- ಅಧಿಕಾರಿಗಳ ಸಭೆ ಬಳಿಕ ಗ್ಯಾರಂಟಿ ಯೋಜನೆಗಳ ಜಾರಿ
- ಗ್ಯಾರಂಟಿಗಳ ಬ್ಲೂಪ್ರಿಂಟ್ ಸಿದ್ಧತೆ ಬಗ್ಗೆ ಚರ್ಚೆಯಾಗಲಿದೆ
ನಮ್ಮ ಸರ್ಕಾರ ಘೋಷಿತ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಿದೆ. ನಾವು ಕೊಟ್ಟ ಮಾತು ಈಡೇರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲವನ್ನೂ ಕ್ರಮವಾಗಿ ಲೋಪವಿಲ್ಲದೆ ಜಾರಿ ಮಾಡಬೇಕಾಗಿದೆ. ಹೀಗಾಗಿ ಯೋಜನೆ ಜಾರಿಗೆ ಸಮಯ ಬೇಕು ಎಂದರು.
ಖಾತರಿ ಯೋಜನೆ ಜಾರಿ ಸಂಬಂಧ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇಂದಿನ ಸಭೆಯಲ್ಲಿ ಯೋಜನೆಗಳ ಬ್ಲೂಪ್ರಿಂಟ್ ಸಿದ್ಧತೆ ಬಗ್ಗೆ ಚರ್ಚೆಯಾಗಲಿದೆ ಎಂದವರು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಜನರಿಗೆ ಮೊದಲು 15 ಲಕ್ಷ ಕೊಡಲಿ, ನಂತರ ನಮ್ಮ ಗ್ಯಾರಂಟಿ ಬಗ್ಗೆ ಬಿಜೆಪಿಯವರು ಮಾತನಾಡಲಿ: ಡಿ ಕೆ ಶಿವಕುಮಾರ್
ಸಂಪುಟ ಸಭೆಯಲ್ಲಿ ಯೋಜನೆ ಜಾರಿ ಬಗ್ಗೆ ನಿರ್ಧಾರವಾಗಲಿದೆ. ಜೂನ್ 1ರಂದು ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಅಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಅದಕ್ಕೂ ಮೊದಲು ಸಭೆಗೆ ಅಗತ್ಯವಾದ ಮಾಹಿತಿಗಳನ್ನ ಒಗ್ಗೂಡಿಸಿಕೊಳ್ಳಲು ಈ ಸಭೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಯೋಜನೆಗಳ ಜಾರಿ ವಿಚಾರದಲ್ಲಿ ಯಾರೂ ಅನುಮಾನ ಪಡುವಂತಿಲ್ಲ ಕೊಟ್ಟ ಮಾತಿನಂತೆಯೇ ನಾವು ನಡೆದುಕೊಳ್ಳುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.
ಇದಕ್ಕೂ ಮುನ್ನ ಡಿ ಕೆ ಶಿವಕುಮಾರ್ ಅವರು ತಾವು ವ್ಯಾಸಂಗ ಮಾಡಿದ ಬೆಂಗಳೂರಿನ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ (ಎನ್ ಪಿ ಎಸ್) ಸ್ಥಾಪಕ ಅಧ್ಯಕ್ಷ ಡಾ. ಕೆ ಪಿ ಗೋಪಾಲಕೃಷ್ಣ ಅವರನ್ನು ಇಂದು ಬೆಳಗ್ಗೆ ಭೇಟಿ ಮಾಡಿ ಆಶೀರ್ವಾದ ಪಡೆದರು.