಹಂತದವರೆಗೆ ದಿನೇಶ್ ಗುಂಡೂರಾವ್ ಕೂಡ ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೀರಾವರಿ ಕುರಿತ ಚರ್ಚೆಗಳಲ್ಲಿ ಕೂಡ ಅಷ್ಟಾಗಿ ಕಾಣಲಿಲ್ಲ. ವಿಧಾನ ಪರಿಷತ್‌ನಲ್ಲಂತೂ ಡಿ ಕೆ ಶಿವಕುಮಾರ್ ಬಂದಿದ್ದರಾ ಎನ್ನುವ ಆಶ್ಚರ್ಯ ಮೂಡುವಷ್ಟು ವಿರಳವಾಗಿ ಕಂಡರು. ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್‌ನ ಸಚಿವರು, ಶಾಸಕರು ಡಿ.26ರಂದು ನಡೆಯಲಿರುವ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಿದ್ಧತೆಗೂ ಇದೇ ಸಮಯದಲ್ಲಿ ಗಮನಕೊಟ್ಟಿದ್ದು ಜನತೆಗೆ ಬೇಸರ ತರಿಸಿದೆ.
ಗೃಹ ಸಚಿವ ಪರಮೇಶ್ವರ್ ಅವರು ಲಾಠಿ ಚಾರ್ಜ್ ಮಾಡಿದ ಬಗ್ಗೆ ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಹೇಗೆಲ್ಲ ಕಾನೂನು ನಿಯಮಗಳನ್ನು ಮೀರಿ ನಡೆದುಕೊಂಡಿದ್ದಾರೆ ಎಂಬುದನ್ನು ನೀಟಾಗಿ ಸಮರ್ಥಿಸಿಕೊಂಡಿದ್ದು ಬಿಟ್ಟರೆ ಗಮನಾರ್ಹ ಸಂಗತಿಗಳು ಅವರಿಂದ ಹೊರಬರಲಿಲ್ಲ. ಬೆಳಗಾವಿಯ ಚಳಿಗಾಲದ ಅಧಿವೇಶನ ಅಂದರೆ ಅಧಿಕಾರಿ ವರ್ಗಕ್ಕೆ, ಜನಪ್ರತಿನಿಧಿಗಳಿಗೆ ವರ್ಷಾಂತ್ಯದ ಪ್ರವಾಸ ಎನ್ನುವ ಆರೋಪ ಮತ್ತೆ ಮುಂದುವರಿಯಿತು. ಎಂಟು ದಿನದ ಅಧಿವೇಶನಕ್ಕೆ ಸುಮಾರು 25 ಕೋಟಿ ರೂ. ಖರ್ಚು ಎಂದರೆ ಸಾಮಾನ್ಯ ಮೊತ್ತವಲ್ಲ. ‘ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ‘ ಎನ್ನುವಂತೆ ಇಲ್ಲೂ ಆಗಿದ್ದು ಅದೇ.

ವಿಧಾನಮಂಡಲ ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧ ಬಳಿ ಪ್ರತಿಭಟನಕಾರರ ದಂಡೇ ಹರಿದು ಬಂದಿತ್ತು. ಬೆಳಗಾವಿ ಜಿಲ್ಲೆ ಮಾತ್ರವಲ್ಲದೆ; ರಾಜ್ಯದ ವಿವಿಧೆಡೆಯಿಂದ ಬಂದಿದ್ದ ನಾನಾ ಸಂಘಟನೆಗಳ ಪದಾಧಿಕಾರಿಗಳು ತಮ್ಮ ಹಕ್ಕೊತ್ತಾಯ ಮಂಡಿಸಿದರು. ಶಾಸಕರು, ಸಚಿವರು ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ಮನವಿ ಆಲಿಸಿ, ನಂತರ ಆಪ್ತ ಸಹಾಯಕರ ಕೈಯಲ್ಲಿ ಆ ಎಲ್ಲ ಮನವಿ ಪತ್ರಗಳನ್ನು ಕೊಟ್ಟು, ಮಾಧ್ಯಮಗಳಲ್ಲಿ ಮನವಿ ಆಲಿಸಿದೆ ಎನ್ನುವ ಸುದ್ದಿಗೆ ಸೀಮಿತವಾದರು.
ಕಳೆದ ಚಳಿಗಾಲ ಅಧಿವೇಶನಗಳಿಗೆ ಹೋಲಿಸಿದರೆ ಈ ಬಾರಿ ಸಾರ್ವಜನಿಕರ ಬರುವಿಕೆ ಕಡಿಮೆ ಇತ್ತು. ರಾಜಕೀಯ ನಾಯಕರ ಬೆಂಬಲಿಗರಿಂದ ತುಂಬಿತುಳುಕಿತ್ತು. ಕಲಾಪಗಳಲ್ಲಿ ವಿಪಕ್ಷದವರ ಹುಳುಕಿನ ನಡುವೆ ಅವರ ಆರೋಪಗಳಿಗೆ ಮೊನಚು ಇರಲಿಲ್ಲ. ಆಡಳಿತಾತ್ಮಕವಾಗಿ ಮತ್ತು ರಾಜಕೀಯವಾಗಿ ಏಟು ಎದಿರೇಟು ನೀಡಿ ಸರ್ಕಾರ ಸುಮ್ಮನಾಯಿತು. ಉತ್ತರ ಕರ್ನಾಟಕದ ಜನರ ಬೆಟ್ಟದಷ್ಟು ನಿರೀಕ್ಷೆಗಳು ಹಾಗೇ ಉಳಿದವು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.