ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ, ಅಪರಿಚಿತ ಶವದ ವಾರಸುದಾರರು ಪತ್ತೆಯಾಗದೆ ಇರುವುದರಿಂದ, ಬೀಡಿನಗುಡ್ಡೆಯ ದಫನಭೂಮಿಯಲ್ಲಿ ದಫನ ಕಾರ್ಯವು ಗೌರವಯುತವಾಗಿ ಬುಧವಾರ ನಡೆಸಲಾಯಿತು. ದಫನ ಕಾರ್ಯವು ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರ ನೇತ್ರತ್ವದಲ್ಲಿ ಪೋಲಿಸರ ಸಮಕ್ಷಮ ನಡೆಯಿತು. ಮಣಿಪಾಲ ಪೋಲಿಸ್ ಠಾಣೆಯ ಎ ಎಸ್ ಐ ರಾಮ ಪ್ರಭು, ವಿದ್ಯಾ ಟಿ, ಕಾನೂನು ಪ್ರಕ್ರಿಯೆ ನಡೆಸಿದರು. ನಾಗರೀಕ ಸಮಿತಿಯ ಕಾರ್ಯಕರ್ತರಾದ ಹರೀಶ್ ಪೂಜಾರಿ, ಸತೀಶ್ ಕುಮಾರ್ ಭಾಗಿಯಾಗಿದ್ದರು. ಪ್ಲವರ್ ವಿಷ್ಣು, ವಿಕಾಸ್ ಶೆಟ್ಟಿ, ನಗರ ಸಭೆ, ಜಿಲ್ಲಾಸ್ಪತ್ರೆ ಸಹಕರಿಸಿತು.
ಗುರುತು ಪತ್ತೆಹಚ್ಚಲಾಗದಷ್ಟು ಕೊಳೆತಿರುವ ಗಂಡಸಿನ ಕಳೇಬರವೊಂದು, ಹೆರ್ಗ ಗ್ರಾಮದ ಸಣ್ಣಕ್ಕಿಬೆಟ್ಟು, ಕಲಾಭೂಮಿ ಕಟ್ಟಡದ ಹಿಂಬಾಗದ ಹಾಡಿಯಲ್ಲಿ ಡಿ.6 ರಂದು ಪತ್ತೆಯಾಗಿತ್ತು. ಮರದ ಕೊಂಬೆಗೆ ನೇಣುಬಿಗಿದು ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿತ್ತು. ವ್ಯಕ್ತಿ ಮೃತಪಟ್ಟು 20 ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿತ್ತು. ಶವವು ಕೊಳೆತಿರುವುದರಿಂದ ನೇಣುಕುಣಿಕೆಯಲ್ಲಿ ಭಾರ ತಡೆಯಲಾಗದೆ, ದೇಹದಿಂದ ರುಂಡವು ಬೆರ್ಪಟ್ಟಿತ್ತು. ಮಣಿಪಾಲ ಪೋಲಿಸರು ಮಹಜರು ಪ್ರಕ್ರಿಯೆ ನಡೆಸಿ, ಸಮಾಜಸೇವಕ ನಿತ್ಯಾನಂದ ಒಳಕಾಡುವರ ನೆರವು ಪಡೆದು, ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವ ರಕ್ಷಣಾ ಘಟಕದಲ್ಲಿ ರಕ್ಷಿಸಿ ಇಟ್ಟಿದ್ದರು. ಶವ ಪತ್ತೆಯಾದ 13 ದಿನಗಳ ಬಳಿಕ ಅಂತ್ಯಸಂಸ್ಕಾರ ನಡೆಯಿತು.
