ಕಲಬುರಗಿ ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಈಚೆಗೆ ಬಾಣಂತಿ ಭಾಗ್ಯಶ್ರೀ ಶಿವಾಜಿ (23) ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಆರೋಪದಡಿ ವೈದ್ಯರ ವಿರುದ್ಧ ಬೃಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಳಂದ ತಾಲ್ಲೂಕಿನ ಮಠಿಗೆ ಗ್ರಾಮದ ಬಾಣಂತಿ ಭಾಗ್ಯಶ್ರೀ ಅಫಜಲಪುರ ಸರ್ಕಾರಿ ಆಸ್ಪತ್ರೆ ಹೆರಿಗೆಗೆ ಹೋದಾಗ ವೈದ್ಯರು ಬೆಳಿಗ್ಗೆ ಕರ್ತವ್ಯಕ್ಕೆ ಗೈರಾಗಿ, ನರ್ಸ್ ಮೂಲಕ ಭಾಗ್ಯಶ್ರೀಗೆ ಹೆರಿಗೆ ಮಾಡಿಸಿದ್ದಾರೆ. ಸರಿಯಾಗಿ ಚಿಕಿತ್ಸೆ ನೀಡದಿರುವುದರಿಂದ ರಕ್ತದೊತ್ತಡದಿಂದ ಕುಸಿದು ರಕ್ತಸ್ರಾವವಾಗಿದೆ. ನರ್ಸ್ ಸೂಚನೆಯಂತೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾ ಆಸ್ಪತ್ರೆ ವೈದ್ಯರೂ ಸರಿಯಾಗಿ ಚಿಕಿತ್ಸೆ ಕೊಡದೆ ನಿರ್ಲಕ್ಷ ತೋರಿದ್ದರಿಂದ ಭಾಗ್ಯಶ್ರೀ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಮೃತ ಬಾಣಂತಿಯ ಪತಿ ಶಿವಾಜಿ ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ| ಅಂಗನವಾಡಿ ಕಾರ್ಯಕರ್ತರಿಂದ ಅಹೋರಾತ್ರಿ ಧರಣಿ
ಬಾಣಂತಿ ಭಾಗ್ಯಶ್ರೀ ಸಾವಿನ ಬಗ್ಗೆ ತನಿಖೆ ಮಾಡುವಂತೆ ಆರ್‌ಸಿಎಚ್‌ಒ, ನೋಡಲ್ ಅಧಿಕಾರಿ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಡಿಎಚ್‌ಒ ಶರಣಬಸಪ್ಪ ಕ್ಯಾತನಾಳ ತಿಳಿಸಿದ್ದಾರೆ.