ಮೂರು ದಿನ ನಡೆಯುವ ಅಕ್ಷರ ಜಾತ್ರೆಗಿಂತ ಬಿಜೆಪಿಯ ಯೋಜಿತ ಪ್ರಚಾರದ ಸುತ್ತ ಸುದ್ದಿಗಳು ಗಿರಕಿ ಹೊಡೆಯುತ್ತಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ
ಸಕ್ಕರೆಯ ನಾಡು ಮಂಡ್ಯದಲ್ಲಿ ಅಕ್ಷರ ಜಾತ್ರೆ ರಂಗೇರಿದ್ದರೆ, ಇತ್ತ ಕನ್ನಡದ ಮುಖ್ಯವಾಹಿನಿ ಮಾಧ್ಯಮಗಳು ಬಿಜೆಪಿಯ ಎಂಎಲ್‌ಸಿ ಸಿ.ಟಿ.ರವಿ ಜಪದಲ್ಲಿ ಕಳೆದುಹೋಗಿವೆ. ಕ್ಷಣಕ್ಷಣಕ್ಕೂ ಸಿ.ಟಿ.ರವಿಯ ಕುರಿತು ಸಿಗುತ್ತಿರುವಷ್ಟು ಅಪ್‌ಡೇಟ್, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರದಲ್ಲಿ ತೆರೆಮರೆಗೆ ಸರಿದಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ದೊಡ್ಡ ದೊಡ್ಡ ಮಾಧ್ಯಮಗಳ ಯೂಟ್ಯೂಬ್ ಚಾನೆಲ್‌ಗಳಲ್ಲಿ ಅಪ್‌ಲೋಡ್ ಆಗಿರುವ ಸುದ್ದಿ ತುಣುಕುಗಳನ್ನು ನೋಡಿದರೆ ಜನ ಸಾಕು ಸುಸ್ತಾಗುವಷ್ಟು ಸಿ.ಟಿ. ರವಿ ಜಪ ನಡೆದಿದೆ. ‘ಸಿ.ಟಿ. ರವಿಯನ್ನು ಅಲೆದಾಡಿಸಿದ ಪೊಲೀಸರು, ಕಣ್ಣೀರು ಹಾಕಿದ ಸಿ.ಟಿ. ರವಿ, ಹೆಬ್ಬಾಳ್ಕರ್ ಸುದ್ದಿಗೋಷ್ಠಿ, ಬಿಜೆಪಿ ನಾಯಕನ ಪ್ರತಿಕ್ರಿಯೆ, ಚಿಕ್ಕಮಗಳೂರಲ್ಲಿ ಬಿಜೆಪಿ ಪ್ರತಿಭಟನೆ’ ಇತ್ಯಾದಿ ಸುದ್ದಿಗಳೇ ರಾರಾಜಿಸಿವೆ. ಕೆಲವು ಮಾಧ್ಯಮಗಳು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಕ್ಷರ ಜಾತ್ರೆಯ ಒಂದು ಲೈವ್ ಲಿಂಕ್ ಹಾಕಿ ಸುಮ್ಮನಾಗಿವೆ. ಮೂರು ದಿನ ನಡೆಯುವ ಅಕ್ಷರ ಜಾತ್ರೆಗಿಂತ ಬಿಜೆಪಿಯ ಯೋಜಿತ ಪ್ರಚಾರದ ಸುತ್ತ ಸುದ್ದಿಗಳು ಗಿರಕಿ ಹೊಡೆಯುತ್ತಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
ಈ ಬಾರಿಯ ಸಾಹಿತ್ಯ ಸಮ್ಮೇಳನ ಮಾಂಸಾಹಾರ ಮತ್ತು ಸಸ್ಯಾಹಾರ ವಿಚಾರವಾಗಿ ಮಹತ್ವ ಪಡೆದುಕೊಂಡಿತ್ತು. ಬಹುಜನರ ಆಹಾರ ಸಂಸ್ಕೃತಿಯ ಬಗ್ಗೆ ಬಿತ್ತಿರುವ ಕೀಳರಿಮೆಯನ್ನು ಹೋಗಲಾಡಿಸಲು ‘ಮಾಂಸಾಹಾರವನ್ನು ಸಮ್ಮೇಳನದಲ್ಲಿ ಏರ್ಪಡಿಸಬೇಕು’ ಎಂಬ ಆಗ್ರಹವನ್ನು ಮಂಡ್ಯದ ಜನರು ಮಾಡಿದ್ದರು. ಈ ಎಲ್ಲ ವಿಚಾರಗಳ ಕಾರಣಕ್ಕೆ ಸಮ್ಮೇಳನ ಎಲ್ಲರ ದೃಷ್ಟಿ ನೆಟ್ಟಿತ್ತು. ಇದೇ ವೇಳೆಯಲ್ಲಿ ಸಿ.ಟಿ.ರವಿಯವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲವಾಗಿ ನಿಂದಿಸಿದ್ದಾರೆಂಬುದು ಸುದ್ದಿಯಾಗಿ, ಅವರ ಬಂಧನವೂ ಆಗಿದೆ. ಆದರೆ ಇದೇ ಹೊತ್ತಿನಲ್ಲಿ ಕನ್ನಡ ನಾಡು, ನುಡಿಯ ಚಿಂತನ- ಮಂಥನ ನಡೆಯುವ ಸಾಹಿತ್ಯ ಸಮ್ಮೇಳನದ ಲೈವ್ ಅಪ್‌ಡೇಟ್‌ಗಳನ್ನು ನೀಡುವಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ಸಂಪೂರ್ಣವಾಗಿ ಕಡೆಗಣಿಸಿವೆ.
ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿರುವ ಚಿತ್ರ ಸಾಹಿತಿ ಕವಿರಾಜ್, “ವರ್ಷಕ್ಕೊಮ್ಮೆ ನಡೆಯುವ ಕನ್ನಡದ ನುಡಿ ಜಾತ್ರೆ, ಇಡೀ ನಾಡೇ ಸಂಭ್ರಮಿಸುವ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಆಗುತ್ತಿದೆ. ಸದ್ಯಕ್ಕಂತೂ ಚಂದನ ಹೊರತುಪಡಿಸಿ ಯಾವ ಕನ್ನಡ ಚಾನೆಲ್ ಅಲ್ಲೂ ಅದರ ನೇರ ಪ್ರಸಾರ ಇಲ್ಲ. ನಿನ್ನೆ ನಡೆದ ಪ್ರಕರಣದಲ್ಲಿ ಸಿ.ಟಿ. ರವಿ ಅವರಿಗೆ ಬೇಲ್ ಆಗುತ್ತೋ ಇಲ್ವೋ ಅನ್ನೋ ಭಯಂಕರ ನೇರಪ್ರಸಾರ ನಿನ್ನೆಯಿಂದ ನಡೀತಿದೆ” ಎಂದು ಬೇಸರ ಹೊರಹಾಕಿದ್ದಾರೆ.
ಈ ಕುರಿತು ‘ಈದಿನ’ಕ್ಕೆ ಪ್ರತಿಕ್ರಿಯಿಸಿದ ಮಂಡ್ಯದ ಹೋರಾಟಗಾರ ಕೃಷ್ಣೇಗೌಡ ಅವರು, “ಮಾಧ್ಯಮ ಉದ್ಯಮವಾದಾಗ ಕನ್ನಡ ಸಾಹಿತ್ಯ ಅಸ್ಮಿತೆಯನ್ನು ಮರೆತು ಸಿ.ಟಿ. ರವಿ ಹಿಂದೆ ಮಾಧ್ಯಮಗಳು ಬೀಳುವುದು ಸಹಜ ಪ್ರಕ್ರಿಯೆ. ಆದರೆ ರವಿ ಒಬ್ಬ ಕ್ರಿಮಿನಲ್ ಎಲಿಮೆಂಟ್. ಮನಷ್ಯರಾದವರು ಬಳಸಬಾರದ ಪದವನ್ನು, ಒಬ್ಬ ಜನಪ್ರತಿನಿಧಿಯಾಗಿ ಸದನದ ಒಳಗೆ ಬಳಸಿದ್ದಾನೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅತ್ಯಂತ ತುಚ್ಛವಾಗಿ ನಿಂದಿಸಿದಾತನ ಹಿಂದೆ ಬಿದ್ದಿರುವ ಮಾಧ್ಯಮಗಳಿಗೂ, ಸಿ.ಟಿ.ರವಿ ವ್ಯಕ್ತಿತ್ವಕ್ಕೂ ಯಾವುದೇ ವ್ಯತ್ಯಾಸವಿಲ್ಲ” ಎಂದು ಅಭಿಪ್ರಾಯಪಟ್ಟರು.