ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ಆರೋಪದಡಿ ಬಂಧನವಾಗಿದ್ದ ಬಿಜೆಪಿ ಎಂಎಲ್‌ಸಿ ಸಿ ಟಿ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಹೈಕೋರ್ಟ್ ಸೂಚಿಸಿದೆ.
ಹೀಗಾಗಿ ಬೆಳಗಾವಿಯಿಂದ ಬೆಂಗಳೂರು ಕೋರ್ಟ್ಗೆ ಕರೆದುಕೊಂಡು ಬರುತ್ತಿದ್ದ ಪೊಲೀಸರು ಮಾರ್ಗ ಮಧ್ಯೆಯೇ ಸಿ ಟಿ ರವಿ ಅವರನ್ನು ತಮ್ಮ ವಶದಿಂದ ಬಿಡುಗಡೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಸಿ ಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ಅವರು ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಆರ್ ಅಶೋಕ್ ಹೇಳಿದ್ದೇನು?
ವಿಧಾನಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದವರನ್ನು ಈ ಕಾಂಗ್ರೆಸ್ ಸರ್ಕಾರ ಬಂಧಿಸಿಲ್ಲ. ಈಗ ಒಂದು ನೋಟಿಸ್ ಕೊಡದೇ ಪರಿಷತ್ ಸದಸ್ಯರನ್ನು ಅರೆಸ್ಟ್ ಮಾಡಿದ್ದಾರೆ. ರವಿ ಅವರನ್ನು ಕೊಲ್ಲಲು ಗೂಂಡಾಗಳು ಬಂದಿದ್ದರು. ನಾನು ದೂರು ಕೊಡಲು ಹೋದರೆ ನನ್ನನ್ನೇ ಒಳಗೆ ಬಿಡಲಿಲ್ಲ” ಎಂದು ಆರೋಪಿಸಿದರು.
ತನಿಖಾಧಿಕಾರಿಗಳ ಮೇಲಿಂದ ಮೇಲೆ ಒತ್ತಡ ಹಾಕಲಾಗಿದೆ. ರವಿಯವರನ್ನು ಕ್ರಷರ್‌ಗಳ ಜಾಗದಲ್ಲಿ ಅಕ್ರಮವಾಗಿ ಪೋಲೀಸರು ಕರೆದು ಕೊಂಡು ಹೋಗಿದ್ದಾರೆ. ಇಡೀ ರಾತ್ರಿ ನಾಲೈದು ಜಿಲ್ಲೆಗಳಲ್ಲಿ ಸುತ್ತಾಡಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ. ಈ ಘಟನೆ ಇತಿಹಾಸದಲ್ಲಿ ದಾಖಲಾಗುತ್ತದೆ. ಕಾಂಗ್ರೆಸ್ ಸರ್ಕಾರಕ್ಕೆ ಕಪ್ಪು ಚುಕ್ಕೆ” ಎಂದು ಅಶೋಕ್ ಹೇಳಿದರು.
ವಿಜಯೇಂದ್ರ ಏನು ಹೇಳಿದರು?
ಬಿ ವೈ ವಿಜಯೇಂದ್ರ ಮಾತನಾಡಿ, “ಘಟನೆ ನಡೆಯುತ್ತಲೇ ಎಲ್ಲ ಮಾಧ್ಯಮಗಳು ಅದರಲ್ಲೂ ದೃಶ್ಯ ಮಾಧ್ಯಮಗಳು ಕ್ಷಣ ಕ್ಷಣವೂ ಸಿ ಟಿ ರವಿ ಅವರ ಬಗ್ಗೆ ಸುದ್ದಿ ಮಾಡಿದ್ದೀರಿ. ಮಾಧ್ಯಮಗಳ ಸುದ್ದಿಯಿಂದ ಕೂಡಲೇ ಹೈಕೋರ್ಟ್‌ನಿಂದ ಬಿಡುಗಡೆಯಾಗಿದ್ದಾರೆ. ಇಡೀ ದಿನ ಕಾಂಗ್ರೆಸ್ ಸರ್ಕಾರದ ನಡೆ ಬಗ್ಗೆ ಪ್ರಸಾರ ಮಾಡಿದ್ದೀರಿ. ನಿಮಗೆ ಧನ್ಯವಾದ ತಿಳಿಸುವೆ. ನಾವು ಇಲ್ಲಿಗೆ ಇದನ್ನು ಕೈ ಬಿಡುವುದಿಲ್ಲ. ಮುಂದೆ ಹೋರಾಟ ರೂಪಿಸುತ್ತೇವೆ” ಎಂದರು.
ಸಿ ಟಿ ರವಿ ಹೇಳಿದ್ದಿಷ್ಟು?
“ಯಾವುದೇ ನೋಟಿಸ್ ನೀಡದೇ ನನ್ನ ಬಂಧಿಸಲಾಯಿತು. ಒಂದೇ ರಾತ್ರಿಯಲ್ಲಿ ನಾಲ್ಕು ಜಿಲ್ಲೆ, 50 ಹಳ್ಳಿಗಳಲ್ಲಿ ಪೊಲೀಸರು ನನ್ನ ವಾಹನದಲ್ಲಿ ಅಲೆದಾಡಿಸಿದರು. ನನ್ನನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಯಿತು. ನಮ್ಮ ಪಕ್ಷದ ನಾಯಕರು ನನ್ನ ಬೆಂಬಲವಾಗಿ ನಿಂತಿದ್ದಕ್ಕೆ ನಾನು ಈಗ ಹೊರಗೆ ಬಂದೆ. ಉಳಿದ ವಿಚಾರಗಳನ್ನು ಮತ್ತೆ ಹೇಳುವೆ” ಎಂದು ಹೇಳಿದರು.