ಹೈದರಾಬಾದ್ ಕರ್ನಾಟಕ ಅಭಿವೃದ್ಧಿ-ಸಮಸ್ಯೆ ಸವಾಲುಗಳು ಕುರಿತು ವಿಭಾಗೀಯ ವಿಚಾರ ಸಂಕಿರಣವನ್ನು ಕಲಬುರಗಿಯಲ್ಲಿ ಡಿಸೆಂಬರ್ 21 ನಡೆಸಲಾಗುತ್ತಿದೆ. ಈ ವಿಚಾರ ಸಂಕಿರಣವು ಇದೇ ಡಿಸೆಂಬರ್ ತಿಂಗಳ 29,30 ಮತ್ತು 31ರವರೆಗೆ ಮೂರು ದಿನಗಳ ಕಾಲ ತುಮಕೂರಿನಲ್ಲಿ ನಡೆಯುತ್ತಿರುವ ಪಕ್ಷದ ರಾಜ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ, ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಲು ಕಲಬುರಗಿ ಜಿಲ್ಲೆಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ವಿಚಾರ ಸಂಕಿರಣದಲ್ಲಿ ಆರ್ಥಿಕ ತಜ್ಞ ಡಾ.ಟಿ.ಆರ್.ಚಂದ್ರಶೇಖರ್ ಹಾಗೂ ಜನಶಕ್ತಿ ಪತ್ರಿಕೆಯ ಸಂಪಾದಕರಾದ ಡಾ.ಎಸ್.ವೈ.ಗುರುಶಾಂತ ಅವರು ಭಾಗವಹಿಸಿ ವಿಷಯ ಮಂಡಿಸಲಿದ್ದಾರೆ. ಕಲಬುರಗಿ ವಿಭಾಗದ ಎಲ್ಲ ಪ್ರತಿನಿಧಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಕೆ ನೀಲಾ ತಿಳಿಸಿದರು.
“ಜನತೆಯ ಕೈಗೆ ಕೆಲಸವಿಲ್ಲದೆ ಈಗಾಗಲೇ ಗುಳೆ ಆರಂಭವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ದೊರೆಯುವ ಏಕೈಕ ಕಾಯ್ದೆಯಾದ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ತೀವ್ರ ನಿರ್ಲಕ್ಷ್ಯ ಎಸಗಲಾಗುತ್ತಿದೆ. ತೊಗರಿ ಬೆಳೆಯು ನೆಟೆ ಹಾಯ್ದು ಬೆಳೆ ನಾಶದ ಲಕ್ಷಣಗಳೇ ಎಲ್ಲ ಕಡೆ ಇವೆ. ಒಟ್ಟು ಬಿತ್ತನೆಯಲ್ಲಿ ಬೆಳೆದ ಬೆಳೆಯು 20% ಇಳುವರಿ ಸಹ ಕೈಗೆ ಬರಲಾರದು ಎಂಬುದು ಇದೆ. ಗುತ್ತಿಗೆ ಪದ್ಧತಿಯ ಕಾರಣವಾಗಿ ಅನೇಕ ವಿಭಾಗಗಳ ನೌಕರರು ಅತ್ಯಂತ ಕಡಿಮೆ ಆದಾಯದಲ್ಲಿ ಬದುಕುವಂತಾಗಿದೆ” ಎಂದು ಕಿಡಿಕಾರಿದರು.
ಉದ್ಯೋಗ ಸೃಷ್ಟಿಯ ನಿರ್ದಿಷ್ಟ ಯೋಜನೆಗಳಿಲ್ಲ. ಅನೇಕ ವರ್ಷಗಳಿಂದ ನಗರ ಉದ್ಯೋಗ ಖಾತ್ರಿ ಕಾಯ್ದೆಗಾಗಿ ದನಿ ಎತ್ತಿದರೂ ಸರಕಾರವು ನಿರ್ಲಕ್ಷ್ಯದ ಧೋರಣೆ ಅನುಸರಿಸುತ್ತಿದೆ. ಕುಟುಂಬದ ನಿರ್ವಹಣೆಗಾಗಿ ಬೆಲೆ ಕಾರಣದಿಂದ ವೆಚ್ಚ ಹೆಚ್ಚಾಗುತ್ತಿದೆ. ಆದರೆ ಆದಾಯವಿಲ್ಲದೆ ಕುಟುಂಬಗಳು ಸಾಲದ ಬಲೆಯಲ್ಲಿ ಬೀಳುತ್ತಿವೆ. ಈ ಸಂದರ್ಭದ ಲಾಭ ಪಡೆದು ಖಾಸಗಿ ಏಜೆನ್ಸಿಗಳು ಸಾಲ ಕೊಟ್ಟು ವಸೂಲಾತಿಗಾಗಿ ಅಮಾನವೀಯ ಮಾರ್ಗಗಗಳನ್ನು ಅನುಸರಿಸುತ್ತಿದ್ದಾರೆ ಎಂದು ನೀಲಾ ತಿಳಿಸಿದರು.

ಮೈಕ್ರೋ ಫೈನಾನ್ಸ್ ಸಾಲದ ಶೂಲಕ್ಕೆ ಬಲಿಯಾಗುವವರ ಸಂಖ್ಯೆಯು ದಿನೇ ದಿನೆ ಹೆಚ್ಚುತ್ತಿದೆ. ಶಿಕ್ಷಣ, ಉದ್ಯೋಗ ಮರಿಚಿಕೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಮತ್ತು ಮಹಿಳೆಯರಲ್ಲಿ ರಕ್ತ ಹೀನತೆ ಹೆಚ್ಚುತ್ತಿದೆ. ಬಾಣಂತಿಯರ ಸಾವುಗಳು ತಲ್ಲಣಗೊಳಿಸುವಷ್ಟು ಹೆಚ್ಚುತ್ತಿವೆ. ಬಳ್ಳಾರಿಯ ನಂತರ ಈಗ ಕಲಬುರಗಿಯಲ್ಲಿಯೂ ಈ ಸಾವುಗಳು ಹೆಚ್ಚುತ್ತಿವೆ” ಎಂದು ಕಳವಳ ವ್ಯಕ್ತಪಡಿಸಿದರು.
“ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಮಸ್ಯೆಗಳ ನಿವಾರಣೆಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರವು ನಿರ್ದಿಷ್ಟ ಕಾರ್ಯ ಯೋಜನೆ ಹಾಕಿಕೊಳ್ಳಬೇಕು. ಆದರೆ ಹೀಗಾಗುತ್ತಿಲ್ಲ. ಹೀಗೆ ಅನೇಕ ಪ್ರಶ್ನೆಗಳು ಈ ಭಾಗದ ಜನರನ್ನು ಕಾಡುತ್ತಿವೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಸಂವಿಧಾನದ ವಿಧಿ 371 ಜೆ ಕಾಯ್ದೆಯ ತಿದ್ದುಪಡಿ ಮಾಡಿ ಜಾರಿಗೊಳಿಸಲಾಗಿದೆ. ಇದು ನಮ್ಮ ಭಾಗಕ್ಕೆ ಎಷ್ಟು ಪ್ರಯೋಜನವಾಗಿದೆ ಎಂಬುದು ಚರ್ಚೆಯಾಗಬೇಕಿದೆ. ನಂಜುಂಡಪ್ಪ ವರದಿಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಅನೇಕ ಶಿಫಾರಸ್ಸುಗಳನ್ನು ಮಾಡಲಾಗಿದೆ. ಅವೆಲ್ಲವೂ ಜಾರಿಯಾಗಿವೆಯೇ ಎಂಬ ಪ್ರಶ್ನೆ ಇದೆ. ಇಲ್ಲಿಯ ಬಡತನ, ನಿರುದ್ಯೋಗ ತೊಡೆಯಲು ಸರಕಾರಕ್ಕೆ ರಾಜಕೀಯ ಇಚ್ಛಾ ಶಕ್ತಿಯ ಅಗತ್ಯವಿದೆ. ಈ ಎಲ್ ಅಂಶಗಳನ್ನು ಚರ್ಚಿಸಲು ಡಿಸೆಂಬರ್ 21ರಂದು ವಿಚಾರ ಸಂಕಿರಣ ನಡೆಯಲಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಡಳಿ ಸದಸ್ಯ ಶ್ರೀಮಂತ ಬಿರಾದಾರ, ಕಾರ್ಯದರ್ಶಿ ಮಂಡಳಿ ಸದಸ್ಯ ಸುಧಾಮ ಧನ್ನಿ, ಕಾರ್ಯದರ್ಶಿ ಮಂಡಳಿ ಸದಸ್ಯ ಶರಣಬಸಪ್ಪ ಮಮಶೆಟ್ಟಿ, ಕಾರ್ಯದರ್ಶಿ ಮಂಡಳಿ ಸದಸ್ಯ ಭೀಮಶೆಟ್ಟಿ ಯಂಪಳ್ಳಿ ಇದ್ದರು.
