ರಾಯಚೂರು ತಾಲ್ಲೂಕಿನ ಯರಗೇರಾ ಹೋಬಳಿಯ ಗೋಡಿಹಾಳ ಹಾಗೂ ಯರಗೇರಾ ಗ್ರಾಮಗಳ ಸ್ಮಶಾನ ಕಾರ್ಮಿಕರನ್ನು ಪಂಚಾಯಿತಿ ನೌಕರರು ಎಂದು ಘೊಷಣೆ ಮಾಡುವಂತೆ ಒತ್ತಾಯಿಸಿ ಯರಗೇರಾ ಗ್ರಾಮ ಪಂಚಾಯಿತಿ ಕಚೇರಿಯ ಬಳಿ ಮಂಗಳವಾರ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ ರಾಜ್ಯ ಹಾಗೂ ಯರಗೇರಾ ಹೋಬಳಿ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಯರಗೇರಾ ಸೇರಿ ಜಿಲ್ಲೆ ಹಾಗೂ ರಾಜ್ಯದ ಹಲವೆಡೆ ಬೇಕಾಬಿಟ್ಟಿ ಚಾಕರಿಯಲ್ಲಿ ತೊಡಗಿರುವ ಸ್ಮಶಾನ ಕಾರ್ಮಿಕರು ಶವಗಳನ್ನು ಹೂಳುವುದು, ಕುಣಿ( ಗುಂಡಿ) ತೋಡುವ ಕೆಲಸ ಮಾಡುತ್ತಿದ್ದು ಅಗತ್ಯ ಗೌರವ ಧನ ನೀಡುತ್ತಿಲ್ಲ ಸರ್ಕಾರಿ ಸೌಲಭ್ಯವೂ ಮರೀಚಿಕೆಯಾಗಿದೆ. ಪ್ರತಿ ಸಾರ್ವಜನಿಕ ಸ್ಮಶಾನಕ್ಕೆ ಒಬ್ಬರಂತೆ ಮಸಣ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳ ಮಸಣ ನಿರ್ವಹಕರಾನ್ನಾಗಿ ನೇಮಿಸಿಕೊಳ್ಳಬೇಕು. ಎಲ್ಲಾ ಸ್ಮಶಾನಗಳಲ್ಲಿ ಪಾರಂಪಾರೀಕವಾಗಿ ಕಾರ್ಯನಿರ್ವಹಿಸುವ ಮಸಣ ಕಾರ್ಮಿಕರ ಕುಟುಂಬಗಳ ಗಣತಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿ ಕುಣಿ ಅಗೆಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪರಿಗಣಿಸಿ ಪ್ರತಿ ಕುಣಿಗೆ ಕನಿಷ್ಠ ₹3,000 ಕೂಲಿಯನ್ನು ಪಂಚಾಯತಿಯಿಂದ ಪಾವತಿಸಬೇಕು. ಅಗತ್ಯ ಸುರಕ್ಷತಾ ಕ್ರಮಗಳನ್ನು ಮತ್ತು ಕುಣಿ ಅಗೆಯುವ, ಮುಚ್ಚುವುದಕ್ಕೆ ಬೇಕಾಗುವ ಹಾರಿ, ಸಲಕಿ, ಪುಟ್ಟಿ, ಗುದ್ದಲಿ ಮತ್ತು ಸುರಕ್ಷತಾ ಕ್ರಮಗಳಿಗಾಗಿ ಕಾರ್ಮಿಕರಿಗೆ ಹ್ಯಾಂಡ್ ಗ್ಲೌಸ್ , ಹಾಗೂ ಹಲಗೆ ಬಾರುಸುವವರಿಗೆ ಹಲಗೆ, ಬೂಟೂ, ಮಾಸ್ಕ್ ಮತ್ತು ಸಾಬೂನು ನೀಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಜಿ.ವಿರೇಶ, ಈ ರಂಗನಗೌಡ, ತಿಪ್ಪಯ್ಯ, ಈರೇಶ, ನಲ್ಲಾರೆಡ್ಡಿ ಉಪಸ್ಥಿತರಿದ್ದರು.
