ಇಂಗ್ಲಿಷ್ ಮಾಧ್ಯಮ ಶಾಲೆಗಳೇ ಬೇಡ, ಕನ್ನಡ ಮಾಧ್ಯಮ ರಾಜ್ಯದಲ್ಲಿ ಕಡ್ಡಾಯವಾಗಲಿ: ಗೊ ರು ಚನ್ನಬಸಪ್ಪ

Date:

Advertisements

ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯುವುದನ್ನಾಗಲಿ, ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನಾಗಲೀ ಕೂಡಲೇ ನಿಲ್ಲಿಸಬೇಕು. ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮವೇ ರಾಜ್ಯದಲ್ಲಿ ಕಡ್ಡಾಯವಾಗಬೇಕು ಎಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಹಕ್ಕೊತ್ತಾಯ ಮಂಡಿಸಿದರು.

ಮಂಡ್ಯದಲ್ಲಿ ಶುಕ್ರವಾರ ಆರಂಭವಾದ ಸಮ್ಮೇಳನದ ಉದ್ಘಾಟನೆ ಭಾಷಣ ಮಾಡಿದ ಅವರು, “ನಮ್ಮ ಕನ್ನಡ ಭಾಷೆಯು ಸಮೃದ್ಧವಾಗಿ ಮತ್ತು ಶ್ರೀಮಂತವಾಗಿ ಬೆಳೆಯುತ್ತಿದೆ. ಭಾಷೆ ಬಳಸಿದಷ್ಟೂ ಹುಲುಸಾಗಿ ಬೆಳೆಯುತ್ತದೆ. ಭಾಷೆ ನಮ್ಮ ಬದುಕಿನ ಉಸಿರು. ಅದು ನಮ್ಮ ವರ್ತಮಾನವೂ ಹೌದು. ಭವಿಷ್ಯವೂ ಹೌದು. ಎಂತಲೇ ನಮಗೆ ಭಾಷೆಯೊಡನೆ ಒಂದು ಭಾವನಾತ್ಮಕ ಸಂಬಂಧವಿದೆ. ತಂತ್ರಜ್ಞಾನದ ನೆರವು ಪಡೆದು ಕನ್ನಡವನ್ನು ಕಿರಿಯ ಪೀಳಿಗೆಯ ಎದೆಗೆ ಬೀಳುವ ಅಕ್ಷರವಾಗಿಸಬೇಕು” ಎಂದರು.

“ಸಂವಿಧಾನದ 351ನೇ ವಿಧಿಯ ಅನ್ವಯ ಹಿಂದಿ ಭಾಷೆಗೆ ಆದ್ಯತೆ ನೀಡುವ ಅವಕಾಶವಿದ್ದರೂ ಅದು ಹೇರಿಕೆ ಮತ್ತು ದಬ್ಬಾಳಿಕೆ ರೂಪದಲ್ಲಿ ಜಾರಿಗೆ ಬರಬಾರದು. ಕನ್ನಡನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎನ್ನುವುದು ನಿರ್ವಿವಾದ. ಇದನ್ನು ನಮ್ಮ ರಾಜ್ಯ ಸರ್ಕಾರ ಸರ್ವರೀತಿಯಲ್ಲೂ ಕೇಂದ್ರ ಸರ್ಕಾರಕ್ಕೆ ಮನಗಾಣಿಸಬೇಕು. ಇದಕ್ಕೆ ಕನ್ನಡಿಗರು ಪ್ರತಿರೋಧ ತೋರಿಸಿದರೆ ಅದು ತಪ್ಪೇನಲ್ಲ. ತಮಿಳುನಾಡು ಮುಂತಾದ ಮಾದರಿಗಳು ನಮ್ಮ ಜೊತೆಗೆ ಇದ್ದೇ ಇವೆ. ಕೇಂದ್ರದ ಪ್ರಭಾವಿ ಸಚಿವರುಗಳು ಈ ವಿಚಾರವನ್ನು ಆಗಾಗ ಪ್ರಸ್ತಾಪ ಮಾಡುತ್ತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ” ಎಂದು ಹೇಳಿದರು.

Advertisements

ಈ ಸುದ್ದಿ ಓದಿದ್ದೀರಾ? 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಚಾಲನೆ, ಅಕ್ಷರ ಜಾತ್ರೆಗೆ ಹರಿದು ಬಂದ ಜನಸಾಗರ

“ಕನ್ನಡನಾಡಿನಲ್ಲಿ ತಮಗೆ ಸಾಂವಿಧಾನಿಕವಾಗಿ ಲಭ್ಯವಾಗುವ ಎಲ್ಲ ಸೌಲಭ್ಯಗಳನ್ನು ಪಡೆದು, ಪ್ರಭಾವ ಬಳಸಿ ಎಲ್ಲ ರಿಯಾಯಿತಿಗಳನ್ನು ಪಡೆದು ಇಲ್ಲಿ ಔದ್ಯಮಿಕವಾಗಿ ನೆಲೆಯೂರಿ ಲಾಭದಾಯಕವಾಗಿ ಬೆಳೆಯುವ ಉದ್ಯಮಗಳು ಕನ್ನಡಿಗರಾದ ವಿದ್ಯಾವಂತ ಅಭ್ಯರ್ಥಿಗಳಿಗೆ ನಿರ್ದಿಷ್ಟ ಪ್ರಮಾಣದ ಉದ್ಯೋಗ ನೀಡುವುದು ಅವುಗಳ ಋಣಸಂದಾಯದ ಮಾರ್ಗವೆಂದು ಭಾವಿಸಬೇಕು. ಇದು ಅವುಗಳ ನೈತಿಕ ಜವಾಬ್ದಾರಿ ಕೂಡ. ಆದರೆ ಇದನ್ನು ತಪ್ಪಿಸಲು ಹಲವಾರು ದಾರಿಗಳನ್ನು ಹುಡುಕುವ ಉದ್ಯಮಗಳನ್ನು ಕರ್ನಾಟಕ ಸರ್ಕಾರ ತನ್ನ ಷರತ್ತುಗಳು ನಿಯಮಗಳಿಂದ ಪ್ರತಿಬಂಧಿಸಿದರೆ ತಪ್ಪೇನಿಲ್ಲ. ಕನ್ನಡದ ನೆಲ ಜಲ ನೈಸರ್ಗಿಕ ಸಂಪನ್ಮೂಲಗಳನ್ನು ಒದಗಿಸುವ ಮೊದಲು ಸರ್ಕಾರ ಇದಕ್ಕೆ ಮುಚ್ಚಳಿಕೆಯನ್ನು ಬರೆಸಿಕೊಂಡರೂ ತಪ್ಪಿಲ್ಲ. ಈ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆದಿದೆಯಾದರೂ ನಿರ್ದಿಷ್ಟ ಕ್ರಮ ಅತ್ಯಗತ್ಯ ಎಂದು ಕನ್ನಡಿಗರು ಹಕ್ಕೊತ್ತಾಯ ಮಂಡಿಸಬೇಕು” ಎಂದು ಹೇಳಿದರು.

“ಕರ್ನಾಟಕದಲ್ಲಿಯೂ ಕನ್ನಡಿಗರಿಗೆ ಉದ್ಯೋಗದ ಅವಕಾಶಗಳು ಹೆಚ್ಚು ದೊರೆಯುತ್ತಿಲ್ಲ. ನಿರುದ್ಯೋಗವು ಯುವಜನರನ್ನು ಕಾಡುತ್ತಿದೆ. ಸರೋಜಿನಿ ಮಹಿಷಿ ವರದಿಯು ಕನ್ನಡಿಗರಿಗೆ ಉದ್ಯೋಗದಲ್ಲಿ 80% ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿತ್ತು. ಖಾಸಗಿ ವಲಯದಲ್ಲೂ ಉದ್ಯೋಗ ಮೀಸಲಾತಿ ನೀಡುವಂತೆಯೂ ಹೇಳಿತ್ತು. ಆದರೆ, ಆ ವರದಿ ಇನ್ನೂ ಜಾರಿಯಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ತಮ್ಮ ಇಡೀ ಭಾಷಣದಲ್ಲಿ ಭಾಷಾ ಬಿಕ್ಕಟ್ಟುಗಳು, ಅಂತಾರಾಜ್ಯ ಭಾಷಾ ವಿನಿಮಯ, ಹಿಂದಿ ಹೇರಿಕೆ, ತಂತ್ರಜ್ಞಾನದ ಅವಲಂಬನೆ, ಗಡಿನಾಡ ಕನ್ನಡಿಗರ ಬವಣೆ, ಪುಸ್ತಕ ಸಂಸ್ಕೃತಿಯ ಪೋಷಣೆ, ಮಹಿಳೆಯರಿಗೆ ದೊರಕದ ಸ್ಥಾನ-ಮಾನ ಸೇರಿದಂತೆ ಇಪ್ಪತ್ತೊಂದು ಪ್ರಮುಖ ಅಂಶಗಳ ಕಡೆಗೆ ಸಮ್ಮೇಳನದಲ್ಲಿದ್ದ ಸರ್ಕಾರದ ಪ್ರತಿನಿಧಿಗಳು ಮತ್ತು ಮತ್ತು ಸಾವಿರಾರು ಜನರ ಗಮನ ಸೆಳೆದರು.

ಗೊ.ರು.ಚನ್ನಬಸಪ್ಪ ಮಂಡಿಸಿದ ಹಕ್ಕೊತ್ತಾಯಗಳು

1 ಪ್ರಾಥಮಿಕ ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಬೋಧನೆಯಲ್ಲಿ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಯಾವ ಕಾರಣದಿಂದಲೂ ಬೇರಾವ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೇರಕೂಡದು. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯುವುದನ್ನಾಗಲಿ, ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನಾಗಲೀ ಕೂಡಲೇ ನಿಲ್ಲಿಸಬೇಕು.

2 ಅಗತ್ಯವೆನಿಸಿರುವ ಇಂಗ್ಲಿಷ್ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಬೋಧನೆಗೆ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು ಮತ್ತು ಗ್ರಾಮೀಣ ಭಾಗದ ಕನ್ನಡ ಶಾಲೆಗಳನ್ನು, ಎಲ್ಲ ಸೌಲಭ್ಯಗಳಿಂದ ಪೂರ್ಣವಾಗಿ ಸಜ್ಜುಗೊಳಿಸಬೇಕು. ರಾಜ್ಯದ ಆಯವ್ಯಯದಲ್ಲಿ ಕನಿಷ್ಟ ಶೇ.೧೫ರಷ್ಟು ಭಾಗ ಶಿಕ್ಷಣಕ್ಕೆ ಮೀಸಲಿರಬೇಕು.

3 ಕಳೆದ ಅನೇಕ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಸರೋಜಿನ ಮಹಿಷಿ ವರದಿಯನ್ನು ಕೂಡಲೇ ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸಬೇಕು. ಅನುಷ್ಠಾನದ ಮೇಲ್ವಿಚಾರಣೆಯ ಹೊಣೆಗಾರಿಕೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಬೇಕು. ಸಾರ್ವಜನಿಕವಿರಲಿ, ಖಾಸಗಿಯಿರಲಿ ಉದ್ಯೋಗಾವಕಾಶಗಳಲ್ಲಿ ವಿಶೇಷ ಅರ್ಹತೆಯ ಉನ್ನತ ಹುದ್ದೆಗಳ ಹೊರತಾಗಿ ಸಿ ಮತ್ತು ಡಿ ವರ್ಗದ ಹುದ್ದೆಗಳನ್ನು ಪೂರ್ಣವಾಗಿ ಕನ್ನಡಿಗರಿಗೇ ಮೀಸಲಿಡಬೇಕು. ಕಾಲ-ಕಾಲಕ್ಕೆ ಉದ್ಯೋಗ ಮಾಹಿತಿ ದೊರೆಯುವಂತಾಗಬೇಕು.

4 ನಾಡಿನ ವಿಶೇಷ ವ್ಯವಸ್ಥೆಗಳಾದ ಕನ್ನಡ ವಿಶ್ವವಿದ್ಯಾಲಯ ಮತ್ತು ಜಾನಪದ ವಿಶ್ವವಿದ್ಯಾಲಯಗಳು ಅನುಭವಿಸುತ್ತಿರುವ ಹಣಕಾಸು ಮತ್ತು ಭೋದನಾ ಸಿಬ್ಬಂದಿ ಕೊರತೆಯನ್ನು ನಿವಾರಿಸಲು ಕೂಡಲೇ ಕ್ರಮಕೈಗೊಳ್ಳಬೇಕು.

5 ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವನ್ನು ಸ್ವತಂತ್ರ ಸ್ವಾಯತ್ತ ಕೇಂದ್ರವನ್ನಾಗಿ ಬೆಳೆಸಲು ಮತ್ತು ಕೇಂದ್ರದ ನೆರವನ್ನು ಪಡೆಯಲು ಅಗತ್ಯ ವ್ಯವಸ್ಥೆಮಾಡಬೇಕು.

6 ಅಪಾರ ಸಂಭಾವ್ಯ ಸಾಮರ್ಥ್ಯವಿರುವ ಪ್ರವಾಸೋದ್ಯಮವನ್ನು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ದೃಷ್ಟಿಯಿಂದಷ್ಟೇ ಅಲ್ಲದೆ ಆದಾಯ ಮತ್ತು ಉದ್ಯೋಗಾವಕಾಶ ದೃಷ್ಟಿಯಿಂದಲೂ ಅದನ್ನು ವಿಸ್ತರಣೆಯ ವಲಯವನ್ನಾಗಿ ಅಭಿವೃದ್ಧಿಗೊಳಿಸಬೇಕು.

7 ಕೈಗಾರಿಕೋದ್ಯಮಗಳ ಸ್ಥಾಪನೆ ಎಲ್ಲ ಜಿಲ್ಲೆಗಳಿಗೂ ಹಂಚಿಕೆಯಾಗಬೇಕು. ಯಾವುದೇ ಉದ್ಯಮವಿರಲಿ, ಅಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶದ ಕಟ್ಟುನಿಟ್ಟಿನ ಷರತ್ತು ವಿಧಿಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.

8 ಸರ್ಕಾರದ ಸಚಿವಾಲಯ ಕಚೇರಿಗಳ ಹೊರತಾಗಿ, ಉಳಿದ ಇಲಾಖೆಗಳ ನಿರ್ದೇಶನಾಲಯ ಕಛೇರಿಗಳನ್ನು ಬೇರೆ ಬೇರೆ ಜಿಲ್ಲಾ ಕೇಂದ್ರಗಳಿಗೆ ವರ್ಗಾಯಿಸಿ ಬೆಂಗಳೂರಿನ ಒತ್ತಡವನ್ನು ತಪ್ಪಿಸಬೇಕು.

9 ಶಿಕ್ಷಣ ಮಾಧ್ಯಮ ಅಂತಾರಾಜ್ಯ ಗಡಿ, ಜಲ ಮತ್ತು ವಲಸೆ ಸಮಸ್ಯೆಗಳನ್ನು ಪರಿಹರಿಸಲು ಒಂದು ರಾಷ್ಟ್ರೀಯ ನೀತಿಯನ್ನು ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.

10 ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸುವ ದಿಸೆಯಲ್ಲಿ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಕಾಲಬದ್ಧ ಕ್ರಮಕೈಗೊಳ್ಳಬೇಕು.

11 ಬಸವಣ್ಣನವರನ್ನು ರಾಜ್ಯದ ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿರುವ ಮತ್ತು ಬಸವ ಕಲ್ಯಾಣದಲ್ಲಿ ನೂತನ ಅನುಭವ ಮಂಟಪವನ್ನು ನಿರ್ಮಿಸುತ್ತಿರುವ ರಾಜ್ಯ ಸರ್ಕಾರ, ಹನ್ನೆರಡನೆಯ ಶತಮಾನದ ಶರಣರ ಕ್ಷೇತ್ರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಕ್ಕಾಗಿ ಒಂದು ಸ್ವಾಯತ್ತ ಪ್ರಾಧಿಕಾರ ರಚಿಸಬೇಕು. ಈಗಾಗಲೇ ಆಶ್ವಾಸನೆ ನೀಡಿರುವಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ವಚನ ವಿಶ್ವವಿದ್ಯಾಲಯವನ್ನು ಆರಂಭಿಸಬೇಕು.

12. ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳು, ಕಛೇರಿಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿರುವುದು ಕಡ್ಡಾಯವಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.

13 ಪರಿಸರದ, ವಿಶೇಷವಾಗಿ, ಪಶ್ಚಿಮಘಟ್ಟಗಳ ರಕ್ಷಣೆಗೆ ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕು. ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು.

14 ಜ್ಞಾನಪ್ರಸಾರದ ಕೇಂದ್ರದಂತಿರುವ ಗ್ರಂಥಾಲಯ ಪೋಷಣೆಯ ಬಗೆಗೆ ಪೂರ್ಣ ಗಮನಕೊಡಬೇಕು. ಗ್ರಂಥಗಳ ಸಗಟು ಕೊಳ್ಳಿಕೆ ಪ್ರತಿವರ್ಷ ತಪ್ಪದೇ ನಡೆಯಬೇಕು. ಗ್ರಂಥಾಲಯ ತೆರಿಗೆಯಿಂದ ಸಂಗ್ರಹವಾದ ಹಣವನ್ನು ಗ್ರಂಥಾಲಯಗಳ ಅಭಿವೃದ್ಧಿಗೇ ಬಳಸಬೇಕು.

15 ಹಿರಿಯ ಸಾಹಿತಿಗಳ ಸಮಗ್ರ ಸಾಹಿತ್ಯ ಪ್ರಕಟಣೆ ಒಂದು ಒಳ್ಳೆಯ ಯೋಜನೆಯಾಗಿದ್ದು, ಅದನ್ನು ಮುಂದುವರೆಸಿಕೊಂಡು ಹೋಗಬೇಕು.

16 ಆಡಳಿತದಲ್ಲಿ ಕನ್ನಡ ಬಳಕೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಮುಖ್ಯವಾಗಿ ಕನ್ನಡ ಲಿಪಿಯನ್ನು ಆಧುನಿಕ ತಂತ್ರ ವಿಧಾನಗಳಿಗೆ ಹೊಂದಿಸುವ ಕೆಲಸ ತ್ವರಿತವಾಗಿ ನಡೆಯಬೇಕು. ಯಾಂತ್ರಿಕ ಬುದ್ಧಿಮತ್ತೆ ತಂತ್ರದ ಬಳಕೆ ಹೆಚ್ಚಾಗಬೇಕು.

17 ಸಾಹಿತ್ಯ-ಸಂಸ್ಕೃತಿ ಸಂಬಂಧದ ಸಂಘ-ಸಂಸ್ಥೆಗಳಿಗೆ ಉದಾರ ಧನ ಸಹಾಯ ದೊರಕಿಸಬೇಕು. ೧೮. ಯಾವುದೇ ಕಾರಣಕ್ಕೆ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಗೆ ಅವಕಾಶ ಕೊಡಬಾರದು.

19 ಕನ್ನಡದ ಕೃತಿಗಳನ್ನು ಅನ್ಯಭಾಷೆಗೆ ಅನುವಾದಿಸಿ ಪ್ರಕಟಿಸುವ ಕೆಲಸ ದೊಡ್ಡ ಪ್ರಮಾಣದಲ್ಲಿ ನಡೆಯಬೇಕು. ಇದಕ್ಕಾಗಿ ಭಾಷಾ ಪ್ರಾಧಿಕಾರಕ್ಕೆ ಅಗತ್ಯ ನೆರವು ಒದಗಿಸಬೇಕು.

20 ಕನ್ನಡ ಸಾಹಿತ್ಯ ಪರಿಷತ್ತು ಒಂದು ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಅದು ನಡೆಸುವ ಇಂತಹ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿಳಂಬ ಮಾಡದೆ ಅದನ್ನು ಅನುಷ್ಠಾನಗೊಳಿಸಬೇಕು.

21 ಕನ್ನಡ ಸಾಹಿತ್ಯ ಪರಿಷತ್ತು ಶಾಲಾ ಶಿಕ್ಷಕರಿಗೆ ಸಾಹಿತ್ಯ-ಸಂಸ್ಕೃತಿಗಳ ಬಗೆಗೆ ನಿಯತಕಾಲಿಕ ಶಿಬಿರಗಳನ್ನು ನಡೆಸಿ, ಅವರಲ್ಲಿ ಸಾಹಿತ್ಯದ ಅಧ್ಯಯನಾಸಕ್ತಿ ಬೆಳೆಸಬೇಕು.

ಗೊ.ರು.ಚನ್ನಬಸಪ್ಪ ಅವರ ಸಂಪೂರ್ಣ ಭಾಷಣ ಇಲ್ಲಿದೆ…

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X