ಪ್ರಿಯಾಂಕಾ ಗಾಂಧಿ ಅವರನ್ನು ದೇಶ ದ್ರೋಹಿ ಎಂದು ಬ್ರ್ಯಾಂಡ್ ಮಾಡಲು, ಕೊಳಕರು ತಿರುಚಿದ ಫೋಟೋವನ್ನು, ಸುಳ್ಳು ಸುದ್ದಿಯನ್ನು ವೈರಲ್ ಮಾಡುತ್ತಿದ್ದಾರೆ. ಆಗ ರಾಹುಲ್, ಈಗ ಪ್ರಿಯಾಂಕಾ... ಇದರ ಹಿಂದೆ ಇರುವವರಾರು?
ಕಳೆದ ಹನ್ನೊಂದು ವರ್ಷಗಳಿಂದ ರಾಹುಲ್ ಗಾಂಧಿಯ ಭಾಷಣ, ಬರಹ ಮತ್ತು ಚಿತ್ರಗಳನ್ನು ತಿರುಚಿ ಹಂಚಲಾಗುತ್ತಿತ್ತು. ಸಾರ್ವಜನಿಕವಾಗಿ ‘ಪಪ್ಪು’ ಎಂದು ಬ್ರ್ಯಾಂಡ್ ಮಾಡುವುದಕ್ಕಾಗಿಯೇ ಕೋಟ್ಯಂತರ ರೂಪಾಯಿಗಳನ್ನು ಬಿಜೆಪಿ ವ್ಯಯಿಸಿ ಐಟಿ ಸೆಲ್ ಸ್ಥಾಪಿಸಿತ್ತು. ತಿರುಚಿದ ಚಿತ್ರಗಳು, ಮಾತುಗಳು, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾ ಬಳಸಿ, ರಾಹುಲ್ ಗಾಂಧಿಯನ್ನು ‘ಪಪ್ಪು’ ಮಾಡುವಲ್ಲಿ ಯಶಸ್ವಿಯಾಗಿತ್ತು.
ಈಗ ಪ್ರಿಯಾಂಕಾ ಗಾಂಧಿ ಸರದಿ.
ವಯನಾಡು ಉಪಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆದ್ದು ಸಂಸತ್ ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ, ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಭಾಷಣದಿಂದಲೇ ದೇಶವಾಸಿಗಳ ಗಮನ ಸೆಳೆದಿದ್ದರು. ಅಂದಿನಿಂದ ಇಂದಿನವರೆಗೆ, ಆಳುವ ಸರ್ಕಾರವನ್ನು ಅಡಿಗಡಿಗೂ ತೀಕ್ಷ್ಣ ಮಾತುಗಳಿಂದ ತರಾಟೆಗೆ ತೆಗೆದುಕೊಂಡು ಸುದ್ದಿಯಾಗುತ್ತಿದ್ದಾರೆ. ಅವರು ಆಯ್ಕೆ ಮಾಡಿಕೊಳ್ಳುವ ವಸ್ತು, ಅದನ್ನು ಮಂಡಿಸುವ ವಿಧಾನ, ಅವರ ಮಾತಿನ ಶೈಲಿ ಎಲ್ಲವೂ ವಿಶಿಷ್ಟವಾಗಿದೆ. ಇಂದಿರಾ ಗಾಂಧಿಯನ್ನು ನೆನಪಿಸುತ್ತಿದೆ. ಅದು ದೇಶದ ಜನರ ವಿಶ್ವಾಸ ಗಳಿಸುತ್ತಿದೆ.
ಅಂಥದ್ದೇ ಒಂದು ವಿಷಯ, ಡಿಸೆಂಬರ್ 16ರಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸುವ ಬ್ಯಾಗ್‌ವೊಂದಿಗೆ ಸಂಸತ್ತನ್ನು ಪ್ರವೇಶಿಸಿದ್ದರು. ಇದರ ನಂತರ, ಡಿಸೆಂಬರ್ 17ರಂದು ಪ್ರಿಯಾಂಕಾ ಮತ್ತೊಂದು ಹೊಸ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದರು. ಆ ಬ್ಯಾಗ್ ಮೇಲೆ ಬಾಂಗ್ಲಾದೇಶದ ಅಲ್ಪಸಂಖ್ಯಾತರನ್ನು ಬೆಂಬಲಿಸುವ ‘ಬಾಂಗ್ಲಾದೇಶದಲ್ಲಿರುವ ಹಿಂದು ಹಾಗೂ ಕ್ರಿಶ್ಚಿಯನ್ನರ ಪರವಾಗಿ ನಿಲ್ಲೋಣ’ ಎಂಬ ಬರಹವಿತ್ತು. ಇದು ಜನಪರ ನಿಲುವಾಗಿ, ಮಾನವೀಯತೆಯ ಮೇರು ಸಂದೇಶವಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಶ್ವದಾದ್ಯಂತ ಜನಮನ್ನಣೆ ಗಳಿಸುತ್ತಿತ್ತು.
ಇದನ್ನು ಸಹಿಸದ ಸಂಘಿಗಳು, ಆ ತಕ್ಷಣವೇ ಆ ಚಿತ್ರವನ್ನು ತಿರುಚಿ ಹಂಚಿಕೊಂಡಿದ್ದರು. ಅದು ಪ್ರಿಯಾಂಕಾರ ಹೆಗಲ ಮೇಲಿನ ಬ್ಯಾಗ್ ಮೇಲೆ ‘ಬಾಂಗ್ಲಾದೇಶದ ಹಿಂದುಗಳ ಬಗ್ಗೆ ನನಗೆ ಕಾಳಜಿ ಇಲ್ಲ’ ಎಂದು ಬರೆಯಲಾದ ಫೋಟೋವಾಗಿತ್ತು. ಆ ತಿರುಚಿದ ಪ್ರಿಯಾಂಕಾ ಗಾಂಧಿಯವರ ಫೋಟೋ ಕೂಡ ವೈರಲ್ ಆಗುವಂತೆ ನೋಡಿಕೊಂಡಿದ್ದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ದೇವಾಲಯ ಪ್ರವೇಶಕ್ಕೆ ಅಂಗಲಾಚುವ ದಲಿತರಿಗೆ ಬಾಬಾಸಾಹೇಬರು ಹೇಳಿದ್ದ ಪಾಠಗಳೇನು?
ಬಿಜೆಪಿ ಐಟಿ ಸೆಲ್‌ನಲ್ಲಿರುವ ಕೊಳಕರಿಗೆ ತಿರುಚುವುದೇ ಕೆಲಸ. ಇದಕ್ಕಾಗಿಯೇ ಕೋಟ್ಯಂತರ ರೂಪಾಯಿ ಸುರಿದು ಐಟಿ ಸೆಲ್ ಸ್ಥಾಪಿಸಲಾಗಿದೆ. ಅದರಲ್ಲಿ ಲಕ್ಷಾಂತರ ಜನ ತಂತ್ರಜ್ಞರು- ಸಂಘಪರಿವಾರದ ಐಡಿಯಾಲಿಜಿಯನ್ನು ತಲೆಗೆ ತುಂಬಿಕೊಂಡಿರುವ ತರುಣ-ತರುಣಿಯರು ತಿರುಚುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದನ್ನು ಸಂಘಪರಿವಾರ ಮತ್ತು ಬಿಜೆಪಿ ನಾಯಕರು ‘ದೇಶ ಪ್ರೇಮ’ದ ಕೆಲಸವೆಂದು ಅವರ ತಲೆಗೆ ತುಂಬಿದ್ದಾರೆ.
ಅಂದರೆ, ಬಿಜೆಪಿಯ ಐಟಿ ಸೆಲ್, ಕಳೆದ ಹನ್ನೊಂದು ವರ್ಷಗಳಲ್ಲಿ ರಾಹುಲ್ ಗಾಂಧಿಗೆ ಮಾಡಿದ್ದನ್ನೇ, ಈಗ ಪ್ರಿಯಾಂಕಾ ಗಾಂಧಿಯ ವಿಷಯದಲ್ಲಿ ಮಾಡಲು ಮುಂದಾಗಿದೆ. ಪ್ರಿಯಾಂಕಾ ಹೆಗಲಿಗೆ ಹಾಕಿಕೊಂಡಿದ್ದ ಬ್ಯಾಗ್ ಮೇಲಿದ್ದ ಬರಹವನ್ನು ಅಳಿಸಿ, ‘ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ನನಗೆ ಕಾಳಜಿ ಇಲ್ಲ’ ಎಂದು ತಿರುಚಿ ಅದನ್ನು ಸೋಷಿಯಲ್ ಮೀಡಿಯಾಗಳಿಗೆ ಹಂಚಲಾಗಿದೆ. ಅದು ದೇಶದ ಜನರಲ್ಲಿ ಎಂತಹ ಪರಿಣಾಮ ಬೀರುತ್ತದೆಂದು, ಅದು ರಾಜಕೀಯವಾಗಿ ಬಿಜೆಪಿಗೆ ಎಷ್ಟರಮಟ್ಟಿಗೆ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದೆ.
ಮೆದುಳನ್ನು ಮಾರಿಕೊಂಡ ಭಕ್ತರಲ್ಲಿ ಒಬ್ಬರಾದ ಮನೋಜ್ ಶರ್ಮಾ, ತಮ್ಮ ಫೇಸ್ಬುಕ್ ವಾಲ್‌ನಲ್ಲಿ ಪ್ರಿಯಾಂಕಾ ಗಾಂಧಿಯವರ ತಿರುಚಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದೇ ರೀತಿ ಅನೇಕ ಬಳಕೆದಾರರು ಇದನ್ನು ನಿಜವೆಂದು ಪರಿಗಣಿಸಿ ಹಂಚಿಕೊಳ್ಳುತ್ತಿದ್ದಾರೆ. ಮೋದಿ ಭಕ್ತಗಣವೇ ಆ ಫೋಟೋವನ್ನು ಸಂಭ್ರಮದಿಂದ ಹಂಚಿಕೊಂಡು ವೈರಲ್ ಮಾಡಿ ಕುಣಿದಾಡುತ್ತಿದೆ. ಆ ಮೂಲಕ ಗಾಂಧಿ ಫ್ಯಾಮಿಲಿ ಮೇಲಿರುವ ತಮ್ಮ ದ್ವೇಷವನ್ನು ತಣಿಸಿಕೊಳ್ಳುತ್ತಿದೆ.
ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋವನ್ನು ಕೆಲ ಸುದ್ದಿ ಮಾಧ್ಯಮಗಳು ಆಯ್ಕೆ ಮಾಡಿಕೊಂಡು, ಡಿಸೆಂಬರ್ 17ರಂದು, ‘ನಿನ್ನೆ ಪ್ಯಾಲೆಸ್ತೀನ್ ಇಂದು ಬಾಂಗ್ಲಾದೇಶ, ಪ್ರಿಯಾಂಕಾಳ ದಿನಕ್ಕೊಂದು ಬ್ಯಾಗ್, ದಿನಕ್ಕೊಂದು ಬರಹ’ ಎಂದು ಶೀರ್ಷಿಕೆ ನೀಡಿ ಸುದ್ದಿ ಪ್ರಕಟಿಸಿವೆ. ಮೋದಿಯ ಋಣ ತೀರಿಸಿವೆ. ಗೋದಿ ಮೀಡಿಯಾ ಎಂಬುದನ್ನು ಪ್ರೂವ್ ಮಾಡಿವೆ.

ಈಗ ಅದು ಸುಳ್ಳು ಸುದ್ದಿ ಎಂದು ಗೊತ್ತಾಗಿದೆ. ಗೂಗಲ್ ಕೂಡ ಸ್ಪಷ್ಟೀಕರಣ ನೀಡಿದೆ. ಕೆಲ ಮಾಧ್ಯಮಗಳು ಅಸಲಿ ಸುದ್ದಿಯನ್ನು ಪ್ರಕಟಿಸುವ ಮೂಲಕ, ಸತ್ಯವನ್ನು ಜನರಿಗೆ ತಿಳಿಸುವ ಧೈರ್ಯ ಮಾಡಿವೆ.
ಆದರೆ, ಆಳುವ ಸರ್ಕಾರ ಈಗಲೂ ಸುಳ್ಳು ಸುದ್ದಿ ಸೃಷ್ಟಿಸುವುದನ್ನು, ಹಂಚಿಕೊಳ್ಳುವುದನ್ನು ಅನುಸರಿಸುತ್ತಿದೆ. ಪ್ರಿಯಾಂಕಾರ ಬ್ಯಾಗ್‌ನಲ್ಲೂ ರಾಜಕಾರಣ ಮಾಡಲು ನೋಡುತ್ತಿದೆ. ಬಿಜೆಪಿ ನಾಯಕರಿಗೇನೋ ತಿರುಚುವ ರೋಗ ಅಂಟಿಕೊಂಡಿದೆ, ಪ್ರಜ್ಞಾವಂತ ನಾಗರಿಕರಿಗೇನಾಗಿದೆ?