ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನ ಮಾಡಿರುವುದನ್ನು ದಲಿತ ಸಂಘರ್ಷ ಸಮಿತಿ ಖಂಡಿಸಿದೆ.
“ಕೆಲವರಿಗೆ ಅಂಬೇಡ್ಕರ್- ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎಂದು ಹೆಸರು ಹೇಳುವುದೇ ಪ್ಯಾಷನ್ ಆಗಿದ್ದು ಇದು ವ್ಯಸನವಾಗಿ ಬಿಟ್ಟಿದೆ. ಅಂಬೇಡ್ಕರ್ ಹೆಸರಿಗೆ ಬದಲಾಗಿ ದೇವರ ಹೆಸರನ್ನಾದರೂ ಇಷ್ಟು ಬಾರಿ ಹೇಳಿದ್ದರೆ ಅವರಿಗೆ ಏಳೇಳು ಜನ್ಮಗಳಿಗೆ ಸ್ವರ್ಗ ಲಭಿಸುತ್ತಿತ್ತು” ಎಂದು ಹೇಳುವ ಮೂಲಕ ಅಂಬೇಡ್ಕರ್ ಬಗೆಗಿನ ತನ್ನ ಹಾಗೂ ತನ್ನ ಸಂಘ ಪರಿವಾರದ ತಮ್ಮ ಎಂದಿನ ತೀವ್ರ ಅಸಹನೆ-ದ್ವೇಷ ಹಾಗೂ ದಲಿತ ಸಮುದಾಯದ ಬಗ್ಗೆ ಆರ್.ಎಸ್.ಎಸ್-ಬಿಜೆಪಿಗಿರುವ ಅಸಡ್ಡೆ ಮತ್ತು ತುಚ್ಛ ಭಾವನೆಯನ್ನು ಹೊರ ಹಾಕಿದ್ದಾರೆ. ಆದ್ದರಿಂದ ಅಮಿತ್ ಶಾ ತನ್ನ ಈ ಕೀಳು ಮಟ್ಟದ ಹೇಳಿಕೆಯನ್ನು ಈ ಕೂಡಲೇ ಹಿಂಪಡೆಯಬೇಕು ಹಾಗೂ ಅಂಬೇಡ್ಕರ್ ಪ್ರತಿಮೆ ಎದುರು ಮಂಡಿಯೂರಿ ಕುಳಿತು ದೇಶದ ಕ್ಷಮೆಯಾಚಿಸಬೇಕೆಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸುತ್ತದೆ.
ಡಾ. ಬಿ.ಆರ್.ಅಂಬೇಡ್ಕರ್ ಅವರು ಪ್ರಬಲವಾಗಿ ಪ್ರತಿಪಾದಿಸಿ ಕಟ್ಟಿಕೊಟ್ಟ ಸಂಸದೀಯ ಪ್ರಜಾಪ್ರಭುತ್ವದ ಅತ್ಯುನ್ನತ ವೇದಿಕೆಯಾದ ಸಂಸತ್‌ಅನ್ನು ಬಿಜೆಪಿ ಕಳೆದ ಹತ್ತು ವರ್ಷಗಳಲ್ಲಿ ‘ಪುಂಡರ ಗೋಷ್ಠಿ’ಯ ಮಟ್ಟಕ್ಕೆ ಇಳಿಸಿದೆ. ಆರ್.ಎಸ್.ಎಸ್. ಬಿಜೆಪಿ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತಿತರ ಸಂಘ ಪರಿವಾರಗಳು ದಲಿತ, ದಮನಿತ-ಶೋಷಿತ, ತಳ ಸಮುದಾಯಗಳ, ಮಹಿಳೆಯರ ಹಾಗೂ ಶೂದ್ರ ಸಮುದಾಯಗಳ ಬದುಕಿಗೆ ಆಸರೆಯಾಗಲಿಲ್ಲ. ಅಂಬೇಡ್ಕರ್ ಎಂಬ ಜ್ಞಾನದ ಬೆಳಕು, ಅರಿವಿನ ಹಣತೆ, ಸ್ವಾಭಿಮಾನದ ಹೋರಾಟ ಈ ಸಮುದಾಯಗಳ ಬದುಕಿಗೆ ಒಂದಷ್ಟು ಘನತೆ-ಗೌರವ ತಂದು ಕೊಟ್ಟಿದೆ ಮತ್ತು ಬದುಕುವ ಮಾರ್ಗ ಕಲ್ಪಿಸಿದೆ ಎಂಬುದನ್ನು ಈ ನಾಯಕರು ಅರ್ಥಮಾಡಿಕೊಳ್ಳಬೇಕು. ಈ ಸಮುದಾಯಗಳು ಅಂಬೇಡ್ಕರ್ ಅವರಿಗೆ ಆಗುವ ಅಪಮಾನ- ಆಗೌರವಗಳನ್ನು ಎಂದಿಗೂ ಸಹಿಸುವುದಿಲ್ಲ. ಹಾಗಾಗಿ ನಿಮ್ಮ ನಡೆ-ನುಡಿಗಳು ಕುರಿತು ಎಚ್ಚರವಿರಲಿ ಎಂದು ದಸಂಸದ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರೆಗೋಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಅಂಬೇಡ್ಕರ್’- ಅಮಿತ್ ಶಾ ಆಡಿದ ಮಾತಲ್ಲ, ಹೊಟ್ಟೆಯೊಳಗಿನ ಹೊಲಸು
ಜಗತ್ತಿನ ಮಹಾನ್ ಪಾತಕಗಳಾದ ಅಸ್ಪೃಶ್ಯತೆ, ಜಾತೀಯತೆ, ಲಿಂಗತಾರತಮ್ಯ, ಮೇಲು-ಕೀಳು, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ ಹಾಗೂ ಸತಿ ಸಹಗಮನ ಪದ್ಧತಿಗಳ ವಾರಸುದಾರರು ಅಮಿತ್ ಶಾ ಮತ್ತವರ ರಾಜಕೀಯ ಪಕ್ಷ ಬಿಜೆಪಿ. ಸ್ವಾತಂತ್ರ್ಯ ಪೂರ್ವದಿಂದಲೂ ಅಂಬೇಡ್ಕರ್ ಮತ್ತು ದಲಿತ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗಳಿಗೆ ಪೂರಕವಾದ ವಿಚಾರ-ಸನ್ನಿವೇಶ ನಿರ್ಮಾಣವಾದಾಗಲೆಲ್ಲ ಇವರು ದಲಿತರ ಹಕ್ಕುಗಳ ಬಗ್ಗೆ ತೀವ್ರ ತಿರಸ್ಕಾರ, ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಮಿತ್ ಶಾ ಹಾಗೂ ಅವರ ಬಿಜೆಪಿ-ಆರ್.ಎಸ್.ಎಸ್ ಸಂಘ ಪರಿವಾರ ಇಡೀ ದೇಶವನ್ನು ಮೌಡ್ಯದ ಕತ್ತಲ ಕೂಪಕ್ಕೆ ತಳ್ಳಿ ರಾಜಕೀಯ ಲಾಭ ಪಡೆಯತ್ತಿದೆ. ಈ ಬಗ್ಗೆ ದಲಿತ, ದಮನಿತ ತಳ ಸಮುದಾಯಗಳು, ಸಮಸ್ತ ಹಿಂದುಳಿದ ಜಾತಿಗಳು ಹಾಗೂ ಇಡೀ ಶೂದ್ರ ಸಮುದಾಯಗಳು ಎಚ್ಚರ ವಹಿಸಬೇಕು. ಅಮಿತ್ ಶಾ ಅವರ ದುರ್ವತನೆಯನ್ನು ಮರೆ ಮಾಚಲು ಪ್ರಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯು ಆಗಿರುವ ತಪ್ಪನ್ನು ಒಪ್ಪಿಕೊಳ್ಳಬೇಕೆಂದು ಗುರುಪ್ರಸಾದ್ ಕೆರೆಗೋಡು ಆಗ್ರಹಿಸಿದ್ದಾರೆ.