ಕಾಫಿ ನಾಡಿನಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿತ್ತು. ಮಲೆನಾಡಿನ ಒತ್ತುವರಿ ಸಮಸ್ಯೆ ಇರುವ ಜನರು, ಒತ್ತುವರಿ ತೆರವು ಮಾಡುವುದನ್ನು ನಿಲ್ಲಿಸಬೇಕೆಂದು ಅರಣ್ಯ ಇಲಾಖೆಗೆ, ಸಚಿವರಿಗೆ ಹಾಗೂ ಸರ್ಕಾರದ ವಿರುದ್ಧವಾಗಿ ಅದೆಷ್ಟೋ ಹೋರಾಟ, ಪ್ರತಿಭಟನೆ ಹಾಗೂ ಕಾಲ್ನಡಿಗೆ ಜಾಥಾವನ್ನೂ ಮಾಡಿದ್ದರು.

ಪ್ರತಿಭಟನೆಗಳ ಬಳಿಕ ಮಲೆನಾಡಿನಲ್ಲಿ ಕೆಲವು ದಿನಗಳಿಂದ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ನಿಲ್ಲಿಸಿದ್ದರು. ಆದರೆ, ಈಗ ಮತ್ತೆ ಅರಣ್ಯ ಇಲಾಖೆಯಿಂದ ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸುತ್ತಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಚ್ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ಬುಧವಾರದಂದು ಬೆಳ್ಳಂ ಬೆಳಿಗ್ಗೆಯೇ ಒತ್ತುವರಿ ಮಾಡಿರುವ ಜಾಗಕ್ಕೆ ಅರಣ್ಯ ಇಲಾಖೆಯ ನೂರಾರು ಅರಣ್ಯ ಇಲಾಖೆ ಸಿಬ್ಬಂದಿಗಳು ತೆರಳಿದ್ದು, ಎಚ್ ತಿಮ್ಮಾಪುರ ಗ್ರಾಮದಲ್ಲಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಅಡಿಕೆ ತೋಟವನ್ನು ತೆರವುಗೊಳಿಸಿದ್ದಾರೆ. ಇಂದು ತೆರವುಗೂಳಿಸಿರುವ ಜಾಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರ ಕುಟುಂಬದ ಟಿ ಜೆ ಗೋಪಿಕುಮಾರ್ ಅವರು ಒತ್ತುವರಿ ಮಾಡಿಕೊಂಡವರು ಎನ್ನಲಾಗಿದೆ.

ಅರಣ್ಯ ಇಲಾಖೆ ಯಾವ ಕಾರಣಕ್ಕೆ ತೆರವುಗೊಳಿಸಿದೆ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ವಲಯ, ಹಾದಿಕೆರೆ ಶಾಖೆ, ಇಟ್ಟಿಗೆ ಗಸ್ತಿನ ವ್ಯಾಪ್ತಿಯಲ್ಲಿ ಬರುವ ಹೆಚ್ ತಿಮ್ಮಾಪುರ ಗ್ರಾಮದಲ್ಲಿ ಸರ್ವೆ ನಂ.25ರ (ಹಳೇ ಸ.ನಂ.10) ಹಾದಿಕೆರೆ ಪಶ್ಚಿಮ ರಾಜ್ಯ ಅರಣ್ಯಕ್ಕೆ ಸೇರಿದ್ದು,(ಎಸ್ ಎಫ್ ಅರಣ್ಯ) ಪ್ರದೇಶವಾಗಿದೆ. ಈ ಸರ್ವೇ ನಂ.25, ಇದು ತಿರುವುಕಾರಿಯ ಭದ್ರಾವತಿ ಅರಣ್ಯ ವ್ಯಾಪ್ತಿಗೆ ಸೇರುತ್ತದೆ.
“ಈ ಸರ್ವೇ ನಂ.25ರಲ್ಲಿ, 6 ಎಕರೆ 28 ಗುಂಟೆ ಜಾಗವನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರ ಕುಟುಂಬದ ಟಿ ಜೆ ಗೋಪಿಕುಮಾರ್, ಸುಮಾರು 20 ವರ್ಷಗಳಿಂದ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಜಾಗದಲ್ಲಿ ಅಡಿಕೆ, ತೆಂಗು, ಇತರೆ ಬೆಳೆಗಳು ಮತ್ತು ಮನೆ ನಿರ್ಮಿಸಿಕೊಂಡಿದ್ದರು” ಎಂದು ವಲಯ ಅರಣ್ಯಾಧಿಕಾರಿ ಆಸೀಫ್ ಮಹಮ್ಮದ್ ಅವರು ಈದಿನ.ಕಾಮ್ ಜೊತೆ ಮಾತನಾಡಿದ್ದಾರೆ.

“ಇಷ್ಟು ವರ್ಷ ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಬೆಳೆದಿರುವಂತಹ ಬೆಳೆಯಾದ ಅಡಿಕೆ, ತೆಂಗು ಹಾಗೂ ಒತ್ತುವರಿ ಜಾಗದ ತೋಟದಲ್ಲಿ ನಿರ್ಮಿಸಿದ್ದ ಮನೆಯನ್ನೂ ಕೂಡಾ ತೆರವುಗೊಳಿಸಲಾಗಿದೆ. ಇವರು 20 ಎಕರೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದ್ದಾರೆ. ಅದರಲ್ಲಿ 6 ಎಕರೆ 28 ಗುಂಟೆ ಒತ್ತುವರಿ ಅರಣ್ಯ ಪ್ರದೇಶವನ್ನು ತೆರವುಗೊಳಿಸಲಾಗಿದೆ” ಎಂದು ವಲಯ ಅರಣ್ಯಾಧಿಕಾರಿ ಆಸೀಫ್ ಮಹಮ್ಮದ್ ತಿಳಿಸಿದ್ದಾರೆ.
ಸ್ಥಳೀಯರ ಈ ಒತ್ತುವರಿ ಕುರಿತು ಅಭಿಪ್ರಾಯ: “ಸಣ್ಣ ರೈತ, ಭೂಮಿ ಇಲ್ಲದವರು, ಮನೆ ಇಲ್ಲದವರು, ಕಡು ಬಡವರು, ಬದುಕು ಕಟ್ಟಿಕೊಳ್ಳಲು ಸಂಕಷ್ಟದಿಂದ ಇರುವವರು, ಎರಡ್ಮೂರು ಅಥವಾ ಐದರಿಂದ ಹತ್ತು ಎಕರೆ ಜಾಗದಲ್ಲಿ ಕೃಷಿ ಅವಲಂಬಿಸಿದ್ದಾರೆ. ಇಂತಹವರ ಜಾಗವನ್ನು ತೆರವುಗೊಳಿಸಬಾರದು. ಇವರು ಹತ್ತಾರು ಎಕರೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿರುವುದು ಸರಿಯಲ್ಲ. ಅವರಿಗೆ ಭೂಮಿ ಇದ್ದರೂ ಒತ್ತುವರಿ ಮಾಡಿರುವುದು ತಪ್ಪು, ಇದನ್ನು ಸರ್ಕಾರ ಹಾಗೂ ಕಾನೂನು ಆದೇಶದಂತೆ ಅರಣ್ಯ ತೆರವುಗೊಳಿಸಿರುವುದು ಸರಿಯೇ ಇದೆ” ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ರಾಜ್ಯ ಸರ್ಕಾರ ಅದೇಶ ಏನಿದೆ ತಿಳಿಯೋಣ: ಕರ್ನಾಟಕ ಅರಣ್ಯ ಅಧಿನಿಯಮ 1963ರ ಸೆಕ್ಷನ್ 64ಎಯಂತೆ ಮಾನ್ಯ ಅಧಿಕೃತ ಅಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತರೀಕೆರೆ ಉಪವಿಭಾಗ ತರೀಕೆರೆ ಇವರ ನ್ಯಾಯಾಲಯದ ಆದೇಶ ಸಂಖ್ಯೆ ಸ.ಆ.ಸಂ.ತ. ಉ.ವಿ. ತರೀಕೆರೆ:64(2):536/2024-25, ಸೆಪ್ಟೆಂಬರ್ 20ರಂತೆ ಸದರಿ ಒತ್ತುವರಿ ಪ್ರದೇಶವು ಹೆಚ್ ತಿಮ್ಮಾಪುರ ಗ್ರಾಮದ ಸ.ನಂ-25(ಹಳೆ ಸ.ನಂ-10) ಪ್ರದೇಶವು ಸರ್ಕಾರಿ ಅಧಿಸೂಚನೆ ಸಂಖ್ಯೆ-R.5323-Ft-80-08-7. 25-01-1909 0 ಹಾದಿಕೆರೆ ಪಶ್ಚಿಮ ರಾಜ್ಯ ಅರಣ್ಯಕ್ಕೆ ಸೇರಿರುವ ಜಾಗವಾಗಿರುವುದರಿಂದ ಇಲ್ಲಿ ಅತಿಕ್ರಮಣ ಪ್ರವೇಶ ನಿಷೇಧಿಸಲಾಗಿದೆ.

ಕೋರ್ಟ್ ಆದೇಶ ನೀಡಿದೆ ಎಂದು ತಿಳಿಯೋಣ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು, ಎಚ್ ತಿಮ್ಮಾಪುರ ಗ್ರಾಮದ(ಗಣಿ ಸ.ನಂ.10)ರಲ್ಲಿ ಟಿ ಜೆ ಗೋಪಿಕುಮಾರ್ ಬಿನ್ ದಿ. ಟಿ ಎಲ್ ಜ್ಞಾನದೇವರಾನ, ರತ್ನಮ್ಮ, ಟಿ ಜೆ ರವಿಕುಮಾರ್ ಹಾಗೂ ಟಿ ಜೆ ಸುಮಾರವರು ಒತ್ತುವರಿ ಮಾಡಿಕೊಂಡಿದ್ದಾರೆ. 6 ಎಕರೆ 28 ಗುಂಟೆ ಪ್ರದೇಶವನ್ನು ತೆರವುಗೊಳಿಸಲು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ತರೀಕೆರ ಉಪವಿಭಾಗ, ತರೀಕೆರೆರವರು ಹೊರಡಿಸಿದ ಒತ್ತುವರಿ ತೆರವು ಆದೇಶವನ್ನು ಹೊರಡಿಸಿದೆ.

ಒತ್ತುವರಿ ಮಾಡಿದವರು ಆದೇಶ ಪ್ರಶ್ನಿಸಿದಾಗ: ಆದೇಶವನ್ನು ಪ್ರಶ್ನಿಸಿ ಟಿ ಜೆ ಗೋಪಿಕುಮಾರ್ ಬಿನ್ ಟಿ ಎಲ್ ಜ್ಞಾನದೇವರಾವ್, ರತ್ನಮ್ಮ, ಟಿ ಜೆ ರವಿಕುಮಾರ್ ಹಾಗೂ ಟಿ ಜೆ ಸುಮಾರವರು ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ತರೀಕೆರೆ ಉಪವಿಭಾಗ ಅದೇಶ ಸಂಖ್ಯೆ: ಸಲಿಸಂ ತುವಿ: ತರೀಕೆರೆ: 64(ಎ) 336/2024 ಸೆಪ್ಟೆಂಬರ್ 20ರಂದು ಆದೇಶವನ್ನು ಎತ್ತಿಹಿಡಿದು ಆದೇಶಿಸಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಸ್ಮಶಾನ ಜಾಗಕ್ಕೆ ದಾಖಲೆ ಇದ್ದರೂ ಕೇಸ್ ಹಾಕಲಾಗುತ್ತಿದೆ: ದಲಿತ ಸಂಘಟನೆ ಆರೋಪ
“ಈ ವೇಳೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಮೇಲ್ಮನವಿ ಪ್ರಾಧಿಕಾರದ ಆದೇಶದಂತೆ ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ತರೀಕೆರೆ ಉಪವಿಭಾಗದ ವಲಯ ಅರಣ್ಯಾಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಲಕ್ಕವಳ್ಳಿ ವಲಯ ಮತ್ತು ಸಿಬ್ಬಂದಿ ಹಾಗೂ ಸಹಾಯಕ ಅರಣ್ಯಾಧಿಕಾರಿಗಳು ಎಂಪಿಎಂ ಘಟಕ ಭದ್ರಾವತಿ ಹಾಗೂ ಸಿಬ್ಬಂದಿಗಳು ಹಾಗೂ ಅರಣ್ಯ ಸಂಚಾರಿ ದಳ ಚನ್ನಗಿರಿಯವರ ಸಹಯೋಗದಲ್ಲಿ ಒತ್ತುವರಿ ಮಾಡಿದ ಜಾಗವನ್ನು ತೆರವುಗೊಳಿಸಲಾಗಿದೆ” ಎಂದು ವಲಯ ಅರಣ್ಯಾಧಿಕಾರಿ ಮಾಹಿತಿ ತಿಳಿಸಿದರು.