ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಆಡಿದ ಅವಹೇಳಕಾರಿ ಮಾತುಗಳನ್ನು ಬಹುಜನ ಸಮಾಜ ಪಕ್ಷ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದ್ದು, ಕೂಡಲೇ ಸಚಿವ ಸಂಪುಟದಿಂದ ಅಮಿತ್ ಶಾ ಅವರನ್ನು ವಜಾಗೊಳಿಸಲು ಆಗ್ರಹಿಸಿದೆ.
ಈ ಕುರಿತು ಶುಕ್ರವಾರ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು.
ರಾಜ್ಯಸಭೆ ಅಧಿವೇಶನದಲ್ಲಿ ಭಾರತೀಯ ಸಂವಿಧಾನಕ್ಕೆ 75 ವರ್ಷಗಳು ತುಂಬಿದ ಹಿನ್ನೆಲೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಕೇಂದ್ರ ಸಚಿವ ಅಮಿತ್ ಶಾ ತಮ್ಮ ಭಾಷಣದಲ್ಲಿ ʼಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್… ಎನ್ನುವುದು ಈಗ ಒಂದು ಫ್ಯಾಷನ್ ಆಗಿಬಿಟ್ಟಿದೆ. ನೀವು ಇಷ್ಟು ಸಲ ದೇವರ ಹೆಸರು ತೆಗೆದುಕೊಂಡಿದ್ದರೆ, ಏಳೇಳು ಜನ್ಮಗಳಲ್ಲಿ ಸ್ವರ್ಗ ಪ್ರಾಪ್ತಿಯಾಗುತ್ತಿತ್ತುʼ ಎಂದು ಅವಹೇಳಕಾರಿಯಾಗಿ ಮಾತನಾಡಿದ್ದು ಖಂಡನೀಯವಾಗಿದೆʼ ಎಂದರು.
ʼಸಾವಿರಾರು ವರ್ಷಗಳಿಂದ ಜಾತಿ ಆಧಾರದ ಮೇಲೆ ಈ ದೇಶದ ಬಹುಸಂಖ್ಯಾತರಾದ ಎಸ್ಸಿ, ಎಸ್ಟಿ, ಓಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ವಿದ್ಯೆ, ಆಸ್ತಿ ಹಾಗೂ ಅಧಿಕಾರದಿಂದ ವಂಚಿತಗೊಳಿಸಿದ ಮನುವಾದಿ ಮೇಲ್ಟಾತಿಗೆ ಸೇರಿದ ಅಮಿತ್ ಶಾ ಹಾಗೂ ಅವರ ಆರ್‌ಎಸ್‌ಎಸ್, ಬಿಜೆಪಿ ಪಕ್ಷ ಸ್ವಾತಂತ್ರ ಸಮಾನತೆಯ ಆಶಯಗಳನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಪದೇ ಪದೇ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಭಾರತೀಯ ಸಂವಿಧಾನವನ್ನು ಅವಹೇಳನ ಮಾಡುವುದು ಅವರಿಗೆ ರೂಢಿಗತವಾಗಿದೆ. ಇದನ್ನು ದೇಶದ ಬಾಬಾ ಸಾಹೇಬ್ ಅವರ ಅನುಯಾಯಿಗಳು ಸಹಿಸಿಕೊಳ್ಳುವುದಿಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನಬದ್ಧವಾಗಿ ರಚಿತವಾದ ಸರ್ಕಾರದಲ್ಲಿ ಗೃಹ ಸಚಿವರಾದ ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ವಿರುದ್ಧದ ಹೇಳಿಕೆಯಿಂದ ದೇಶದ ಕೋಟ್ಯಾಂತರ ಜನರಿಗೆ ನೋವುಂಟಾಗಿದೆ. ಇನ್ಮುಂದೆ ಅಮಿತ್ ಶಾ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಮುಂದುವರೆಯಲು ಯಾವ ನೈತಿಕತೆಯೂ ಇಲ್ಲ. ಕೂಡಲೇ ಜಾತಿವಾದಿ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಅಶ್ಲೀಲ ಪದ ಬಳಕೆ ಪ್ರಕರಣ | ಸಿ ಟಿ ರವಿ ತಕ್ಷಣ ಬಿಡುಗಡೆಗೆ ಹೈಕೋರ್ಟ್ ಆದೇಶ
ಜಿಲ್ಲಾಧ್ಯಕ್ಷ ಕಪೀಲ್ ಗೋಡಬೊಲೆ, ರಾಜ್ಯ ಕಾರ್ಯದರ್ಶಿ ಜ್ಞಾನೇಶ್ವರ ಸಿಂಗಾರೆ, ಅಶೋಕ್ ಮಂಠಾಳಕರ್, ಬಸವಕಲ್ಯಾಣ ತಾಲ್ಲೂಕಾಧ್ಯಕ್ಷ ಶಂಕರ ಫುಲೆ ಹಾಗೂ ಮಹೇಶ ಭೋಲಾ, ದತ್ತು ಸುಂಠಾಣೆ ಇದ್ದರು.