”ಸಣ್ಣ ವಯಸ್ಸಿನಲ್ಲಿ ನಾನು ಜೀವನದಲ್ಲಿ ಏನನ್ನಾದರೂ ಕಳೆದುಕೊಂಡಾಗ, ನನಗೆ ಬೇರೆ ದಾರಿ ಏನು ಕಾಣದಿದ್ದಾಗ ನಾನು ನನ್ನ ಆಪ್ತ ಕೆಲವು ಸ್ನೇಹಿತರೊಂದಿಗೆ ಬೀದಿಗಳಲ್ಲಿ ಕ್ರಿಕೆಟ್ ಆಡುತ್ತಿದೆ. ಎಲ್ಲವೂ ಬದಲಾಗಿದೆ, ಆದರೆ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೀದಿಗಳಲ್ಲಿ ಆಡಿದಷ್ಟು ಸಂತೋಷ ಅನುಭವಿಸಿಲ್ಲ”
”5 ವರ್ಷದವನಿದ್ದಾಗ ಮದ್ರಾಸಿನಿಂದ ಸುಮಾರು 330 ಕಿ.ಮೀ ದೂರದಲ್ಲಿರುವ ತಿರುಚ್ಚಿಯಲ್ಲಿ ಸಂಬಂಧಿಕರೊಬ್ಬರ ಮದುವೆ ಸಮಾರಂಭದಲ್ಲಿದ್ದಾಗ ನಾನು ಸಂಪೂರ್ಣ ಬಳಲಿದ್ದೆ. ನನಗೆ ನಡೆಯಲು ಎದ್ದೇಳಲು ಸಾಧ್ಯವಾಗದೆ ಅಸ್ವಸ್ಥಗೊಂಡಿದ್ದೆ. ನನ್ನ ಅಪ್ಪ, ಅಮ್ಮ ನನ್ನ ಆರೋಗ್ಯದ ಬಗ್ಗೆ ಆತಂಕಗೊಂಡು ನನ್ನೂರಿನ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನನಗೆ ‘ಟಿಬಿ’ ಕಾಯಿಲೆ ಇರುವುದು ತಿಳಿದುಕೊಂಡರು. ಸಣ್ಣ ವಯಸ್ಸಿಗೆ ಬಂದಿದ್ದ ಗಂಡಾಂತರದಿಂದ ನನ್ನ ಪೋಷಕರು ಸೂಕ್ತವಾಗಿ ಆರೈಕೆ ಮಾಡಿ ಜೀವದಾನ ಮಾಡಿದ್ದರು”
”9ನೇ ವಯಸ್ಸಿನಲ್ಲಿ ವೇಗದ ಬೌಲರ್ ಆಗಿ ಕ್ರಿಕೆಟ್ ತರಬೇತಿಯನ್ನು ಶುರು ಮಾಡಿದ್ದೆ. ಕೋಚ್ ಸಿ ಕೆ ವಿಜಯ್ ಕುಮಾರ್ ಅವರು ಆಫ್ ಸ್ಪಿನ್‌ಗೆ ಬದಲಿಸಿಕೊಳ್ಳಲು ಸಲಹೆ ನೀಡಿದರು. ಅಂದಿನಿಂದ ನನ್ನ ವೃತ್ತಿ ಜೀವನವೇ ಬದಲಾಯಿತು. ಪೋಷಕರು, ಅಭಿಮಾನಿಗಳು, ಸಹೋದ್ಯೋಗಿಗಳ ಪ್ರೋತ್ಸಾಹ ಹಾಗೂ ಪ್ರೀತಿಯಿಂದ ಹಲವು ಸಾಧನೆಗಳನ್ನು ಮಾಡಲು ಸಾಧ್ಯವಾಯಿತು. ಕ್ರಿಕೆಟ್ ನನಗೆ ಎಲ್ಲವನ್ನು ಕೊಟ್ಟಿತು. ಎಲ್ಲರ ಪ್ರೀತಿಗೆ ನಾನು ಚಿರಋಣಿ.”
ಮೇಲಿನ ಮೂರು ಸಣ್ಣ ಘಟನೆಗಳನ್ನು ಟೀಂ ಇಂಡಿಯಾದ ಹರಿಯ ಕ್ರಿಕೆಟಿಗ, ಖ್ಯಾತ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಕಳೆದ ಜೂನ್ ತಿಂಗಳಲ್ಲಿ ಬಿಡುಗಡೆಯಾದ ಆತ್ಮಕತೆ ‘ಐ ಹ್ಯಾವ್ ದಿ ಸ್ಟ್ರೀಟ್ಸ್: ಎ ಕುಟ್ಟಿ ಕ್ರಿಕೆಟ್ ಸ್ಟೋರಿ’ಯಲ್ಲಿ ದಾಖಲಿಸಿದ್ದಾರೆ.
ಸಾಧಾರಣ ಮಧ್ಯಮ ವರ್ಗದ ಕುಟುಂಬದಲ್ಲಿ ಸೆಪ್ಟೆಂಬರ್ 17, 1986ರಲ್ಲಿ ಚೆನ್ನೈ(ಅಂದಿನ ಮದ್ರಾಸ್)ನಲ್ಲಿ ಜನಿಸಿದವರು ಅಶ್ವಿನ್. ತಂದೆ ರವಿಚಂದ್ರನ್ ಭಾರತೀಯ ರೈಲ್ವೆಯಲ್ಲಿ ಲೆಕ್ಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಚಿತ್ರ ಗೃಹಿಣಿ. ಮಗನ ಏಳಿಗೆಯಲ್ಲಿ ಇಬ್ಬರ ಪಾತ್ರ ಗಣನೀಯವಾದುದು. ತಂದೆ ಸರ್ಕಾರಿ ಉದ್ಯೋಗದಲ್ಲಿದ್ದರೂ ಅಂದಿನ ಕಾಲಕ್ಕೆ ಮದ್ರಾಸ್ ಕ್ಲಬ್‌ಗಳಲ್ಲಿ ಕ್ರಿಕೆಟ್ ಆಡಿದವರು. ತಾವು ವೇಗದ ಬೌಲರ್ ಆಗಿದ್ದ ಕಾರಣ ಮಗ ಕೂಡ ಭವಿಷ್ಯದಲ್ಲಿ ವೇಗದ ಬೌಲರ್ ಆಗಬೇಕೆಂದು ಬಯಸಿದ್ದರು. ಅದು ಕೈಗೂಡದಿದ್ದರೆ ಇಂಜಿನಿಯರ್ ಆಗಲಿ ಎಂದು ಇಂಜಿನಿಯರಿಂಗ್ ವ್ಯಾಸಂಗವನ್ನೂ ಮಾಡಿಸಿದ್ದರು. ತಂದೆಯ ಕನಸನ್ನು ನನಸು ಮಾಡಿದ ಆರ್ ಅಶ್ವಿನ್ ಸ್ಪಿನ್ ಬೌಲರ್ ಆಗಿ ವಿಶ್ವ ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿದರು.
ಐಪಿಎಲ್ ಸಾಧನೆಯಿಂದ ಟೀಂ ಇಂಡಿಯಾಗೆ ಪಯಣ
ಕ್ಲಬ್ ಮಟ್ಟದಲ್ಲಿ ಜನಪ್ರಿಯರಾದ ನಂತರ ಅಶ್ವಿನ್ ಅವರನ್ನು 2006ರ ಡಿಸೆಂಬರ್‌ನಲ್ಲಿ ತಮಿಳುನಾಡು ರಣಜಿ ತಂಡಕ್ಕೆ ಆಯ್ಕೆ ಮಾಡಲಾಯಿತು. ಎದುರಾಳಿ ತಂಡದ ಹತ್ತಾರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ದಾರಿ ತೋರಿಸಿದ ನಂತರ ತಮಿಳುನಾಡು ತಂಡದ ನಾಯಕನನ್ನಾಗಿ ಬಡ್ತಿ ನೀಡಲಾಯಿತು. ಎರಡು ವರ್ಷಗಳಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆಯನ್ನು ಗಮನಿಸಿದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಮೊತ್ತವನ್ನು ನೀಡಿ ಖರೀದಿಸಿತು. ಐಪಿಎಲ್‌ನಲ್ಲಿ ಸ್ಪಿನ್ ಮಾಂತ್ರಿಕ ಅಶ್ವಿನ್ ಅವರ ಮೂರು ವರ್ಷದ ಸಾಧನೆ ಅಭಿಮಾನಿಗಳಲ್ಲಿ ಹುಚ್ಚು ಹಿಡಿಸಿತ್ತು. ಅಶ್ವಿನ್ ತಂಡದ ಸದಸ್ಯರಾಗಿದ್ದ ಸಂದರ್ಭದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ 2010 ಹಾಗೂ 2011ರಲ್ಲಿ ಚಾಂಪಿಯನ್ ಪಟ್ಟ ಹಾಗೂ ಮೂರು ಬಾರಿ ರನ್ನರ್ ಅಪ್ ಸ್ಥಾನ ಪಡೆಯಿತು. ಅಶ್ವಿನ್‌ನ ಅಸಾಧಾರಣ ಸ್ಪಿನ್ ಬೌಲಿಂಗ್ ಟೀಂ ಇಂಡಿಯಾ ಆಯ್ಕೆದಾರರ ಕಣ್ಣಿಗೂ ಬಿದ್ದಿತು. 2010ರ ಜೂನ್‌ನಲ್ಲಿ ನಡೆದ ಶ್ರೀಲಂಕಾ ಸರಣಿಗೆ ಅಶ್ವಿನ್ ಇದ್ದ 16ರ ಬಳಗವನ್ನು ಪ್ರಕಟಿಸಲಾಯಿತು. ಅಂದು ಶುರುವಾದ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣ ಒಂದೂವರೆ ದಶಕದ ಅವಧಿಯವರೆಗೂ ವೈಭವದಿಂದ ಕೂಡಿತ್ತು. ಶ್ರೀಲಂಕಾ ಸರಣಿಯಲ್ಲಿ ಸಿಂಹಳಿಯರ ಬ್ಯಾಟ್ಸಮನ್‌ಗಳಿಗೆ ಸಿಂಹಸ್ವಪ್ನರಾಗಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದರು. 2011ರ ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೂ ಆಶ್ವಿನ್ ಪಾದಾರ್ಪಣೆ ಮಾಡಿದರು.
ಮೊದಲ ಪಂದ್ಯದಲ್ಲೇ 5 ವಿಕೆಟ್ ಸಾಧನೆ
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ಗೆ ಆಯ್ಕೆಯಾದ ರವಿಚಂದ್ರನ್ ಅಶ್ವಿನ್ ಮೊದಲ ಪಂದ್ಯದಲ್ಲಿಯೇ ವಿಂಡೀಸ್ ತಂಡದ 5 ವಿಕೆಟ್ ಉರುಳಿಸಿದರು. ಪಾದಾರ್ಪಣೆ ಪಂದ್ಯದಲ್ಲಿ ಭಾರತ ತಂಡದ 7 ಬೌಲರ್ ಎಂಬ ದಾಖಲೆಗೆ ಅಶ್ವಿನ್ ಪಾತ್ರರಾದರು. ಅದೇ ವರ್ಷ ಆಸ್ಟ್ರೇಲಿಯಾ ವಿರುದ್ಧ 29 ವಿಕೆಟ್ ಕಿತ್ತ ಸ್ಪಿನ್ ಮಾಂತ್ರಿಕ ಭಾರತ ಉಪ ಖಂಡದಲ್ಲಿ ಹೆಚ್ಚು ವಿಕೆಟ್ ಉರುಳಿಸಿದ ಬೌಲರ್ ಎಂಬ ಹೆಗ್ಗಳಿಗೆಯನ್ನು ತನ್ನದಾಗಿಸಿಕೊಂಡರು. 2015 -16ರ ಟೆಸ್ಟ್ ಪಂದ್ಯಗಳಲ್ಲಿ ಅತ್ಯಧಿಕ 48 ವಿಕೆಟ್ ಕಬಳಿಸಿದ್ದು ಮಾತ್ರವಲ್ಲದೆ 336 ರನ್ ಬಾರಿಸಿದರು. ಹಾಗೆಯೇ 19 ಟಿ20 ಪಂದ್ಯಗಳಲ್ಲಿ 27 ವಿಕೆಟ್ ಪಡೆದು ಅತ್ಯುತ್ತಮ ಆಲ್‌ರೌಂಡರ್ ಆಗಿ ಹೊರಹೊಮ್ಮಿದರು.
ಆರ್ ಅಶ್ವಿನ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಒಟ್ಟು 106 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಅಶ್ವಿನ್ 537 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸದ್ಯ ಟೆಸ್ಟ್ ಶ್ರೇಯಾಂಕದಲ್ಲಿ ಮೂರನೇ ಶ್ರೇಯಾಂಕದ ಆಲ್‌ರೌಂಡರ್ ಆಗಿರುವ ಅಶ್ವಿನ್, 3503 ರನ್ ಕೂಡ ಕಲೆ ಹಾಕಿದ್ದಾರೆ. ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ 619 ವಿಕೆಟ್ ಕಬಳಿಸಿ ಅಗ್ರಸ್ಥಾನದಲ್ಲಿದ್ದರೆ, ಅಶ್ವಿನ್ 537 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ ವಿಶ್ವ ಕ್ರಿಕೆಟ್‌ನಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಭಾರತ ತಂಡದ ಪರ ಅಶ್ವಿನ್ 106 ಟೆಸ್ಟ್, 116 ಏಕದಿನ ಹಾಗೂ 65 ಟಿ20 ಪಂದ್ಯಗಳನ್ನಾಡಿದ್ದಾರೆ. ಎಲ್ಲ ಮೂರು ಸ್ವರೂಪಗಳಲ್ಲಿ ಒಟ್ಟು 775 ವಿಕೆಟ್ ಕಬಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೊಮ್ಮರಾಜು ಗುಕೇಶ್: ಹದಿನೆಂಟರ ಪೋರ, ಚೆಸ್ ಲೋಕದ ಸಾಮ್ರಾಟ
ಅತಿ ಹೆಚ್ಚು ಸರಣಿ ಶ್ರೇಷ್ಠ – ಹಲವು ಸಾಧನೆಗಳು
ಅಶ್ವಿನ್ ಭಾರತದ ಬೌಲರ್‌ಗಳಲ್ಲಿ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿದ್ದಾರೆ. ಒಟ್ಟು 37 ಬಾರಿ ಐದು ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿರುವ ಅಶ್ವಿನ್, ಶೇನ್ ವಾರ್ನ್ ಜತೆಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕು ಬಾರಿ ಶತಕ ಸಿಡಿಸುವ ಜೊತೆಗೆ ಐದು ವಿಕೆಟ್ ಕಬಳಿಸಿದ ಸಾಧನೆ ಹಿರಿಯ ಸ್ಪಿನ್ನರ್‌ದು. ಇಂಗ್ಲೆಂಡಿನ ಇಯಾನ್ ಬಾಥಮ್ ಅವರು ಐದು ಬಾರಿ ಈ ಸಾಧನೆ ಮಾಡಿದ್ದರು. ಅದಾದ ಬಳಿಕ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. ವೈಟ್-ಬಾಲ್ ಮಾದರಿಯಲ್ಲಿ, ಅಶ್ವಿನ್ ಒಟ್ಟು 181 ಪಂದ್ಯಗಳಲ್ಲಿ ಆಡಿ 228 ವಿಕೆಟ್ ತನ್ನದಾಗಿಸಿಕೊಂಡಿದ್ದಾರೆ. 116 ಏಕದಿನ ಪಂದ್ಯಗಳಲ್ಲಿ 33.20ರ ಸರಾಸರಿಯಲ್ಲಿ 156 ವಿಕೆಟ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ 13ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 65 ಟಿ20 ಪಂದ್ಯಗಳಲ್ಲಿ ಆಡಿರುವ ಅವರು 23.22 ರ ಸರಾಸರಿಯಲ್ಲಿ 72 ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20ಯಲ್ಲಿ ಭಾರತದ ಪರ ಆರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಅಶ್ವಿನ್ ಅವರದ್ದಾಗಿದೆ. ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದವರಲ್ಲಿ ಅನಿಲ್ ಕುಂಬ್ಳೆ ನಂತರದ ಸ್ಥಾನ ಇವರದು.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ ದಾಖಲೆಯನ್ನು ರವಿಚಂದ್ರನ್ ಅಶ್ವಿನ್ ಹೊಂದಿದ್ದಾರೆ. ಇದುವರೆಗೆ 266 ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿರುವ ಅಶ್ವಿನ್ ಅವರ ಬೌಲಿಂಗ್ ವಿಶೇಷತೆಯೇ ಅದು. ಇವರ ಬೌಲಿಂಗ್ ವಿರುದ್ಧ ಎಡಗೈ ಬ್ಯಾಟ್ಸ್ ಮನ್‌ಗಳು ಯಶಸ್ಸು ಕಾಣುವುದೇ ಅಪರೂಪ. ಈ ದಾಖಲೆ ಅವರ ಕ್ರಿಕೆಟ್ ಬದುಕಿನಲ್ಲಿ ಮಹತ್ವದ ಸಾಧನೆಯಾಗಿದೆ.
ಭಾರತ ತಂಡದ ಪರ 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಆಡಿದ ತಂಡದಲ್ಲಿ ಅಶ್ವಿನ್ ಆಡಿದ್ದರು. ಅದರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಅಶ್ವಿನ್ ಪಾತ್ರ ನಿರ್ಣಾಯಕವಾಗಿತ್ತು. ಕೇವಲ ಎರಡು ಮೂರು ವರ್ಷಗಳಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ 2016ರಲ್ಲಿ ಟಿ20 ಹಾಗೂ ಟೆಸ್ಟ್‌ನಲ್ಲಿ ಐಸಿಸಿ ವರ್ಷದ ಅತ್ಯುತ್ತಮ ಕ್ರಿಕೆಟಿಗನೆಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರ ಜೊತೆ ಅರ್ಜುನ ಪ್ರಶಸ್ತಿ, ಪಾಲಿ ಉಮ್ರಿಗಾರ್, ಸಿಯಟ್ ಅಂತಾರಾಷ್ಟ್ರೀಯ ಕ್ರಿಕೆಟಿಗ ಸೇರಿ ಹತ್ತಾರು ಪ್ರಶಸ್ತಿಗಳು ಸಂದಿವೆ.
ಗಾಯಗೊಂಡರೂ ಕುಗ್ಗುತ್ತಿರಲಿಲ್ಲ
ರವಿಚಂದ್ರನ್ ಅಶ್ವಿನ್ ಅಗ್ರಮಾನ್ಯ ಸ್ಪಿನ್ ಬೌಲರ್. ನೇರಾನೇರ ವ್ಯಕ್ತಿತ್ವ ಅವರದು. ಯಾವ ಮುಚ್ಚುಮರೆ ಇಲ್ಲದೇ ಮನಸಿನ ಮಾತುಗಳನ್ನು ಹೇಳುವ ಸಾಮರ್ಥ್ಯ ಇರುವವರು. ಅಪ್ಪಟ ಕ್ರಿಕೆಟಿಗ, ಪಕ್ಕಾ ವೃತ್ತಿಪರತೆ. ಕ್ರಿಕೆಟ್ ವೃತ್ತಿ ಆರಂಭಿಸಿದ ಕೆಲವು ವರ್ಷಗಳಲ್ಲಿ ಎಲ್ಲರಿಗೂ ಕಾಡುವ ಹಾಗೆ ಇವರಿಗೂ ಗಾಯದ ಸಮಸ್ಯೆ ಕಾಡಿತ್ತು. ಕೆಲವೊಮ್ಮೆ ತಾನು ಎಷ್ಟೇ ಪ್ರಯತ್ನ ಹಾಕಿದರೂ ಸರಿಯಾಗಿ ಬೌಲಿಂಗ್ ಮಾಡಲಾಗುತ್ತಿರಲಿಲ್ಲ. ವಿಪರೀತ ನೋವಾಗುತ್ತಿತ್ತು. ಆರು ಬಾಲ್ ಎಸೆದ ನಂತರ ಉಸಿರಾಡಲೂ ಕಷ್ಟ ಎನಿಸುತ್ತಿತ್ತು. ಮಂಡಿ ನೋವು ಹೆಚ್ಚಾದಾಗ ಮುಂದಿನ ಎಸೆತವನ್ನ ಬೌಲಿಂಗ್ ಮಾಡುವಾಗ ಹೆಚ್ಚು ಜಿಗಿಯುತ್ತಿರಲಿಲ್ಲ. ಆದರೆ, ಚೆಂಡನ್ನು ನಿರ್ದಿಷ್ಟ ಬಲದಿಂದಲೇ ಎಸೆಯಬೇಕು. ಜಿಗಿಯಲಿಲ್ಲವೆಂದರೆ ಸೊಂಟ, ಬೆನ್ನು ಮತ್ತು ಭುಜದ ಮೂಲಕ ಶಕ್ತಿ ಹಾಯಿಸಬೇಕು. ಆಗ ನೋವು ಉಲ್ಬಣಿಸುತ್ತಿತ್ತು.
ಮೂರನೇ ಎಸೆತಕ್ಕೆ ಬೇರೆ ರೀತಿಯ ತಂತ್ರದ ಮೊರೆ ಹೋಗಬೇಕಿತ್ತು. ಕೆಲವೊಮ್ಮೆ ಸಹ ಆಟಗಾರರು ಕೂಡ ಇವರ ನೋವನ್ನಾಗಲಿ, ಸಂಕಷ್ಟವನ್ನಾಗಲಿ ಆಲಿಸುತ್ತಿರಲಿಲ್ಲ. ಇಷ್ಟಾದರೂ ಅಶ್ವಿನ್ ಕುಗ್ಗುತ್ತಿರಲಿಲ್ಲ. ಕೆಲವೇ ದಿನಗಳಲ್ಲಿ ಚೇತರಿಸಿಕೊಂಡು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ ಕಡೆಗೆ ಹಾದಿ ತೋರಿಸುತ್ತಿದ್ದರು. ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2 ದಶಕಗಳ ನಂತರ ಕ್ರಿಕೆಟ್‌ನಲ್ಲಿ ಸಂಪೂರ್ಣ ಬಿಡುವು ಮಾಡಿಕೊಂಡು ಕುಟುಂಬದ ಜೊತೆ ಕಾಲ ಕಳೆಯಲು ಹಾಗೂ ಕಿರಿಯರಿಗೆ ಮಾರ್ಗದರ್ಶನ ನೀಡಲು ತಯಾರಾಗಿದ್ದಾರೆ. ಅಶ್ವಿನ್ ಅವರು ತಮ್ಮಂತೆ ಹಲವು ಪ್ರತಿಭೆಗಳನ್ನು, ಅದರಲ್ಲೂ ತಳಮಟ್ಟದಲ್ಲಿರುವ ಕ್ರಿಕೆಟಿಗರನ್ನು ಬೆಳೆಸಿ ಕ್ರೀಡೆಗೆ ಮತ್ತಷ್ಟು ಕೊಡುಗೆ ನೀಡಿ ಮತ್ತಷ್ಟು ದೊಡ್ಡವರಾಗಲಿ.