ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್‌ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಲಿಪಿ ಸರಕಾರ ಅಲಿಯಾಸ್ ಹರ್ಷಿತಾ ಮಂಜುನಾಥ(23) ಮೃತಪಟ್ಟಿರುವ ಗೃಹಿಣಿ ಎನ್ನಲಾಗಿದೆ. ಸಿಂಧನೂರು ತಾಲೂಕಿನ ಅರಗಿನಮರ ಪುನರ್‌ವಸತಿ ಕೇಂದ್ರ ಬಸವನಗೌಡ ಬಾದರ್ಲಿ ನಗರದ ನಿವಾಸಿ ಎಂದು ತಿಳಿದುಬಂದಿದೆ. ಡಿಸೆಂಬರ್ 18ರಂದು ಸಂಜೆ ಮಂಜುನಾಥನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತ ಮಹಿಳೆಯ ಪೋಷಕರು ಆಕೆಯ ಪತಿ ವಿರುದ್ಧ ಕೊಲೆಯ ಶಂಕೆ ವ್ಯಕ್ತಪಡಿಸಿದ್ದು, ವರದಕ್ಷಿಣೆ ಕಿರುಕುಳದಿಂದ ಕೊಲೆ ಮಾಡಿದ್ದಾನೆಂದು ಆರೋಪಿಸಿ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಗಳನ್ನು ಕುತ್ತಿಗೆ ಹಿಡಿದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಲಿಪಿ ಸರಕಾರ ತಂದೆ ಧೀರೇನ್ ಸರಕಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಂಜುನಾಥನ ವಿರುದ್ಧ ವರದಕ್ಷಿಣೆ ನಿಷೇಧ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ಲಿಪಿ ಸರಕಾರ ಎಂಬ ಮಹಿಳೆ ಅನ್ಯಜಾತಿಯ ಆಟೋಚಾಲಕ ಮಂಜುನಾಥನನ್ನು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಏಳು ತಿಂಗಳ ಮಗು ಇದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಇಂಗ್ಲಿಷ್ ಮಾಧ್ಯಮ ಶಾಲೆಗಳೇ ಬೇಡ, ಕನ್ನಡ ಮಾಧ್ಯಮ ರಾಜ್ಯದಲ್ಲಿ ಕಡ್ಡಾಯವಾಗಲಿ: ಗೊ ರು ಚನ್ನಬಸಪ್ಪ
ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಹಾಗೂ ಡಿವೈಎಸ್‌ಪಿ ಬಿ ಎಸ್ ತಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೊಳಪಡಿಸಲು ರಾಯಚೂರು ರಿಮ್ಸ್‌ಗೆ ಮೃತದೇಹವನ್ನು ರವಾನಿಸಲಾಗಿದೆ ಎನ್ನಲಾಗಿದೆ.
